ಓಪನ್ ಬುಕ್​ಗೆ ತೆರೆದುಕೊಂಡ ವಿಟಿಯು; ಪರೀಕ್ಷೆಯಲ್ಲಿ ಪುಸ್ತಕ ನೋಡಿಯೂ ಉತ್ತರ ಬರೆಯಲು ಅವಕಾಶ

VTU
Published on

ಬೆಂಗಳೂರು: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ(ವಿಟಿಯು) ಓಪನ್ ಬುಕ್ ಎಕ್ಸಾಂ’ ಪರಿಕಲ್ಪನೆಯನ್ನು ರಾಜ್ಯದಲ್ಲಿ ಅನುಷ್ಠಾನಗೊಳಿಸಲು ಮುಂದಾಗಿದೆ. ಈ ರೀತಿ ಮಾಡಿದರೆ ನಕಲು ಮಾಡಿದಂತಾಗುವುದಿಲ್ಲವೇ ಅನುಮಾನ ಹಾಗೂ ಆತಂಕ ಎರಡೂ ಬೇಡ. ಏಕೆಂದರೆ, ಪುಸ್ತಕದಲ್ಲಿರುವ ಪ್ರಶ್ನೆಗಳನ್ನೇ ಕೇಳಿರುತ್ತಾರೆ ಎಂಬ ಭಾವನೆ ತಪು್ಪ. ಪುಸ್ತಕದಲ್ಲಿ ಕೇವಲ ಸೂತ್ರಗಳನ್ನು ಮಾತ್ರ ನೋಡಿಕೊಳ್ಳಲು ಸಾಧ್ಯವಾಗಿರುತ್ತದೆ. ಉಳಿದ ಅಂಶಗಳನ್ನು ವಿದ್ಯಾರ್ಥಿಗಳೇ ತಮ್ಮ ಸೃಜನಶೀಲ ಆಲೋಚನೆ ಮೂಲಕ ಉತ್ತರಿಸಬೇಕಾಗಿರುತ್ತದೆ.

2021-22ನೇ ಸಾಲಿನಲ್ಲಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಇದು ಅನ್ವಯಿಸಲಿದೆ. ಸಿವಿಲ್, ಮೆಕಾನಿಕಲ್ ಮತ್ತು ವಾಸ್ತುಶಿಲ್ಪ ಈ ಕೋರ್ಸ್​ಗಳಿಗೆ ಓಪನ್ ಬುಕ್ ಮಾದರಿಯಲ್ಲಿ ಪರೀಕ್ಷೆ ಮಾಡಲು ಪ್ರಶ್ನೆ ಪತ್ರಿಕೆಯನ್ನು ವಿನ್ಯಾಸ ಮಾಡಿದೆ. ಈ ಪರೀಕ್ಷೆಯನ್ನು ಮಾಡುವ ಮುನ್ನ ಬೋರ್ಡ್ ಆಫ್ ಸ್ಟಡೀಸ್​ನಲ್ಲಿ ಪ್ರಸ್ತಾವನೆ ಇಟ್ಟು ಅನುಮತಿ ಪಡೆಯಲು ವಿವಿ ನಿರ್ಧರಿಸಿದೆ.

