ಮತ ಖರೀದಿಗೆ ಬರುವವರನ್ನು ಧಿಕ್ಕರಿಸಿ; ಡಿಸಿಸಿ ಬ್ಯಾಂಕ್​ ಅಧ್ಯಕ್ಷ ಗೋವಿಂದಗೌಡ ಸಲಹೆ ;ಸ್ತ್ರೀಶಕ್ತಿ ಸದಸ್ಯರಿಗೆ ಸಾಲ ವಿತರಣೆ

ಕೋಲಾರದಲ್ಲಿ ಡಿಸಿಸಿ ಬ್ಯಾಂಕ್​ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಸ್ತ್ರೀಶಕ್ತಿ ಸದಸ್ಯರಿಗೆ ಸಾಲ ವಿತರಿಸಿದರು. ನಿರ್ದೇಶಕ ನಾಗನಾಳ ಸೋಮಣ್ಣ, ಯಲವಾರ ಸೊಣ್ಣೇಗೌಡ ಇತರರು ಇದ್ದರು.
ಕೋಲಾರದಲ್ಲಿ ಡಿಸಿಸಿ ಬ್ಯಾಂಕ್​ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಸ್ತ್ರೀಶಕ್ತಿ ಸದಸ್ಯರಿಗೆ ಸಾಲ ವಿತರಿಸಿದರು. ನಿರ್ದೇಶಕ ನಾಗನಾಳ ಸೋಮಣ್ಣ, ಯಲವಾರ ಸೊಣ್ಣೇಗೌಡ ಇತರರು ಇದ್ದರು.
Published on

ಕೋಲಾರ: ಮತ ಖರೀದಿಗೆ ಬರುವವರಿಗೆ ಸಂಘದ ಸದಸ್ಯರ ಸಂಖ್ಯೆ, ಮತ್ತಿತರ ಮಾಹಿತಿ ನೀಡಿ ಅಪಹಾಸ್ಯಕ್ಕೆ ಗುರಿಯಾಗಬಾರದು. ಅಂತಹವರಿಗೆ ಬುದ್ಧಿ ಹೇಳಿ ಕಳುಹಿಸಬೇಕು ಎಂದು ಕೋಲಾರ&ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್​ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಸ್ತ್ರೀಶಕ್ತಿ ಸಂಘಗಳ ಸದಸ್ಯರಿಗೆ ಸಲಹೆ ನೀಡಿದರು.

ನಗರದ ಸಾಯಿಬಾಬಾ ಮಂದಿರದಲ್ಲಿ ಗುರುವಾರ ದಕ್ಷಿಣ ಕಸಬಾ ರೇಷ್ಮೆಬೆಳೆಗಾರರ ಹಾಗೂ ರೈತರ ಸಹಕಾರ ಸಂಘದ ಆಶ್ರಯದಲ್ಲಿ 34 ಸ್ತ್ರೀಶಕ್ತಿ ಸಂಘಗಳಿಗೆ 1.75 ಕೋಟಿ ರೂ. ಶೂನ್ಯ ಬಡ್ಡಿ ಸಾಲ ವಿತರಿಸಿ ಮಾತನಾಡಿ, ಹೆಣ್ಣು ಮಕ್ಕಳು ಸ್ವಾಭಿಮಾನದ ಬದುಕು ನಡೆಸುತ್ತಿದ್ದೀರಿ, ಡಿಸಿಸಿ ಬ್ಯಾಂಕ್​ ಉಳಿಸಿ ಬೆಳೆಸಿರುವವರೂ ನೀವೇ, ನೀವು ಬದುಕು ಕಟ್ಟಿಕೊಳ್ಳಲು ಬ್ಯಾಂಕ್​ ಬಡ್ಡಿರಹಿತ ಸಾಲ ನೀಡುತ್ತಿದೆ. ನೀವು ಮತ್ತೊಬ್ಬರ ಬಳಿ ಕೈಚಾಚುವುದು ಬೇಕಾಗಿಲ್ಲ ಎಂದರು.

ಚುನಾವಣೆ ಹತ್ತಿರವಾಗುತ್ತಿದ್ದು, ನಾಯಕರು ಓಟಿಗಾಗಿ ಹಣ, ಆಮಿಷವೊಡ್ಡಿದರೆ ಧಿಕ್ಕರಿಸಬೇಕು. ಮತ ಮಾರಾಟ ಪ್ರಜಾಪ್ರಭುತ್ವಕ್ಕೆ ಮಾಡಿದ ದ್ರೋಹ.ಇದನ್ನು ತೊಲಗಿಸುವ ಶಕ್ತಿ ಮಹಿಳೆಯರಿಗಿದೆ. ಪ್ರಜಾತಂತ್ರ ಉಳಿಯಲು ಪಣ ತೊಡಬೇಕು ಎಂದರು.

