ಮಹಿಳೆಯರಿಗೆ ಅವಕಾಶ ಜಾಗತೀಕರಣದ ಫಲ

mba
ಜೆಎನ್‌ಎನ್‌ಸಿ ಎಂಬಿಎ ವಿಭಾಗದಿಂದ ಏರ್ಪಡಿಸಿದ್ದ ನಾಳಿನ ಭವಿಷ್ಯಕ್ಕಾಗಿ ಮಹಿಳಾ ಸಬಲೀಕರಣ ವಿಷಯ ಕುರಿತ ರಾಷ್ಟ್ರೀಯ ಸಮ್ಮೇಳನವನ್ನು ಸಿ.ಕೆ.ಭಾರ್ಗವಿ ಉದ್ಘಾಟಿಸಿದರು. ಎಸ್.ಎನ್.ನಾಗರಾಜ, ಡಾ. ಪ್ರೀತಿ ಶಾನುಭಾಗ್, ಡಾ. ವೈ.ವಿಜಯಕುಮಾರ್, ಡಾ. ಶಿ.ಶ್ರೀಕಾಂತ್ ಇತರರಿದ್ದರು.
Published on

ಶಿವಮೊಗ್ಗ: ಜಾಗತೀಕರಣದ ಫಲವಾಗಿ ಎಲ್ಲ ಕ್ಷೇತ್ರಗಳಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ. ಮಹಿಳೆಯರಿಗೂ ಹೇರಳ ಅವಕಾಶಗಳು ದೊರೆಯುತ್ತಿರುವುದು ಆಶಾದಾಯಕ ಬೆಳವಣಿಗೆ. ಬದಲಾದ ಪರಿಸ್ಥಿತಿಯಲ್ಲಿ ಭಾರತದಲ್ಲಿ ಮಹಿಳೆಯರ ಸ್ಥಾನಮಾನ ಇನ್ನಷ್ಟು ಸುಧಾರಿಸುವ ಅಗತ್ಯವಿದೆ ಎಂದು ಪಂಗೋಲಿನ್ ಹೆಲ್ತ್‌ಕೇರ್‌ನ ಸಹಸಂಸ್ಥಾಪಕಿ ಸಿ.ಕೆ.ಭಾರ್ಗವಿ ಹೇಳಿದರು.

ಜೆಎನ್‌ಎನ್‌ಸಿ ಎಂಬಿಎ ವಿಭಾಗದಿಂದ ಶುಕ್ರವಾರ ಏರ್ಪಡಿಸಿದ್ದ ನಾಳಿನ ಭವಿಷ್ಯಕ್ಕಾಗಿ ಮಹಿಳಾ ಸಬಲೀಕರಣ ಎಂಬ ವಿಷಯದ ಕುರಿತ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆಯರು ಅವಕಾಶಗಳನ್ನು ಕೈಚೆಲ್ಲಬಾರದು ಎಂದು ತಿಳಿಸಿದರು.

ಮನೋವೈದ್ಯೆ ಡಾ. ಪ್ರೀತಿ ಶಾನುಭಾಗ್ ಮಾತನಾಡಿ, ಹೆಚ್ಚಿನ ಮಹಿಳೆಯರು ಮಾನಸಿಕ ಒತ್ತಡಗಳಿಂದ ಬಳಲುತ್ತಿದ್ದಾರೆ. ಕೀಳರಿಮೆ, ಕೆಲಸದ ಒತ್ತಡವೂ ಇದಕ್ಕೆ ಕಾರಣ. ಪುರುಷ ಮತ್ತು ಮಹಿಳೆಯರ ನಡುವೆ ಇರುವ ಅಸಮಾನತೆ ಮಹಿಳೆಯರ ಖಿನ್ನತೆಗೆ ಕಾರಣ ಎಂದು ಅಭಿಪ್ರಾಯಪಟ್ಟರು.

ಎನ್‌ಇಎಸ್ ಕಾರ್ಯದರ್ಶಿ ಎಸ್.ಎನ್.ನಾಗರಾಜ ಮಾತನಾಡಿ, ಮಹಿಳೆಯರ ಸಬಲೀಕರಣ ಸಹಜ ಪ್ರಕ್ರಿಯೆ ಆಗಬೇಕೇ ಹೊರತು ಕಾಯ್ದೆಗಳಿಂದ ಅದನ್ನು ಚಾಲ್ತಿಗೆ ತರುವಂತೆ ಆಗಬಾರದು. ಮಹಿಳೆಯರ ಪರವಾಗಿ ಅನೇಕ ಕಾಯ್ದೆಗಳಿವೆ. ಅವು ಸಮರ್ಪಕವಾಗಿ ಜಾರಿಯಾಗಬೇಕು ಎಂದು ಹೇಳಿದರು.

ಪ್ರಾಚಾರ್ಯ ಡಾ. ವೈ.ವಿಜಯಕುಮಾರ್ ಮಾತನಾಡಿ, ಮಹಿಳೆಯರು ಅನೇಕ ಉನ್ನತ ಹುದ್ದೆ ಅಲಂಕರಿಸಿ ಸಮರ್ಥವಾಗಿ ಜವಾಬ್ದಾರಿ ನಿರ್ವಹಣೆ ಮಾಡುತ್ತಿದ್ದಾರೆ. ಕುಟುಂಬ ನಿರ್ವಹಣೆ ಹಾಗೂ ವೃತ್ತಿ ನಿರ್ವಹಣೆಯಲ್ಲಿ ಸಮತೋಲನ ಸಾಧಿಸುತ್ತಿದ್ದಾರೆ. ಅವರಿಗೆ ಇನ್ನಷ್ಟು ಪ್ರೋತ್ಸಾಹ ಸಿಗಬೇಕು ಎಂದರು.

ಎಂಬಿಎ ವಿಭಾಗದ ನಿರ್ದೇಶಕ ಡಾ. ಸಿ.ಶ್ರೀಕಾಂತ್ ಇತರರಿದ್ದರು. 70ಕ್ಕೂ ಹೆಚ್ಚು ಪ್ರಬಂಧಗಳು ಮಂಡನೆಯಾಗಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net