ಏನು ಪ್ರಯೋಜನ?: ಇಷ್ಟು ವರ್ಷ ವಿದ್ಯಾರ್ಥಿಗಳು ಕೆಲವು ಸೂತ್ರಗಳನ್ನು ಕಂಠಪಾಠ ಮಾಡಬೇಕಾಗಿರುತ್ತದೆ. ವಿದ್ಯಾರ್ಥಿಗಳಿಗೆ ಓಪನ್ ಬುಕ್ ಪರೀಕ್ಷೆ ಮಾಡುವುದರಿಂದ ಈ ರೀತಿ ಕಂಠಪಾಠ ಮಾಡುವ ಅವಶ್ಯಕತೆ ಇರುವುದಿಲ್ಲ. ಹ್ಯಾಂಡ್ ಬುಕ್​ನಲ್ಲಿ ಕೆಲವು ಸೂತ್ರಗಳಷ್ಟೇ ಇರಲಿದ್ದು, ವಿದ್ಯಾರ್ಥಿಗಳು ಅವುಗಳನ್ನು ಬಳಕೆ ಮಾಡಿ ತಮ್ಮ ಕ್ರೀಯಾಶೀಲತೆಯ ಮೂಲಕ ಉತ್ತರಿಸಬೇಕಾಗಿರುತ್ತದೆ. ಇದರಿಂದ ಒಟ್ಟಾರೆ ಮೌಲ್ಯಂಕನ ಪ್ರಕ್ರಿಯೆಯೇ ಬದಲು ಆಗಲಿದೆ. ವಿದ್ಯಾರ್ಥಿಗಳು ಕೇವಲ ಪುಸ್ತಕಕ್ಕೆ ಅಂಟಿಕೊಳ್ಳುವ ಪದ್ಧತಿಯಿಂದ ಹೊರ ಬರಬಹುದಾಗಿದೆ.

ಎಲ್ಲಿದೆ ಈ ಪದ್ಧತಿ?: ಸದ್ಯ ಇಂಡಿಯನ್ ಇನ್​ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಸ್(ಐಐಟಿ), ನ್ಯಾಷನಲ್ ಇನ್​ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಸ್(ಎನ್​ಐಟಿ) ಈ ಪದ್ಧತಿಯನ್ನು ಅಳವಡಿಸಿಕೊಂಡಿದೆ. ವಿಟಿಯು ವ್ಯಾಪ್ತಿಯಲ್ಲಿ 219 ಇಂಜಿನಿಯರಿಂಗ್ ಕಾಲೇಜುಗಳಿದ್ದು, 3.25 ಲಕ್ಷ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.

ಎಲ್ಲ ವಿಷಯದ ವಿದ್ಯಾರ್ಥಿಗಳಿಗೂ ಈ ಒಪನ್ ಬುಕ್ ಪರೀಕ್ಷೆ ನಡೆಸುವುದು ಅಸಾಧ್ಯ. ಕೆಲವು ವಿಷಯಗಳಿಗೆ ಪಠ್ಯಪುಸ್ತಕ ಆಧಾರದಲ್ಲಿ ಪ್ರಶ್ನೆಗಳನ್ನು ರೂಪಿಸಿ ಪರೀಕ್ಷೆ ನಡೆಸುತ್ತೇವೆ. ಈ ಬಗ್ಗೆ ಶೀಘ್ರದಲ್ಲೇ ವಿವರವಾದ ಸುತ್ತೋಲೆ ಹೊರಡಿಸುತ್ತೇವೆ.

| ಕರಸಿದ್ದಪ್ಪ ಕುಲಪತಿ, ವಿಟಿಯು

ಇದೊಂದು ಉತ್ತಮವಾದ ಪದ್ಧತಿಯಾಗಿದೆ. ಓಪನ್ ಬುಕ್ ಎಂದಾಕ್ಷಣ ಪುಸ್ತಕದಲ್ಲಿರುವ ಅಂಶಗಳನ್ನೇ ಪ್ರಶ್ನೆಗಳ ರೂಪದಲ್ಲಿ ಕೇಳುತ್ತಾರೆ ಎನ್ನುವುದು ತಪು್ಪ ಕಲ್ಪನೆ. ಇದರಿಂದ ವಿದ್ಯಾರ್ಥಿಗಳಿಗೆ ಸಾಕಷ್ಟು ಅನುಕೂಲವಾಗಲಿದೆ.

| ಡಾ.ಜಿ.ಎನ್.ಕೃಷ್ಣಮೂರ್ತಿ ಪ್ರಾಂಶುಪಾಲರು, ಬಿಎನ್​ಎಂಐಟಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net