ಚೀನಾದ SCO ರಕ್ಷಣಾ ಸಚಿವರ ಸಭೆಯಲ್ಲಿ ಪಾಕಿಸ್ತಾನವನ್ನು​ ತರಾಟೆಗೆ ತೆಗೆದುಕೊಂಡ ರಾಜನಾಥ್​ ಸಿಂಗ್​! Rajnath Singh

Rajnath Singh
Published on

Rajnath Singh : ಇಂದು (ಜೂನ್​ 26) ಚೀನಾದಲ್ಲಿ ನಡೆದ ಶಾಂಘೈ ಸಹಕಾರ ಸಂಸ್ಥೆ (SCO) ರಕ್ಷಣಾ ಸಚಿವರ ಸಭೆಯಲ್ಲಿ, ಗಡಿಯಾಚೆಗಿನ ಭಯೋತ್ಪಾದನೆಯನ್ನು ನಡೆಸುತ್ತಿರುವ ಸದಸ್ಯ ರಾಷ್ಟ್ರ ಪಾಕಿಸ್ತಾನವನ್ನು ತರಾಟೆಗೆ ತೆಗೆದುಕೊಂಡ ರಕ್ಷಣಾ ಸಚಿವ ರಾಜನಾಥ್​ ಸಿಂಗ್​, ಇತರ ಸದಸ್ಯ ರಾಷ್ಟ್ರಗಳು ಭಯೋತ್ಪಾದಕ ಕೃತ್ಯಗಳ ವಿರುದ್ಧ ಮಾತನಾಡುವಂತೆ ಒತ್ತಾಯಿಸಿದರು. ಇದೇ ಸಂದರ್ಭದಲ್ಲಿ ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆಯ ವಿರುದ್ಧ ಪ್ರಾರಂಭಿಸಲಾದ ಆಪರೇಷನ್ ಸಿಂಧೂರ್ ಬಗ್ಗೆಯೂ ಉಲ್ಲೇಖಿಸಿದರು.

ಪಾಕಿಸ್ತಾನದ ಗಡಿಯಾಚೆಯಿಂದ ನಡೆಯುವ ಭಯೋತ್ಪಾದಕ ದಾಳಿಗಳನ್ನು ತಡೆಯಲು ಮತ್ತು ಗಡಿಯಾಚೆಗಿನ ಭಯೋತ್ಪಾದಕ ಮೂಲಸೌಕರ್ಯವನ್ನು ಕೆಡವಲು ಮೇ 7 ರಂದು ಪ್ರಾರಂಭಿಸಲಾದ ಪೂರ್ವಭಾವಿ ದಾಳಿಗಳ ಸರಣಿಯೇ ಆಪರೇಷನ್ ಸಿಂಧೂರ ಎಂದು ರಾಜನಾಥ್​ ಸಿಂಗ್ ಹೇಳಿದರು.

ಇದೇ ವೇಳೆ ಪಾಕಿಸ್ತಾನವನ್ನು ನೇರವಾಗಿ ಟೀಕಿಸಿದ ಅವರು, ಕೆಲವು ದೇಶಗಳು ಗಡಿಯಾಚೆಗಿನ ಭಯೋತ್ಪಾದನೆಯನ್ನು ನೀತಿಯ ಸಾಧನವಾಗಿ ಬಳಸುತ್ತಿವೆ ಮತ್ತು ಭಯೋತ್ಪಾದಕರಿಗೆ ಆಶ್ರಯ ನೀಡುತ್ತಿವೆ. ಅಂತಹ ದ್ವಿಮುಖ ನೀತಿಗಳಿಗೆ ನಮ್ಮಲ್ಲಿ ಯಾವುದೇ ಸ್ಥಳವಿಲ್ಲ. ಎಸ್​ಸಿಒ ಕೂಡ ಅಂತಹ ರಾಷ್ಟ್ರಗಳನ್ನು ಟೀಕಿಸಲು ಹಿಂಜರಿಯಬಾರದು ಎಂದು ಹೇಳಿದರು.

ಭಯೋತ್ಪಾದನೆಗೆ ಶೂನ್ಯ ಸಹಿಷ್ಣುತೆ ತೋರಿಸಲು ಭಾರತ ತೆಗೆದುಕೊಂಡ ಹಲವಾರು ಕ್ರಮಗಳನ್ನು ರಾಜನಾಥ್ ಸಿಂಗ್ ಇದೇ ಸಭೆಯಲ್ಲಿ ಎತ್ತಿ ತೋರಿಸಿದರು. ಭಯೋತ್ಪಾದನೆಯ ಕೇಂದ್ರಬಿಂದುಗಳು ಇನ್ನು ಮುಂದೆ ಸುರಕ್ಷಿತವಾಗಿಲ್ಲ ಎಂಬುದನ್ನು ನಾವು ತೋರಿಸಿದ್ದೇವೆ. ಭಯೋತ್ಪಾದನೆಯನ್ನು ಗುರಿಯಾಗಿಸಲು ನಾವೆಂದು ಹಿಂಜರಿಯುವುದಿಲ್ಲ ಎಂದು ರಾಜನಾಥ್​ ಸಿಂಗ್​ ಹೇಳಿದರು.

