ಗಾಂಧಿ ಅಹಿಂಸಾ ತತ್ವದಂತೆ ಆಪರೇಷನ್ ಸಿಂಧೂರ: ರಾಧಾ ಮೋಹನ್ ದಾಸ್ ಅಗರ್ವಾಲ್ ವ್ಯಾಖ್ಯಾನ Talkative Trump is a problem for America

37mupldo_radha-mohan-das-agarwal_625x300_28_August_24
Published on

ಬೆಂಗಳೂರು: ಗಾಂಧೀಜಿಯವರ ಅಹಿಂಸಾ ತತ್ವದಡಿ ಆಪರೇಷನ್ ಸಿಂಧೂರ ಕಾರ್ಯಾಚರಣೆ ನಡೆದಿದೆ. ಪ್ರಧಾನಿ ನರೇಂದ್ರ ಮೋದಿಯವರು ಯುದ್ಧಕ್ಕೆ ಹೊಸ ಭಾಷ್ಯ ಬರೆದಿದ್ದಾರೆ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಡಾ.ರಾಧಾ ಮೋಹನ್ ದಾಸ್ ಅಗರ್ವಾಲ್ ವ್ಯಾಖ್ಯಾನಿಸಿದರು.

ಪಕ್ಷದ ರಾಜ್ಯ ಕಚೇರಿಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಯೋತ್ಪಾದಕರು, ಅವರ ನೆಲೆಗಳು, ತರಬೇತಿ ಶಿಬಿರಗಳನ್ನು ಗುರಿಯಾಗಿಸಿ ಧ್ವಂಸ ಮಾಡಲಾಗಿದೆ. ಬೆಂಬಲಕ್ಕೆ ಧಾವಿಸಿದ ಪಾಕಿಸ್ತಾನ ಸೇನೆ, ಕ್ಷಿಪಣಿ ಹಾಗೂ ಡ್ರೋನ್ ಗಳನ್ನು ಭಾರತದತ್ತ ಉಡಾಯಿಸಲು ಬಳಸಿದ ಏರ್ ಬೇಸ್ ಗಳನ್ನು ಪುಡಿಗಟ್ಟಿದ್ದು, ಪಾಕಿಸ್ತಾನದ ಯಾವೊಬ್ಬ ನಾಗರಿಕ ಸತ್ತಿಲ್ಲ ಎಂದು ಸಮಜಾಯಿಷಿ ನೀಡಿದರು.

ಭಾರತದೊಳಗೆ ಪಾಕ್ ನ ಯಾವುದೇ ಕ್ಷಿಪಣಿ, ಡ್ರೋನ್ ನುಗ್ಗದಂತೆ ನಮ್ಮ ವಾಯು ರಕ್ಷಣಾ ವ್ಯವಸ್ಥೆ ತಡೆದಿದೆ. ನಮ್ಮ ಎಲ್ಲ ಸೈನಿಕರು ಸುರಕ್ಷಿತವಾಗಿದ್ದಾರೆ. ಸಂಯಮ ಹಾಗೂ ಯುದ್ಧ ನಿಯಮಗಳನ್ನು ಭಾರತ ಪಾಲಿಸಿದ ರೀತಿಯನ್ನು ವಿಶ್ವ ಗಮನಿಸಿದೆ. ಪಾಕಿಸ್ತಾನದ ಸೇನಾಧಿಕಾರಿ ಪದೇ ಪದೆ ಮನವಿ ಮಾಡಿಕೊಂಡ ನಂತರ ಕದನ ವಿರಾಮವಾಗಿದೆ. ಈ‌ ವಿಷಯದಲ್ಲಿ ದೇಶದ ನಿಲುವೇನೆಂದು ಮೋದಿಯವರು ಈಗಾಗಲೇ ಸ್ಪಷ್ಡಪಡಿಸಿದ್ದಾರೆ.

