

| ರಾಘವ ಶರ್ಮ ನಿಡ್ಲೆ, ನವದೆಹಲಿ
ಲೋಕಸಭೆ ಚುನಾವಣೆಗೆ ಎರಡನೇ ಹಂತದ ಮತದಾನ ಏಪ್ರಿಲ್ 26ರಂದು ನಡೆಯಲಿದೆ. ಕೇರಳದ ಎಲ್ಲ 20 ಕ್ಷೇತ್ರಗಳಿಗೆ ಇದೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸ್ಪರ್ಧಿಸುತ್ತಿರುವ ವಯನಾಡ್, ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಕಣದಲ್ಲಿರುವ ತಿರುವನಂತಪುರಂ, ಕೆಸಿ ವೇಣುಗೋಪಾಲ್ರ ಅಲಪು್ಪಳ ಸೇರಿ ಹಲವು ಹೈಪ್ರೊಫೈಲ್ ಕ್ಷೇತ್ರಗಳಿಗೆ ಸಾಕ್ಷಿಯಾಗಿರುವ ಕೇರಳ, ಈ ಬಾರಿ ರಾಷ್ಟ್ರವ್ಯಾಪಿ ಗಮನಸೆಳೆದಿದೆ.
ಹಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ ಮತ್ತು ಎಡಪಕ್ಷಗಳ ಲೆಫ್ಟ್ ಡೆಮಾಕ್ರಟಿಕ್ ಫ್ರಂಟ್ ನಡುವೆ ನೇರಾನೇರ ಸೆಣಸಾಟ ಏರ್ಪಟ್ಟಿದ್ದರೂ, ಬಿಜೆಪಿ ಕೂಡ ಪ್ರಬಲ ಅಭ್ಯರ್ಥಿಗಳನ್ನು ಹಾಕಿರುವುದರಿಂದ ಎರಡೂ ಮೈತ್ರಿಕೂಟಗಳಿಗೆ ಕೇಸರಿಪಡೆ ಪ್ರಬಲ ಸವಾಲೊಡ್ಡುತ್ತಿದೆ.
ಅತಿಹೆಚ್ಚು ಆರ್ಎಸ್ಎಸ್ ಶಾಖೆಗಳು ಹಾಗೂ ದೇವಾಲಯಗಳ ನಾಡಾಗಿದ್ದರೂ, ಬಿಜೆಪಿಯ ಹಿಂದುತ್ವ-ಸಾಂಸ್ಕೃತಿಕ ರಾಜಕಾರಣದ ಬಗ್ಗೆ ಕೇರಳದ ಮತದಾರರು ಅಷ್ಟೊಂದು ಒಲವು ತೋರಿಲ್ಲ. ಇಲ್ಲಿ ಕಾಂಗ್ರೆಸ್ ಮತ್ತು ಎಡಪಕ್ಷಗಳದ್ದೇ ಮೇಲಾಟ. ಇದಕ್ಕೆ ಹಿಂದಿನ ಹಲವು ಚುನಾವಣೆಗಳೇ ಉದಾಹರಣೆ. ಹೀಗಾಗಿ, ಕೇರಳದಲ್ಲಿ ಕನಿಷ್ಠ 2-3 ಸೀಟುಗಳನ್ನಾದರೂ ಗೆಲ್ಲಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಮತ್ತು ವರಿಷ್ಠರು ಬಿಜೆಪಿಯ ಪ್ರಭಾವಿ ನಾಯಕರನ್ನು ಲೋಕಸಭೆ ಕಣಕ್ಕಿಳಿಸಿದ್ದಾರೆ. ಅದು ಎಷ್ಟರಮಟ್ಟಿಗೆ ಫಲ ಕೊಡಲಿದೆ ಎನ್ನುವುದು ಜೂನ್ 4ರಂದು ಗೊತ್ತಾಗಲಿದೆ.
