ಅಮೆರಿಕ ಚುನಾವಣೆ: ಇರುವವರು ಇಬ್ಬರು, ಗೆಲ್ಲುವವರು ಯಾರು?

hump_and_trump
Published on

ಅಮೆರಿಕದಲ್ಲಿ ಹಲವು ರಾಜಕೀಯ ಪಕ್ಷಗಳಿದ್ದರೂ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುವುದು ರಿಪಬ್ಲಿಕನ್ ಮತ್ತು ಡೆಮಾಕ್ರಟಿಕ್ ಪಕ್ಷಗಳು ಮಾತ್ರ. ಈ ಪಕ್ಷಗಳು 1852ರಿಂದ ಅಧ್ಯಕ್ಷೀಯ ಚುನಾವಣೆಯಲ್ಲಿ ಪಾಲ್ಗೊಳ್ಳುತ್ತಿವೆ. ಉಳಿದ ಪಕ್ಷಗಳು ಸ್ಥಳೀಯ ಆಡಳಿತಗಳಿಗೆ ಸ್ಪರ್ಧಿಸುತ್ತವೆ ಮತ್ತು ಕೆಲವು ರಾಜ್ಯಗಳಿಗೆ ಮಾತ್ರ ಅವುಗಳ ವ್ಯಾಪ್ತಿ ಸೀಮಿತವಾಗಿವೆ. ಕೆಲವು ರಾಜ್ಯಗಳಲ್ಲಿ ಸ್ವತಂತ್ರ ಅಭ್ಯರ್ಥಿಗಳ ಸ್ಪರ್ಧೆಗೂ ಅವಕಾಶ ಇದೆ. ಚುನಾಯಿತರಾದ ಸ್ಥಳೀಯ ಪಕ್ಷಗಳು ಅಥವಾ ಸ್ವತಂತ್ರ ಅಭ್ಯರ್ಥಿಗಳು ತಮ್ಮ ನಿಲುವು, ಸಿದ್ಧಾಂತಕ್ಕೆ ಅನುಗುಣವಾಗಿ ಮುಖ್ಯ ಚುನಾವಣೆಗಳಲ್ಲಿ ರಿಪಬ್ಲಿಕನ್ ಇಲ್ಲವೆ ಡೆಮಾಕ್ರಟಿಕ್ ಪಕ್ಷದ ಪರವಾಗಿಯೇ ಇರುತ್ತಾರೆ. ಅಮೆರಿಕದಲ್ಲಿ ರಾಜಕೀಯ ಪಕ್ಷಗಳ ಕಾಲಘಟ್ಟವನ್ನು ಆರು ಹಂತಗಳಲ್ಲಿ ವರ್ಗೀಕರಿಸಲಾಗಿದೆ. ಪ್ರತಿ ಹಂತದಲ್ಲೂ ಮುಖ್ಯವಾಗಿ ಎರಡು ಪಕ್ಷಗಳೇ ಪ್ರಧಾನವಾಗಿವೆ. 1792ರಲ್ಲಿ ಹುಟ್ಟಿಕೊಂಡ ಡೆಮಾಕ್ರಟಿಕ್- ರಿಪಬ್ಲಿಕ್ ಪಕ್ಷ ನಂತರ ಡೆಮಾಕ್ರಟಿಕ್ ಪಕ್ಷವಾಗಿ ಉಳಿಯಿತು. ಇದು ಎಡಪಂಥೀಯ ಒಲವು ಹೊಂದಿದೆ. 1880ರಲ್ಲಿ ಸ್ಥಾಪಿತವಾದ ರಿಪಬ್ಲಿಕನ್ ಪಕ್ಷ ಬಲಪಂಥೀಯ ನಿಲುವು ಹೊಂದಿದೆ.

ಮೊದಲ ಹಂತ (1800-1828)

ಅಮೆರಿಕ ಸಂವಿಧಾನದಲ್ಲಿ ರಾಜಕೀಯ ಪಕ್ಷಗಳ ಬಗ್ಗೆ ಹೆಚ್ಚು ಉಲ್ಲೇಖವಿಲ್ಲ. ಆ ದೇಶದ ಮೊದಲ ಅಧ್ಯಕ್ಷ ಜಾರ್ಜ್ ವಾಷಿಂಗ್ಟನ್ ಯಾವುದೇ ರಾಜಕೀಯ ಪಕ್ಷದ ಸದಸ್ಯರಾಗಿರಲಿಲ್ಲ. ರಾಜಕೀಯ ಪಕ್ಷಗಳ ಸಂಘರ್ಷ ಮತ್ತು ಅನಿಶ್ಚಿತತೆಯ ಭಯವನ್ನು ಅವರು ಅಧ್ಯಕ್ಷ ಸ್ಥಾನದಿಂದ ನಿರ್ಗಮಿಸಿದ ವೇಳೆ ಮಾಡಿದ ಭಾಷಣದಲ್ಲಿ ಉಲ್ಲೇಖಿಸಿದ್ದರು. ಆದರೆ ನಂತರದಲ್ಲಿ ರಾಜಕೀಯ ಪಕ್ಷಗಳು ಉಗಮವಾದವು. ಮೊದಲು ಹುಟ್ಟಿಕೊಂಡಿದ್ದು ಫೆಡರಲ್ ಪಾರ್ಟಿ, ಬಳಿಕ ಡೆಮಾಕ್ರಟಿಕ್- ರಿಪಬ್ಲಿಕನ್ ಪಾರ್ಟಿ (ಜೆಫರ್​ಸೋನಿಯ್ ರಿಪಬ್ಲಿಕನ್). ಫೆಡರಲ್ ಪಾರ್ಟಿಯನ್ನು ಬಲಿಷ್ಠಗೊಳಿಸಿದವರು ಜಾಜ್ ವಾಷಿಂಗ್ಟನ್​ರ ಆಡಳಿತದಲ್ಲಿ ಖಜಾನೆ ಕಾರ್ಯದರ್ಶಿಯಾಗಿದ್ದ ಅಲೆಕ್ಸಾಂಡರ್ ಹ್ಯಾಮಿಲ್ಟನ್. ಡೆಮಾಕ್ರಟಿಕ್-ರಿಪಬ್ಲಿಕನ್ ಪಕ್ಷ ಹುಟ್ಟಿಕೊಂಡಿದ್ದೇ ಹ್ಯಾಮಿಲ್ಟನ್​ರ ಸಿದ್ಧಾಂತಕ್ಕೆ ವಿರುದ್ಧವಾಗಿ ಮತ್ತು ಇದನ್ನು ಸ್ಥಾಪಿಸಿದವರು ಜೇಮ್್ಸ ಮ್ಯಾಡಿಸನ್ ಮತ್ತು ಥಾಮಸ್ ಜೆಫರ್​ಸನ್.

ಎರಡನೇ ಹಂತ (1828-1854)

ಈ ಹಂತದಲ್ಲಿ ಡೆಮಾಕ್ರಟಿಕ್-ರಿಪಬ್ಲಿಕನ್ ಪಕ್ಷವು ವಿಗ್ ಪಾರ್ಟಿ ಮತ್ತು ಡೆಮಾಕ್ರಟಿಕ್ ಪಾರ್ಟಿಗಳೆಂದು ಎರಡಾಯಿತು. ವಿಗ್ ಪಾರ್ಟಿ ಕಾಂಗ್ರೆಸ್​ಗೆ (ಸಂಸತ್) ಪಾರಮ್ಯ ನೀಡಿದರೆ, ಡೆಮಾಕ್ರಟಿಕ್ ಪಕ್ಷ ಅಧ್ಯಕ್ಷೀಯ ಪದ್ಧತಿಗೆ ಒತ್ತು ನೀಡಿತು. ಆಧುನಿಕ ಕಾರ್ಯಕ್ರಮಗಳು ವಿಗ್ ಪಾರ್ಟಿ ಅಜೆಂಡಾದಲ್ಲಿದ್ದರೆ, ಇಂತ ಆಧುನಿಕ ಕಾರ್ಯಕ್ರಮಗಳನ್ನು ಡೆಮಾಕ್ರಟಿಕ್ ಪಾರ್ಟಿ ವಿರೋಧಿಸಿತು. ಆದರೆ, ನಾಯಕತ್ವದ ಕೊರತೆ, ಒಳಜಗಳ ಇತ್ಯಾದಿ ಕಾರಣದಿಂದ ವಿಗ್ ಪಾರ್ಟಿ ಕ್ರಮೇಣ ಅವಸಾನವಾಯಿತು.

ಮೂರನೇ ಹಂತ (1854-1890)

ಪ್ರಸ್ತುತ ಅಮೆರಿಕದಲ್ಲಿ ದ್ವಿಪಕ್ಷೀಯ ವ್ಯವಸ್ಥೆಯ ಭಾಗವಾಗಿರುವ ರಿಪಬ್ಲಿಕನ್ ಮತ್ತು ಡೆಮಾಕ್ರಟಿಕ್ ಪಕ್ಷಗಳು ಈ ಹಂತದಲ್ಲಿ ಚಾಲ್ತಿಗೆ ಬಂದವು. ಗುಲಾಮಿ ಪದ್ಧತಿ ವಿರುದ್ಧ ಧ್ವನಿ ಎತ್ತಿದ್ದ ರಿಪಬ್ಲಿಕನ್ ಪಕ್ಷದ ಆರ್ಥಿಕ ಸಿದ್ಧಾಂತಗಳು ವಿಗ್ ಪಾರ್ಟಿ ಸಿದ್ಧಾಂತಕ್ಕೆ ಸಮೀಪವಾಗಿದ್ದವು. ರಾಷ್ಟ್ರೀಯ ಬ್ಯಾಂಕ್, ರೈಲ್​ರೋಡ್ ಯೋಜನೆಗಳು ಆದ್ಯತೆ ಆಗಿದ್ದವು. ಆದರೆ, ದೊಡ್ಡ ಪಕ್ಷವಾದ ಡೆಮಾಕ್ರಟಿಕ್, ಜನಪ್ರತಿನಿಧಿಗಳ ಸಭೆ (ಹೌಸ್ ಆಫ್ ರೆಪ್ರಸೆಂಟಟಿವ್ಸ್- ಸಂಸತ್​ನ ಕೆಳಮನೆ) ಮತ್ತು ಸೆನೆಟ್​ನಲ್ಲಿ (ಸಂಸತ್​ನ ಮೇಲ್ಮನೆ) ಬಲಶಾಲಿಯಾಗಿತ್ತು.

ನಾಲ್ಕನೇ ಹಂತ (1896-1932)

ಎರಡು ಪಕ್ಷಗಳ ಪದ್ಧತಿಯೇ ರೂಢಿಗತವಾಗಿದ್ದ ಅಮೆರಿಕದಲ್ಲಿ ತೃತೀಯ ಶಕ್ತಿ ಪೈಪೋಟಿ ನೀಡುವ ಹಂತಕ್ಕೆ ಬೆಳೆದ ಕಾಲಘಟ್ಟ ಇದು. ಸ್ಥಳೀಯ ಆಡಳಿತಗಳಲ್ಲಿ ಲಿಬರಲ್ ಪಕ್ಷ ಗಣನೀಯವಾಗಿ ತನ್ನ ಸ್ಥಾನ ಹೆಚ್ಚಿಸಿಕೊಂಡಿತು. ಮುಂದೆ ಈ ಪಕ್ಷವೇ ಲಿಬರಟೇರಿಯನ್ ಆಗಿ ರೂಪಾಂತರವಾಯಿತು. ಈ ಕಾಲಮಾನ ಅಮೆರಿಕ ಪ್ರಗತಿಪಥದಲ್ಲಿ ದಾಂಗುಡಿ ಇಟ್ಟ ಕಾಲಮಾನವೂ ಹೌದು. ಜತೆಗೆ ಈ ಹಂತದಲ್ಲಿ ರಾಜಕೀಯ ಪಕ್ಷಗಳಲ್ಲಿ ಭ್ರಷ್ಟಾಚಾರವೂ ಕಾಲಿಟ್ಟಿತು ಎಂದು ವಿಶ್ಲೇಷಕರು ಗುರುತಿಸುತ್ತಾರೆ.

