

ಚೆನ್ನೈ: ಸಿಲ್ಕ್ ಸ್ಮಿತಾ(Silk Smitha) ಭಾರತೀಯ ಚಿತ್ರರಂಗದಲ್ಲಿ ಅಪ್ರತಿಮ ವ್ಯಕ್ತಿ. ತಮ್ಮ ಮಾದಕ ನೋಟ ಮತ್ತು ನಟನೆಯಿಂದಾಗಿ ತಮ್ಮದೇ ಅಭಿಮಾನಿ ಬಳಗವನ್ನು ಹೊಂದಿದ್ದ ಕಲಾವಿದೆ. ದಕ್ಷಿಣ ಭಾರತದ ಚಿತ್ರರಂಗದಲ್ಲಿ 1970ರ ದಶಕದ ಅಂತ್ಯದಿಂದ 1990ರ ದಶಕದ ಆರಂಭದವರೆಗೆ ತಮ್ಮ ಮಾಂತ್ರಿಕತೆಯಿಂದಾಗಿ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು.
ಎಷ್ಟರ ಮಟ್ಟಿಗೆ ಎಂದರೆ ಸಿನಿಮಾದಲ್ಲಿ ಸಿಲ್ಕ್ ಸ್ಮಿತಾ ಇದ್ದಾರೆ ಎಂದರೆ ಸಾಕು, ಆ ಚಿತ್ರ ಬ್ಲಾಕ್ಬಸ್ಟರ್ ಹಿಟ್ ಅಂತಲೇ ಅರ್ಥ. ಪ್ರಸಿದ್ಧ ನಾಯಕ ಅಥವಾ ನಾಯಕಿಯರಿರುವ ಸಿನಿಮಾವನ್ನು ಖರೀದಿಸಲು ಯಾರು ಸಿದ್ಧರಿರುತ್ತಿರಲಿಲ್ಲ. ಅದೆ ಆ ಸಿನಿಮಾದಲ್ಲಿ ಸಿಲ್ಕ್ ಐಟಂ ಸಾಂಗ್ ಇದೆ ಎಂದರೆ ತಕ್ಷಣವೇ ಮಾರಾಟವಾಗುತಿತ್ತು. 18 ವರ್ಷಗಳ ವೃತ್ತಿಜೀವನದಲ್ಲಿ 450ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಕಾಣಿಸಿಕೊಂಡ ಸಿಲ್ಕ್ ಸ್ಮಿತಾ ತಮ್ಮ 36ನೇ ವಯಸ್ಸಿನಲ್ಲಿ ಮೃತಪಟ್ಟಿದ್ದು ದಕ್ಷಿಣದಿಂದ ಉತ್ತರ ಭಾರತದ ಜನರನ್ನು ಬೆಚ್ಚಿ ಬೀಳಿಸಿತ್ತು.
ಬಡತನದಲ್ಲಿ ಜನಿಸಿದ ಸಿಲ್ಕ್ ಸ್ಮಿತಾ ಅವರ ಶಿಕ್ಷಣ ಪ್ರೌಢಶಾಲೆಯ ನಂತರ ಕೊನೆಗೊಂಡಿತು. ಜೀವನೋಪಾಯಕ್ಕಾಗಿ ಸಿನಿಮಾಗಳತ್ತ ಮುಖ ಮಾಡಿದ ಆಕೆಯ ಮದುವೆಯು ಅಲ್ಪಕಾಲಿಕವಾಗಿತ್ತು, ಚಲನಚಿತ್ರ ಅವಕಾಶಗಳನ್ನು ಹುಡುಕಲು ವಿಜಯಲಕ್ಷ್ಮಿಯನ್ನು ಚೆನ್ನೈಗೆ ಕರೆದೊಯ್ಯಲಾಯಿತು. ಆಗಿನ್ನು ಆಕೆ ಸಿಲ್ಕ್ ಸ್ಮಿತಾ ಆಗಿರಲಿಲ್ಲ.
