

ಬೆಂಗಳೂರು: ಯಾವ ಕಾರಣಕ್ಕೂ ನಮ್ಮ ಸರ್ಕಾರವನ್ನು ಆಪರೇಷನ್ ಕಮಲ ಮಾಡಲು ಸಾಧ್ಯವಿಲ್ಲ. ಲೋಕಸಭೆ ಚುನಾವಣೆಯಲ್ಲಿ ಸೋಲುತ್ತೇವೆಂದು ಗೊತ್ತಾಗಿದೆ, ಅದಕ್ಕಾಗಿ ಆ ರೀತಿ ಮಾತನಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಹಾರಾಷ್ಟ್ರ ಮುಖ್ಯಮಂತ್ರಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ.
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಪತನವಾಗುತ್ತದೆ, ಮಹಾರಾಷ್ಟ್ರದಲ್ಲಿ ಆದಂತೆ ಆಪರೇಶನ್ ಕಮಲ ನಡೆಯಲಿದೆ ಎಂದು ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆ ಹೇಳಿಕೆ ನೀಡಿರುವ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎನ್‌ಡಿಎ ಈ ಬಾರಿ ಸೋಲಲಿದೆ. ಆಪರೇಶನ್ ಕಮಲ ಬಿಜೆಪಿಯ ಹಗಲುಗನಸು ಎಂದರು.
ಈಗಾಗಲೇ ಕಳೆದ ಒಂದು ವರ್ಷದಿಂದ ಇಂತಹ ಪ್ರಯತ್ನ ಮಾಡಿ ವಿಫಲರಾಗಿದ್ದಾರೆ ಇನ್ನೊಂದು ಬಾರಿ ಏಕೆ ಪ್ರಯತ್ನಿಸುತ್ತಾರೆ. ನಮ್ಮ ಶಾಸಕರು ಯಾರೂ ಮಾರಾಟವಾಗಲು ತಯಾರಿಲ್ಲ. ಮಹಾರಾಷ್ಟ್ರದಲ್ಲಿ ಆದಂತೆ ಆಗಲೂ ಸಾಧ್ಯವಿಲ್ಲ ಎಂದು ಹೇಳಿದರು.
ರಾಜಕೀಯ ಧೃವೀಕರಣವಾಗಬಹುದೇ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ ಕಾಂಗ್ರೆಸ್ ನೇತೃತ್ವದ ಇಂಡಿ ಒಕ್ಕೂಟ ಗೆಲ್ಲಲಿದ್ದು ನಮ್ಮವರೇ ಪ್ರಧಾನಮಂತ್ರಿಯಾಗಲಿದ್ದಾರೆ ಎಂದರಲ್ಲದೇ, ಮೋದಿಯವರಿಗೇ ಪುನಃ ಸರ್ಕಾರ ಬರುವ ಬಗ್ಗೆ ಆತ್ಮವಿಶ್ವಾಸವಿಲ್ಲ. ಅದಕ್ಕಾಗಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ತಿಳಿಸಿದರು.