ಅಪರೇಷನ್ ಕಮಲವೇ ಬಿಜೆಪಿ ಮಾಡೆಲ್; ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ|Operation Kamal is the BJP model

kharge
Published on

ಬೆಂಗಳೂರು: ಕರ್ನಾಟಕದಲ್ಲಿ ಆಪರೇಷನ್ ಕಮಲ ಮೊದಲು ಆರಂಭ ಮಾಡಿದ್ದೇ ಬಿಜೆಪಿ. ಇದೇ ಬಿಜೆಪಿ ಮಾಡೆಲ್ (Operation Kamal is the BJP model) ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ(Priyankh Kharge) ಕಿಡಿಕಾರಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸಂಘಟನಾತ್ಮಕವಾಗಿ ಕುಗ್ಗಿರುವ ರಾಜ್ಯಗಳಲ್ಲಿ ಇಡಿ, ಐಟಿ ಬಳಕೆಯಾಗುತ್ತಿದೆ. ಉಳಿದ ಕಡೆ ರಾಜ್ಯಪಾಲರನ್ನು ದುರುಪಯೋಗ ಮಾಡಿಕೊಳ್ಳುತ್ತಾರೆ. ರಾಜ್ಯದಲ್ಲಿ ಆಪರೇಷನ್ ಕಮಲ ಮಾಡುತ್ತಿರುವುದಕ್ಕೆ ಸಾಕ್ಷಿ ಇದೆ ಎಂದರು.

’ನಮ್ಮ ಪಕ್ಷದ ಶಾಸಕರನ್ನು ಸಂಪರ್ಕ ಮಾಡಿದ್ದಾರೆ. ಅದನ್ನು ನಮ್ಮ ಸ್ನೇಹಿತರು ನಮಗೆ ಹೇಳಿದ್ದಾರೆ. ಆದರೆ, ಅದು ಕಾರ್ಯಗತ ಆಗುವುದಿಲ್ಲ. ಬಿಜೆಪಿ ನಾಯಕರು ಸರ್ಕಾರ ಬಿಳಿಸಲು ಸಾವಿರ ಕೋಟಿ ರೆಡಿ ಇದೆ ಎನ್ನುತ್ತಾರೆ. ಹಾಗಾದರೆ ಆ ಹಣ ಎಲ್ಲಿಂದ ಬಂತು? ಸಾವಿರ ಕೋಟಿ ರೂ ಸಂಗ್ರಹ ಹೇಳಿಕೆ ಬಗ್ಗೆ ಏನು ಕ್ರಮ ಕೈಗೊಂಡಿದ್ದಾರೆ. ಆರೋಪಿತ ನಾಯಕರ ಮೇಲೆ ಮನಿ ಲಾಂಡ್ರಿಂಗ್ ಕೇಸಿಲ್ವಾ ?. ಒಂದು ಸಾವಿರ ಕೋಟಿ ರೂ. ಯಾವ ದುಡ್ಡು ಅದು? ಅದಾನಿ ದುಡ್ಡಾ ಅಥವಾ ಶೇ.40ರಷ್ಟು ಕಮಿಷನ್ ದುಡ್ಡಾ?’ ಎಂದು ಕೇಳಿದರು.

40 ಪರ್ಸೆಂಟ್ ಅಲ್ಲ, 400 ಪರ್ಸೆಂಟ್

ರಾಜ್ಯದಲ್ಲಿ ಆಡಳಿತ ನಡೆಸಿದ ಬಿಜೆಪಿಯದ್ದು 40ಪರ್ಸೆಂಟ್ ಸರ್ಕಾರ ಅಲ್ಲ ಬದಲಾಗಿ 400 ಪರ್ಸೆಂಟ್ ಸರ್ಕಾರ ಎಂದು ಟೀಕಿಸಿದರು.

ಬೆಂಗಳೂರಿನಲ್ಲಿ 40ಪರ್ಸೆಂಟ್ ಆರೋಪ ನಿರಾಧಾರ ಎಂದು ಲೋಕಾಯುಕ್ತ ಕ್ಲೀನ್ ಚಿಟ್ ವಿಚಾರ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, 40 ಪರ್ಸೆಂಟ್ ಕಮಿಷನ್ ಆರೋಪ ನಿರಾಧಾರ ಆದರೆ ನ್ಯಾ. ಮೈಕಲ್ ಡಿ. ಕುನ್ಹಾ ಆಯೋಗ ಕ್ರಮಕ್ಕೆ ಯಾಕೆ ಸೂಚಿಸಿದೆ? ಎಂದು ಪ್ರಶ್ನಿಸಿದರು.

