

ಭದ್ರಾವತಿ: ಶುಭ ಹಾಗೂ ಅಶುಭವಾದ ಎಲ್ಲ ಕರ್ಮಗಳನ್ನೂ ಭಗವಂತನಿಗೆ ಗುರುಮುಖೇನ ಸಮರ್ಪಣೆ ಮಾಡಿದಾಗ ಭಗವಂತ ಅದಕ್ಕೆ ಪ್ರತಿಯಾಗಿ ಒಳ್ಳೆಯ ಕಾರ್ಯಕ್ಕೆ ಒಳ್ಳೆಯ ಲವನ್ನು, ಕೆಟ್ಟ ಕಾರ್ಯಗಳಿಗೆ ಕೆಟ್ಟ ಲವನ್ನು ನೀಡುತ್ತಾನೆ. ಅದನ್ನು ನಾವು ಸ್ವೀಕರಿಸಲೇಬೇಕು ಎಂದು ಪಂಡಿತ ಪ್ರಶಾಂತ್ ಭಾರದ್ವಾಜಾಚಾರ್ಯ ಹೇಳಿದರು.
ಸಿದ್ಧಾರೂಢ ನಗರದ ನಂಜನಗೂಡು ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ಆಯೋಜಿಸಿದ್ದ ಗುರುಸಾರ್ವಭೌಮ ಶ್ರೀ ರಾಘವೇಂದ್ರಸ್ವಾಮಿ ವರ್ಧಂತಿ ಸಪ್ತಾಹದ ಸಮಾರೋಪದಲ್ಲಿ ಉಪನ್ಯಾಸ ನೀಡಿದ ಅವರು, ಶುಭಕಾರ್ಯ ಮಾಡುವ ಮೊದಲು ಸಂಕಲ್ಪ ಮಾಡಬೇಕು. ನಂತರ ಸ್ಮರಣೆ ಮಾಡಬೇಕು. ಆನಂತರ ಮಾಡಿದ ಆ ಎಲ್ಲ ಶುಭಕಾರ್ಯವನ್ನೂ ಗುರುಮುಖೇನ ಭಗವಂತನಿಗೆ ಸಮರ್ಪಿಸಬೇಕು. ಈ ಅನುಸಂಧಾನವಿಲ್ಲದೆ ಮಾಡುವ ಎಲ್ಲ ಶುಭಕಾರ್ಯಗಳೂ ವ್ಯರ್ಥವಾಗುತ್ತವೆ ಎಂಬುದನ್ನು ಶಾಸಗಳು ಸ್ಪಷ್ಟವಾಗಿ ತಿಳಿಸುತ್ತವೆ ಎಂದರು.
ಗುರು ಎಂಬ ಪದಕ್ಕೆ ಹಲವು ಅರ್ಥಗಳಿವೆ. ಯಾರು ನಮ್ಮಲ್ಲಿನ ಸಂಶಯಗಳನ್ನು ಸಂಪೂರ್ಣ ಪರಿಹರಿಸುವ ಸಾಮರ್ಥ್ಯ ಹೊಂದಿರುತ್ತಾರೆ ಹಾಗೂ ಸಂಶಯಗಳು ಇಲ್ಲದಂತೆ ಶಾಸಗಳಲ್ಲಿನ ವಿಷಯಗಳನ್ನು ಮನದಟ್ಟು ಮಾಡಿಸುತ್ತಾರೋ ಅವರು ಗುರುಗಳು ಎನಿಸಿಕೊಳ್ಳುತ್ತಾರೆ. ಈ ನಿಟ್ಟಿನಲ್ಲಿ ಶ್ರೀ ಗುರು ರಾಘವೇಂದ್ರಸ್ವಾಮಿಗಳು ಭಕ್ತರ ಕಷ್ಟಗಳನ್ನು, ಕೋರಿಕೆಯನ್ನು ಆಲಿಸಿ, ಅದನ್ನು ಭಗವಂತನಿಗೆ ಅರ್ಪಿಸಿ ಅನುಗ್ರಹಿಸುವಂತೆ ಮಾಡುತ್ತಾರೆ ಎಂದು ಹೇಳಿದರು.
ಪಂಡಿತ ಗೋಪಾಲಾಚಾರ್ ಅವರಿಂದ ಧನ್ವಂತರಿ ಹೋಮ ನೆರವೇರಿತು. ಮಹಾ ಮಂಗಳಾರತಿ, ತೀರ್ಥ ಪ್ರಸಾದ ವಿತರಿಸಲಾಯಿತು. ಮಠದ ಪ್ರಧಾನ ಅರ್ಚಕ ಜಗನ್ನಾಥಾಚಾರ್, ಶೇಷಗಿರಿ ಆಚಾರ್, ಶ್ರೀನಿವಾಸಾಚಾರ್, ಮಂಜುನಾಥ ಐತಾಳ್, ವೆಂಕಟೇಶ್, ವಾಸು ಇತರರಿದ್ದರು.