

ಕೆ.ಆರ್.ಪೇಟೆ: ವಕೀಲರು ಹಾಗೂ ವೀರಶೈವ ಮಾಜಿ ಅಧ್ಯಕ್ಷ ವಿ.ಎಸ್.ಧನಂಜಯಕುಮಾರ್ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿಗಳನ್ನು ಅನಾಮಧೇಯ ಖಾತೆ ಮೂಲಕ ಅಪಪ್ರಚಾರ ಮಾಡುತ್ತಿದ್ದು, ರಾಜಕೀಯ ದುರುದ್ದೇಶದಿಂದ ಷಡ್ಯಂತ್ರ ನಡೆಸಿದ್ದಾರೆ ಎಂದು ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾದ ಜಿಲ್ಲಾ ಉಪಾಧ್ಯಕ್ಷ ಎಲ್‌ಐಸಿ ಶಿವಪ್ಪ ಅಸಮಧಾನ ವ್ಯಕ್ತಪಡಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ವಕೀಲರಾದ ವಿ ಎಸ್ ಧನಂಜಯಕುಮಾರ್ ಅವರಿಗೆ ಸೇರಿದೆ ಎನ್ನಲಾದ ಸಾಮಾಜಿಕ ಜಾಲತಾಣದ ಆಡಿಯೋ ವಿಷಯಕ್ಕೆ ಸಂಬಂಧಿಸಿದಂತೆ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಧನಂಜಯಕುಮಾರ್ ಅವರು ತಾಲೂಕಿನ ವೀರಶೈವ ಮಹಾಸಭಾದ ಅಧ್ಯಕ್ಷರಾದ ನಂತರ ನಮ್ಮ ಸಮುದಾಯ ಇಷ್ಟು ಜನಸಂಖ್ಯೆ ಇದೆ ಎಂಬುದನ್ನು ತೋರಿಸಿಕೊಟ್ಟರು. ಅಲ್ಲದೆ ಸಮುದಾಯದ ಪರ ಬಲವಾಗಿ ನಿಲ್ಲುತ್ತಿದ್ದರು. ತಮ್ಮ ಸ್ವಂತ ಹಣ ಖರ್ಚು ಮಾಡಿ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಸಮುದಾಯದವರಿಗೆ ನಿವೇಶನ ಕೊಡಿಸುವ ಸಲುವಾಗಿ ನ್ಯಾಯಾಲಯದಲ್ಲಿ ತಮ್ಮ ಹಣದಿಂದ ವ್ಯಾಜ್ಯ ನಡೆಸುತ್ತಿದ್ದರು. ಇನ್ನೂ ಹತ್ತಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಮುದಾಯದ ಪರವಾಗಿ ಇತರ ಸಮುದಾಯದ ಪರವಾಗಿ ಧ್ವನಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಇದನ್ನು ನಮ್ಮ ಸಮುದಾಯದ ಜನತೆ ಅರ್ಥ ಮಾಡಿಕೊಳ್ಳಬೇಕು ಎಂದರು.
ಇಂತಹ ಘಟನೆ ಯಾವುದೇ ಸಮುದಾಯದ ವ್ಯಕ್ತಿಗಳಿಗೆ ಬರಬಾರದು. ಪ್ರತಿಯೊಬ್ಬ ವ್ಯಕ್ತಿಗೂ ತಮ್ಮದೇ ಆದ ಜವಾಬ್ದಾರಿ, ಸಂಸಾರ ಎಂಬ ನೊಗವನ್ನು ಎಳೆದು ಜೀವನ ಸಾಗಿಸುತ್ತಿರುತ್ತಾರೆ. ಅಂತಹ ಕುಟುಂಬದ ಸದಸ್ಯರಿಗೆ ಇಂತಹ ಘಟನೆಗಳಿಂದ ಮನಸ್ಸಿಗೆ ತುಂಬ ನೋವಾಗುತ್ತದೆ ಎಂಬುದನ್ನು ಇಂತಹ ಕೀಳು ಮಟ್ಟಕ್ಕೆ ಇಳಿಯುವ ವ್ಯಕ್ತಿಗಳು ಅರಿಯಬೇಕು. ರಾಜಕಾರಣ ಮಾಡಲೇಬೇಕು ಎಂದರೆ ನೇರವಾಗಿ ರಾಜಕಾರಣ ಮಾಡಬೇಕು. ಬೆನ್ನಿಗೆ ಚೂರಿ ಹಾಕುವ ಕೆಲಸವನ್ನು ಮಾಡಬಾರದು ಎಂದರು.
