

ಬೆಂಗಳೂರು: ಕರೊನಾ ಹಿನ್ನೆಲೆಯಲ್ಲಿ ಮದುವೆ ಸಮಾರಂಭಗಳಲ್ಲಿ 50ಕ್ಕಿಂತ ಹೆಚ್ಚು ಜನ ಪಾಲ್ಗೊಳ್ಳುವಂತಿಲ್ಲ ಎಂಬ ನಿಯಮ ತಮ್ಮ ವ್ಯವಹಾರಕ್ಕೆ ತೀವ್ರ ಅಡಚಣೆ ಉಂಟು ಮಾಡಿದ್ದು, ಈ ಸಂಖ್ಯೆಯನ್ನು 250ಕ್ಕೆ ಹೆಚ್ಚಿಸಬೇಕು ಎಂದು ಕರ್ನಾಟಕ ಮ್ಯಾರೇಜ್ ಹಾಲ್ಸ್ ವೆಲ್ಫೇರ್ ಅಸೋಸಿಯೇಷನ್ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.
ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ಅಸೋಸಿಯೇಷನ್ ಪದಾಧಿಕಾರಿಗಳು, ‘‘ಸಾಮಾಜಿಕ ಅಂತರದ ನಿಯಮಗಳನ್ನು ಪಾಲಿಸಿಯೂ 250 ಜನರ ಉಪಸ್ಥಿತಿಗೆ ಅವಕಾಶ ಮಾಡಿಕೊಡಬಹುದಾದಷ್ಟು ದೊಡ್ಡ ಕಲ್ಯಾಣ ಮಂಟಪಗಳು ರಾಜ್ಯದಲ್ಲಿವೆ. ಆದರೂ ಸರ್ಕಾರ 50 ಜನರಿಗೆ ಮಾತ್ರ ಅವಕಾಶ ನೀಡಿರುವುದು ಸರಿಯಲ್ಲ. ಕಲ್ಯಾಣಮಂಟಪಗಳ ಗಾತ್ರ ಆಧರಿಸಿ ಸಂಖ್ಯೆಯನ್ನು ನಿಗದಿಪಡಿಸಬೇಕು’’ ಎಂದು ಆಗ್ರಹಿಸಿದರು.
‘‘ಕೇವಲ 50 ಜನರಿಗೆ ಅವಕಾಶ ನೀಡುತ್ತಿರುವ ಕಾರಣ ಜನರು ಮದುವೆಗಳನ್ನು ಅನಿರ್ದಿಷ್ಟ ಕಾಲ ಮುಂದೂಡುತ್ತಿದ್ದಾರೆ. ಇದರಿಂದಾಗಿ ಈ ಕ್ಷೇತ್ರವನ್ನೇ ನಂಬಿಕೊಂಡಿರುವ ಸಾವಿರಾರು ಜನ ಸಂಕಷ್ಟಕ್ಕೆ ಈಡಾಗಿದ್ದಾರೆ. ಇದನ್ನೇ ನಂಬಿಕೊಂಡಿರುವ ಬ್ಯೂಟಿಷಿಯನ್ಸ್, ವಿಡಿಯೋಗ್ರಾಫರ್, ಫೋಟೋಗ್ರಾಫರ್, ಲೈಟಿಂಗ್, ಶಾಮಿಯಾನ, ಕಾರ್ಡ್ ಮುದ್ರಕರು, ಮೇಕಪ್, ತರಕಾರಿ-ಹೂ ಬೆಳೆಗಾರರು, ಕೇಟರಿಂಗ್ ಮುಂತಾದವರೂ ಕೆಲಸವಿಲ್ಲದೆ ಕಷ್ಟಕ್ಕೆ ಸಿಲುಕಿದ್ದಾರೆ’’ ಎಂದು ವಿವರಿಸಿದರು.
ಮ್ಯಾರೇಜ್ ಹಾಲ್ ಉದ್ಯಮವೂ ಸೂಕ್ಷ್ಮ, ಸಣ್ಣ, ಮಧ್ಯಮ ಕೈಗಾರಿಕೆ ಅಡಿ ಬರುವುದರಿಂದ ಎಂಎಸ್ಎಂಇಗಳಿಗೆ ಸಿಗುವ ವಿನಾಯಿತಿಗಳನ್ನು ಇದಕ್ಕೂ ವಿಸ್ತರಿಸಬೇಕು ಎಂದು ಆಗ್ರಹಿಸಿದರು. ಕೇಂದ್ರ ಸರ್ಕಾರದ ನಿಯಮಗಳನ್ನು ಆಧರಿಸಿ ಶೀಘ್ರವೇ ಸೂಕ್ತ ತೀರ್ಮಾನ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಭರವಸೆ ನೀಡಿದರು.