

ಚಿಕ್ಕಮಗಳೂರು: ಪ್ರವಾಸಿಗರ ಸ್ವರ್ಗ ಎಂದೇ ಹೆಸರಾಗಿರುವ ಚಿಕ್ಕಮಗಳೂರಲ್ಲಿ ಕಾಫಿ ತೋಟ, ಉದ್ಯಮ ಹೊರತುಪಡಿಸಿದರೆ ಅತಿ ಹೆಚ್ಚು ಆದಾಯ ತಂದುಕೊಡುವ ಕ್ಷೇತ್ರ ಪ್ರವಾಸೋದ್ಯಮ. ಇದಕ್ಕಾಗಿ ಆರ್ಥಿಕ ಬಲಾಢ್ಯರು ಹೋಂ ಸ್ಟೇಗಳನ್ನು ಮಾಡಿಕೊಂಡು ಸುಲಭವಾಗಿ ಹಣಗಳಿಸುವ ವಿಧಾನ ಕಂಡುಕೊಂಡಿದ್ದಾರೆ.
ಎಲ್ಲವೂ ಪ್ರವಾಸೋದ್ಯಮ ನೀತಿ, ನಿಯಮಗಳಂತೆ ನಡೆದರೆ ಸಮಸ್ಯೆಗಳಿಲ್ಲ. ಆದರೆ ಎಲ್ಲೆಂದರಲ್ಲಿ ಅನಧಿಕೃತವಾಗಿ ಹೋಂ ಸ್ಟೇಗಳು ತಲೆ ಎತ್ತುತ್ತಿವೆ. ಇಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ. ಜಿಲ್ಲೆಯಲ್ಲಿ 1200ಕ್ಕೂ ಹೆಚ್ಚು ಹೋಂ ಸ್ಟೇಗಳಿವೆ. ಆದರೆ ಈ ಪೈಕಿ ನೋಂದಣಿ ಆಗಿರುವುದು 535 ಮಾತ್ರ.
ಹೋಂ ಸ್ಟೇಗಳ ನೋಂದಣಿ ಕಡ್ಡಾಯ. ನೋಂದಣಿ ಮಾಡಿಸಿಕೊಳ್ಳಲು ಪ್ರವಾಸೋದ್ಯಮ ಇಲಾಖೆ ಹಲವು ಬಾರಿ ಅರ್ಜಿ ಆಹ್ವಾನಿಸಿತ್ತು. ಆದರೆ ಹೋಂ ಸ್ಟೇ ಮಾಲೀಕರು ನೋಂದಣಿಗೆ ಆಸಕ್ತಿ ತೋರುತ್ತಿಲ್ಲ. ಈಗಾಗಲೇ ಕೆಲವರ ಪರವಾನಗಿ ಅವಧಿ ಮುಕ್ತಾಯವಾಗಿದೆ. ನವೀಕರಣಕ್ಕೆ ಹಾಗೂ ಹೊಸ ಲೈಸನ್ಸ್ ಪಡೆದುಕೊಳ್ಳಲು ಪ್ರವಾಸೋದ್ಯಮ ಇಲಾಖೆ ಕಾಲಾವಕಾಶ ನೀಡಿತ್ತು. ನವೀಕರಣಕ್ಕೆ ಬಂದಿರುವ ಸಾಕಷ್ಟು ಮಂದಿ ಮಾಲೀಕರು ಹೋಂ ಸ್ಟೇಗಳನ್ನು ರೆಸಾರ್ಟ್‌ಗಳನ್ನಾಗಿ ಮಾರ್ಪಾಡು ಮಾಡಿಕೊಳ್ಳುತ್ತಿದ್ದಾರೆ. ಇದು ಸರ್ಕಾರದ ನಿಯಮಗಳಿಗೆ ವಿರುದ್ಧವಾಗಿದೆ.
