ಭಾರತ-ಕೆನಡಾ ನಡುವೆ ಶೈಕ್ಷಣಿಕ ಸಹಯೋಗ ಒಪ್ಪಂದ; ಉನ್ನತ ಶಿಕ್ಷಣ ಕಲಿಕೆಗೆ ಹೆಚ್ಚು ಅವಕಾಶ

MOU
Published on

ಬೆಂಗಳೂರು: ಭಾರತ ಮತ್ತು ಕೆನಡಾ ದೇಶಗಳ ನಡುವೆ ಶೈಕ್ಷಣಿಕ ಸಹಯೋಗ ಸ್ಥಾಪಿಸುವ ಬಗ್ಗೆ ಶುಕ್ರವಾರ ನಗರದ ಖಾಸಗಿ ಹೋಟೆಲ್​ನಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಕೆನಡಾದ ಯಾರ್ಕ್​ ವಿಶ್ವವಿದ್ಯಾಲಯ ಮತ್ತು ಒಪಿ ಜಿಂದಾಲ್​ ವಿಶ್ವವಿದ್ಯಾಲಯ ಒಪ್ಪಂದ ಮಾಡಿಕೊಂಡಿವೆ.

ಯಾರ್ಕ್​ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ರೊಂಡಾ ಎಲ್​. ಲೆಂಟನ್​ ಮತ್ತು ಜಿಪಿ ಜಿಂದಾಲ್​ ಗ್ಲೋಬಲ್​ ವಿಶ್ವವಿದ್ಯಾಲಯದ ಸಂಸ್ಥಾಪಕ ಉಪಕುಲಪತಿ ಪ್ರೊ. ಸಿ. ರಾಜ್​ ಕುಮಾರ್​ ಒಪ್ಪಂದ ಪತ್ರಕ್ಕೆ ಸಹಿ ಹಾಕಿದರು.

ವೇಗವಾಗಿ ಅಭಿವೃದ್ಧಿ ಕಾಣುತ್ತಿರುವ ದೇಶಗಳಲ್ಲಿ ಭಾರತವೂ ಒಂದು. ಹೀಗಿರುವ ಭೌಗೋಳಿಕವಾಗಿ ರಾಜಕೀಯ ಉದ್ವಿಗ್ನತೆ, ಆರ್ಥಿಕ ಅಸ್ಥಿರತೆ, ಕೃತಕ ಬುದ್ಧಿಮತ್ತೆ, ಸುಧಾರಿತ ತಂತ್ರಜ್ಞಾನ ಸೇರಿದಂತೆ ವಿವಿಧ ಬೆಳವಣಿಗೆಗಳ ಬಗ್ಗೆ ವಿದ್ಯಾರ್ಥಿಗಳು ಅಧ್ಯಯನಶೀಲರಾಗಿರಬೇಕು. ಶೈಕ್ಷಣಿಕ ಜ್ಞಾನಕ್ಕಾಗಿ ವಿದೇಶಗಳಿಗೂ ಭೇಟಿ ನೀಡಬೇಕು. ಇದರಿಂದ ಹೊಸ ಹೊಸ ವಿಷಯಗಳನ್ನು ಕಲಿಯಲು ಸಾಧ್ಯವಾಗುತ್ತದೆ. ಇಂತಹ ಸನ್ನಿವೇಶದಲ್ಲಿ ಭಾರತ ಮತ್ತು ಕೆನಡಾ ಶೈಕ್ಷಣಿಕ ಸಹಭಾಗಿತ್ವ ಹೊಂದಿವೆ ಎಂದು ಯಾರ್ಕ್​ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ರೊಂಡಾ ಎಲ್​. ಲೆಂಟನ್​ ಅಭಿಪ್ರಾಯಪಟ್ಟರು.

ಜಿಪಿ ಜಿಂದಾಲ್​ ಗ್ಲೋಬಲ್​ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ಸಿ. ರಾಜ್​ ಕುಮಾರ್​ ಮಾತನಾಡಿ, ಶಿಕ್ಷಣ ಕ್ಷೇತ್ರದಲ್ಲಿ ಭಾರತ ಮತ್ತು ಕೆನಡಾ ದೀರ್ಕಾಲದ ಸಂಬಂಧ ಹೊಂದಿದೆ. ಉನ್ನತ ಶಿಕ್ಷಣದ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ವಿಷಯಗಳ ಕಲಿಕೆಗೆ ಒತ್ತು ನೀಡುವುದು ಅನಿವಾರ್ಯ. ಇದರ ಭಾಗವಾಗಿ ಒಡಂಬಡಿಕೆ ಮಾಡಿಕೊಂಡಿದ್ದು, ಉದ್ಯಮಶೀಲತೆಯನ್ನು ಉತ್ತೇಜಿಸಲಾಗುವುದು. ಮುಂದಿನ ದಿನಗಳಲ್ಲಿ ಭಾರತಕ್ಕೆ ಭೇಟಿ ನೀಡುವ ಕೆನಡಾ ವಿದ್ಯಾರ್ಥಿಗಳ ಸಂಖ್ಯೆಯನ್ನು ಹೆಚ್ಚಿಸಲು ಪ್ರಯತ್ನಿಸಲಾಗುವುದು ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net