ಆಪರೇಷನ್ ತ್ರಿಶೂಲ್! ಪಾಕ್ ಸಾಮರ್ಥ್ಯಕ್ಕೆ ಕಡಿವಾಣವೇ?

Operation Trishul
Published on
ಈಶಾನ್ಯ ಅರಬ್ಬಿ ಸಮುದ್ರದಲ್ಲಿನ ಭಾರತ-ಪಾಕಿಸ್ತಾನ ಸಮುದ್ರ ಗಡಿಯಲ್ಲಿ ವಿಮಾನವಾಹಕ ನೌಕೆ ಐಎನ್​ಎಸ್ ವಿಕ್ರಾಂತ್ ಜತೆಗೆ ಫ್ರಿಗೇಟ್​ಗಳು, ಡೆಸ್ಟ್ರಾಯರ್​ಗಳು ಸೇರಿದಂತೆ 20 ಯುದ್ಧನೌಕೆಗಳು, ಕಛ್​ನ ರಣ್ ಜೌಗುಪ್ರದೇಶದಲ್ಲಿ ಅಟ್ಯಾಕ್ ಹೆಲಿಕಾಪ್ಟರ್​ಗಳು, ರಫೇಲ್ ಹಾಗೂ ಸುಖೋಯ್ ಯುದ್ಧವಿಮಾನಗಳು, ಥಾರ್ ಮರುಭೂಮಿಯಲ್ಲಿ ಟ್ಯಾಂಕ್​ಗಳು, ತೋಪುಗಳೂ, ಸೇನಾ ವಾಹನಗಳೂ; ಇವೆಲ್ಲವನ್ನೂ ನಿರ್ವಹಿಸಲು ಭಾರತೀಯ ನೌಕಾಸೇನೆ, ವಾಯುಸೇನೆ ಮತ್ತು ಭೂಸೇನೆಯ ಐವತ್ತು ಸಾವಿರ ಸೈನಿಕರು! ಜತೆಗೆ ಎಲೆಕ್ಟ್ರಾನಿಕ್ ಹಾಗೂ ಸೈಬರ್ ಯುದ್ಧೋಪಕರಣಗಳು ಮತ್ತು ಅವುಗಳ ಜವಾಬ್ದಾರಿ ಹೊತ್ತ ನೂರಾರು ತಂತ್ರಜ್ಞರು ಸಹಾ! ಸಾಕೇ? ಇಲ್ಲ. ‘ಆಪರೇಷನ್ ಸಿಂಧೂರ’ ಸಮಯದಲ್ಲಿ ಪಾಕಿಸ್ತಾನಿ ವಾಯುಶಕ್ತಿಯ ಬೆನ್ನುಮೂಳೆ ಮುರಿದ ಬ್ರಹ್ಮೋಸ್ ಕ್ಷಿಪಣಿಗಳು ಹಾಗೂ ನಮಗೆ ಅಭೇದ್ಯವಾಯು ರಕ್ಷಣೆ ನೀಡಿದ ಎಸ್-400 ಹಾಗೂ ಆಕಾಶ್ ತೀರ್​ಗಳು ಗುಪ್ತಸ್ಥಳಗಳಲ್ಲಿ! ಇದು ನವೆಂಬರ್ 2ರಿಂದ ಆರಂಭವಾಗಿರುವ ಭಾರತದ ಇದುವರೆಗಿನ ಅತಿ ದೊಡ್ಡ ಯುದ್ಧಾಭ್ಯಾಸ ‘ಆಪರೇಷನ್ ತ್ರಿಶೂಲ್’ನ ಮುಖ್ಯ ಅಂಕಿಅಂಶಗಳು.