300 ರೂಪಾಯಿ ಕಿಟ್‌ಗೆ 2000 ರೂ. ಕೊಟ್ಟು ಖರೀದಿಸಿ ಮಾಡಿದ್ದಾರೆ. ಅದು 40 ಪರ್ಸೆಂಟ್ ಸರ್ಕಾರ ಅಲ್ಲ. 400 ಪರ್ಸೆಂಟ್ ಸರ್ಕಾರ. ಕೋವಿಡ್ ಅಕ್ರಮದ ಬಗ್ಗೆ ನ್ಯಾ. ಮೈಕಲ್ ಡಿ. ಕುನ್ಹಾ ಅವರು ನೀಡಿರುವ ವರದಿಯಲ್ಲಿ ಹಲವು ಬೆಚ್ಚಿ ಬೀಳಿಸುವ ಅಂಶಗಳು ಬಹಿರಂಗಗೊಂಡಿದೆ. ಯಾವ ರೀತಿಯಲ್ಲಿ ವಿದೇಶಗಳಿಂದ ಕೋವಿಡ್ ಚಿಕಿತ್ಸೆಗೆ ಉಪಕರಣಗಳನ್ನು ಹೆಚ್ಚಿನ ದರಕ್ಕೆ ತರಿಸಿಕೊಳ್ಳಲಾಯಿತು ಎಂಬುವುದನ್ನು ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ ಎಂದರು.

ಸದ್ಯ ಮೈಕಲ್ ಡಿ. ಕುನ್ಹಾ ಅವರ ವರದಿ ರಾಜ್ಯ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ಈಗ ಮಧ್ಯಂತರ ವರದಿಯನ್ನು ಮಾತ್ರ ನೀಡಲಾಗಿದೆ. ಪೂರ್ಣ ಪ್ರಮಾಣದ ವರದಿಯಲ್ಲಿ ಮತ್ತಷ್ಟು ಅಂಶಗಳು ಬಹಿರಂಗವಾಗುವ ಸಾಧ್ಯತೆ ಇದೆ. ಈಗಾಗಲೇ ಎಸ್‌ಐಟಿ ರಚನೆಗೆ ಸಂಪುಟ ಒಪ್ಪಿಗೆ ನೀಡಿದ್ದು, ಶೀಘ್ರದಲ್ಲೇ ಎಸ್‌ಐಟಿ ತಂಡ ಪ್ರಕಟ ಮಾಡಲಾಗುತ್ತದೆ ಎಂದು ತಿಳಿಸಿದರು.

ಸ್ವಾಮೀಜಿಗಳು ಮಾರ್ಗದರ್ಶಕರಾಗಿರಬೇಕು

ಸಚಿವ ಕೆ.ಎಚ್.ಮುನಿಯಪ್ಪ ಅವರನ್ನು ಸಿಎಂ ಮಾಡಿ ಎಂದು ಮಾದಾರ ಚನ್ನಯ್ಯ ಸ್ವಾಮೀಜಿ ಹೇಳಿಕೆ ಕುರಿತ ಪ್ರಶ್ನೆಗೆ, ಸ್ವಾಮೀಜಿಗಳು ನಮಗೆ, ಸಮಾಜಕ್ಕೆ ಮಾರ್ಗದರ್ಶಕರಾಗಿರಬೇಕು. ನಿಮ್ಮ ಸ್ವಾಮೀಜಿಗಳು ನಿಮ್ಮ ಹೆಸರನ್ನು ಹೇಳುತ್ತಾರೆ. ನಿಮ್ಮನ್ನು ಸಿಎಂ ಮಾಡಿ ಎಂದು ಹೇಳುತ್ತಾರೆ. ನಮಗೆ ಸ್ವಾಮೀಜಿ ಇಲ್ಲ. ಹಾಗಾಗಿ ನಮ್ಮ ಪರ ಯಾರೂ ಮಾತನಾಡುವುದಿಲ್ಲ. ಸಿಎಂ ಮಾಡುವುದು, ಬಿಡುವುದು ಕಾಂಗ್ರೆಸ್ ಶಾಸಕಾಂಗ ಸಭೆ, ಸ್ವಾಮೀಜಿಗಳಲ್ಲ ಎಂದರು.

ಬಿಪಿಎಲ್ ಮಾನದಂಡ ಕೇಂದ್ರ ಸರ್ಕಾರದ್ದು. ಮಾನದಂಡದ ಪ್ರಕಾರ ಕ್ರಮ ಆಗಿದೆ. ಅರ್ಹರಿಗೆ ನ್ಯಾಯ ಸಿಗಬೇಕಲ್ಲವೆ? ಅರ್ಹರಿಗೆ ಅಕ್ಕಿ ಸಿಗುವ ಕೆಲಸ ಮಾಡಲಾಗಿದೆ. ಮಾನದಂಡ ಬದಲಾವಣೆ ಕೇಂದ್ರ ಸರ್ಕಾರ ಮಾಡಿದರೆ ಮಾಡಲಿ. ಅದನ್ನು ಅನುಸರಿಸುತ್ತೇವೆ.

|ಪ್ರಿಯಾಂಕ್ ಖರ್ಗೆ, ಗ್ರಾಮೀಣಾಭಿವೃದ್ಧಿ ಸಚಿವ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net