ಚಿಕ್ಕಮಗಳೂರು, ಕೊಪ್ಪ, ಶೃಂಗೇರಿ, ಮೂಡಿಗೆರೆ, ಕಳಸ, ಹೊರನಾಡು, ಕೊಪ್ಪ ಭಾಗದಲ್ಲಿ ಹೆಚ್ಚಾಗಿ ಹೋಂ ಸ್ಟೇಗಳು ತಲೆಯೆತ್ತಿವೆ. ಗಿರಿ ಶಿಖರಗಳಾದ ಮುಳ್ಳಯ್ಯನಗಿರಿ, ಸೀತಾಳಯ್ಯನಗರಿ, ಕುದುರೆಮುಖ ಭಾಗದಲ್ಲಿ ಪ್ರಕೃತಿಕ ಪ್ರವಾಸಿ ತಾಣಗಳಿವೆ. ಇಲ್ಲಿನ ಪರಿಸರ ಆಸ್ವಾದಿಸಲು ಆಂಧ್ರ, ಕೇರಳ, ತಮಿಳುನಾಡು, ಬೆಂಗಳೂರು ಸೇರಿ ನಾನಾ ಭಾಗಗಳಿಂದ ಪ್ರವಾಸಿಗರು ವಾರಾಂತ್ಯದಲ್ಲಿ ಬರುತ್ತಾರೆ. ಇಲ್ಲಿಗೆ ಒಂದು ದಿನ ಮುಂಚೆ ಹೋಂ ಸ್ಟೇಗಳಿಗೆ ಬಂದು ರೇವ್ ಪಾರ್ಟಿಗಳನ್ನೂ ಆಯೋಜನೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಮದ್ಯ ಸೇವನೆಗೆ ಅವಕಾಶ ನೀಡಲಾಗುತ್ತಿದೆ.
ಹೋಂ ಸ್ಟೇ ಎಂಬುದು ಹೊರಗಿನಿಂದ ಜಿಲ್ಲೆಗೆ ಆಗಮಿಸುವವರಿಗೆ ಆತಿಥ್ಯ ನೀಡುವ ಮನೆಗಳಿದ್ದಂತೆ. ಬೇರೆ ರಾಜ್ಯ, ಜಿಲ್ಲೆಗಳ ಜನರೊಂದಿಗೆ ಬಾಂಧವ್ಯ ಬೆಸೆಯಲು ಸರ್ಕಾರ ಆರಂಭಿಸಿರುವ ಯೋಜನೆಯೇ ಹೋಂ ಸ್ಟೇ. ಕರ್ನಾಟಕ ಪ್ರವಾಸೋದ್ಯಮದ ಅತಿಥಿ ಅಥವಾ ಕೇಂದ್ರ ಸರ್ಕಾರದ ಇನ್‌ಕ್ರೆಡಿಬಲ್ ಇಂಡಿಯಾ ಪೋರ್ಟಲ್ ಮೂಲಕ ಪರವಾನಗಿ ಪಡೆಯುವುದು ಕಡ್ಡಾಯ. ಆದರೆ ಜಿಲ್ಲೆಯಲ್ಲಿ ಹಲವು ವರ್ಷಗಳಿಂದ ಪರವಾನಗಿ ಪಡೆಯದೆ ಹೋಂ ಸ್ಟೇ ನಡೆಸುತ್ತಿದ್ದಾರೆ. ಪರವಾನಗಿ ಅವಧಿ 5 ವರ್ಷ ಮುಗಿದ ಹೋಂ ಸ್ಟೇ ಮಾಲೀಕರಿಗೆ ನವೀಕರಣಕ್ಕೆ ಡೆಡ್‌ಲೈನ್ ನೀಡಲಾಗಿದೆ.
ಪ್ರಭಾವಿಗಳದ್ದೇ ಸಿಂಹಪಾಲು: ಜಿಲ್ಲೆಯ ಅನಧಿಕೃತ ಹೋಂ ಸ್ಟೇಗಳಲ್ಲಿ ಪ್ರಭಾವಿಗಳದ್ದೇ ಸಿಂಹಪಾಲು. ರಾಜಕಾರಣಿಗಳು, ಉದ್ಯಮಿಗಳೇ ಅಧಿಕ ಇದ್ದಾರೆ. ಬೆಂಗಳೂರು, ಶಿವಮೊಗ್ಗ, ಹೊರರಾಜ್ಯ ಹಾಗೂ ವಿದೇಶಗಳಲ್ಲಿ ಕುಳಿತು ಹೋಂ ಸ್ಟೇಗಳ ಮೂಲಕ ಹಣ ಸಂಪಾದಿಸುತ್ತಿದ್ದಾರೆ. ಖಾಸಗಿ ಜಾಗವನ್ನು ಲೀಜ್ ಅಥವಾ ಬಾಡಿಗೆಗೆ ಪಡೆದು ಹೋಂ ಸ್ಟೇಗಳನ್ನು ನಿರ್ಮಿಸಿರುವ ಮಾಲೀಕರು ಪರವಾನಗಿ ಪಡೆಯದೆ ಹಲವು ವರ್ಷಗಳಿಂದ ನಡೆಸುತ್ತಿದ್ದಾರೆ. ನೋಂದಣಿ ಮಾಡಿಸಿದರೆ ಸಿಸಿ ಕ್ಯಾಮರಾ ಅಳವಡಿಕೆ, ಪ್ರವಾಸಿಗರ ವಿವರ ಸಂಗ್ರಹ, ಪೊಲೀಸರಿಗೆ ಮಾಹಿತಿ ಕೊಡುವುದು ಕಡ್ಡಾಯ. ಹಾಗಾಗಿ ಇದರಿಂದ ತಪ್ಪಿಸಿಕೊಳ್ಳುವ ಸಲುವಾಗಿ ನೋಂದಣಿಗೆ ಹಿಂದೇಟು ಹಾಕುತ್ತಿದ್ದಾರೆ.
