

ವಿಜಯವಾಣಿ ಸುದ್ದಿಜಾಲ ಬೆಂಗಳೂರು
ರಾಜ್ಯದಲ್ಲಿ ಕೆಲ ದಿನಗಳಿಂದ ನಿರಂತರವಾಗಿ ಸುರಿಯುತ್ತಿದ್ದ ಮಳೆ ಕೊಂಚ ಬಿಡುವು ನೀಡಿದ್ದು, ನೆರೆ ಆತಂಕ ಕಡಿಮೆಯಾಗಿದೆ.ಕೊಡಗಿನಲ್ಲಿ ಮಳೆಯ ಅಬ್ಬರ ಇಳಿದಿದೆ. ಜಿಲ್ಲಾ ಕೇಂದ್ರ ಮಡಿಕೇರಿ ಸೇರಿ ಬಹುತೇಕ ಕಡೆ ತುಂತುರು ಮಳೆಯಾಗಿದೆ. ನದಿಗಳಲ್ಲಿ ನೀರಿನ ಮಟ್ಟ ಕಡಿಮೆಯಾಗುತ್ತಿದ್ದು ಪ್ರವಾಹದ ಆತಂಕ ದೂರವಾಗಿದೆ. ಭಾಗಮಂಡಲದಲ್ಲಿ ತ್ರಿವೇಣಿ ಸಂಗಮ ಸಹಜ ಸ್ಥಿತಿಗೆ ಬರುತ್ತಿದ್ದು, ನದಿಯಲ್ಲಿ ನೀರಿನ ಹರಿವು ಇಳಿಕೆಯಾಗಿದೆ. ಕರಾವಳಿಯಲ್ಲಿ ಎರಡು ದಿನಗಳಿಂದ ವರ್ಷಧಾರೆ ಇಳಿಮುಖವಾಗಿದೆ. ಉಡುಪಿಯಲ್ಲಿ ಆಗಾಗ ಬೀಸಿದ ಬಿರುಗಾಳಿಗೆ ಜನರು ಬೆಚ್ಚಿ ಬಿದ್ದಿದ್ದಾರೆ. ಆರೆಂಜ್ ಅಲರ್ಟ್ ಮುಂದುವರಿದಿದೆ. ಉಡುಪಿ ಜಿಲ್ಲೆಯ ಹೆಬ್ರಿ, ಕುಂದಾಪುರ, ಬೈಂದೂರು, ಕಾಪು, ಕಾರ್ಕಳ ಹಾಗೂ ಬ್ರಹ್ಮಾವರ ತಾಲೂಕಿನ ವಿವಿಧ ಗ್ರಾಮಗಳ 21 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ದ.ಕ. ಜಿಲ್ಲೆಯಲ್ಲಿ ಮಧ್ಯಾಹ್ನದ ಬಳಿಕ ಮಳೆ ಸುರಿಯಲಾರಂಭಿಸಿದೆ. ಕರಾವಳಿಯಲ್ಲಿ 26ರವರೆಗೆ ಭಾರಿ ಮಳೆ ಸುರಿಯುವ ಸಾಧ್ಯತೆ ಇದೆ.
ಬೆಳಗಾವಿ ಜಿಲ್ಲೆಯಲ್ಲಿ ವರುಣನ ಆರ್ಭಟ: ಬೆಳಗಾವಿ ಜಿಲ್ಲೆಯಲ್ಲಿ ವರ್ಷಧಾರೆ ಮುಂದುವರಿದಿದ್ದು, ಸೋಮವಾರ ಭರ್ಜರಿ ಮಳೆ ಸುರಿಯಿತು. ಮಳೆಯ ಅಬ್ಬರಕ್ಕೆ ಜನಜೀವನ ಅಸ್ತವ್ಯಸ್ತವಾಗಿದೆ. ಹಳ್ಳಕೊಳ್ಳಗಳು ಉಕ್ಕಿ ಹರಿಯುತ್ತಿವೆ. ಬಳ್ಳಾರಿ ನಾಲಾ ನೀರು ಜಮೀನುಗಳಿಗೆ ನುಗ್ಗುತ್ತಿದ್ದು, ಬೆಳೆ ಹಾನಿ ಭೀತಿ ಕಾಡುತ್ತಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಜು.23ರ ವರೆಗೆ ಶಾಲೆಗಳಿಗೆ ರಜೆ ಘೊಷಣೆ ಮಾಡಿ ಜಿಲ್ಲಾಧಿಕಾರಿ ಅವರು ಆದೇಶ ಹೊರಡಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಮಳೆ ಪ್ರಮಾಣ ತುಸು ತಗ್ಗಿದೆ. ಆದರೆ, ಸಹ್ಯಾದ್ರಿಯಲ್ಲಿ ಆಗಾಗ ದೊಡ್ಡ ಮಳೆ ಸುರಿಯುತ್ತಲೇ ಇರುವುದರಿಂದ ಪಶ್ಚಿಮವಾಹಿನಿ ನದಿಗಳ ಮಟ್ಟದಲ್ಲಿ ಹೆಚ್ಚಿನ ಇಳಿಕೆ ಕಂಡುಬಂದಿಲ್ಲ.
