

ಬೆಂಗಳೂರು: ಕರೋನಾ ಹರಡುವಿಕೆ ತಡೆಯಲು ಲಾಕ್ಡೌನ್ ಹೇರಲಾಗಿರುವ ಈ ಸಂದರ್ಭದಲ್ಲಿ ಯಾರಾದರೂ ಮೃತಪಟ್ಟಲ್ಲಿ ಅಂತ್ಯಸಂಸ್ಕಾರಕ್ಕೆ 20ಕ್ಕಿಂತ ಹೆಚ್ಚು ಜನರು ಭಾಗಿಯಾಗುವಂತಿಲ್ಲ ಎಂದು ಬಿಬಿಎಂಪಿ ಸುತ್ತೋಲೆ ಹೊರಡಿಸಿದೆ.
ಕರೋನಾ ಭೀತಿಯಿಂದಾಗಿ ಸತ್ತ ವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಸಂಬಂಧಿಕರಿಗೆ ವಿದಾಯ ಹೇಳಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ನಗರದಲ್ಲಿ ಯಾರಾದರೂ ಸಾವನ್ನಪ್ಪಿದರೆ ಅವರ ಅಂತ್ಯ ಸಂಸ್ಕಾರದಲ್ಲಿ 20 ಮಂದಿಗಿಂತ ಹೆಚ್ಚಿನವರು ಸೇರಬಾರದು ಎಂದು ಬಿಬಿಎಂಪಿ ಆಯುಕ್ತ ಅನಿಲ್ಕುಮಾರ್ ಆದೇಶಿಸಿದ್ದಾರೆ.
ಪಾಲಿಕೆ ವ್ಯಾಪ್ತಿಯಲ್ಲಿ 132 ಸ್ಮಶಾನಗಳಿದ್ದು, ಕೆಲವನ್ನು ಖಾಸಗಿ ಟ್ರಸ್ಟ್ಗಳು ನಿರ್ವಹಿಸುತ್ತಿವೆ. ವಿದ್ಯುತ್ ಮತ್ತು ಉರುವಲು ಸೇರಿ 13 ಚಿತಾಗಾರಗಳಿದ್ದು, ಪಾಲಿಕೆ ನಿರ್ವಹಿಸುತ್ತದೆ. ಈಗ ಅಂತ್ಯಸಂಸ್ಕಾರದಲ್ಲಿ 15ರಿಂದ 20 ಜನರಿಗೆ ಮಾತ್ರ ಭಾಗವಹಿಸಲು ಅವಕಾಶ ನೀಡಲಾಗಿದ್ದು, ಸ್ಮಶಾನದಲ್ಲಿ ಸಾಬೂನು ಮತ್ತು ನೈರ್ಮಲ್ಯಕಗಳ ವ್ಯವಸ್ಥೆ ಮಾಡಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ವಿಕ್ಟೋರಿಯಾ ಸಿಬ್ಬಂದಿಗೆ ಪುನರ್ವಸತಿ
ಬೆಂಗಳೂರು: ಕರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯಕೀಯ ಸಿಬ್ಬಂದಿಯನ್ನು ಶ್ಲಾಘಿಸುವಂತೆ ಪ್ರಧಾನಿ ನರೇಂದ್ರ ಮೋದಿ ದೇಶವಾಸಿಗಳಿಗೆ ಸಂದೇಶ ನೀಡುತ್ತಿರುವುದು ಒಂದೆಡೆಯಾದರೆ, ವಿಕ್ಟೋರಿಯಾ ಆಸ್ಪತ್ರೆಯ ನೌಕರರು ಮನೆಯಿಲ್ಲದ ಪರಿಸ್ಥಿತಿ ಎದುರಿಸುತ್ತಿದ್ದಾರೆ.
ಸೋಂಕು ಹರಡುವ ಭೀತಿಯಿಂದ ಮನೆ ಮಾಲೀಕರು ತಕ್ಷಣ ಖಾಲಿ ಮಾಡುವಂತೆ ಹೇಳಿದ್ದರಿಂದ ವಸತಿ ಕಳೆದುಕೊಂಡಿದ್ದ ವಿಕ್ಟೋರಿಯಾ ಆಸ್ಪತ್ರೆಯ 8 ಸಿಬ್ಬಂದಿಗೆ ‘ನಮ್ಮ ಬೆಂಗಳೂರು ಪ್ರತಿಷ್ಠಾನ’ (ಎನ್ಬಿಎಫ್) ವಸತಿ ಕಲ್ಪಿಸಿದೆ. ಕೋರಮಂಗಲದಲ್ಲಿರುವ ಡಿ ಓರಿಯಲ್ ಹೋಟೆಲ್ನಲ್ಲಿ ವಿಕ್ಟೋರಿಯಾ ಆಸ್ಪತ್ರೆಯ ವೈದ್ಯರು ಮತ್ತು ದಾದಿಯರ ವಾಸ್ತವ್ಯಕ್ಕೆ ಹೋಟೆಲ್ನ ಮಾಲೀಕ
ಮುರಳಿ ಕೃಷ್ಣ ಸಹಾಯ ಮಾಡಿದ್ದಾರೆ ಎಂದು ಎನ್ಬಿಎಫ್ ಶ್ಲಾಘಿಸಿದೆ. ಲಾಕ್ಡೌನ್ ನಂತರ ಬಡವರ ಸಮಸ್ಯೆಗಳನ್ನು ಪರಿಹರಿಸಲು ಎನ್ಬಿಎಫ್ ಆಹಾರ ಹಂಚಿಕೆ ಅಭಿಯಾನ ಪ್ರಾರಂಭಿಸಿದ್ದು, ಇಲ್ಲಿಯವರೆಗೆ 8,305 ಜನರಿಗೆ ಆಹಾರ ಪೊಟ್ಟಣಗಳು ಮತ್ತು ದಿನಸಿ ಚೀಲಗಳನ್ನು ತಲುಪಿಸಲಾಗಿದೆ.