

ಬೆಂಗಳೂರು: ವಿಧಾನ ಮಂಡಲದ ಅಧಿವೇಶನ ಈ ವರ್ಷ ನಡೆದದ್ದು ಬರೀ 29 ದಿನ ಮಾತ್ರ!( Only 29 days session in 2024!)
ವರ್ಷಾರಂಭದಲ್ಲಿ ರಾಜ್ಯಪಾಲರು ಉಭಯ ಸದನ ಉದ್ದೇಶಿಸಿ ಭಾಷಣ ಮಾಡುವ ಜಂಟಿ ಅಧಿವೇಶನ, ಬಜೆಟ್ ಅಧಿವೇಶನ, ಮಳೆಗಾಲ ಮತ್ತು ಚಳಿಗಾಲದ ಅಧಿವೇಶನ ಸೇರಿದಂತೆ ಒಟ್ಟು 29 ದಿನ ವಿಧಾನಸಭೆ ಅಧಿವೇಶನ ನಡೆದಿದೆ. ಕೋವಿಡ್ ನಂತರದ ವರ್ಷಗಳಲ್ಲಿ ಅತೀ ಕಡಿಮೆ ಅಧಿವೇಶನ ನಡೆದ ವರ್ಷ 2024.
2015ರ ಬಳಿಕ ನಡೆದ ಯಾವ ವರ್ಷದಲ್ಲೂ 50 ದಿನ ಕಾಲ ಅಧಿವೇಶನ ನಡೆದಿಲ್ಲ. ವಿಧಾನಸಭೆ ಸಚಿವಾಲಯದ ಮಾಹಿತಿಯಂತೆ 2015ರಲ್ಲಿ ಮಾತ್ರ 58 ದಿನ ಅಧಿವೇಶನ ನಡೆಸಲಾಗಿದೆ.
ಜಂಟಿ ಅಧಿವೇಶನ ಮತ್ತು ಬಜೆಟ್ ಅಧಿವೇಶನ ಸೇರಿ ೆಬ್ರವರಿ 12ರಿಂದ 29ರ ರವರೆಗೆ ಒಟ್ಟು 13 ದಿನಗಳ ವಿಧಾನಸಭೆಯ ಕಾರ್ಯಕಲಾಪ ನಡೆದಿವೆ.
ಮಳೆಗಾಲದ ಅಧಿವೇಶನ ಜುಲೈ 15 ರಿಂದ 25ರ ವರೆಗೆ ಎಂಟು ದಿನ ಕಾಲ ನಡೆದಿದೆ. ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆದ ಚಳಿಗಾಲದ ಅಧಿವೇಶನ ನಿಗದಿತ 10 ದಿನಗಳ ಪೈಕಿ 8 ದಿನ ನಡೆದಿದೆ. ಮಾಜಿ ಸಿಎಂ ಎಸ್.ಎಂ.ಕೃಷ್ಣ ನಿಧನದ ಕಾರಣ ಒಂದು ದಿನ ಸಾರ್ವತ್ರಿಕ ರಜೆ ೋಷಣೆ ಮಾಡಲಾಗಿತ್ತು. ಜತೆಗೆ ಮಂಡ್ಯದಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಹಿನ್ನೆಲೆಯಲ್ಲಿ ಒಂದು ದಿನ ಮುಂಚಿತವಾಗಿಯೇ ಅಧಿವೇಶನ ಮೊಟುಕುಗೊಳಿಸಲಾಗಿತ್ತು. ಹಾಗಾಗಿ ಈ ಬಾರಿ 8 ದಿನ ಕಲಾಪ ನಡೆಯಿತು.
ವಾರ್ಷಿಕ ಕನಿಷ್ಟ 60 ದಿನ ವಿಧಾನ ಮಂಡಲದ ಅಧಿವೇಶನ ನಡೆಸಬೇಕು ಎಂಬ ಮಾತು ಶಾಸಕರಿಂದ ಪದೇ ಪದೆ ಕೇಳಿ ಬರುತ್ತಿದೆ. ಸಿಎಂ ಸಿದ್ದರಾಮಯ್ಯ ಪ್ರತಿಪಕ್ಷ ನಾಯಕರಾಗಿದ್ದಾಗ 60 ದಿನ ಅಧಿವೇಶನ ನಡೆಸುವಂತೆ ಒತ್ತಾಯ ಮಾಡಿದ್ದರು.
ಯಾವ ವರ್ಷ,ಎಷ್ಟು ದಿನ?
2023-39
2022-45
2021-40
2020-31
2019-15
2018-23
2017-40
2016-35