ಭಾರತದ ಯಾವುದೇ ಮೂಲೆಯಲ್ಲಿ ಉಗ್ರರ ದುಷ್ಕೃತ್ಯ ನಡೆದರೂ ಯುದ್ಧವೆಂದು ಪರಿಗಣಿಸಲಾಗುತ್ತದೆ ಎಂಬ ಖಡಕ್ ಸಂದೇಶ ರವಾನಿಸಿದ್ದಾರೆ. ಹೀಗಾಗಿ ಜಾರಿಯಲ್ಲಿ ಇರುವುದು ಸಿಂಧೂರ ಕಾರ್ಯಾಚರಣೆ ವಿರಾಮವೇ ಹೊರತು ಅಂತ್ಯವಲ್ಲ ಎಂದು ಅಗರ್ವಾಲ್ ಸ್ಪಷ್ಟಪಡಿಸಿದರು.

ಟ್ರಂಪ್ ವಾಚಾಳಿತನ

ರೈಲು ಇನ್ನೇನು ಹೊರಟಾಗ ಒಂದಿಬ್ಬರು ಹುಡುಗರು ದಿಢೀರ್ ಕೆಳಗೆ ಇಳಿದು ರೈಲು ದಬ್ಬುತ್ತಾರೆ. ಅದಾಗಲೇ ರೈಲು ತನ್ನಿಂದ ತಾನೇ ಹೊರಟಿರುತ್ತದೆ. ಆದರೂ ಆ ಹುಡುಗರು ನಮ್ಮಿಂದಲೇ ರೈಲು ಚಲಿಸಿತು ಎಂದು ಹೇಳಿಕೊಳ್ಳುತ್ತಾರೆ. ಕದನ ವಿರಾಮ ವಿಚಾರದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆಗಳು ಹೀಗೆಯೇ ಇವೆ ಎಂದು ಅಣಕವಾಡಿದರು.

ಟ್ರಂಪ್ ಪ್ರತಿಯೊಂದರಲ್ಲೂ ಮೂಗು ತೂರಿಸುವಂತಹ ವಾಚಾಳಿತನವಿದೆ. ಅದು ಅಮೆರಿಕದವರ ಸಮಸ್ಯೆ ಅವರು ನೋಡಿಕೊಳ್ಳುತ್ತಾರೆ. ಇದರಲ್ಲಿ ಭಾರತದ ಪಾತ್ರವೇನೂ ಇಲ್ಲ. ಭಾರತ ತನ್ನ ರಣವ್ಯೂಹವನ್ನು ಮೂರು ದಿನಗಳಲ್ಲೇ ನಮ್ಮ ಸೇನೆ ಯಶಸ್ವಿಗೊಳಿಸಿತ್ತು. ಪಾಕಿಸ್ತಾನದ ಡಿಜಿಎಂಒ ಪದೇ ಪದೆ ಮನವಿ ಮೇರೆಗೆ ಭಾರತದ ಸೇನಾಧಿಕಾರಿ ಮಾತುಕತೆ ನಡೆಸಿ ವಿರಾಮ ನಿರ್ಧಾರಕ್ಕೆ ಬಂದಿದ್ದು, ಟ್ರಂಪ್ ಮಧ್ಯಸ್ಥಿಕೆ ಎಲ್ಲಿಂದ ಬಂತು ? ಎಂದು ಪ್ರಶ್ನಿಸಿದರು.