2021ರಿಂದೀಚೆಗೆ ಭಾರತ ವರ್ಷಕ್ಕೆ ಕನಿಷ್ಠ ಆರು ಸೇನಾ ಕಸರತ್ತುಗಳನ್ನು ನಡೆಸುತ್ತ ಬಂದಿದೆ. ಅವುಗಳನ್ನು ಭಾರತೀಯ ರಕ್ಷಣಾ ಪಡೆಗಳೂ ತಾವಷ್ಟೇ ಅಲ್ಲದೆ ಅಮೆರಿಕಾ, ಬ್ರಿಟನ್, ಫ್ರಾನ್ಸ್, ರಷ್ಯಾ, ಆಸ್ಟ್ರೇಲಿಯಾ, ಶ್ರೀಲಂಕಾ, ಬಾಂಗ್ಲಾದೇಶವೂ ಸೇರಿ ಹಲವಾರು ರಾಷ್ಟ್ರಗಳ ರಕ್ಷಣಾ ಪಡೆಗಳ ಜತೆ ಜಂಟಿಯಾಗಿಯೂ ನಡೆಸಿದೆ. ಆದರೆ ಭಾಗಿಯಾದ ಸೈನಿಕರ ಸಂಖ್ಯೆ ಮತ್ತು ಯುದ್ಧೋಪಕರಣಗಳ ಸಂಖ್ಯೆ ಮತ್ತು ವೈವಿಧ್ಯದಲ್ಲಿ ‘ಆಪರೇಷನ್ ತ್ರಿಶೂಲ್’ ಅನ್ನು ಮೀರಿಸುವಂಥ ಸೇನಾ ಕಸರತ್ತು ಇದುವರೆಗೆ ಉಪಖಂಡದಲ್ಲಿ ನಡೆದಿಲ್ಲ. ಸಹಜವಾಗಿಯೇ ಇದು ಪಾಕಿಸ್ತಾನೀಯರನ್ನು ದಿಕ್ಕೆಡಿಸಿದೆ. ಪ್ರತಿಯಾಗಿ ಅವರೂ ನವೆಂಬರ್ 2ರಿಂದ 5ರವರೆಗೆ ಉಭಯ ದೇಶಗಳ ನಡುವಿನ ನೆಲ ಮತ್ತು ಜಲ ಗಡಿಯಲ್ಲಿ ಸೇನಾ ಕಸರತ್ತು ನಡೆಸತೊಡಗಿದ್ದಾರೆ. ಸೇನಾ ಕಸರತ್ತಿನ ನೆಪದಲ್ಲಿ ಭಾರತವೇನಾದರೂ ಇದ್ದಕ್ಕಿದ್ದಂತೆ ಆಪರೇನ್ ಸಿಂಧೂರ-2 ಆರಂಭಿಸಿಬಿಟ್ಟರೆ ತಾವದಕ್ಕೆ ತಯಾರಾಗಿರಬೇಕು ಎನ್ನುವ ಮುಂಜಾಗ್ರತಾ ಕ್ರಮ ಅವರದಾಗಿರುವಂತೆ ಕಾಣುತ್ತಿದೆ.

ಅವರ ಆ ಭಯ ಮತ್ತು ಮುಂಜಾಗರೂಕತೆ ‘ಆಪರೇಷನ್ ತ್ರಿಶೂಲ್’ನ ಮೊದಲ ದಿನವೇ ವ್ಯಕ್ತವಾಗಿದೆ. ನವೆಂಬರ್ 2ರಂದು ಲಷ್ಕರ್-ಎ-ತೋಯ್ಬಾ ಭಯೋತ್ಪಾದಕ ಸಂಘಟನೆ ಲಾಹೋರ್​ನಲ್ಲಿ ಸಾರ್ವಜನಿಕ ಸಭೆಯನ್ನು ಆಯೋಜಿಸಿತ್ತು. ಆ ಸಭೆಗೆ ಲಕ್ಷಾಂತರ ಜನರು ಹಾಜರಾಗುವ ನಿರೀಕ್ಷೆಯಿತ್ತು. ಆದರೆ ಭಾರತವೇನಾದರೂ ಸಭೆಯ ಮೇಲೇ ಬ್ರಹ್ಮೋಸ್ ಕ್ಷಿಪಣಿ ದಾಳಿ ಎಸಗಿಬಿಟ್ಟರೇನು ಗತಿ ಎಂಬ ಭಯ ಹಾಫೀಜ್ ಸಯೀದ್​ನನ್ನು ಕಾಡಿದ್ದರಿಂದಾಗಿ ಆತ ಇಡೀ ಸಭೆಯನ್ನೇ ರದ್ದುಗೊಳಿಸಿಬಿಟ್ಟ! ಇನ್ನು ಪಾಕಿಸ್ತಾನಿ ಸರ್ಕಾರದ ಮನಸ್ಥಿತಿ ಬಗ್ಗೆ ಹೇಳುವುದಾದರೆ, ಭಾರತದಿಂದ ದೊಡ್ಡ ಅಪಾಯವನ್ನು ತಾವು