

ಬೆಂಗಳೂರು: ಪಕ್ಷಕ್ಕಾಗಿ ಕೆಲಸ, ಸಂಘಟನೆ ಬಲಪಡಿಸಲು ದುಡಿದ ಅರ್ಹರ ಅವಕಾಶ ಲಭಿಸಿದೆ. ಪಕ್ಷದ ಜಿಲ್ಲಾ ಅಧ್ಯಕ್ಷರ ನೇಮಕ ವಿಷಯದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನಿರ್ಧಾರ ಸರಿಯಿದೆ ಎಂದು ಮಾಜಿ ಸಚಿವ ವಿ.ಸೋಮಣ್ಣ ಸರ್ಟಿಫಿಕೇಟ್ ನೀಡಿದರು.
ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿದ ಅವರು, ಬೆಂಗಳೂರು ದಕ್ಷಿಣ ಜಿಲ್ಲಾ ಅಧ್ಯಕ್ಷ ಸ್ಥಾನ ನನ್ನ ಮಗ ಅರುಣ್ ಕೈತಪ್ಪಿಲ್ಲ. ಮಗನಿಗೆ ಯಾವುದೇ ಸ್ಥಾನಮಾನ ಕೇಳಿಲ್ಲ, ಕೈತಪ್ಪಿದೆ ಎನ್ನುವ ಪ್ರಶ್ನೆಯೇ ಉದ್ಭವಿಸದು. ಈಗ ಅಧ್ಯಕ್ಷರಾಗಿರುವ ಶಾಸಕ ಸಿ.ಕೆ.ರಾಮಮೂರ್ತಿ ಎರಡು ಬಾರಿ ಬಿಬಿಎಂಪಿ ಕಾರ್ಪೋರೇಟರ್ ಆಗಿದ್ದವರು. ನಮ್ಮ ಹುಡುಗನೇ, ಅರ್ಹತೆಯೂ ಇದೆ. ಪಕ್ಷ ವಿರೋಧಿಗಳು, ಅಸಮರ್ಥರಿಗೆ ಕೊಡಬಾರದು ಎನ್ನುವುದಷ್ಟೇ ನನ್ನ ನಿಲುವು ಎಂದರು.
ಸಂಸದ ಅನಂತಕುಮಾರ್ ಹೆಗಡೆಯವರದು ನಿಷ್ಕಲ್ಮಶ ವ್ಯಕ್ತಿತ್ವ. ನನ್ನ ಹಾಗೆ ಬಾಯಿಗೆ ಬಂದದ್ದು ಏಚುಪೇಚಿಲ್ಲದೆ ಮಾತನಾಡಿ ಬಿಡುತ್ತಾರೆ. ಆದರೆ ರಾಜ್ಯದ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯ ಬಗ್ಗೆ ಆಡಿದ ಮಾತುಗಳು ಬೇಸರ ತರಿಸುತ್ತವೆ. ಸಿಎಂ ಸಿದ್ದರಾಮಯ್ಯ ಭಾಷೆ, ನಡವಳಿಕೆ ಹೇಗಿದೆ, ಸಿಎಂ ಆದದ್ದು ಹೇಗೆ ಎನ್ನುವುದೆಲ್ಲ ನಮಗೆ ಬೇಡ. ನಮ್ಮ ನಡವಳಿಕೆ, ಭಾಷೆ ಕಡೆಗೆ ಗಮನ ಕೊಡುವುದು ಒಳಿತು ಎಂದು ವಿ.ಸೋಮಣ್ಣ ಸಲಹೆ ನೀಡಿದರು.
ದೆಹಲಿಯಲ್ಲಿ ಅಮಿತ್ ಶಾ, ಜೆ.ಪಿ.ನಡ್ಡಾ ಅವರನ್ನು ಭೇಟಿ ಮಾಡಿದ ವೇಳೆ ರಾಜ್ಯಸಭೆಗೆ ಅವಕಾಶ ಕೇಳಿರುವೆ. ಜತೆಗೆ ಮೂರು ಲೋಕಸಭೆ ಕ್ಷೇತ್ರಗಳ ಉಸ್ತುವಾರಿ ಒಪ್ಪಿಸಿ, ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರುವೆ ಎಂದು ಮನವಿ ಮಾಡಿದ್ದೇನೆ. ಮಾತುಕತೆ ಫಲಪ್ರದವಾಗಿದೆ, ಎಲ್ಲವೂ ಸುಖಾಂತ್ಯವಾಗಿದೆ ಎಂದರು.
ಅಮಿತ್ ಶಾ ಅವರು ತಿಂಗಳಾಂತ್ಯದಲ್ಲಿ ರಾಜ್ಯಕ್ಕೆ ಭೇಟಿ ನೀಡಲಿದ್ದು, ಆ ಸಂದರ್ಭದಲ್ಲಿ ಮಾತುಕತೆಗಳಾಗಲಿವೆ. ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆ ಆಗುತ್ತಿರುವುದು ದೇಶದ ಜನರಲ್ಲಿ ಉತ್ಸಾಹ ಮೂಡಿದೆ. ದೇಶದ ಪರಂಪರೆ ಹಾಗೂ ಸಂಸ್ಕೃತಿ ಪ್ರತೀಕವೆಂದು ವಿ.ಸೋಮಣ್ಣ ಹೇಳಿದರು.