ಈ ಪಾತ್ರವನ್ನು ನಿವೇತಾ ಥಾಮಸ್ ಮಾತ್ರ ಮಾಡಲು ಸಾಧ್ಯ: ನಟಿಯನ್ನು ಹೊಗಳಿದ 'ನ್ಯಾಚುರಲ್ ಸ್ಟಾರ್​'

ವಿಜಯವಾಣಿ - 2024-09-04T140444.995
Published on

ಆಂಧ್ರಪ್ರದೇಶ: ನಂದ ಕಿಶೋರ್​ ಇಮಾನಿ ನಿರ್ದೇಶನದ ಹಾಗೂ ನಟಿ ನಿವೇತಾ ಥಾಮಸ್​, ಪ್ರಿಯದರ್ಶಿ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿರುವ ಕೌಟುಂಬಿಕ ಚಲನಚಿತ್ರ '35 ಚಿನ್ನ ಕಥಾ ಕಾದು' ಸಿನಿಮಾ ಇದೇ ಸೆ. 06ರಂದು ಬಹುತೇಕ ಚಿತ್ರಮಂದಿರಗಳಲ್ಲಿ ತೆರೆ ಕಾಣಲು ಸಜ್ಜಾಗಿದೆ. ಇನ್ನು ಈ ಖುಷಿಯಲ್ಲಿರವ ಚಿತ್ರತಂಡ ನಿನ್ನೆಯಷ್ಟೇ (ಸೆ.03) ಚಿತ್ರದ ಪ್ರೀ-ರಿಲೀಸ್ ಈವೆಂಟ್ ಅನ್ನು ಹೈದರಾಬಾದ್‌ನಲ್ಲಿ ನಡೆಸಿತು. ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ ನ್ಯಾಚುರಲ್ ಸ್ಟಾರ್​ ನಾನಿ, ಸಿನಿಮಾದ ನಟಿ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ನಟ ರಾಣಾ ದುಗ್ಗುಬಾಟಿ ನಿರ್ಮಾಣದಲ್ಲಿ ಮೂಡಿಬಂದಿರುವ ಚಿತ್ರದ ಪ್ರೀ-ರಿಲೀಸ್ ಈವೆಂಟ್​ನಲ್ಲಿ ಭಾಗಿಯಾಗಿ ಮಾತನಾಡಿದ ನಾನಿ, “ನನ್ನ ಜೀವನದಲ್ಲಿ ನಿವೇತಾ ಥಾಮಸ್‌ಗಿಂತ ಒಳ್ಳೆಯ ವ್ಯಕ್ತಿಯನ್ನು ನಾನು ಇಲ್ಲಿಯವರೆಗೆ ನೋಡಿಯೇ ಇಲ್ಲ. ಆಕೆಯ ಮನಸ್ಸು ಬಹಳ ಶುದ್ಧವಾಗಿದೆ, ಒಳ್ಳೆಯ ವ್ಯಕ್ತಿ. ನಿವೇತಾ ಅತ್ಯುತ್ತಮ ನಟಿ ಎಂಬ ವಿಷಯದಲ್ಲಿ ಅನುಮಾನವೇ ಇಲ್ಲ. '35 ಚಿನ್ನ ಕಥಾ ಕಾದು' ಚಿತ್ರದಲ್ಲಿ ಅವರು ನಿರ್ವಹಿಸಿರುವ ಪಾತ್ರ ನಿಜಕ್ಕೂ ಮನಸ್ಸಿಗೆ ಮುದ ನೀಡುತ್ತದೆ" ಎಂದು ಹೇಳಿದರು.

“ನಿವೇತಾ ಪಾತ್ರದಲ್ಲಿ ಕೆಲವು ಸೂಕ್ಷ್ಮ ವ್ಯತ್ಯಾಸಗಳಿವೆ ಮತ್ತು ಅಂತಹ ಪಾತ್ರವನ್ನು ಅವರು ಮಾತ್ರ ಮಾಡಬಲ್ಲರು. ಖಂಡಿತ ಈ ಚಿತ್ರದಲ್ಲಿ ನೀವು ನಿವೇತಾರನ್ನು ಇಷ್ಟಪಡ್ತೀರಾ. ಅವರಿಂದಲೇ ಚಿನ್ನ ಕಥಾ ಕಾದು ಸಿನಿಮಾ ಮತ್ತಷ್ಟು ವಿಶೇಷವಾಗಿದೆ" ಎಂದು ವೇದಿಕೆ ಮೇಲೆ ನಟಿಯನ್ನು ಗುಣಗಾನ ಮಾಡಿದರು. ಚಿತ್ರದಲ್ಲಿ ನಿವೇತಾ ಥಾಮಸ್​, ಗೌತಮಿ, ಪ್ರಿಯದರ್ಶಿ ಪುಲಿಕೊಂಡ, ಭಾಗ್ಯರಾಜ್, ವಿಶ್ವದೇವ್ ರಾಚಕೊಂಡ, ಅನನ್ಯ, ಅರುಣ್ ದೇವ್ ಮತ್ತು ಕೃಷ್ಣ ತೇಜ ಸೇರಿದಂತೆ ಮುಂತಾದರ ತಾರಾಗಣವಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net