ಎದುರುನೋಡುತ್ತಿರುವುದಾಗಿ ರಕ್ಷಣಾ ಮಂತ್ರಿ ಖ್ವಾಜಾ ಆಸಿಫ್ ತಿಂಗಳ ಹಿಂದೆಯೇ ಅಲವತ್ತುಕೊಂಡಾಗಿದೆ. ಪಾಕಿಸ್ತಾನಿ ನೌಕಾದಳ ಬ್ರಿಟನ್​ನಿಂದ ಮೂರು ಹಾವರ್​ಕ್ರಾಫ್ಟ್​ಗಳನ್ನು ಖರೀದಿಸಿ ಸರ್ ಕ್ರೀಕ್ ವಲಯದಲ್ಲಿ ಗಸ್ತು ಆರಂಭಿಸಿದೆ. ಜೌಗುಪ್ರದೇಶವಾದ ಅಲ್ಲಿ ಸೇನಾ ವಾಹನಗಳನ್ನು ನಡೆಸಲೂ ಆಗುವುದಿಲ್ಲ ಮತ್ತು ತಟರಕ್ಷಕ ನಾವೆಗಳನ್ನೂ ಚಲಾಯಿಸಲಾಗುವುದಿಲ್ಲ ಎಂಬ ವಾಸ್ತವದ ಹಿನ್ನೆಲೆಯಲ್ಲಿ ಕೆಳಮಟ್ಟದಲ್ಲಿ ತೇಲುತ್ತ ಸಾಗುವ ಹಾವರ್​ಕ್ರಾಫ್ಟ್​ಗಳು ಸರ್ವೆಕ್ಷಣೆಗೆ ಸೂಕ್ತ ಸಾಧನವೆನಿಸಿದರೂ ಅವುಗಳಿಂದ ಸೇನಾ ಕಾರ್ಯಾಚರಣೆ ಸಾಧ್ಯವಿಲ್ಲ ಹಾಗೂ ಭಾರತವೇನಾದರೂ ನಿಜವಾಗಿಯೂ ದಾಳಿಗೆ ಮುಂದಾದರೆ ಮೊದಲ ಹೊಡೆತಕ್ಕೆ ಸುಲಭದ ತುತ್ತಾಗುವುದು ಆ ಮಂದಗಮನ ಹಾವರ್​ಕ್ರಾಫ್ಟ್​ಗಳೇ.

ಹಾಗಂತ ಪಾಕಿಸ್ತಾನ ಹೆಚ್ಚಿನ ತಯಾರಿಯನ್ನೇನೂ ಮಾಡಿಕೊಳ್ಳುತ್ತಿಲ್ಲ ಎಂದು ಹೇಳಲಾಗುವುದಿಲ್ಲ. ಅದನ್ನು ವಿವರವಾಗಿ ನೋಡುವ ಮೊದಲು ‘ಆಪರೇಷನ್ ತ್ರಿಶೂಲ್’ ನೆಪದಲ್ಲಿ ಭಾರತ ನಿಜವಾದ ದಾಳಿಗೆ ಮುಹೂರ್ತ ಲೆಕ್ಕ ಹಾಕಿದೆಯೇ ಎನ್ನುವುದರ ಬಗ್ಗೆ ಒಂದೆರಡು ಮಾತು ಅಗತ್ಯ. ಸರ್ ಕ್ರೀಕ್ ವಲಯದಲ್ಲಿ ಕಳೆದ ಕೆಲವು ತಿಂಗಳುಗಳಿಂದಲೂ ಪಾಕಿಸ್ತಾನಿ ಸೇನಾ ಚಟುವಟಿಕೆಗಳು ನಿರಂತರವಾಗಿ ಏರಿಕೆಯಾಗುತ್ತಿರುವುದಕ್ಕೆ ಪ್ರತಿಕ್ರಿಯಿಸಿದ ಭಾರತದ ರಕ್ಷಣಾ ಮಂತ್ರಿ ರಾಜನಾಥ್ ಸಿಂಗ್, 1965ರ ಯುದ್ಧದ ದಿನಗಳಲ್ಲಿ ಭಾರತೀಯ ಸೇನೆ ಲಾಹೋರ್​ವರೆಗೆ ಮುಂದುವರಿದಿದ್ದುದನ್ನು ಪಾಕಿಸ್ತಾನೀಯರಿಗೆ ನೆನಪು ಮಾಡಿಕೊಟ್ಟು, ಈ ಬಾರಿಯಂತೂ ‘ಕರಾಚಿಯ ರಸ್ತೆ ಸರ್ ಕ್ರೀಕ್ ಮೂಲಕವೇ ಸಾಗುತ್ತದೆ!’ ಎಂದು ಹೇಳಿ ಪಾಕಿಸ್ತಾನದ ಅತಿ ದೊಡ್ಡ ನಗರ ಹಾಗೂ ಏಕೈಕ ಬಂದರನ್ನು ವಶಪಡಿಸಿಕೊಳ್ಳುವುದು ನಮ್ಮ ಗುರಿಯಾಗಿರುತ್ತದೆ ಎಂದು ಎಚ್ಚರಿಸಿದ್ದಾರೆ. ಅಲ್ಲದೆ, ‘ಈ ಬಾರಿಯ ಸಂಘರ್ಷದಲ್ಲಿ ಪಾಕಿಸ್ತಾನದ ಭೂಗೋಳದ ಜತೆ ಇತಿಹಾಸವೂ ಬದಲಾಗಲಿದೆ’ ಎಂದಿದ್ದಾರೆ. ಅಂದರೆ ಈ ಬಾರಿ ಭಾರತೀಯ ಸೇನೆ 1965ರಲ್ಲಿ ತೋರಿದ ದಯೆಯನ್ನು ತೋರುವುದಿಲ್ಲ, ಲಾಹೋರ್ ಅಂಚಿನವರೆಗೆ ಹೋಗಿ ಹಿಂದೆ ಬಂದಂತೆ ಈ ಬಾರಿ ಕರಾಚಿಯ ಅಂಚಿಗೆ ಹೋಗಿ ಹಿಂತಿರುಗುವುದಿಲ್ಲ, ಆ ಬಂದರು ನಗರವನ್ನು ಆಕ್ರಮಿಸಿಕೊಂಡೇ ತೀರುತ್ತದೆ ಮತ್ತು ಅದರಿಂದಾಗಿ ಪಾಕಿಸ್ತಾನ ಹೊರಗಿನ ಪ್ರಪಂಚದಿಂದ ಕತ್ತರಿಸಿಹೋಗುತ್ತದೆ ಎಂದು ನೇರವಾಗಿ ಸೂಚನೆ ನೀಡಿದ್ದಾರೆ.

‘ಆಪರೇಷನ್ ತ್ರಿಶೂಲ್’ ಸಮರ ಕಸರತ್ತಿನ ಸಮಯದಲ್ಲಿ ಭಾರತ ವಿಮಾನಸಂಸ್ಥೆಗಳಿಗೆ "NoTAM' ಅಂದರೆ "Notice to Air Men’ ಜಾರಿಮಾಡಿದೆ. ಇದರರ್ಥ ಆಪರೇಷನ್ ತ್ರಿಶೂಲ್ ಸಮಯದಲ್ಲಿ ಭಾರತ-ಪಾಕಿಸ್ತಾನ ಗಡಿಯಲ್ಲಿ ಭಾರತೀಯ ಯುದ್ಧವಿಮಾನಗಳು, ಕ್ಷಿಪಣಿಗಳು ಹಾಗೂ ತೋಪುಗಳು ಕಾರ್ಯಾಚರಣೆಯಲ್ಲಿ ಇರುವುದರಿಂದಾಗಿ ಯಾವುದೇ ನಾಗರಿಕ ವಿಮಾನಗಳು ತಮ್ಮದೇ ಸುರಕ್ಷೆಯ ದೃಷ್ಟಿಯಿಂದ ಈ ಮಾರ್ಗದಲ್ಲಿ ಹಾರಾಟ ನಡೆಸಬಾರದೆಂದು ಭಾರತ ಮುಂದಾಗಿಯೇ ಸಂಬಂಧಪಟ್ಟವರಿಗೆ ಎಚ್ಚರಿಕೆ ನೀಡಿದೆ. ಈ ಎಚ್ಚರಿಕೆ ಭಾರತ-ಪಾಕಿಸ್ತಾನ ಗಡಿಗಷ್ಟೇ ಸೀಮಿತವಾಗಿಲ್ಲ. ಕೆಲವು ದಿನಗಳಂದು ಮಧ್ಯ ಭಾರತ ಮತ್ತು ಪೂರ್ವ ಹಾಗೂ ಪೂವೋತ್ತರ ಭಾರತಕ್ಕೂ ಈ ಎಚ್ಚರಿಕೆ ಅನ್ವಯವಾಗುತ್ತದೆ! ಹೀಗಾಗಿ ಆಪರೇಷನ್ ತ್ರಿಶೂಲ್ ಮಾಮೂಲಿನಂತೆ ಒಂದುಸೇನಾ ಕಸರತ್ತಲ್ಲ, ಇದರ ವ್ಯಾಪ್ತಿ ಮತ್ತು ಉದ್ದೇಶ ಬೇರೆಯೇ ಇದೆ ಎನ್ನುವ ಚಿತ್ರಣವನ್ನು ಕೇವಲ ಪಾಕಿಸ್ತಾನೀಯರಿಗಷ್ಟೇ ನೀಡಿಲ್ಲ, ಜಗತ್ತಿನ ಪ್ರಮುಖ ದೇಶಗಳೂ ಈ ಬಗ್ಗೆ ತೀವ್ರ ಗಮನ ತಳೆದು ತಂತಮ್ಮ ಬೇಹುಗಾರಿಕಾ ಉಪಗ್ರಹಗಳ ದೃಷ್ಟಿಯನ್ನು ಉಪಖಂಡದ ಮೇಲೇ ಕೇಂದ್ರೀಕರಿಸಿವೆ!