ಕೇಂದ್ರ ಸಚಿವ, ರಾಜ್ಯಸಭೆ ಸದಸ್ಯ, ಬಿಜೆಪಿ ಮುಖಂಡ ರಾಜೀವ್ ಚಂದ್ರಶೇಖರ್ ತಮ್ಮ ರಾಜಕೀಯ ಜೀವನದ ಮೊದಲ ಚುನಾವಣೆಯನ್ನು ಎದುರಿಸುತ್ತಿದ್ದಾರೆ. ಕಾಂಗ್ರೆಸ್ ನಾಯಕ ಶಶಿ ತರೂರ್ ವಿರುದ್ಧ ತಿರುವನಂತಪುರಂ ಕ್ಷೇತ್ರದಿಂದ ಕಣಕ್ಕಿಳಿದಿರುವ ರಾಜೀವ್, ಚುನಾವಣೆ ಗೆದ್ದರೆ ಅದು ಖಂಡಿತವಾಗಿಯೂ ಐತಿಹಾಸಿಕ ಎನಿಸಿಕೊಳ್ಳಲಿದೆ. ಕಳೆದ 3 ಚುನಾವಣೆ ಸೇರಿ ಒಟ್ಟು 9 ಬಾರಿ ತಿರುವನಂತಪುರಂ ಸೀಟನ್ನು ಕಾಂಗ್ರೆಸ್ ಗೆದ್ದುಕೊಂಡಿದ್ದರೆ, ಸಿಪಿಐ 4 ಬಾರಿ ಇಲ್ಲಿ ಗೆಲುವು ಸಾಧಿಸಿದೆ. 2014 ಮತ್ತು 2019ರ ಚುನಾವಣೆಯಲ್ಲಿ ಬಿಜೆಪಿ ಕ್ರಮವಾಗಿ 32.32% ಮತ್ತು 31.3% ಮತಗಳನ್ನು ಪಡೆದುಕೊಂಡು ಎರಡನೇ ಸ್ಥಾನದಲ್ಲಿದೆ. ಕಳೆದ ಚುನಾವಣೆಯಲ್ಲಿ ಶಶಿ ತರೂರ್ ಬಿಜೆಪಿ ಅಭ್ಯರ್ಥಿಗಿಂತ 10% ಮತಗಳನ್ನು ಹೆಚ್ಚು ಪಡೆದಿದ್ದರು. 2009ರಿಂದ 3 ಬಾರಿ ಗೆದ್ದಿರುವ ತರೂರ್, ಕ್ಷೇತ್ರದಲ್ಲಿ ಅತ್ಯಧಿಕ ಬಾರಿ ಗೆದ್ದಿರುವ ಸಂಸದರೂ ಹೌದು. ಸಿಪಿಐನಿಂದ 2005ರಲ್ಲಿ ತಿರುವನಂತರಪುರಂ ಲೋಕಸಭೆ ಉಪ ಚುನಾವಣೆ ಗೆದ್ದಿದ್ದ 78 ವರ್ಷದ ಪನ್ನಿಯನ್ ರವೀಂದ್ರನ್ ಸ್ಪರ್ಧಿಸುತ್ತಿದ್ದಾರೆ.
ತ್ರಿಕೋನ ಸ್ಪರ್ಧೆಗೆ ಸಾಕ್ಷಿಯಾಗುತ್ತಿರುವ ರಾಜ್ಯದ ಅಟ್ಟಿಂಗಲ್ ಲೋಕಸಭೆ ಕ್ಷೇತ್ರದಲ್ಲಿ ಕೇಂದ್ರ ಸಚಿವ ವಿ. ಮುರಳೀಧರನ್ ಬಿಜೆಪಿ ಅಭ್ಯರ್ಥಿಯಾಗಿ ಕಣದಲ್ಲಿದ್ದು, ಹಾಲಿ ಸಂಸದ, ಕಾಂಗ್ರೆಸ್ನ ಅಡೂರು ಪ್ರಕಾಶ್ ಮತ್ತು ಎಲ್ಡಿಎಫ್ನ ಹಾಲಿ ಶಾಸಕ ವಿ. ಜಾಯ್ರಿಂದ ಸವಾಲು ಎದುರಿಸುತ್ತಿದ್ದಾರೆ. 18 ವರ್ಷಗಳಿಂದ ಈ ಕ್ಷೇತ್ರದಲ್ಲಿ ಪ್ರಾಬಲ್ಯ ಸಾಧಿಸಿದ್ದ ಎಲ್ಡಿಎಫ್ನ್ನು (ಸಿಪಿಐ) 2019ರ ಚುನಾವಣೆಯಲ್ಲಿ ಸೋಲಿಸಿದ್ದ ಅಡೂರು ಪ್ರಕಾಶ್, ಎರಡನೇ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಕಳೆದ ಚುನಾವಣೆಯಲ್ಲಿ ಶೋಭಾ ಸುರೇಂದ್ರನ್ ಅವರು ಬಿಜೆಪಿ ಅಭ್ಯರ್ಥಿಯಾಗಿ, ಪಕ್ಷದ ಮತಪಾಲನ್ನು ಶೇ.10.5ರಿಂದ ಶೇ.25ಕ್ಕೆ ಏರಿಸಿದ್ದರು. ಈ ಬಾರಿಯೂ ಅವರಿಗೆ ಟಿಕೆಟ್ ನೀಡಬೇಕೆಂಬ ಬೇಡಿಕೆಯಿತ್ತು. ಆದರೆ, ಆಂತರಿಕ ಗುಂಪುಗಾರಿಕೆ ಪರಿಣಾಮ ಅಳಪುಳದಲ್ಲಿ ಶೋಭಾ ಸ್ಪರ್ಧಿಸುತ್ತಿದ್ದಾರೆ. ಕಳೆದ ಚುನಾವಣೆಯಲ್ಲಿ ಬಿಜೆಪಿ 3ನೇ ಸ್ಥಾನಿಯಾಗಿತ್ತು. ಕೇಂದ್ರ ಸಚಿವ ಮುರಳೀಧರನ್ ಕಣದಲ್ಲಿದ್ದರೂ, ಒಂದನೇ ಸ್ಥಾನಕ್ಕೇರುವ ದೈತ್ಯ ಸವಾಲನ್ನು ಹಿಮ್ಮೆಟ್ಟುವುದು ಸುಲಭದ ಮಾತಲ್ಲ.
ಉತ್ತರ ಪ್ರದೇಶದ ಅಮೇಠಿ ಕ್ಷೇತ್ರದ ಬಗ್ಗೆ ಕುತೂಹಲವನ್ನು ಹಾಗೇ ಉಳಿಸಿಕೊಂಡು, ಕೇರಳದ ವಯನಾಡ್ ಕ್ಷೇತ್ರದಿಂದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸ್ಪರ್ಧಿಸುತ್ತಿರುವುದರಿಂದ, ಇಡೀ ದೇಶದ ಕಣ್ಣು ಈ ಕ್ಷೇತ್ರದ ಮೇಲೆ ಬಿದ್ದಿದೆ. ಅಮೇಠಿಯಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಭಾರೀ ಸವಾಲೊಡ್ಡುವ ಸಾಧ್ಯತೆ ಮನಗಂಡಿದ್ದ ರಾಹುಲ್, ವಯನಾಡ್ನ್ನೂ ಆಯ್ಕೆ ಮಾಡಿಕೊಂಡಿದ್ದರು. ಕಳೆದ ಚುನಾವಣೆಯಲ್ಲಿ 7 ಲಕ್ಷಕ್ಕಿಂತಲೂ ಹೆಚ್ಚು ಮತಗಳ ಅಂತರದಿಂದ ಸಿಪಿಐನ ಮಹಿಳಾ ಅಭ್ಯರ್ಥಿ ಅನ್ನೀ ರಾಜಾ ವಿರುದ್ಧ ಗೆದ್ದಿದ್ದ ರಾಹುಲ್ ಗಾಂಧಿಗೆ, ಈ ಬಾರಿ ಬಿಜೆಪಿ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್ ಕೂಡ ಸವಾಲೊಡ್ಡಿದ್ದಾರೆ. ಅನ್ನೀ ರಾಜಾ ಮತ್ತೊಮ್ಮೆ ಎಲ್ಡಿಎಫ್ನ್ನು ಪ್ರತಿನಿಧಿಸುತ್ತಿದ್ದಾರೆ. 2019ರಲ್ಲಿ ಅಮೇಠಿ ಸೋಲಿನಂತೆ, 2024ರಲ್ಲಿ ವಯನಾಡ್ನಲ್ಲೂ ರಾಹುಲ್ ಸೋಲಲಿದ್ದಾರೆ ಎಂದು ಸುರೇಂದ್ರನ್ ಭವಿಷ್ಯ ನುಡಿದಿದ್ದಾರೆ. ಹಾಗಂತ, ರಾಹುಲ್ಗೆ ಕ್ಷೇತ್ರದಾದ್ಯಂತ ಜನಬೆಂಬಲ ಇರುವುದು ಸುಳ್ಳೇನಲ್ಲ. 2009ರಿಂದ ವಯನಾಡ್ನ್ನು ಕಾಂಗ್ರೆಸ್ ಗೆಲ್ಲುತ್ತಿದ್ದು, ನಾಲ್ಕನೇ ಬಾರಿಗೆ ವಿಜಯಮಾಲೆ ಧರಿಸಿಕೊಳ್ಳುವ ತವಕದಲ್ಲಿದೆ. ಎಲ್ಡಿಎಫ್ ಅಭ್ಯರ್ಥಿ ಅನ್ನೀ ರಾಜಾ ಪರ ಪ್ರಚಾರ ನಡೆಸಿರುವ ಸಿಎಂ ಪಿಣರಾಯಿ ವಿಜಯನ್, ಕೇರಳದಿಂದ ರಾಹುಲ್ ಯಾವ ಉದ್ದೇಶಕ್ಕಾಗಿ ಸ್ಪರ್ಧಿಸುತ್ತಿದ್ದಾರೆ? ಕೇರಳಕ್ಕೆ, ಕ್ಷೇತ್ರಕ್ಕೆ ಅವರ ಕೊಡುಗೆ ಏನು ಎಂದು ಪ್ರಶ್ನಿಸಿದ್ದಾರೆ.