ಟಿಬಿ ಡ್ಯಾಂ ಭರ್ತಿ: ಮಲೆನಾಡಿನಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ತುಂಗಭದ್ರಾ ಜಲಾಶಯ ಬಹುತೇಕ ಭರ್ತಿಯಾಗಿದ್ದು, ಮೂರು ಕ್ರಸ್ಟ್ ಗೇಟ್ನಿಂದ ಸೋಮವಾರ ಸಂಜೆ ನದಿಗೆ ನೀರು ಹರಿಬಿಡಲಾಯಿತು.
ಕೆಆರ್ಎಸ್ ಬಾಗಿನ ಅರ್ಪಣೆ ಮುಂದಕ್ಕೆ: ಮಂಡ್ಯ ಜಿಲ್ಲೆಯ ಕೃಷ್ಣರಾಜ ಸಾಗರ ಅಣೆಕಟ್ಟೆ ಭರ್ತಿ ಆಗುತ್ತಿರುವ ಹಿನ್ನೆಲೆಯಲ್ಲಿ ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ನೇತೃತ್ವದಲ್ಲಿ ಪರಿಶೀಲನೆ ನಡೆಸಲಾಯಿತು. ನಂತರ ಡಿ.ಕೆ.ಶಿವಕುಮಾರ್ ಮಾತನಾಡಿ, ಬರದಿಂದಾಗಿ ನಲುಗಿದ್ದ ರಾಜ್ಯಕ್ಕೆ ಈ ಬಾರಿ ವರುಣ ಕೃಪೆ ತೋರಿದ ಪರಿಣಾಮ ರಾಜ್ಯದ ಬಹುತೇಕ ಜಲಾಶಯಗಳು ಭರ್ತಿಯಾಗಿವೆ. ಜೀವನದಿ ಕಾವೇರಿಗೆ ಸಂಪ್ರದಾಯದಂತೆ ಬಾಗಿನ ಅರ್ಪಿಸಲು ಶುಭ ಘಳಿಗೆ ಹಾಗೂ ಲಗ್ನ ನೋಡಿ ದಿನವನ್ನು ನಿರ್ಧರಿಸಲಾಗುವುದು ಎಂದು ತಿಳಿಸುವ ಮೂಲಕ ಜು.27ರಂದು ಬಾಗಿನ ಸಲ್ಲಿಸುವುದಿಲ್ಲ ಎಂದು ಸ್ಪಷ್ಟನೆ ನೀಡಿದರು. ಅಣೆಕಟ್ಟೆಯಲ್ಲಿ ನೀರಿನ ಮಟ್ಟ 123.20 (124.80 ಗರಿಷ್ಠ) ಅಡಿ ಇದ್ದು, 47.242 ಟಿಎಂಸಿ ನೀರು ಸಂಗ್ರಹವಿದೆ.
ಶಿವಮೊಗ್ಗ- ಉಡುಪಿ ಸಂಚಾರ ಬಂದ್: ಹೆಬ್ರಿ ಸೀತಾನದಿ ರಾಷ್ಟ್ರೀಯ ಹೆದ್ದಾರಿ 169 ಎ ಮೇಲೆ ಮರ ಬಿದ್ದು ಶಿವಮೊಗ್ಗ- ಉಡುಪಿ ಸಂಚಾರ 2 ತಾಸಿಗೂ ಅಧಿಕ ಕಾಲ ಬಂದ್ ಆಗಿತ್ತು. ಅರಣ್ಯ, ಪೊಲೀಸ್ ಇಲಾಖೆ ಸಹಕಾರದಲ್ಲಿ ಸಾರ್ವಜನಿಕರು ಮರ ತೆರವುಗೊಳಿಸಿದರು.