ಈ ಹಿನ್ನೆಲೆಯಲ್ಲಿ ಪ್ರತಿಕೂಲ ಸನ್ನಿವೇಶವನ್ನು ಎದುರಿಸಲು ಪಾಕಿಸ್ತಾನ ಮಾಡಿಕೊಳ್ಳುತ್ತಿರಬಹುದಾದ ತಯಾರಿಗಳೇನು? ಭಾರತಕ್ಕೆ ಸವಾಲೊಡ್ಡುವ ಸ್ಥಿತಿಯಲ್ಲಿ ಪಾಕಿಸ್ತಾನದ ಸೇನೆ ಇಂದು ಇಲ್ಲ. 1965ರ ಯುದ್ಧದ ಸಮಯದಲ್ಲಿ ಪಾಕಿಸ್ತಾನದ ವಾಯುಸೇನೆ, ನೌಕಾಸೇನೆ ಭಾರತದ ವಾಯು ಮತ್ತು ನೌಕಾ ದಳಗಳಿಗಿಂತ ಸಮರ್ಥವಾಗಿದ್ದವು. ಆ ದಿನಗಳ ಅತ್ಯಾಧುನಿಕ ಯುದ್ಧವಿಮಾನವಾಗಿದ್ದ ಸೇಬರ್ ಜೆಟ್ ಯುದ್ಧವಿಮಾನಗಳನ್ನು ಹೊಂದಿದ್ದ ಪಾಕಿಸ್ತಾನಿ ವಾಯುಸೇನೆ ಭಾರತಕ್ಕಿಂತಲೂ ಹಲವು ಪಟ್ಟು ಸದೃಢವಾಗಿತ್ತು. ಪಾಕ್ ನೌಕಾಸೇನೆ ಯಾವ ತಡೆಯೂ ಇಲ್ಲದೆ ದ್ವಾರಕಾಗೆ ಬಂದು ದಾಳಿಯೆಸಗಿ ಕರಾಚಿ ಬಂದರಿಗೆ ಹಿಂತಿರುಗಿತ್ತು! ಆ ಹಿನ್ನಡೆಯ ಅಂಶಗಳನ್ನು ಆರೇ ವರ್ಷಗಳಲ್ಲಿ ಸರಿಪಡಿಸಿಕೊಂಡ ಭಾರತೀಯ ನೌಕಾಸೇನೆ ಕರಾಚಿ ಬಂದರಿನ ಮೇಲೆ ಯಶಸ್ವಿಯಾಗಿ ದಾಳಿ ನಡೆಸಿ ಅದು ಹಲವು ತಿಂಗಳುಗಳವರೆಗೆ ಪೂರ್ಣ ಬಳಕೆಗೆ ನಿರುಪಯುಕ್ತವಾಗುವಂತೆ ಮಾಡಿತ್ತು.