ವೀರಶೈವ ಮುಖಂಡ ಗಂಜಿಗೆರೆ ವಿಜಯ್‌ಕುಮಾರ್ ಮಾತನಾಡಿ, ವೀರಶೈವ ಮಹಾಸಭಾದ ಮಾಜಿ ಅಧ್ಯಕ್ಷ ವಿ.ಎಸ್.ಧನಂಜಯ ಕುಮಾರ್ ಅವರನ್ನು ರಾಜಕೀಯವಾಗಿ ತುಳಿಯಲು ಹುನ್ನಾರ ನಡೆಸಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ತಾಲೂಕಿನಲ್ಲಿ ತಮ್ಮದೇ ಶಕ್ತಿ ಸಾಮರ್ಥ್ಯದೊಂದಿಗೆ ರಾಜಕೀಯವಾಗಿ ಬೆಳೆಯುತ್ತಿರುವ ವೀರಶೈವ ಸಮಾಜದ ಮುಖಂಡ ಧನಂಜಯ್‌ಕುಮಾರ್ ಅವರ ಬೆಳವಣಿಗೆಯನ್ನು ಸಹಿಸದ ಕೆಲವು ಪಟ್ಟಭದ್ರ ಹಿತಾಶಕ್ತಿ ವ್ಯಕ್ತಿಗಳು ತೇಜೋವಧೆ ಮಾಡಲು ಹೊರಟಿದ್ದಾರೆ. ಅವರ ಬೆನ್ನಿಗೆ ಇಡೀ ವೀರಶೈವ ಸಮುದಾಯ ಇದೆ. ಅವರನ್ನು ತುಳಿಯಲು ಯಾರಿಂದಲೂ ಸಾಧ್ಯವಿಲ್ಲ ಎಂದರು.
ವೀರಶೈವ ಮುಖಂಡ ನಿವೃತ್ತ ಶಿಕ್ಷಕ ಮೆಲ್ಲಹಳ್ಳಿ ಗಂಗಾಧರ್ ಮಾತನಾಡಿ, ಧನಂಜಯ್‌ಕುಮಾರ್ ಅವರು ವೀರಶೈವ ಸಮುದಾಯದ ನಾಯಕರಾಗಿದ್ದಾರೆ. ಸಮುದಾಯವನ್ನು ತಳಮಟ್ಟದಿಂದ ಸಂಘಟನೆ ಮಾಡಿ ಅದರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಅವರಿಗೆ ನಮ್ಮ ಸಮುದಾಯ ಯಾವಾಗಲೂ ಬೆಂಬಲವಾಗಿ ನಿಂತಿದೆ. ರಾಜಕೀಯವಾಗಿ ಅವರನ್ನು ಉನ್ನತ ಮಟ್ಟಕ್ಕೆ ಬೆಳೆಸುವ ಜವಾಬ್ದಾರಿ ಸಮುದಾಯದ ಎಲ್ಲ ಮುಖಂಡರ ಮೇಲಿದೆ ಎಂದು ಹೇಳಿದರು.
ಜೆಡಿಎಸ್ ಹೋಬಳಿ ಅಧ್ಯಕ್ಷ ಬಸವಲಿಂಗಪ್ಪ, ಮುಖಂಡ ಚಂದ್ರಪ್ಪ ತಗಡೂರು, ಬೊಮ್ಮಲಾಪುರ ಈರಪ್ಪ, ವೀರಶೈವ ಮಹಾಸಭಾದ ತಾಲೂಕು ಘಟಕ ನಿರ್ದೇಶಕರಾದ ಡಿ.ಸಿ.ಕುಮಾರ್, ಮೆಡಿಕಲ್ ಶಿವಪ್ಪ, ಈರಪ್ಪ, ಶಿವಪ್ಪ ಲಿಂಗಾಪುರ, ಚೌಡಸಮುದ್ರ ರುದ್ರಪ್ಪ, ನಿವೃತ್ತ ಶಿಕ್ಷಕರಾದ ಶಿವಕುಮಾರ್, ಸಾಸಲು ವಿಶ್ವನಾಥ್, ಜನಾರ್ದನ, ಮೆಳ್ಳಹಳ್ಳಿ ರಾಜಶೇಖರ್, ನಾಡಬೋಗನಹಳ್ಳಿ ದಿನೇಶ್, ಚಂದ್ರಶೇಖರ್, ಮಂಜು, ಪರಮೇಶ್, ಬೂವನಹಳ್ಳಿ ಪುಟ್ಟಪ್ಪ ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು.