

ತಿರುವನಂತಪುರಂ: ಕೇರಳದ ಚರ್ಚ್ ಕನ್ವೆನ್ಷನ್ ಸೆಂಟರ್ನಲ್ಲಿ ಸಂಭವಿಸಿದ ಬಾಂಬ್ ಬ್ಲ್ಯಾಸ್ಟ್ಗೆ ಸಂಬಂಧಿಸಿದಂತೆ ಪ್ರಕರಣಕ್ಕೆ ಮಹತ್ವದ ತಿರುವು ದೊರೆತ್ತಿದ್ದು, ಸುಧಾರಿತ ಸ್ಫೋಟಕಗಳನ್ನು (IED) ಬಳಸಿ ಕೃತ್ಯ ಎಸಗಲಾಗಿದೆ ಎಂದು ರಾಜ್ಯ ಡಿಜಿಪಿ ಶೇಕ್ ದರ್ವೇಶ್ ಸಾಹೇಬ್ ತಿಳಿಸಿದ್ದಾರೆ.
ಸಾವಿರಾರು ಕ್ರೈಸ್ತರು ಭಾನುವಾರ ಬೆಳಗ್ಗೆ (ಅಕ್ಟೋಬರ್ 29) ಪ್ರಾರ್ಥನೆ ಸಲ್ಲಿಸುವ ವೇಳೆ 9:40ರ ಸುಮಾರಿಗೆ ಟಿಫಿನ್ ಬಾಕ್ಸ್ನಲ್ಲಿ ಐಇಡಿ ಇಟ್ಟು ಬಾಂಬ್ ಸ್ಫೋಟಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ಕುರಿತು ಪ್ರತಿಕ್ರಿಯಿಸಿರುವ ರಾಜ್ಯ ಡಿಜಿಪಿ ಶೇಕ್ ದರ್ವೇಶ್ ಸಾಹೇಬ್, ಸುಧಾರಿತ ಸ್ಫೋಟಕಗಳನ್ನು ಬಳಸಿ ಕೃತ್ಯ ಎಸಗಲಾಗಿದ್ದು, ತನಿಖೆ ಪವರಗತಿಯಲ್ಲಿದೆ. ಮೇಲ್ನೋಟಕ್ಕೆ ಇದು ಉಗ್ರರು ಎಸಗಿರುವ ಕೃತ್ಯ ಎಂದು ಶಂಕಿಸಲಾಗಿದ್ದು, ಶೀಘ್ರದಲ್ಲೇ ಮತ್ತಷ್ಟು ಮಾಹಿತಿಯನ್ನು ಹಂಚಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಸ್ಫೋಟದಲ್ಲಿ ಒಬ್ಬ ಮಹಿಳೆ ಮೃತಪಟ್ಟಿದ್ದು, 40ಕ್ಕೂ ಅಧಿಕ ಜನ ಗಾಯಗೊಂಡಿದ್ದಾರೆ. ಈ ಪೈಕಿ 10 ಮಂದಿಯ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ. ಸ್ಫೋಟ ಸಂಭವಿಸಿದ ಸ್ಥಳಕ್ಕೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಅಧಿಕಾರಿಗಳು, ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಆಗಮಿಸಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.