ಕಳೆದ ಅರ್ಧ ಶತಮಾನದಲ್ಲಿ ಭಾರತೀಯ ನೌಕಾದಳದ ಸಾಮರ್ಥ್ಯ ಅಗಾಧವಾಗಿ ಬೆಳೆದಿದೆ, ಪಾಕಿಸ್ತಾನದ್ದು ಹಿಂದೆಹಿಂದೆ ಸರಿದುಹೋಗಿದೆ. ಭಾರತೀಯ ನೌಕಾದಳ ‘ಗಾರ್ಡಿಯನ್ ಆಫ್ ದ ಇಂಡಿಯನ್ ಓಷನ್’ ಎಂಬ ಹೆಗ್ಗಳಿಕೆಗೆ ಪಾತ್ರವಾಗುವಷ್ಟು ಅಗಾಧವಾಗಿ ಬೆಳೆದಿದ್ದರೆ ಚೀನೀ ಯುದ್ಧನೌಕೆಗಳ ಮೇಲೆ ಭರವಸೆಯಿಟ್ಟ ಪಾಕಿಸ್ತಾನಿ ನೌಕಾದಳ ‘ಆಪರೇಷನ್ ಸಿಂಧೂರ’ ಸಮಯದಲ್ಲಿ ಕರಾಚಿ ಬಂದರಿನಿಂದ ಹೊರಬರುವ ಧೈರ್ಯವನ್ನೇ ಮಾಡಲಿಲ್ಲ. ಇನ್ನು ವಾಯಸೇನೆ ವಿಷಯಕ್ಕೆ ಬಂದರೆ ಇಂದು ಭಾರತೀಯ ವಾಯುಶಕ್ತಿ ಚೀನಾವನ್ನೂ ಹಿಂದೆ ಹಾಕಿ ಜಾಗತಿಕವಾಗಿ ಮೂರನೆಯ ಅತಿ ಶಕ್ತಿಶಾಲಿ ಎನಿಸಿದೆ. ಆಪರೇಷನ್ ಸಿಂಧೂರದಲ್ಲಿ ಹನ್ನೊಂದು ವಾಯುನೆಲಗಳು ಕ್ಷತಿಗೊಂಡ ಕಾರಣ ಪಾಕಿಸ್ತಾನದ ಬಳಿ ಹಲವು ಎಫ್-16 ಯುದ್ಧವಿಮಾನಗಳಿದ್ದರೂ ಅವುಗಳನ್ನು ಆಗಸಕ್ಕೇರಿಸುವ ರನ್​ವೇ ಸವಲತ್ತುಗಳಿಲ್ಲ. ಇನ್ನುಳಿದ ಭೂಸೇನೆ ಒಂದು ಹಂತದವರೆಗೆ ಭಾರತೀಯ ಭೂಸೇನೆಗೆ ಪ್ರತಿರೋಧ ಒಡ್ಡಬಹುದು. ಆದರೆ, ಭಾರತೀಯ ಭೂಸೇನೆಯ ಫೈರ್​ಪವರ್ ಅನ್ನು ಹೆಚ್ಚುಕಾಲ ಎದುರಿಸಿ ನಿಲ್ಲಲು ಅಗತ್ಯವಾದ ಸೇನಾ ಸಲಕರಣೆಗಳ ಕೊರತೆ ಪಾಕಿಸ್ತಾನಿ ಭೂಸೇನೆಗಿದೆ. ಇಂತಹ ಸನ್ನಿವೇಶದಲ್ಲಿ ಪಾಕಿಸ್ತಾನ ಮೊರೆಹೋಗುವುದು ಅಣ್ವಸ್ತ್ರಗಳ ಬಳಕೆಗೆ. ಹೀಗಾಗಿ ಭಾರತವನ್ನು ಹಿಮ್ಮೆಟ್ಟಿಸುವಷ್ಟು ಅಣ್ವಸ್ತ್ರ ಸಾಮರ್ಥ್ಯ ಪಾಕಿಸ್ತಾಕ್ಕಿದೆಯೇ?

ಪಾಕಿಸ್ತಾನ 1990ರ ಮೇ ತಿಂಗಳಲ್ಲೇ ರಹಸ್ಯವಾಗಿ ಅಣ್ವಸ್ತ್ರಗಳನ್ನು ಗಳಿಸಿಕೊಂಡಿತು ಮತ್ತು 1990ರ ಜುಲೈನಲ್ಲೇ ಭಾರತಕ್ಕೆ ಅಣ್ವಸ್ತ್ರ ಬೆದರಿಗೆ ಒಡ್ಡಿತ್ತು. ಆದರೆ ಬಳಿ ಇದೆಯೆನ್ನಲಾಗುವ ಸುಮಾರು 175-180 ಅಣ್ವಸ್ತ್ರಗಳ ಮೇಲಿನ ಹತೋಟಿಯನ್ನು ಅದು ಕಳೆದುಕೊಂಡಿದೆ. ಪರ್ವೆಜ್ ಮುಷರಫ್ ಕಾಲದಲ್ಲೇ ಪಾಕ್ ಅಣ್ವಸ್ತ್ರಗಳು ಪಾಕ್ ನೆಲದಲ್ಲಿದ್ದರೂ ಅಮೆರಿಕಾದ ಹಿಡಿತಕ್ಕೆ ಹೋದವು ಎಂದು ಮಾಜಿ ಸಿಐಎ ಅಧಿಕಾರಿ ಜಾನ್ ಕರಿಯಾಕು ಹೇಳಿದ್ದಾರೆ ಮತ್ತು ಅದನ್ನು ಪುಷ್ಟೀಕರಿಸುವ ವಿವರಗಳನ್ನು ಪಾಕಿಸ್ತಾನಿ ಸಂಶೋಧಕ-ಪತ್ರಕರ್ತ ಇಮ್ತಿಯಾಜ್ ಗುಲ್ ನೀಡಿದ್ದಾರೆ.