ಅಡ್ಡದಾರಿ ಹಿಡಿದ ಮಾಲೀಕರು: ಹೋಂ ಸ್ಟೇ ನಡೆಸಲು ಐದು ಬೆಡ್ ರೂಂಗೆ ಅವಕಾಶವಿತ್ತು. ಇದೀಗ 5+1 ಬೆಡ್ ರೂಂಗೆ ಅವಕಾಶ ನೀಡಲಾಗುತ್ತಿದೆ. ಒಂದು ರೂಂನಲ್ಲಿ 6 ಬೆಡ್ ಮಾತ್ರ ಇರಬೇಕೆಂಬ ನಿಯಮವಿದೆ. ಹೆಚ್ಚಿದ್ದರೆ ಅದನ್ನು ರೆಸಾರ್ಟ್, ಲಾಡ್ಜ್ ಅಥವಾ ಹೋಟೆಲ್ ಎಂದು ಪರಿಗಣಿಸಬೇಕಿದೆ. ಬಹುತೇಕ ಹೋಂ ಸ್ಟೇಗಳು ನಿಯಮಗಳನ್ನು ಗಾಳಿಗೆ ತೂರಿ ಅನಧಿಕೃತವಾಗಿ ಬಾರ್ ಆ್ಯಂಡ್ ರೆಸ್ಟೋರೆಂಟ್ ಆಗಿ ಮಾರ್ಪಾಟು ಮಾಡಿವೆ. ಪ್ರವಾಸಿಗರನ್ನು ಆಕರ್ಷಿಸಲು ಕೆಲವರು ಈ ರೀತಿ ಅಡ್ಡ ಮಾರ್ಗಗಳನ್ನು ಕಂಡುಕೊಂಡಿದ್ದಾರೆ. ಮಾಲೀಕರು ಸಹ ಹೋಂ ಸ್ಟೇನಲ್ಲಿ ತಂಗಿರಬೇಕೆಂಬ ನಿಯಮಗಳಿದ್ದರೂ ಪಾಲಿಸುತ್ತಿಲ್ಲ.
ನಿರಾಕ್ಷೇಪಣಾ ಪತ್ರ ಕಡ್ಡಾಯ: ಹೋಂ ಸ್ಟೇಗಳನ್ನು ನಡೆಸಲು ಮುಖ್ಯವಾಗಿ ಪೊಲೀಸ್ ಇಲಾಖೆ ಮತ್ತು ಗ್ರಾಪಂನ ನಿರಾಕ್ಷೇಪಣಾ ಪತ್ರ ಕಡ್ಡಾಯ. ಜತೆಗೆ ಮಾಲೀಕರ ವಾಸ ದೃಢೀಕರಣ ಅಥವಾ ಜಮೀನಿನ ದಾಖಲೆ ಅಗತ್ಯ. ಕನಿಷ್ಠ ಮೂರು ಕೊಠಡಿಗಳು, ಗರಿಷ್ಠ ಐದು ಕೊಠಡಿಗಳವರೆಗೆ ಮಾತ್ರ ಪರವಾನಗಿ ಅನ್ವಯವಾಗುತ್ತದೆ. ಇವುಗಳ ಮೂಲ ದಾಖಲಾತಿಗಳೊಂದಿಗೆ ಇನ್‌ಕ್ರೆಡಿಬಲ್ ಇಂಡಿಯಾ ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಿ ಅನುಮತಿ ಪಡೆಯಬೇಕಿದೆ.
11ಬಿ ದಾಖಲೆ ಪಡೆದು ನವೀಕರಿಸಲಿ: ಹೋಂ ಸ್ಟೇ ಕಟ್ಟಡಗಳ ಪರವಾನಗಿಯನ್ನು ಹಿಂದಿನ ಪದ್ಧತಿ ಪ್ರಕಾರವೇ 11ಬಿ ನಮೂನೆ ಪಡೆದು ನವೀಕರಿಸಿಕೊಡಬೇಕು. ಜತೆಗೆ ಕಟ್ಟಡಗಳಿಗೆ ಏಕರೂಪ ತೆರಿಗೆ ವಿಧಿಸಿ ನವೀಕರಣದ ವಿಧಾನ ಸರಳಗೊಳಿಸಬೇಕು ಎಂಬುದು ಹೋಂ ಸ್ಟೇ ಮಾಲೀಕ ಹೊಲದಗದ್ದೆ ಗಿರೀಶ್ ಅವರ ಅಭಿಪ್ರಾಯ. ನಿಯಮಗಳು ಕಠಿಣವಾಗಿದ್ದರಿಂದ ಕೆಲವರು ನವೀಕರಣಕ್ಕೆ ತಡ ಮಾಡುತ್ತಿದ್ದಾರೆ. ಇನ್ನು ಕೆಲವರು ರೆಸಾರ್ಟ್‌ಗಳನ್ನಾಗಿ ಮಾರ್ಪಾಡು ಮಾಡಿಕೊಳ್ಳುತ್ತಿದ್ದಾರೆ. ಈಗ ನವೀಕರಣ ಪ್ರಕ್ರಿಯೆ ಸರಳವಾಗಿದೆ. ಬಾಕಿ ಇರುವರು ಕೂಡಲೇ ನೋಂದಣಿ ಮಾಡಿಸಿಕೊಳ್ಳಬೇಕಿದೆ. ಹೋಂ ಸ್ಟೇ ನೋಂದಣಿಗೆ ಪೊಲೀಸ್ ಇಲಾಖೆ, ಗ್ರಾಪಂನಿಂದ ಎನ್‌ಒಸಿ ಪಡೆದು, ವಾಸದ ದೃಢೀಕರಣ ನೀಡಿದರೂ ಪರವಾನಗಿ ಅಷ್ಟು ಸುಲಭವಾಗಿ ಮಾಲೀಕರ ಕೈಸೇರುವುದಿಲ್ಲ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ ಬಳಿಕ ಚೆನ್ನೈನಿಂದಲೇ ಮೂರ್ನಾಲ್ಕು ಅಧಿಕಾರಿಗಳು ಬಂದು ಒಂದೆರಡು ದಿನಗಳ ಕಾಲ ವಾಸ್ತವ್ಯ ಹೂಡುತ್ತಾರೆ. ಎಲ್ಲ ಸರಿ ಇದ್ದರೂ ಅವರಿಗೆ ಲಂಚ ಕೊಡಬೇಕಿದೆ.
94ಸಿ ಅಡಿ ಜಮೀನು ಮಂಜೂರಾಗಿರುವ ಜಾಗದಲ್ಲಿ, ಭೂ ದಾಖಲೆಗಳು ಸರಿಯಿಲ್ಲದವರು, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿರ್ಮಾಣ ಮಾಡಿಕೊಂಡಿರುವವರು 11ಬಿ ಖಾತೆ ಹೊಂದಿರುವುದರಿಂದ ನೋಂದಣಿ ಮಾಡಿಸಿಕೊಳ್ಳಲು ಹಿಂಜರಿಯುತ್ತಿದ್ದಾರೆ. ದಾಖಲೆ ಸರಿ ಇರುವವರು ನೋಂದಣಿ ಮಾಡಿಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಪೊಲೀಸ್, ಗ್ರಾಪಂ ಅಧಿಕಾರಿಗಳು ಹೋಂ ಸ್ಟೇಗಳಿಗೆ ಭೇಟಿ ನೀಡಿ ದಾಖಲೆಗಳನ್ನು ಪಡೆದು ನೋಂದಣಿಯ ತಿಳಿವಳಿಕೆ ನೀಡುತ್ತಿದ್ದಾರೆ ಎಂದು ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಲೋಹಿತ್ ಮಾಹಿತಿ ನೀಡಿದರು.