ಇಂದಿರಾಗಾಂಧಿಗೆ ಮೋದಿಯವರನ್ನು ಕಾಂಗ್ರೆಸ್ ನಾಯಕರು ಹೋಲಿಕೆ ಮಾಡುತ್ತಿರುವುದು ಒಳ್ಳೆಯದೇ ಆಯಿತು. ಜನರಲ್ ಮಾಣಿಕ್ ಷಾ ರಣನೀತಿ ಒಪ್ಪದಿದ್ದರೆ ಭಾರತ ಸೋಲುಣ್ಣುತ್ತಿತ್ತು.  1971ರಲ್ಲಿ ಗೆದ್ದದ್ದನ್ನು ಐದು ತಿಂಗಳ ನಂತರ ಇಂದಿರಾಗಾಂಧಿ ಎಲ್ಲವನ್ನೂ ಪಾಕಿಸ್ತಾನಕ್ಕೆ ಬಿಟ್ಟುಕೊಟ್ಟರು. ಭಾರತೀಯ ಸೇನೆ ಗೆದ್ದು,‌ ಇಂದಿರಾಗಾಂಧಿ ಸೋತರು. ಅದಕ್ಕೂ ಮುನ್ನ ನೆಹರು ಅವರು ಅವೈಜ್ಞಾನಿಕ, ಭಾರತಕ್ಕೆ ಶಾಪವಾಗುವ ಸಿಂಧೂ ಜಲ ಒಪ್ಪಂದ ಮಾಡಿಕೊಂಡಿದ್ದರು ಎಂದು ಅಗರ್ವಾಲ್ ಆಪಾದಿಸಿದರು.

ವಿಜಯಶಾಗೆ ಕ್ಷಮಿಸಿಲ್ಲ

ಮಧ್ಯಪ್ರದೇಶದ ಬಿಜೆಪಿ ಸಚಿವ ವಿಜಯ್ ಶಾ ನೀಡಿದ ವಿವಾದಾತ್ಮಕ ಹೇಳಿಕೆಯನ್ನು ಪಕ್ಷ ಒಪ್ಪಿಲ್ಲ. ಅವರು ಎರಡು ಬಾರಿ ಕ್ಷಮೆ ಕೇಳಿದ್ದರೂ ಸ್ವೀಕರಿಸಿಲ್ಲ. ವಿವಾದಾತ್ಮಕ ಹೇಳಿಕೆ ನೀಡಿದ ಕಾರಣಕ್ಕೆ ಅವರನ್ನು ಪಕ್ಷದಿಂದ ಉಚ್ಚಾಟಿಸಬೇಕು ಎಂದು ಹೇಳುವುದಾದರೆ ಕಾಂಗ್ರೆಸ್ ನಲ್ಲಿ ಶಶಿ ತರೂರ್, ಪಿ.ಚಿದಂಬರಂ ಹೊರತುಪಡಿಸಿ ಉಳಿದವರು ಯಾರೂ ಕಾಂಗ್ರೆಸ್ ನಲ್ಲಿ ಇರುವುದಿಲ್ಲ. ರಾಹುಲ್ ಗಾಂಧಿಯನ್ನು ಮೊದಲಿಗೆ ಕಾಂಗ್ರೆಸ್ ನಿಂದ ಹೊರ ಹಾಕಬೇಕಾಗುತ್ತದೆ ಎಂದು ಹೇಳಿದರು.

ಕರ್ನಾಟಕದ ವಿಚಾರವನ್ನೇ ತೆಗೆದುಕೊಳ್ಳಿರಿ, ಸಿಎಂ ಸಿದ್ದರಾಮಯ್ಯ ರಾಷ್ಟ್ರ ಹಾಗೂ ಹಿಂದು ವಿರೋಧಿ‌ ಹೇಳಿಕೆ ನೀಡುತ್ತಿದ್ದಾರೆ. ಆದರೆ ಸಿದ್ದರಾಮಯ್ಯನವರ ರಾಷ್ಟ್ರ ವಿರೋಧಿ ಮಾನಸಿಕತೆ ಒಪ್ಪದ ಡಿಸಿಎಂ‌ ಡಿ.ಕೆ.ಶಿವಕುಮಾರ್ ಭಾರತೀಯ ಸೇನೆಗೆ ಬೆಂಬಲಿಸಿ ಮಾತನಾಡುತ್ತಿದ್ದಾರೆ. ಡಿಸಿಎಂ ನಡೆ ಶ್ಲಾಘನೀಯವೆಂದ ಅಗರ್ವಾಲ್, ಬಿಜೆಪಿ ರಾಜ್ಯಾಧ್ಯಕ್ಷ ಚುನಾವಣೆ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡದೆ ವಿಷಯಾಂತರ ಮಾಡಿ ಜಾರಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net