ಆದಾಗ್ಯೂ ಪಾಕಿಸ್ತಾನ ಹೊಸದಾಗಿ ಅಣ್ವಸ್ತ್ರಗಳನ್ನು ಗಳಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಬಗ್ಗೆ ವರದಿಗಳೂ ಕಾಣಿಸಿಕೊಳ್ಳುತ್ತಿವೆ. ಕಳೆದ ಇಪ್ಪತ್ತಮೂರು ದಿನಗಳಲ್ಲಿ ಉತ್ತರ ಪಾಕಿಸ್ತಾನದಲ್ಲಿ 19 ಲಘು ಭೂಕಂಪಗಳಾಗಿರುವುದು ಪಾಕಿಸ್ತಾನ ಹೊಸದಾಗಿ ಅಣ್ವಸ್ತ್ರಗಳನ್ನು ಪರೀಕ್ಷಿಸುತ್ತಿರುವ ಸೂಚನೆ ಎಂದು ಜಾಗತಿಕ ಸಮರ ವಿಶ್ಲೇಷಕರು ಅಭಿಪ್ರಾಯ ಪಡುತ್ತಾರೆ. ಇದರರ್ಥ ಅಮೆರಿಕಾದ ಹಿಡಿತಕ್ಕೆ ಹೊರತಾದ ತನ್ನದೇ ಹೊಸ ಅಣ್ವಸ್ತ್ರಗಳನ್ನು ಪಾಕಿಸ್ತಾನ ಪಡೆದುಕೊಳ್ಳುತ್ತಿದೆ. ರಷ್ಯಾ, ಚೀನಾ, ಉತ್ತರ ಕೊರಿಯಾ ಜತೆ ಪಾಕಿಸ್ತಾನವೂ ಅಣ್ವಸ್ತ್ರ ಪರೀಕ್ಷೆಗಳನ್ನು ನಡೆಸುತ್ತಿದೆ ಎಂದು ಕಳೆದ ವಾರ ಡೊನಾಲ್ಡ್ ಟ್ರಂಪ್ ಹೇಳಿದ ಮಾತನ್ನು ನಿರ್ಲಕ್ಷಿಸುವಂತಿಲ್ಲ. ಜತೆಗೆ ಪಾಕಿಸ್ತಾನಿ ಸೇನೆ ತನ್ನ ಮುಖ್ಯ ಕಚೇರಿಯನ್ನು ನೂರ್ ಖಾನ್ ವಾಯುನೆಲೆಗೆ ಸ್ಥಳಾಂತರಿಸುತ್ತಿದೆ ಮತ್ತು ಅಲ್ಲಿ ಅಣ್ವಸ್ತ್ರ ದಾಳಿಯನ್ನು ತಡೆದುಕೊಳ್ಳುವಂಥ ಸುರಕ್ಷಾ ವ್ಯವಸ್ಥೆಗಳು ನಿರ್ವಣವಾಗುತ್ತಿದೆ ಎಂಬ ಸುದ್ದಿಯೂ ಗಂಭೀರವಾಗಿ ಪರಿಗಣಿಸಬೇಕಾದ ಅಂಶ.