ನಮ್ಮ ಯುವಕರಲ್ಲಿ ಮೂಲಭೂತವಾದ ಹರಡುವುದನ್ನು ತಡೆಯಲು ನಾವು ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳಬೇಕು. ಶಾಂಘೈ ಸಹಕಾರ ಸಂಸ್ಥೆಯ RATS ಕಾರ್ಯವಿಧಾನವು ಈ ನಿಟ್ಟಿನಲ್ಲಿ ಮಹತ್ತರ ಪಾತ್ರ ವಹಿಸಿದೆ ಎಂದು ರಾಜನಾಥ್ ಸಿಂಗ್ ಹೇಳಿದರು. ಅಲ್ಲದೆ, ಭಾರತದ ಅಧ್ಯಕ್ಷತೆಯಲ್ಲಿ, ಭಯೋತ್ಪಾದನೆ, ಪ್ರತ್ಯೇಕತಾವಾದ ಮತ್ತು ಭಯೋತ್ಪಾದನೆಗೆ ಕಾರಣವಾಗುವ ಮೂಲಭೂತವಾದವನ್ನು ಎದುರಿಸುವ ಕುರಿತು SCO ಮುಖ್ಯಸ್ಥರ ಮಂಡಳಿಯ ಜಂಟಿ ಹೇಳಿಕೆಯು ನಮ್ಮ ಸಾಮಾನ್ಯ ಬದ್ಧತೆಯ ಸಂಕೇತವಾಗಿತ್ತು ಎಂದರು.

ಅಂದಹಾಗೆ, ರಾಜನಾಥ್​ ಸಿಂಗ್ ಅವರು ಜೂನ್ 27ರವರೆಗೆ SCO ರಕ್ಷಣಾ ಸಚಿವರ ಸಭೆಯಲ್ಲಿ ಭಾಗವಹಿಸಲು ಚೀನಾದ ಕಿಂಗ್ಡಾವೊದಲ್ಲಿದ್ದಾರೆ. 2020ರಲ್ಲಿ ಗಾಲ್ವಾನ್ ಕಣಿವೆ ಸಂಘರ್ಷದ ನಂತರ ನರೇಂದ್ರ ಮೋದಿ ಸಂಪುಟದ ಹಿರಿಯ ಸಚಿವರೊಬ್ಬರ ಮೊದಲ ಚೀನಾ ಭೇಟಿಯಾಗಿದೆ. ಗುರುವಾರ ಸಭೆ ಪ್ರಾರಂಭವಾಗುವ ಮೊದಲು, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಚೀನಾದ ರಕ್ಷಣಾ ಸಚಿವ ಅಡ್ಮಿರಲ್ ಡಾಂಗ್ ಜುನ್ ಮತ್ತು ಪಾಕಿಸ್ತಾನ, ಇರಾನ್, ಕಝಾಕಿಸ್ತಾನ್, ಕಿರ್ಗಿಸ್ತಾನ್, ರಷ್ಯಾ, ತಜಿಕಿಸ್ತಾನ್ ಮತ್ತು ಉಜ್ಬೇಕಿಸ್ತಾನ್ ಸೇರಿದಂತೆ ಸದಸ್ಯ ರಾಷ್ಟ್ರಗಳ ರಕ್ಷಣಾ ಮಂತ್ರಿಗಳು ಗ್ರೂಪ್​ ಫೋಟೋಗಾಗಿ ಒಟ್ಟುಗೂಡಿದರು.

ರಾಜನಾಥ್​ ಸಿಂಗ್ ಅವರು SCO ರಕ್ಷಣಾ ಸಚಿವರ ಸಭೆಯ ಹೊರತಾಗಿ ಚೀನಾದ ರಕ್ಷಣಾ ಸಚಿವ ಡಾಂಗ್ ಜುನ್ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸುವ ಬಗ್ಗೆಯೂ ಯೋಜಿಸಿದ್ದಾರೆ. ಇದರ ಜೊತೆಗೆ ಚೀನಾ-ಭಾರತ ಮಿಲಿಟರಿ ಹಾಟ್‌ಲೈನ್ ಅನ್ನು ಪುನರಾರಂಭಿಸುವತ್ತ ಗಮನಹರಿಸಲಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net