

ಭೋಪಾಲ್: ಮುಂದಿನ ಕೆಲವು ದಿನಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವ ಮಧ್ಯಪ್ರದೇಶದಲ್ಲಿ ಹಣಾಹಣಿ ಏರ್ಪಟ್ಟಿರುವುದು ಎರಡು ಪಕ್ಷಗಳ ನಡುವೆ ಉಳಿದವರ ಬಗ್ಗೆ ಜನರು ಹೆಚ್ಚು ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ ಎಂದು ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಹೇಳಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿರುವ ಅವರು, ಬಿಜೆಪಿ ಹಾಗೂ ಕಾಂಗ್ರೆಸ್ ಹೊರತುಪಡಿಸಿದರೆ ಜನರು ಬೇರೆ ಪಕ್ಷಗಳನ್ನು ನಂಬುವ ಅಗತ್ಯವಿಲ್ಲ ಎಂದು ಹೇಳಿರುವ ವಿಡಿಯೋ ಹೊಸ ಚರ್ಚೆ ಒಂದನ್ನು ಹುಟ್ಟುಹಾಕಿದೆ.
ಮಧ್ಯಪ್ರದೇಶದಲ್ಲಿ ಎರಡು ಪಕ್ಷಗಳಿವೆ. ಒಂದು ಬಿಜೆಪಿ ಮತ್ತೊಂದು ಕಾಂಗ್ರೆಸ್. ಈ ಎರಡರಲ್ಲಿ ಯಾವುದಾದರು ಒಂದು ಪಕ್ಷ ಸರ್ಕಾರವನ್ನು ರಚಿಸಲಿದೆ. ಆದ್ದರಿಂದ ರಾಜ್ಯದ ಜನತೆ ಇತರರ ಬಲೆಗೆ ಬೀಳದಂತೆ ಎಚ್ಚರವಾಗಿರಬೇಕು ಎಂದು ವಿನಂತಿಸಿಕೊಳ್ಳುತ್ತೇನೆ.
ಬಿಜೆಪಿಗೆ ಹಣದ ಬಲವಿದ್ದರೆ ಕಾಂಗ್ರೆಸ್ಗೆ ಜನರ ಬೆಂಬಲವಿದೆ. ನಾವೆಲ್ಲರೂ ಈ ಚುನಾವಣೆಯಲ್ಲಿ ಒಟ್ಟಾಗಿ ಹೋರಾಡುವ ಮೂಲಕ ಜನಬಲದ ಮುಂದೆ ಹಣ ಏನು ಮಾಡುವುದಿಲ್ಲ ಎಂದು ಬಿಜೆಪಿಗೆ ತೋರಿಸಬೇಕಿದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದು ಸರ್ಕಾರ ರಚಿಸುವುದು ಪಕ್ಕಾ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕಳೆದ 20 ವರ್ಷಗಳಿಂದ ಬಿಜೆಪಿ ದುರಾಡಳಿತವನ್ನು ಕಂಡು ಬೇಸತ್ತಿರುವ ರಾಜ್ಯದ ಜನತೆ ಈ ಭಾರಿ ಬದಲಾವಣೆಯನ್ನು ಬಯಸಿದ್ದಾರೆ. ಸೋಲುವ ಹತಾಶೆಯಲ್ಲಿರುವ ಬಿಜೆಪಿ ತನ್ನ ಹಣಬಲದ ಮೂಲಕ ಸುಳ್ಳು ಸುದ್ದಿಗಳನ್ನು ಹಬ್ಬಿಸಿ ಜನರ ದಾರಿ ತಪ್ಪಿಸುತ್ತಿದೆ ಎಂದು ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಆರೋಪಿಸಿದ್ದಾರೆ.
ಇತ್ತ ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಹೇಳಿಕೆ ವೈರಲ್ ಆದ ಬೆನ್ನಲ್ಲೇ ರಾಷ್ಟ್ರ ರಾಜಕಾರಣದಲ್ಲಿ ಹೊಸ ಚರ್ಚೆ ಒಂದನ್ನು ಹುಟ್ಟು ಹಾಕಿದ್ದು, ಇಂಡಿಯಾ ಮೈತ್ರಿಕೂಟದಲ್ಲಿ ಒಡಕು ಮೂಡಿದಂತೆ ಕಾಣುತ್ತಿದೆ. ಮಧ್ಯಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ ಹಾಗೂ ಆಮ್ ಆದ್ಮಿ ಪಕ್ಷ ಸ್ಪರ್ಧಿಸುತ್ತಿದ್ದು, ಟಿಕೆಟ್ ಹಂಚಿಕೆ ವಿಚಾರವಾಗಿ ಕಾಂಗ್ರೆಸ್ ವಿರುದ್ಧ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಬಹಿರಂಗವಾಗಿ ವಾಗ್ದಾಳಿ ನಡೆಸಿದ್ದರು.
ಇನ್ನು ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಹೇಳಿಕೆ ರಾಜಕೀಯ ವಲಯದಲ್ಲಿ ಹೊಸ ಸಂಚಲನ ಮೂಡಿಸಿದ್ದು, ಮುಂದಿನ ದಿನಗಳಲ್ಲಿ ಇದು ಯಾವ ಹಂತಕ್ಕೆ ತಲುಪಲಿದೆ ಎಂದು ಕಾದು ನೋಡಬೇಕಿದೆ. ರಾಷ್ಟ್ರ ರಾಜಕಾರಣದ ದಿಕ್ಸೂಚಿ ಎಂದೇ ಬಿಂಬಿತವಾಗಿರುವ ಪಂಚರಾಜ್ಯ ಚುನಾವಣೆ ಮುಂಬರುವ ಲೋಕಸಭೆ ಎಲೆಕ್ಷನ್ಗೆ ಸೆಮಿಫಿನಾಲೆ ಎಂದೇ ಹೇಳಲಾಗಿದೆ. 230 ಸದಸ್ಯಬಲದ ಮಧ್ಯಪ್ರದೇಶ ವಿಧಾನಸಭೆಗೆ ನವೆಂಬರ್ 17ರಂದು ಮತದಾನ ನಡೆಯಲಿದ್ದು, ಡಿಸೆಂಬರ್ 3ಕ್ಕೆ ಫಲಿತಾಂಶ ಪ್ರಕಟವಾಗಲಿದೆ.