ಭಾರತದಲ್ಲೂ ಒಸಿಐ ಡಿವೋರ್ಸ್​ಗೆ ಅವಕಾಶ; ಬ್ರಿಟನ್ ಪೌರತ್ವದ ದಂಪತಿ ನಡುವಿನ ವ್ಯಾಜ್ಯ, ಪತಿ ಸಲ್ಲಿಸಿದ್ದ ಅರ್ಜಿ ವಜಾ

High Court vvani
Published on

| ಜಗನ್ ರಮೇಶ್ ಬೆಂಗಳೂರು

ಸಾಗರೋತ್ತರ ಭಾರತೀಯ ಪ್ರಜೆಯಾಗಿರುವ (ಒಸಿಐ) ಬ್ರಿಟನ್ ಪೌರತ್ವ ಹೊಂದಿದ್ದ ಮಹಿಳೆಯೊಬ್ಬರಿಗೆ ಬೆಂಗಳೂರು ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನ ಹಾಗೂ ಮಗುವಿನ ಸುಪರ್ದಿ ಕೋರಿ ಅರ್ಜಿ ಸಲ್ಲಿಸಲು ಹೈಕೋರ್ಟ್ ಅನುಮತಿ ನೀಡಿದೆ.

ಪತ್ನಿ ಸಲ್ಲಿಸಿರುವ ವಿಚ್ಛೇದನ ಅರ್ಜಿ ವಜಾಗೊಳಿಸುವಂತೆ ಪತಿ ಸಲ್ಲಿಸಿದ್ದ ಅರ್ಜಿಯನ್ನು ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯ ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದ ಪತಿ, ಇಬ್ಬರೂ ಬ್ರಿಟನ್ ಪ್ರಜೆಗಳಾಗಿರುವ ಹಿನ್ನೆಲೆಯಲ್ಲಿ ಪ್ರಕರಣ ಇಂಗ್ಲೆಂಡ್​ನಲ್ಲಿರುವ ಕೋರ್ಟ್​ಗಳ ವ್ಯಾಪ್ತಿಗೆ ಬರಲಿದೆ. ಆದ್ದರಿಂದ, ಕೌಟುಂಬಿಕ ನ್ಯಾಯಾಲಯದ ಆದೇಶ ರದ್ದುಪಡಿಸಬೇಕು ಹಾಗೂ ಪತ್ನಿ ಕೌಟುಂಬಿಕ ನ್ಯಾಯಾಲಯದಲ್ಲಿ ಸಲ್ಲಿಸಿರುವ ವಿಚ್ಛೇದನ ಅರ್ಜಿ ವಜಾಗೊಳಿಸಬೇಕು ಎಂದು ಕೋರಿದ್ದರು.

ಪತಿಯ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಪೀಠ, ದಂಪತಿ ಬ್ರಿಟನ್ ದೇಶದ ಪ್ರಜೆಗಳಾಗಿದ್ದರೂ, ಭಾರತದಲ್ಲೇ ಮದುವೆಯಾಗಿದ್ದಾರೆ. ಬಳಿಕ ಲಂಡನ್​ನಲ್ಲಿ ಸಿವಿಲ್ ವಿವಾಹವಾದ ಮಾತ್ರಕ್ಕೆ ಇಬ್ಬರ ಸಂಬಂಧದಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ. ಸದ್ಯ ದಂಪತಿ ಭಾರತದಲ್ಲೇ ವಾಸವಿರುವುದರಿಂದ, ಇಲ್ಲಿನ ನ್ಯಾಯಾಲಯದಲ್ಲಿ ವಿಚ್ಛೇದನ ಅರ್ಜಿ ಸಲ್ಲಿಸಲು ಯಾವುದೇ ಅಡ್ಡಿ ಇಲ್ಲ ಎಂದು ಅಭಿಪ್ರಾಯಪಟ್ಟು ಅರ್ಜಿ ವಜಾಗೊಳಿಸಿದೆ.