2019ರ ಲೋಕಸಭೆ ಚುನಾವಣೆ ಸ್ಪರ್ಧಿಸಲು ಹಿಂದೇಟು ಹಾಕಿದ್ದ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ಈ ಬಾರಿ ಮತ್ತೆ ಅಲಪುಳ ಕ್ಷೇತ್ರದಿಂದ ಕಣದಲ್ಲಿದ್ದಾರೆ. ಕಳೆದ ಬಾರಿ ಕೇರಳದ 20 ಸೀಟುಗಳಲ್ಲಿ ಯುಡಿಎಫ್ 19 ಸೀಟುಗಳನ್ನು ಗೆದ್ದಿತ್ತು. ಎಡಪಕ್ಷಗಳ ನೇತೃತ್ವದ ಎಲ್ಡಿಎಫ್ ಅಲಪುಳ ಹೊರತುಪಡಿಸಿ ಉಳಿದೆಲ್ಲೆಡೆ ಮುಖಭಂಗ ಅನುಭವಿಸಿತ್ತು. ಈ ಬಾರಿ ಕೆ.ಸಿ. ವೇಣುಗೋಪಾಲ್ ಮತ್ತು ಬಿಜೆಪಿಯ ಫೈರ್ಬ್ರಾಂಡ್ ಶೋಭಾ ಸುರೇಂದ್ರನ್ ಕಣದಲ್ಲಿದ್ದಾರೆ. ವೇಣುಗೋಪಾಲ್ ರಾಷ್ಟ್ರೀಯ ಮಟ್ಟದಲ್ಲಿ ಪ್ರಭಾವಿ ನಾಯಕರಾಗಿದ್ದು, ರಾಹುಲ್ ಗಾಂಧಿಗೂ ಆಪ್ತರಾಗಿದ್ದಾರೆ. ಅಲಪುಳದಲ್ಲಿ ಶೇ.72ರಷ್ಟು ಹಿಂದೂ, ಕ್ರಿಶ್ಚಿಯನ್ನರು 14% ಮತ್ತು 13% ಮುಸ್ಲಿಮರಿದ್ದಾರೆ. ಅಲಪುಳಕ್ಕೆ ಮಹಿಳಾ ಕೇಂದ್ರ ಸಚಿವರನ್ನು ನೀಡುವುದು ಮೋದಿಯವರ ಗ್ಯಾರಂಟಿ ಎಂದೇ ಬಿಜೆಪಿ ಮಹಿಳಾ ಅಭ್ಯರ್ಥಿ ಶೋಭಾ ಸುರೇಂದ್ರನ್ ಪ್ರಚಾರ ಮಾಡುತ್ತಿದ್ದಾರೆ. ಈಳವ ಸಮುದಾಯದ ಶೋಭಾಗೆ, ಈಳವ (ಒಬಿಸಿ) ಸಮುದಾಯದ ಪ್ರಬಲ ಬೆಂಬಲ ಸಿಗುವ ನಿರೀಕ್ಷೆಯಲ್ಲಿದ್ದಾರೆ.