Web Exclusive| ಇ-ಪಾಸ್ ಇಲ್ಲದೆ ಊಟಿಗೆ ಹೊರಟ ಪ್ರವಾಸಿಗರಿಗೆ ಸಂಕಷ್ಟ

madhumalai
Published on

| ವಿಜಯವಾಣಿ ವಿಶೇಷ ಗುಂಡ್ಲುಪೇಟೆ

ಊಟಿ ಜಿಲ್ಲಾಡಳಿತ ನಿಗದಿಪಡಿಸಿರುವ ಇ-ಪಾಸ್ ಇಲ್ಲದ ಪ್ರವಾಸಿಗರನ್ನು ಮಧುಮಲೈ ಅರಣ್ಯ ಪ್ರವೇಶದ್ವಾರದಲ್ಲಿ ತಡೆಯಲಾಗುತ್ತಿದ್ದು, ಪಾಸ್ ಪಡೆಯಲು ಪ್ರವಾಸಿಗರು ಪರದಾಡುತ್ತಿದ್ದಾರೆ.

ಸಾಲು ಸಾಲು ರಜೆ, ಶನಿವಾರ, ಭಾನುವಾರ ಮತ್ತು ವರ್ಷದ ಕೊನೇ ಹಿನ್ನೆಲೆಯಲ್ಲಿ ಊಟಿಗೆ ಹೆಚ್ಚಿನ ಪ್ರವಾಸಿಗರು ಹೊರಟಿದ್ದಾರೆ. ಪಾಸ್ ಇಲ್ಲದವರನ್ನು ತಮಿಳುನಾಡಿನ ಒಳಗೆ ಬಿಟ್ಟುಕೊಳ್ಳದ ಪರಿಣಾಮ ತೊಂದರೆ ಎದುರಿಸುತ್ತಿದ್ದಾರೆ.

ಕರೊನಾ ನಿಯಂತ್ರಣಕ್ಕೆ ಊಟಿ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಮೂಲಕ ಹಾದು ಹೋಗುವ ಪ್ರವಾಸಿಗರನ್ನು ಕೆಕ್ಕನಹಳ್ಳ ಸಮೀಪ ತಪಾಸಣೆ ಮಾಡಲಾಗುತ್ತಿದೆ. ಈ ಬಗ್ಗೆ ಪೂರ್ಣ ಮಾಹಿತಿ ಇರುವವರು ಪ್ರವಾಸಕ್ಕೆ ಹೊರಡುವ ಮೊದಲೇ ಪಾಸ್ ಪಡೆದುಕೊಳ್ಳುತ್ತಿದ್ದಾರೆ. ಕೋವಿಡ್ ಪರೀಕ್ಷೆ ವರದಿ ಹಾಗೂ ಇ-ಪಾಸ್ ಇರುವ ಪ್ರವಾಸಿಗರನ್ನು ಮಾತ್ರ ಬಿಟ್ಟುಕೊಳ್ಳುತ್ತಿದ್ದು ಉಳಿದವರಿಗೆ ಪ್ರವೇಶ ನಿರಾಕರಿಸಲಾಗುತ್ತಿದೆ.

ಬಹುತೇಕ ಪ್ರವಾಸಿಗರು ಪಾಸ್ ಪಡೆದುಕೊಳ್ಳುವ ಬಗ್ಗೆ ನಿರ್ಲಕ್ಷ್ಯಹಿಸುತ್ತಿರುವ ಕಾರಣ, ಪ್ರತಿ ದಿನವೂ ನೂರಾರು ಪ್ರವಾಸಿಗರು ಚೆಕ್​ಪೋಸ್ಟ್​ನಲ್ಲಿ ಗಂಟೆಗಟ್ಟಲೆ ನಿಲ್ಲುತ್ತಿದ್ದಾರೆ. ಊಟಿ ಜಿಲ್ಲೆಯ ಕೋತಗಿರಿ, ಮಸಣಿಗುಡಿ, ಮಾಯಾರ್, ಗೂಡಲೂರು ಮುಂತಾದ ಕಡೆ ತಮ್ಮ ಸಂಬಂಧಿಕರ ಮನೆಗಳಿಗೆ ಹೋಗುವವರೂ ಪಾಸ್ ಪಡೆದುಕೊಳ್ಳಲು ಪರದಾಡುತ್ತಿದ್ದಾರೆ.

