

ಒಂದಷ್ಟು ಆತ್ಮವಿಶ್ವಾಸ, ಒಂದಷ್ಟು ಧೈರ್ಯ-ಹುಮ್ಮಸ್ಸು, ರಿಸ್ಕ್ ತೆಗೆದುಕೊಳ್ಳುವ ಮನೋಭಾವ, ಹೊರಗಿನ ಆಗುಹೋಗುಗಳತ್ತ ಗಮನ ಇಡುವ ಮೂಲಕ, ಮೂಗಿನ ಮೇಲೆ ಬೆರಳಿಡುವಂಥ ಸಾಧನೆ ಮಾಡಬಹುದು ಎಂದು ಹುರಿದುಂಬಿಸಿದ್ದಾರೆ ನಾನಾ ಕ್ಷೇತ್ರಗಳ ಪ್ರಮುಖರು. ಆಲ್ ದಿ ಬೆಸ್ಟ್!
| ಇರ್ಫಾನ್ ಸೇಠ್ ಕ್ರಿಕೆಟ್ ತರಬೇತುದಾರ
ಕ್ರೀಡಾಕ್ಷೇತ್ರ ಅವಕಾಶಗಳ ಸಾಗರ. ಸ್ಟಾರ್ ಕ್ರೀಡಾಪಟುವಾಗಿಯೇ ಮಿಂಚಬೇಕು, ಹಣ ಗಳಿಸಬೇಕು ಎಂಬ ಉದ್ದೇಶ ತಪು್ಪ. ಎಲ್ಲರೂ ಸ್ಟಾರ್ ಕ್ರೀಡಾಪಟು ಆಗಲು ಸಾಧ್ಯವಿಲ್ಲ. ನಾನು ನೋಡುತ್ತಿರುವಂತೆ ಕ್ರೀಡಾಕ್ಷೇತ್ರದಲ್ಲಿ, ಅದರಲ್ಲೂ ಕ್ರಿಕೆಟ್ನಲ್ಲಿ ಬೆಳೆಯಲು ಸಾಕಷ್ಟು ಅವಕಾಶಗಳಿವೆ. ಕೋಚಿಂಗ್, ಫೀಲ್ಡಿಂಗ್ ಕೋಚ್, ಬ್ಯಾಟಿಂಗ್ ಕೋಚ್, ಮೆಂಟರ್, ಸ್ಕೋರರ್, ಅಂಪೈರ್, ಆಟಗಾರರ ಏಜೆಂಟ್ ಆಗಿಯೂ ಕಾರ್ಯನಿರ್ವಹಿಸಬಹುದು. ಇಂಥ ಕೆಲಸಗಳು ಕ್ರಿಕೆಟ್ ಆಡಿದವರಿಗೆ ತುಂಬಾ ಸುಲಭ. ದೊಡ್ಡ ಕ್ರಿಕೆಟಿಗನಾಗಲಿಲ್ಲ ಎಂದು ಕೊರಗುವ ಬದಲಿಗೆ, ಆಟವನ್ನು ಕಲಿಯುವುದಕ್ಕೆ ಮೊದಲು ಆದ್ಯತೆ ನೀಡಿ, ಆಟದ ಬಗ್ಗೆ ಉತ್ತಮ ಜ್ಞಾನ ಬೆಳೆಸಿಕೊಳ್ಳಬೇಕು. ಅಕಾಡೆಮಿ, ತರಬೇತಿ ಕೇಂದ್ರಗಳನ್ನು ಸ್ಥಾಪಿಸಿ ಯುವ ಕ್ರಿಕೆಟಿಗರಿಗೆ ಉತ್ತಮ ಮಾರ್ಗದರ್ಶನ ನೀಡಬಹುದು. ಉತ್ತಮ ಕೋಚ್ ಆಗಿ ಇಡೀ ಕ್ರೀಡಾ ಜಗತ್ತನ್ನೇ ಗೆಲ್ಲಬಹುದು. ಹೀಗಾಗಿ ಸಿಗದೇ ಇದ್ದುದಕ್ಕೆ ಕೊರಗುವ ಬದಲಿಗೆ ಸಿಗುವ ಅವಕಾಶವನ್ನು ಸೂಕ್ತವಾಗಿ ಬಳಸಿಕೊಂಡು ಮುನ್ನಡೆಯಬೇಕು. ಇದು ಹೆಸರಿನ ಜತೆಗೆ ಹಣವನ್ನೂ ತಂದುಕೊಡುತ್ತದೆ. ಕೇವಲ ಕ್ರಿಕೆಟ್ಗೆ ಇದು ಸೀಮಿತವಲ್ಲ, ಇಡೀ ಕ್ರೀಡಾಕ್ಷೇತ್ರಕ್ಕೂ ಅನ್ವಯಿಸುತ್ತದೆ. ಹೀಗಾಗಿ ಯಾವುದೇ ಕ್ರೀಡೆಯಲ್ಲಿ ದೊಡ್ಡ ಕನಸು ಈಡೇರಲಿಲ್ಲ ಎಂದು ಕೊರಗುವ ಬದಲಿಗೆ ಆ ಕ್ಷೇತ್ರದಲ್ಲೇ ಸಿಗುವ ಅವಕಾಶ ಬಗ್ಗೆ ಚಿಂತಿಸಿ ಮುನ್ನಡೆಯಬೇಕು. ಹೀಗೆ ಹಲವು ವಿಭಾಗಗಳಲ್ಲಿ ಕ್ರೀಡಾಕ್ಷೇತ್ರದಲ್ಲಿ ಮುಂದುವರಿಯುವ ಅವಕಾಶಗಳಿವೆ.