ಐದನೇ ಹಂತ (1933-1968)

ಈ ಕಾಲಘಟ್ಟದಲ್ಲಿ ಕೆಲವು ರಾಜ್ಯಗಳಲ್ಲಿ ಮೈತ್ರಿ ಸರ್ಕಾರಗಳು ರಚನೆಯಾದವು. ರಿಪಬ್ಲಿಕನ್ ಪಕ್ಷದ ವರ್ಚಸ್ಸು ಕ್ಷೀಣಿಸಿತು. ರಿಪಬ್ಲಿಕನ್ನರಲ್ಲಿ ಕನ್ಸರ್ವೆಟಿವ್ಸ್ ಎಂಬ ಬಣ ಹುಟ್ಟಿಕೊಂಡಿತು. ಆದರೆ, ಮೂಲ ಸಿದ್ಧಾಂತದ ವಿಷಯ ಬಂದಾಗ ರಿಪಬ್ಲಿಕನ್ ಪಕ್ಷದ ಪರವಾಗಿಯೇ ಕನ್ಸರ್ವೆಟಿವ್ಸ್ ಇರುತ್ತಿತ್ತು. ಡೆಮಾಕ್ರಟಿಕ್ ಪಕ್ಷ ಆಡಳಿತದಲ್ಲಿ ಕಾರ್ವಿುಕ ಒಕ್ಕೂಟಗಳು ಪ್ರಬಲವಾದವು, ಜತೆಗೆ ಉದಾರವಾದಕ್ಕೆ ಒತ್ತು ದೊರೆಯಿತು. ಬೌದ್ಧಿಕ ವಲಯ ವಿಸ್ತರಿಸಿತು.

ಆರನೇ ಹಂತ (1980-2020)

20ನೇ ಶತಮಾನದ ಅಂತ್ಯ ಮತ್ತು 21ನೇ ಶತಮಾನದ ಆರಂಭದ ಸಂಕ್ರಮಣ ಕಾಲದಲ್ಲಿ ಹೊಸ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ರಿಪಬ್ಲಿಕನ್ ಮತ್ತು ಅದರದ್ದೇ ಒಂದು ಭಾಗವಾದ ಕನ್ಸರ್ವೆಟಿವ್ಸ್ ದಕ್ಷಿಣ ಭಾಗದಲ್ಲಿ ಪ್ರಬಲರಾಗಿದ್ದರು. ಆಫ್ರಿಕನ್-ಅಮೆರಿಕನ್ ಜನಾಂಗ ಹೆಚ್ಚಿನ ಸಂಖ್ಯೆಯಲ್ಲಿದ್ದ ಪ್ರದೇಶಗಳಲ್ಲಿ ಲಿಬರಟೇರಿಯನ್ ಮತ್ತು ಡೆಮಾಕ್ರಟಿಕ್ ಪ್ರಾಬಲ್ಯ ಹೆಚ್ಚಾಯಿತು.

ಅಮೆರಿಕದಲ್ಲಿನ ಇತರ ರಾಜಕೀಯ ಪಕ್ಷಗಳು

  • ಆಂಟಿ ಮೆಸೋಮಿಕ್ (1828)
  • ಲಿಬರಟೇರಿಯನ್(1971)
  • ಗ್ರೀನ್ (1980)
  • ಕಾನ್​ಸ್ಟಿಟ್ಯೂಷನ್ (1992)

ಭಾರತಕ್ಕೆ ಯಾವ ಪಕ್ಷ ಆಪ್ಯಾಯಮಾನ?