ನೆರೆಯ ಹಂಗಳ ಹಾಗೂ ಪಟ್ಟಣದ ಕೆಲವು ಕಂಪ್ಯೂಟರ್ ಸೆಂಟರ್​ನಲ್ಲಿ ಇ-ಪಾಸ್ ಮಾಡಿಕೊಡಲಾಗುತ್ತಿದೆ. ತಮ್ಮ ಮುಂದಿನ ಪ್ರಯಾಣಕ್ಕೆ ಪಾಸ್ ಪಡೆದುಕೊಳ್ಳುವ ಸಲುವಾಗಿ ಪ್ರವಾಸಿಗರು ಮುಗಿಬೀಳುತ್ತಿರುವುದರಿಂದ ಚೆಕ್​ಪೋಸ್ಟ್ ಹಾಗೂ ಕಂಪ್ಯೂಟರ್ ಸೆಂಟರ್​ಗಳ ಎದುರು ಪ್ರವಾಸಿಗರ ವಾಹನಗಳು ಸಾಲುಗಟ್ಟಿ ನಿಲ್ಲುತ್ತಿವೆ. ಇದರಿಂದ ಸರಕು ಸಾಗಣೆ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ.

ಹಗಲು ದರೋಡೆ: ಇ-ಪಾಸ್ ಪಡೆಯಲು ಆಧಾರ್, ಮೊಬೈಲ್ ಸಂಖ್ಯೆ ಹಾಗೂ ಅಗತ್ಯ ಮಾಹಿತಿಯನ್ನು ಅಪ್​ಲೋಡ್ ಮಾಡಿ ಅದರ ಪ್ರಿಂಟ್​ಔಟ್ ತೆಗೆದುಕೊಡಲು 250-300 ರೂ. ವಸೂಲಿ ಮಾಡುವ ಕಂಪ್ಯೂಟರ್ ಸೆಂಟರ್​ನವರು ಹಗಲು ದರೋಡೆ ಮಾಡುತ್ತಿದ್ದಾರೆ. ಆದರೂ ಅನಿವಾರ್ಯವಾಗಿ ಕೇಳಿದಷ್ಟು ಹಣ ಕೊಡಲೇಬೇಕಾಗಿದೆ ಎಂದು ಪ್ರವಾಸಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 ಇ-ಪಾಸ್ ಇಲ್ಲದವರಿಗೆ ತಮಿಳುನಾಡು ಪ್ರವೇಶ ನಿರಾಕರಿಸುತ್ತಿರುವ ಹಿನ್ನೆಲೆಯಲ್ಲಿ ಮೇಲುಕಾಮನಹಳ್ಳಿ ಚೆಕ್​ಪೋಸ್ಟ್​ನಲ್ಲಿ ಪಾಸ್ ಇರುವವರನ್ನು ಮಾತ್ರ ಮುಂದೆ ಬಿಡಲಾಗುತ್ತಿದೆ. ಆನ್​ಲೈನ್ ಮೂಲಕ ಇ-ಪಾಸ್ ಪಡೆದುಕೊಂಡ ನಂತರ ಪ್ರವಾಸ ಮುಂದುವರಿಸುವಂತೆ ಸೂಚನೆ ನೀಡಲಾಗುತ್ತಿದೆ.

| ಎನ್.ಪಿ.ನವೀನ್​ಕುಮಾರ್

ಆರ್​ಎಫ್​ಒ, ಗೋಪಾಲಸ್ವಾಮಿ ಬೆಟ್ಟ ವಲಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net