ಕಾರವಾರ: ಅಂಕೋಲಾ ತಾಲೂಕು ಶಿರೂರು ಗುಡ್ಡ ಜರಿತ ಸಂಭವಿಸಿದ ಸ್ಥಳದಲ್ಲಿ ಕಾರ್ಯಾಚರಣೆಗೆ ಉತ್ತರ ಕನ್ನಡ ಜಿಲ್ಲಾಡಳಿತ ಇಸ್ರೋ ನೆರವು ಪಡೆದಿದೆ. ಘಟನೆ ಸಂಭವಿಸಿ 6 ದಿನಗಳ ಬಳಿಕವೂ ಒಂದು ಲಾರಿ ಹಾಗೂ ಮೂವರು ಪತ್ತೆಯಾಗಿಲ್ಲ. ಹೆದ್ದಾರಿ ಮೇಲೆ ಬಿದ್ದ ಮಣ್ಣು ತೆರವು, ಸೇನೆಯಿಂದ ಜಿಪಿಆರ್ ಯಂತ್ರದಿಂದ ಹುಡುಕಾಟದ ಬಳಿಕವೂ ಯಾವುದೇ ಕುರುಹು ಸಿಕ್ಕಿಲ್ಲ. ಕುಸಿತದಿಂದ ಗಂಗಾವಳಿ ನದಿಯಲ್ಲಿ ದ್ವೀಪವೊಂದು ಸೃಷ್ಟಿಯಾಗಿದ್ದು, ಅಲ್ಲಿ ಅವಶೇಷಗಳನ್ನು ಹುಡುಕá-ವುದು ಸವಾಲಾಗಿದೆ. 60 ಮೀಟರ್ ದೂರದಿಂದ ಅವಶೇಷ ಎತ್ತಬಲ್ಲ ಕ್ರೇನ್ಒಂದನ್ನು ತರಿಸಲಾಗುತ್ತಿದೆ. ಇಸ್ರೋದಿಂದ ಉಪಗ್ರಹ ಆಧಾರಿತ ಚಿತ್ರಗಳನ್ನು ತರಿಸಿಕೊಳ್ಳಲಾಗಿದ್ದು, ಅದರ ಆಧಾರದ ಮೇಲೆ ಕಾರ್ಯಾಚರಣೆ ನಡೆಸಲಾಗá-ವುದು ಎಂದು ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ತಿಳಿಸಿದ್ದಾರೆ.
ಮರ ಬಿದ್ದು ಸಾವು: ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಯ ಘಟ್ಟ ಪ್ರದೇಶದಲ್ಲಿ ಮಳೆ ಹೆಚ್ಚಾಗಿದ್ದು, ಪೂರ್ವಾಭಿಮುಖ ನದಿಗಳ ಹರಿವು ಹೆಚ್ಚಿದೆ. ವರದಾ, ಧರ್ವ, ಕುಮದ್ವತಿ ಹಾಗೂ ತುಂಗಭದ್ರಾ ನದಿಗಳ ಹರಿವು ಹೆಚ್ಚಿದ್ದು, ಹಾವೇರಿ ಜಿಲ್ಲೆಯಲ್ಲಿ ಪ್ರವಾಹ ಭೀತಿ ಉಂಟಾಗಿದೆ. ಹಿರೇಕೆರೂರಿನಲ್ಲಿ ಗಾಳಿ ಮಳೆ ಸಂದರ್ಭದಲ್ಲಿ ಚಲಿಸುತ್ತಿದ್ದ ಬೈಕ್ ಮೇಲೆ ಮರ ಬಿದ್ದು ಹೆಸ್ಕಾಂ ಜಂಗಲ್ ಕಟಾವು ಕೆಲಸದ ಗುತ್ತಿಗೆ ನೌಕರರಾದ ಚಿನ್ನಮುಳಗುಂದ ಗ್ರಾಮದ ಮಂಜುನಾಥ ಪುಟ್ಟಲಿಂಗಣ್ಣನವರ (35) ಹಾಗೂ ರಟ್ಟಿಹಳ್ಳಿ ತಾಲೂಕಿನ ಯತ್ತಿನಹಳ್ಳಿ ಎಂ.ಎಂ. ಗ್ರಾಮದ ಹನುಮಂತ ನಾಮದೇವ (25) ಎಂಬುವರು ತೀವ್ರ ಗಾಯಗೊಂಡು ಮೃತಪಟ್ಟಿದ್ದಾರೆ.