ಸಂಘದ ಸದಸ್ಯರು ಪ್ರತಿ ವಾರ ಸಭೆ ಮಾಡಬೇಕು. ಸಾಲದ ಕಂತು ಸಮರ್ಪಕವಾಗಿ ಪಾವತಿಸಿದರೆ ಬಡ್ಡಿ ಕಟ್ಟುವ ಪ್ರಮೇಯ ಬರುವುದಿಲ್ಲ. ಅಸಲು ಪಾವತಿಸಿ ಆರ್ಥಿಕವಾಗಿ ಶಕ್ತಿ ಪಡೆದುಕೊಳ್ಳಬೇಕು. ವಾಣಿಜ್ಯ ಬ್ಯಾಂಕ್​ಗಳಲ್ಲಿರುವ ನಿಮ್ಮ ಉಳಿತಾಯ ಖಾತೆಯನ್ನು ಡಿಸಿಸಿ ಬ್ಯಾಂಕಿಗೆ ಅಥವಾ ಸೊಸೈಟಿಗೆ ಬದಲಿಸಿ, ಅಲ್ಲೇ ಉಳಿತಾಯ ಮಾಡಬೇಕು. ಹೀಗಾದರೆ ಮತ್ತಷ್ಟು ಆರ್ಥಿಕ ನೆರವು ನೀಡಲಾಗುವುದು ಎಂದು ತಿಳಿಸಿದರು.

ಬ್ಯಾಂಕ್​ ನಿರ್ದೇಶಕ ನಾಗನಾಳ ಸೋಮಣ್ಣ ಮಾತನಾಡಿ, ಸಾಲ ಸಮರ್ಪಕವಾಗಿ ಮರುಪಾವತಿಸಿದರೆ ಹೊಸಬರಿಗೆ ಸಾಲ ಕೊಡಬಹುದು. ಎರಡು ಜಿಲ್ಲೆಯಲ್ಲಿ 7 ಲಕ್ಷ ಮಹಿಳೆಯರಿಗೆ ಸಾಲ ನೀಡಿದ್ದೇವೆ. ಮಧ್ಯವರ್ತಿಗಳ ಹಾವಳಿ ಇಲ್ಲ ಎಂದರು.

ಬ್ಯಾಂಕ್​ ನಿರ್ದೇಶಕ ಕೆ.ವಿ.ದಯಾನಂದ್​ ಮಾತನಾಡಿ, ಸಾಲದಿಂದ ಹಸು ಸಾಕಿ, ಇಲ್ಲವೇ ಆದಾಯ ತರುವ ಇತರ ಸ್ವಾವಲಂಬಿ ಬದುಕು ಮಾಡಿಕೊಳ್ಳಿ ಎಂದರು.

ಬ್ಯಾಂಕ್​ ನಿರ್ದೇಶಕ ಯಲವಾರ ಸೊಣ್ಣೇಗೌಡ ಮಾತನಾಡಿ, ಭದ್ರತೆಯಿಲ್ಲದೆ ಮಹಿಳೆಯರ ಪ್ರಾಮಾಣಿಕತೆ ನಂಬಿ ಬ್ಯಾಂಕ್​ ಸಾಲ ನೀಡಿದೆ. ಅದೇ ನಂಬಿಕೆ ನೀವು ಉಳಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.

ಬ್ಯಾಂಕ್​ ನಿರ್ದೇಶಕ ಪಿಚ್ಚಹಳ್ಳಿ ಗೋವಿಂದರಾಜು, ಕಸಬಾ ಸೊಸೈಟಿ ಅಧ್ಯಕ್ಷ ಚೋಳಘಟ್ಟ ಶ್ರೀನಿವಾಸಪ್ಪ, ಉಪಾಧ್ಯಕ್ಷ ಶ್ರೀನಿವಾಸಪ್ಪ, ನಿರ್ದೇಶಕರಾದ ದೊಡ್ಡಹಸಾಳ ವೆಂಕಟೇಶಪ್ಪ, ಚಿಕ್ಕಹಸಾಳದ ಶ್ರೀನಿವಾಸಪ್ಪ ಚಿಕ್ಕಹಸಾಳ, ಶ್ರೀರಾಮರೆಡ್ಡಿ, ಈಕಂಬಳ್ಳಿ ನಾರಾಯಣಸ್ವಾಮಿ, ಪದ್ಮಮ್ಮ, ಸೊಸೈಟಿ ಸಿಇಒ ವೆಂಕಟೇಶ್​, ಸಿಬ್ಬಂದಿ ಚರಣ್​, ಅರುಣ್​, ರಾಮಮೂರ್ತಿ ಮತ್ತಿತರರು ಹಾಜರಿದ್ದರು.

ಬಡ್ಡಿ ಶೋಷಣೆ ತಪ್ಪಿಸಿ: ಮೀಟರ್​ ಬಡ್ಡಿ ಶೋಷಣೆ ತಪ್ಪಿಸಲು ಬಡ್ಡಿ ರಹಿತ ಸಾಲ ನೀಡಲಾಗಿದೆ. ಖಾಸಗಿಯವರಿಗೆ ನೀಡುತ್ತಿದ್ದ ಬಡ್ಡಿಯನ್ನು ಕಂತುಗಳಲ್ಲಿ ಪಾವತಿಸಿದರೆ ಸಾಲ ತೀರುತ್ತದೆ. ಯಾವುದೇ ಕಾರಣಕ್ಕೂ ಖಾಸಗಿಯವರ ಬಳಿ ಸಾಲಕ್ಕೆ ಹೋಗಬೇಡಿ ಎಂದು ಗೋವಿಂದಗೌಡ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net