ಸಾಂಪ್ರದಾಯಿಕವಾಗಿ ನೋಡಿದರೆ ಡೆಮಾಕ್ರಟಿಕ್ ಪಕ್ಷ ಭಾರತಕ್ಕೆ ಹೆಚ್ಚು ಆಪ್ಯಾಯಮಾನವಾಗಿದೆ. ಈ ಪಕ್ಷದ ಅಧ್ಯಕ್ಷರ ಅವಧಿಯಲ್ಲಿ ಭಾರತಕ್ಕೆ ಹೆಚ್ಚು ಅನುಕೂಲಗಳು ಆಗಿವೆ. ಜತೆಗೆ ಅಮೆರಿಕದಲ್ಲಿರುವ ಭಾರತೀಯ ಸಮುದಾಯ ಡೆಮಾಕ್ರಟಿಕ್ ನಾಯಕರಲ್ಲಿ ಹೆಚ್ಚು ವಿಶ್ವಾಸ ಹೊಂದಿದೆ. ಇದಕ್ಕೆ ಅಪವಾದ ಎಂಬಂತೆ ಈಗ ರಿಪಬ್ಲಿಕನ್ ನಾಯಕ ಡೊನಾಲ್ಡ್ ಟ್ರಂಪ್ ಭಾರತದ ಬಗ್ಗೆ ಹೆಚ್ಚು ಕ್ರಿಯಾಶೀಲವಾಗಿದ್ದಾರೆ. ಅವರು ಪ್ರಧಾನಿ ನರೇಂದ್ರ ಮೋದಿಯನ್ನು ಆತ್ಮೀಯ ಗೆಳೆಯನೆಂದೇ ಕರೆಯುತ್ತಾರೆ. ಆದರೆ, ವಿದೇಶಾಂಗ ತಜ್ಞರು ಹೇಳುವ ಪ್ರಕಾರ, ಯಾವುದೇ ನಾಯಕರು ಭಾರತದ ಕಡೆ ಒಲವು ಹೊಂದಿದ್ದಾರೆ ಎಂದಾಕ್ಷಣ ಅವರಿಂದ ಭಾರತಪರ ನಿಲುವನ್ನೇ ನಿರೀಕ್ಷಿಸಲಾಗದು. ಏಕೆಂದರೆ, ಅಲ್ಲಿನ ವ್ಯವಸ್ಥೆಯು ಅಮೆರಿಕಹಿತಾಸಕ್ತಿಯನ್ನೇ ಪ್ರಧಾನವಾಗಿ ಪರಿಗಣಿಸುತ್ತದೆ ಮತ್ತು ಆ ಪ್ರಕಾರವೇ ನೀತಿನಿರ್ಣಯಗಳು ಹೊಮ್ಮುತ್ತವೆ. 2017ರಲ್ಲಿ ಷಿಕಾಗೊ ಕೌನ್ಸಿಲ್ ನಡೆಸಿದ ಸರ್ವೆ ಪ್ರಕಾರ, ಭಾರತೀಯರ ಸಾಮರ್ಥ್ಯದಲ್ಲಿ ಡೆಮಾಕ್ರಟಿಕ್ ಪಕ್ಷದ ನಾಯಕರು ಶೇ. 41ರಷ್ಟು ವಿಶ್ವಾಸ ಹೊಂದಿದ್ದಾರೆ. ರಿಪಬ್ಲಿಕನ್ ಮುಖಂಡರು ಶೇ. 27ರಷ್ಟು ನಂಬಿಕೆ ಇರಿಸಿದ್ದಾರೆ.