ಪ್ರಕರಣವೇನು?: ಹಿಂದು ಧರ್ಮಕ್ಕೆ ಸೇರಿದ ಪತ್ನಿ ಹಾಗೂ ಕ್ರೖೆಸ್ತ ಧರ್ಮಕ್ಕೆ ಸೇರಿದ ಪತಿ ಇಬ್ಬರೂ ಬ್ರಿಟನ್ ಪ್ರಜೆಗಳಾಗಿದ್ದು, 2000ರ ಫೆ.20ರಂದು ಮುಂಬೈನಲ್ಲಿ ಹಿಂದು ಆರ್ಯ ಸಮಾಜ ಸಂಪ್ರದಾಯದ ಪ್ರಕಾರ ವಿವಾಹವಾಗಿದ್ದರು. ಅದೇ ವರ್ಷ ಮಾ.18ರಂದು ಲಂಡನ್​ನಲ್ಲಿ ಸಿವಿಲ್ ವಿವಾಹ ನಡೆದು, ವಿವಾಹ ನೋಂದಣಿ ಪ್ರಮಾಣಪತ್ರ ಪಡೆದುಕೊಂಡಿದ್ದರು. 2006ರಲ್ಲಿ ದಂಪತಿಗೆ ಹೆಣ್ಣು ಮಗು ಜನಿಸಿತ್ತು. ಮಗು ಜನಿಸಿದ ಬಳಿಕ ದಂಪತಿ ಭಾರತಕ್ಕೆ ಬಂದು ನೆಲೆಸಿ, ಇಲ್ಲಿಯೇ ಕೆಲಸ ಮಾಡಿಕೊಂಡಿದ್ದರು. 2006ರ ಜೂ.27ರಂದು ಪತ್ನಿ ಕೇಂದ್ರ ಸರ್ಕಾರದಿಂದ ಒಸಿಐ ಕಾರ್ಡ್ ಪಡೆದುಕೊಂಡಿದ್ದರು. 2017ರಲ್ಲಿ ಪತಿ ಸಹ ಒಸಿಐ ಕಾರ್ಡ್ ಪಡೆದಿದ್ದರು. ಈ ಮಧ್ಯೆ ದಂಪತಿ ನಡುವೆ ವೈಮನಸ್ಸು ಮೂಡಿದ್ದರಿಂದ, 2018ರಲ್ಲಿ ಪತ್ನಿ ವಿಚ್ಛೇದನ ಕೋರಿ ಬೆಂಗ ಳೂರಿನ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ಹೈಕೋರ್ಟ್ ಹೇಳಿದ್ದೇನು?: ಸಾಮಾನ್ಯವಾಗಿ ಭಾರತದಲ್ಲಿ ಮದುವೆಯಾಗಿ ದಂಪತಿ ಇಲ್ಲಿಯೇ ನೆಲೆಸಿದ್ದಲ್ಲಿ, ಅವರ ನಡುವೆ ಉಂಟಾಗುವ ವೈವಾಹಿಕ ವ್ಯಾಜ್ಯಗಳ ಕುರಿತು ಸ್ಥಳೀಯ ನ್ಯಾಯಾಲಯಗಳು ವಿಚಾರಣಾ ವ್ಯಾಪ್ತಿ ಹೊಂದಿರುತ್ತವೆ. ಇಂಥ ಸಂದರ್ಭದಲ್ಲಿ ಬೇರೆ ದೇಶಕ್ಕೆ ಹೋಗಿ ಸಮಸ್ಯೆ ಬಗೆಹರಿಸಿಕೊಳ್ಳಿ ಎಂದು ದಂಪತಿಗೆ ಹೇಳಲು ಸಾಧ್ಯವಿಲ್ಲ. ಇಬ್ಬರೂ ವಿದೇಶಿ ಪ್ರಜೆಗಳಾಗಿರುವ ಕಾರಣ ಇಲ್ಲಿರುವ ನ್ಯಾಯಾಲಯ ವಿಚಾರಣಾ ವ್ಯಾಪ್ತಿ ಹೊಂದಿಲ್ಲ ಎನ್ನುವುದು ಪತಿಯ ವಾದವಾಗಿದೆ. ಆದರೆ, ಅವರಿಬ್ಬರಿಗೂ ಕೇಂದ್ರ ಸರ್ಕಾರ ಒಸಿಐ ಕಾರ್ಡ್ ವಿತರಿಸಿರುವಾಗ, ಅವರಿಬ್ಬರೂ ಈ ದೇಶಕ್ಕೆ ಅಪರಿಚಿತರು ಎನಿಸಿಕೊಳ್ಳುವುದಿಲ್ಲ. ಹಲವು ವಿಚಾರಗಳಲ್ಲಿ ಒಸಿಐ ಕಾರ್ಡ್ ಹೊಂದಿರುವವನ್ನು ಎನ್​ಆರ್​ಐಗಳಿಗೆ ಸಮನಾಗಿ ಪರಿಗಣಿಸಬೇಕಾಗುತ್ತದೆ. ಭಾರತದ ಕಾನೂನಿನ ಪ್ರಕಾರ ಭಾರತದಲ್ಲಿಯೇ ನಡೆದಿರುವ ಮದುವೆಯನ್ನು ಅಸಿಂಧುಗೊಳಿಸಲು ಪತ್ನಿ ಇಂಗ್ಲೆಂಡ್​ನಲ್ಲಿರುವ ನ್ಯಾಯಾಲಯಕ್ಕೇ ಹೋಗಬೇಕಿದೆ ಎಂಬ ಪತಿಯ ವಾದವನ್ನು ಒಪ್ಪಿದರೆ, ಅದು ವಾಸ್ತವದಲ್ಲಿ ಪತ್ನಿಗೆ ಸಿಗಬೇಕಾದ ಪರಿಹಾರ ನಿರಾಕರಿಸಿದಂತಾ ಗುತ್ತದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net