ವಿಜಯಲಕ್ಷ್ಮಿ ವಡ್ಲಪಾಟಿಯಾಗಿ ಜನಿಸಿದ ಆಕೆಗೆ 'ವಂಡಿಚಕ್ಕರಂ' ಚಿತ್ರದಲ್ಲಿ ಬಾರ್ ಗರ್ಲ್ ಪಾತ್ರಕ್ಕಾಗಿ ಸಿನಿಮಾದ ನಿರ್ದೇಶಕರು 'ಸಿಲ್ಕ್ ಸ್ಮಿತಾ' ಎಂಬ ಪರದೆಯ ಹೆಸರನ್ನು ನೀಡಿದರು. ನಂತರ ಅದೇ ಹೆಸರಿಂದ ಹಲವು ಸಿನಿಮಾಗಳಲ್ಲಿ ನಟಿಸಿ ಬಣ್ಣದ ಲೋಕದಲ್ಲಿ ಉತ್ತುಂಗಕ್ಕೇರಿದರು. ತನ್ನ ಹಣಕಾಸಿನ ಜವಾಬ್ದಾರಿಯನ್ನು ವಹಿಸಿದ್ದ ವ್ಯಕ್ತಿ ವಂಚಿಸಿದ ಬಳಿಕ ಸಿಲ್ಕ್ ಸ್ಮಿತಾ ಸಿರಿತನದಿಂದ ಹಠಾತ್ತನೇ ಮತ್ತೆ ಬಡತನಕ್ಕೆ ಬಿದ್ದಳು.
ಇದೇ ಕಾರಣದಿಂದ ಖಿನ್ನತೆ ಮತ್ತು ಮದ್ಯದ ವ್ಯಸನವು ಅವಳ ದುರಂತ ಅಂತ್ಯಕ್ಕೆ ಕಾರಣವಾಯಿತು ಎಂದು ಹಲವರು ಹೇಳುತ್ತಾರೆ. ಆದರೆ ಇದು ಎಷ್ಟರ ಮಟ್ಟಿಗೆ ಸತ್ಯ ಎಂಬುದು ತಿಳಿದಿಲ್ಲ. 1996 ಸೆಪ್ಟೆಂಬರ್ 23ರಂದು ಅವರು ಮೃತಪಟ್ಟಾಗ ಅವರ ಅಂತ್ಯಕ್ರಿಯೆಯಲ್ಲಿ ಯಾವುದೇ ಪ್ರಮುಖ ಸೆಲಿಬ್ರಿಟಿಗಳು ಭಾಗವಹಿಸಲಿಲ್ಲ. ಆದರೆ ಆಕೆಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸುತ್ತೀರಾ ಎಂದು ತಮಾಷೆಯಾಗಿ ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ ಅವರನ್ನು ಕೇಳಿದಾಗ ತಾನು ಅಲ್ಲಿಯೇ ಇರುವುದಾಗಿ ಭರವಸೆ ನೀಡಿದ್ದರು ಎಂದು ಬಲ್ಲ ಮೂಲಗಳು ಹೇಳಿವೆ. ಅಂದ್ಹಾಗೆ ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ ಮತ್ತು ಸ್ಕಿಲ್ ಸ್ಮಿತಾ ಅಳಿಮಯ್ಯ ಸಿನಿಮಾದಲ್ಲಿ ತೆರೆ ಹಂಚಿಕೊಂಡಿದ್ದಾರೆ.
ಸಿಲ್ಕ್ ಸ್ಮಿತಾ 1960ರ ಡಿಸೆಂಬರ್ 2ರಂದು ಆಂಧ್ರಪ್ರದೇಶದ ಏಲೂರು ಸಮೀಪದ ಹಳ್ಳಿಯಲ್ಲಿ ಜನಿಸಿದಳು. ಹುಟ್ಟಿನಿಂದಲೇ ಬಡತನ ಗೆಳೆಯನಂತೆ ಜತೆಗಿತ್ತು. ಆದರೆ ವಿಜಯಲಕ್ಷ್ಮಿ ಸಿಲ್ಕ್ ಸ್ಮಿತಾ ಆಗಿ ಬದಲಾದ ನಂತರ ಅವರ ಲಕ್ ಬದಲಾಯಿತು. ಕ್ಲಬ್ ಡ್ಯಾನ್ಸ್ ಅಥವಾ ಕ್ಯಾಬರೆ ಡ್ಯಾನ್ಸ್ ಎಂದು ಕರೆಯಲ್ಪಡುವ ಅವರ ನೃತ್ಯದ ಹಾಡುಗಳು ದಕ್ಷಿಣ ಭಾರತದ ಸಿನಿಮಾಗಳಲ್ಲಿ ಪ್ರಧಾನವಾದಂತೆ, ಆಗಿನ ಕಾಲದಲ್ಲೇ ಸಿಲ್ಕ್ ಸ್ಮಿತಾ ಪ್ರತಿ ಹಾಡಿಗೆ 50,000 ರೂಪಾಯಿವರೆಗೆ ಸಂಭಾವನೆ ಪಡೆಯುತ್ತಿದ್ದರು ಎಂದು ಹೇಳಲಾಗುತ್ತದೆ.(ಏಜೆನ್ಸೀಸ್)