ಇದಕ್ಕೆ ಭಾರತದ ಉತ್ತರವೇನು? ‘ನ್ಯೂಕ್ಲಿಯರ್ ಬ್ಲಾಕ್​ವೆುೕಲ್ ನಡೆಯುವುದಿಲ್ಲ’ ಎಂದು ಪ್ರಧಾನಿ ನರೇಂದ್ರ ಮೋದಿ ಹಲವು ಬಾರಿ ಹೇಳಿದ್ದಾರೆ, ಅಂತಹದೇ ಮಾತನ್ನು ಅವರು ಆಪರೇಷನ್ ತ್ರಿಶೂಲ್ ಆರಂಭವಾದ ದಿನವೂ ಹೇಳಿದರು. ಅಂದರೆ ಪಾಕಿಸ್ತಾನಿ ಅಣ್ವಸ್ತ್ರ ಯೋಜನೆಯ ಮಾಹಿತಿ ಕೇಂದ್ರ ಸರ್ಕಾರದ ಬಳಿ ಇದೆ ಮತ್ತು ಅದನ್ನು ನಿರ್ವೀರ್ಯಗೊಳಿಸಬಲ್ಲ ಯೋಜನೆಯನ್ನೂ ಮೋದಿ ಸರ್ಕಾರ ಮತ್ತು ಭಾರತೀಯ ರಕ್ಷಣಾ ಪಡೆಗಳು ಮಾಡಿಕೊಂಡಿವೆ! ಜತೆಗೆ ಆಪರೇಷನ್ ಸಿಂಧೂರದಲ್ಲಿ ಕ್ಷತಿಗೊಂಡ ನೂರ್ ಖಾನ್ ವಾಯುನೆಲೆಯನ್ನು ದುರಸ್ತಿಗೊಳಿಸುವ ಕೆಲಸವನ್ನು ಅಮೆರಿಕನ್ ವಾಯುಸೇನೆ ಸೆಪ್ಟೆಂಬರ್ ಮೊದಲವಾರದಲ್ಲಿ ಆರಂಭಿಸಿದ್ದರೂ ಅದು ಸದ್ಯಕ್ಕೆ ಪೂರ್ಣಗೊಳ್ಳುವುದಿಲ್ಲ ಮತ್ತು ಇನ್ನುಳಿದ ವಾಯುನೆಲೆಗಳನ್ನು ದುರಸ್ತಿಗೊಳಸಿಸಲು ಪ್ರಧಾನಿ ಶೆಹಬಾಜ್ ಶರೀಫ್ ಮತ್ತು ಸೇನಾ ಮುಖ್ಯಸ್ಥ ‘ಫೀಲ್ಡ್ ಮಾರ್ಷಲ್’ ಆಸಿಮ್ ಮುನೀರ ಸೆಪ್ಟೆಂಬರ್ ಕೊನೆಯ ವಾರದಲ್ಲಿ 600 ಮಿಲಿಯನ್ ಡಾಲರ್ ಸಹಾಯಧನಕ್ಕಾಗಿ ಅಧ್ಯಕ್ಷ ಟ್ರಂಪ್​ರ ಮುಂದೆ ಬೇಡಿಕೆಯಿತ್ತರು ಎಂದು ಸಿಎನ್​ಎನ್ ವರದಿ ಮಾಡಿದೆ.

ಅವರ ಬೇಡಿಕೆಗೆ ಟ್ರಂಪ್​ರ ಉತ್ತರದ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಒಂದುವೇಳೆ ಪಾಕಿಸ್ತಾನಕ್ಕೆ ಆ ಹಣ ಸಿಕ್ಕಿದ್ದರೂ ಅದು ಸದ್ಬಳಕೆಯಾಗಿ ಅದರ ವಾಯುನೆಲೆಗಳು ಕ್ಷಿಪ್ರವಾಗಿ ದುರಸ್ತಿಗೊಳ್ಳುತ್ತವೆ, ಪಾಕಿಸ್ತಾನಿ ಯುದ್ಧವಿಮಾನಗಳು ಅಣ್ವಸ್ತ್ರಗಳನ್ನು ಹೊತ್ತು ನಮ್ಮತ್ತ ಬರಲಿವೆ ಎಂದು ನಾವು ಹೆದರುವ ಸ್ಥಿತಿಯಂತೂ ಸದ್ಯಕ್ಕಿಲ್ಲ. ಆದರೆ ತನ್ನ ಪ್ರಯತ್ನಗಳನ್ನು ಮುಂದುವರಿಸುತ್ತಲೇ ಹೋದರೆ ನಮ್ಮನ್ನು ಘಾಸಿಗೊಳಿಸುವ ಸಾಮರ್ಥ್ಯವನ್ನು ಪಾಕಿಸ್ತಾನ ಒಂದು ದಿನ ಗಳಿಸಿಯೇಕೊಳ್ಳುತ್ತದೆ ಎನ್ನುವುದು ನಿಜ. ಅಂತಹದೊಂದು ದಿನಕ್ಕೆ ಆ ದುರುಳ ದೇಶ ತಲುಪಬಾರದು ಎನ್ನವುದು ಮೋದಿ ಸರ್ಕಾರ ಮತ್ತು ಭಾರತೀಯ ರಕ್ಷಣಾಪಡೆಗಳು ಇಂದು ತೆಗೆದುಕೊಂಡಿರುವ ತೀರ್ವನವೇ? ಇದಕ್ಕೆ ಉತ್ತರವನ್ನು ನೀಡುವ ದಿಸೆಯಲ್ಲಿ ಆಪರೇಷನ್ ತ್ರಿಶೂಲ್ ಸಾಗಲಿದೆಯೇ? ಇದು ಇಂದು ಜಾಗತಿಕ ರಕ್ಷಣಾ ತಜ್ಞರನ್ನು ಕಾಡುತ್ತಿರುವ ಪ್ರಶ್ನೆ.

(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net