ಮಹಿಳಾ ಪೊಲೀಸ್‌ಗೇ ಕಿರುಕುಳ: ಮಾಜಿ ಪ್ರಿಯಕರ ಅಂದರ್

crime fir
Published on

ಬೆಂಗಳೂರು: ನಗರ ಸಶಸ ಮೀಸಲು ಪಡೆ (ಸಿಎಆರ್) ಮಹಿಳಾ ಪೇದೆಗೆ ಜಾಲತಾಣದಲ್ಲಿ ಖಾಸಗಿ ಫೋಟೋ ವೈರಲ್ ಮಾಡುವುದಾಗಿ ಮಾಜಿ ಪ್ರಿಯಕರ ಬೆದರಿಸಿದ್ದಲ್ಲದೆ, ಹಣಕ್ಕಾಗಿ ಬ್ಲ್ಯಾಕ್ ಮೇಲ್ ಮಾಡುತ್ತಿರುವ ಸಂಗತಿ ಬಹಿರಂಗವಾಗಿದೆ.

ಮೈಸೂರು ರಸ್ತೆ ಸಿಎಆರ್ ಕ್ವಾರ್ಟರ್ಸ್‌ನಲ್ಲಿ ನೆಲೆಸಿರುವ 26 ವರ್ಷದ ಮಹಿಳಾ ಪೇದೆ ಈ ಸಂಬಂಧ ಠಾಣೆಗೆ ದೂರು ನೀಡಿದ್ದಾರೆ. ಇದರ ಅನ್ವಯ ಸಿಇಎನ್ ಠಾಣೆ ಪೊಲೀಸರು ಪ್ರಿಯಕರನ ವಿರುದ್ಧ ಎ್ಐಆರ್ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಒಂದು ವರ್ಷದ ಹಿಂದೆ ಯುವತಿ ಮತ್ತು ಯುವಕನ ನಡುವೆ ಜಗಳವಾಗಿ ದೂರವಾಗಿದ್ದರು. ಇತ್ತೀಚೆಗೆ ಆತ ಯುವತಿಯ ಮೊಬೈಲ್‌ಗೆ ಅಶ್ಲೀಲ ಮತ್ತು ಅವಾಚ್ಯ ಪದಗಳಿಂದ ಎಸ್‌ಎಂಎಸ್ ಮಾಡುತ್ತಿದ್ದ. ಯುವತಿಯು ಆತನ ನಂಬರ್ ಬ್ಲಾಕ್ ಮಾಡಿದ್ದಳು. ಆ ನಂತರ ನಕಲಿ ಫೇಸ್‌ಬುಕ್ ಖಾತೆ ತೆರೆದು ಯುವತಿಯ ಸ್ನೇಹಿತರು ಮತ್ತು ಸಹೋದ್ಯೋಗಿಗಳ ಜತೆ ಸ್ನೇಹ ಬೆಳೆಸಿ ಅವರಿಗೆ ಪೇದೆಯ ವೈಯಕ್ತಿಕ ಫೋಟೋಗಳನ್ನು ಕಳುಹಿಸುತ್ತಿದ್ದ.

ಕೊನೆಗೆ ಯುವತಿಯೇ ತನ್ನ ಮಾಜಿ ಪ್ರಿಯಕರನಿಗೆ ಕರೆ ಮಾಡಿ ಪ್ರಶ್ನಿಸಿದಾಗ ‘ನಾನು ಕೊಟ್ಟ ಗಿಫ್ಟ್ ವಾಪಸ್ ಕೊಡು’ ಎಂದು ತಾಕೀತು ಮಾಡಿದ್ದ. ಕೊನೆಗೆ ನೊಂದ ಯುವತಿ, ಫೋನ್ ಪೇಯಿಂದ ಯುವಕನಿಗೆ 22 ಸಾವಿರ ರೂ. ವರ್ಗಾವಣೆ ಮಾಡಿದ್ದಳು. ಆದರೂ ಸುಮ್ಮನಾಗದ ಯುವಕ, ಮತ್ತಷ್ಟು ಹಣ ಕೊಡದೆ ಇದ್ದರೆ ತಮ್ಮಿಬ್ಬರ ವೈಯಕ್ತಿಕ ಫೋಟೋಗಳನ್ನು ವೈರಲ್ ಮಾಡುವುದಾಗಿ ಬೆದರಿಕೆ ಒಡ್ಡಿದ್ದ. ಬೇರೆ ದಾರಿ ಕಾಣದೆ ಯುವತಿ ಈಗ ಠಾಣೆಗೆ ಬಂದು ದೂರು ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net