ಗ್ರಾಮೀಣ ಯುವಕರಿಗೆ ಸುಯೋಗ: ಆಕಾಶದಷ್ಟು ಅವಕಾಶ..

Madan Padaki
Published on

ಕಳೆದೆರಡು ವರ್ಷಗಳಿಂದ ಕರೊನಾ ಹಾವಳಿ. ಜನಜೀವನಕ್ಕೆ ಸಂಕಟದ ಬಳುವಳಿ. ಹಾಗಂತ ಜೀವನ ಸಾಗಲೇಬೇಕು. ಮನೋಸ್ಥೈರ್ಯವನ್ನು ಹಿಗ್ಗಿಸಿಕೊಂಡು ಕತ್ತೆತ್ತಿ ನೋಡಿದರೆ ಹತ್ತೆಂಟು ದಾರಿಗಳು. ನಡೆ ಮುಂದೆ ನಡೆ ಮುಂದೆ.... ಎಂಬುದೇ ಮಂತ್ರ. ಆಗ ಜೀವನಕ್ಕಿದೆ ನಾನಾ ತಂತ್ರ. ಆವಿಷ್ಕಾರ, ನಾವೀನ್ಯತೆ, ಸಾಹಸಕ್ಕೆ ಜಗತ್ತಿನಲ್ಲುಂಟು ಮನ್ನಣೆ. 2021ರ ಕಹಿನೆನಪುಗಳನ್ನು ಹಿಂದಿಕ್ಕಿ, 2022ರಲ್ಲಿ ಹೊಸ ದಾರಿಯಲ್ಲಿ ಹೆಜ್ಜೆ ಮುಂದಿಡಲು ನಾನಾ ರಂಗಗಳ ಗಣ್ಯರು ಇಲ್ಲಿ ಕೆಲವು ಟಿಪ್ಸ್ ನೀಡಿದ್ದಾರೆ. ಸರ್ವರಿಗೂ ಹೊಸ ವರ್ಷ ಹರ್ಷದಾಯಕವಾಗಲಿ ಎಂಬುದು ವಿಜಯವಾಣಿ ಆಶಯ.

| ಮದನ್ ಪದಕಿ ಸಹ ಸಂಚಾಲಕ, ಯುವ ಸಮೃದ್ಧಿ ಕಾರ್ಯಪಡೆ

ತಂತ್ರಜ್ಞಾನವನ್ನು ಬಳಸಿಕೊಂಡು ಗ್ರಾಮೀಣ ಭಾಗದಲ್ಲಿ ಯುವ ಸಮುದಾಯಕ್ಕಾಗಿ ಸಾಕಷ್ಟು ಅವಕಾಶಗಳನ್ನು ಸೃಷ್ಟಿಸಬಹು ದಾಗಿದೆ. ಪ್ರಮುಖವಾಗಿ ಕೃಷಿ, ಹಣಕಾಸು ಹಾಗೂ ರಿಟೇಲ್ ವಲಯದಲ್ಲಿ ಹೆಚ್ಚಿನ ಅವಕಾಶಗಳು ತೆರೆದುಕೊಳ್ಳುತ್ತಿವೆ. ಕೃಷಿಯಲ್ಲಿ ತಂತ್ರಜ್ಞಾನ ಬಳಕೆ ಹೆಚ್ಚಿದೆ. ಆದ್ದರಿಂದ ತಂತ್ರಜ್ಞಾನವನ್ನು ವಿಸ್ತರಿಸಲು ಸಾಕಷ್ಟು ಯೋಜನೆಗಳಿದ್ದು ಅವುಗಳನ್ನು ಜಾರಿಗೆ ತರಲು ಯುವ ಸಮುದಾಯ ಮುಂದಾಗಬಹುದು. ಇ-ಕಾಮರ್ಸ್ ಕಂಪನಿಗಳು ಗ್ರಾಮೀಣ ಭಾಗಕ್ಕೆ ಆದ್ಯತೆ ನೀಡುತ್ತಿವೆ. ಕಿರಾಣಿ ಅಂಗಡಿ ತೆರೆದಿರುವವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಇ-ಕಾಮರ್ಸ್ ಕಂಪನಿಗಳ ಅವಕಾಶಗಳನ್ನು ಬಳಸಿಕೊಳ್ಳಬಹುದಾಗಿದೆ. 3ಡಿ ಟ್ರೇಡಿಂಗ್ ಇತ್ತೀಚಿನ ಹೊಸ ವ್ಯವಸ್ಥೆಯಾಗಿದೆ. ಹಣಕಾಸು ಒಳಗೊಳ್ಳುವಿಕೆ ಈಗಾಗಲೇ ಆಗಿದೆ. ಬ್ಯಾಂಕ್ ಖಾತೆ ತೆರೆದಿರುವುದರ ಮುಂದುವರಿದ ಭಾಗವಾಗಿ ವಿಮೆ ಸೌಲಭ್ಯ, ಉಳಿತಾಯದ ಅವಕಾಶಗಳನ್ನು ಜನರಿಗೆ ತಿಳಿಸುವ ಕೆಲಸ ಮಾಡ ಬಹುದಾಗಿದೆ. ಎಲ್ಲವೂ ಡಿಜಿಟಲ್ ಆಗಿರುವುದರಿಂದ ಅದನ್ನು ಬಳಸಿಕೊಂಡು ಗ್ರಾಮೀಣ ಜನರಿಗೆ ಅರಿವು ಮೂಡಿಸುವ ಕೆಲಸ ಮಾಡಬಹುದಾಗಿದೆ. ಸರ್ಕಾರದ ಯೋಜನೆಗಳ ಜತೆಗೆ, ಖಾಸಗಿ ಸಂಸ್ಥೆಗಳ, ಯೂನಿಸೆಫ್​ನಂತಹ ಸಂಸ್ಥೆಗಳ ಯೋಜನೆಗಳ ಲಾಭ ಪಡೆದು ಎಲ್ಲರನ್ನೂ ಒಗ್ಗೂಡಿಸುವ ಕೆಲಸ ಮಾಡಲು ಅವಕಾಶವಿದೆ. ಸರ್ಕಾರವೇ ಎಲ್ಲವನ್ನೂ ಮಾಡಲು ಸಾಧ್ಯವಿಲ್ಲ. ಖಾಸಗಿ ಸಹಭಾಗಿತ್ವ ಬಳಸಿಕೊಂಡು ಬೆಳೆಯಬಹುದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net