ಜೋ ಬಿಡೆನ್ ಭಾರತಕ್ಕೆ ಮಾರಕ

ನ್ಯೂಯಾರ್ಕ್: ಚೀನಾದ ಬಗ್ಗೆ ಮೃದು ಧೋರಣೆ ಹೊಂದಿರುವ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬಿಡೆನ್ ಭಾರತದ ಹಿತಕ್ಕೆ ಮಾರಕವಾಗಬಹುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ರ ಪುತ್ರ ಎಚ್ಚರಿಸಿದ್ದಾರೆ. ಬಿಡೆನ್ ಕುಟುಂಬದ ಭ್ರಷ್ಟಾಚಾರ ಕುರಿತು ತಾನು ಬರೆದ ‘ಲಿಬರಲ್ ಪ್ರಿವಿಲೆಜ್’ ಕೃತಿಯ ‘ಯಶಸ್ಸಿನ’ ಆಚರಣೆಯ ಸಮಾರಂಭದಲ್ಲಿ ಮಾತನಾಡಿದ ಜೂನಿಯರ್ ಟ್ರಂಪ್, ಚೀನಾದ ಅಪಾಯವನ್ನು ಅರ್ಥ ಮಾಡಿಕೊಳ್ಳಬೇಕಿದೆ ಎಂದಿದ್ದಾರೆ. ನ್ಯೂಯಾರ್ಕ್​ನ ಲಾಂಗ್ ಐಲ್ಯಾಂಡ್​ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಯ್ದ ಭಾರತೀಯ-ಅಮೆರಿಕನ್ನರು ಭಾಗವಹಿಸಿದ್ದರು. ನವೆಂಬರ್ 3ರ ಅಧ್ಯಕ್ಷೀಯ ಚುನಾವಣೆಯಲ್ಲಿ ಮರು ಆಯ್ಕೆ ಬಯಸಿರುವ ತನ್ನ ತಂದೆಯ ಪ್ರಚಾರದ ಉಸ್ತುವಾರಿಯನ್ನು 42 ವರ್ಷದ ಜೂ. ಟ್ರಂಪ್ ವಹಿಸಿದ್ದಾರೆ. ಭಾರತೀಯ-ಅಮೆರಿಕನ್ನರಿಗಿಂತ ಬೇರೆ ಯಾರೂ ಚೀನಾದ ಅಪಾಯವನ್ನು ಅರ್ಥ ಮಾಡಿಕೊಳ್ಳಲಾರರು ಎಂದರು.

‘ನಮ್ಮ ಪ್ರತಿಸ್ಪರ್ಧಿಗಳ ಬಗ್ಗೆ ಆಲೋಚಿಸಿ. ಬಿಡೆನ್​ಗೆ ಚೀನಾ -ಠಿ; 11,000 ಕೋಟಿ (1.5 ಬಿಲಿಯ ಡಾಲರ್) ನೀಡಿದೆ. ಆತ ಒಬ್ಬ ದೊಡ್ಡ ಉದ್ಯಮಿ ಆಗಿರುವುದರಿಂದ ಇಷ್ಟೊಂದು ಹಣ ಕೊಟ್ಟಿರಬಹುದು. ಅಥವಾ ತನ್ನ ಬಗ್ಗೆ ಮೃದುಧೋರಣೆ ತಳೆಯುವಂತೆ ಬಿಡೆನ್​ರನ್ನು ಖರೀದಿಸಬಹುದು ಎನ್ನುವುದು ಚೀನಾದ ಲೆಕ್ಕಾಚಾರವಾಗಿರಬಹುದು’ ಎಂದು ಟ್ರಂಪ್ ಪುತ್ರ ಹೇಳಿದ್ದಾರೆ.

ಅಹಮದಾಬಾದ್ ರ‍್ಯಾಲಿ ಶ್ಲಾಘನೆ: ಈ ವರ್ಷದ ಆರಂಭದಲ್ಲಿ ಅಹಮದಾಬಾದ್​ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ತಮ್ಮ ತಂದೆ ನಡೆಸಿದ ರ‍್ಯಾಲಿ ಇದೀಗ ಅಮೆರಿಕದಲ್ಲಿ ನಡೆಸುತ್ತಿರುವ ರ್ಯಾಲಿಗಳಿಗಿಂತ ದೊಡ್ಡದಾಗಿತ್ತು ಎಂದು ಜೂ.ಟ್ರಂಪ್ ಹೆಮ್ಮೆ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net