ಆನ್​ಲೈನ್ ಜೂಜು ನಿರ್ಭೀತ: ಹತ್ತಾರು ಆ್ಯಪ್ ಸಕ್ರಿಯ, ನಿಷೇಧವಿದ್ದರೂ ಅಂಕೆಯಿಲ್ಲ..

Editorial
Published on

| ಅವಿನಾಶ ಮೂಡಂಬಿಕಾನ ಬೆಂಗಳೂರು

ರಾಜ್ಯದಲ್ಲಿ ಆನ್​ಲೈನ್ ಜೂಜಾಟ ಹಾಗೂ ಬೆಟ್ಟಿಂಗ್ ನಿಷೇಧಿಸುವ ಕರ್ನಾಟಕ ಪೊಲೀಸ್ (ತಿದ್ದುಪಡಿ) ಮಸೂದೆ 2021 ಜಾರಿಯಾಗಿ 1 ತಿಂಗಳಾಗುತ್ತಿದ್ದರೂ ಆನ್​ಲೈನ್ ‘ಬಾಜಿಯಾಟ’ ನಿರ್ಭೀತವಾಗಿ ಮುಂದುವರಿದಿದೆ. ಇಂದಿಗೂ ಹತ್ತಾರು ಬೆಟ್ಟಿಂಗ್ ಆಪ್​ಗಳು ಸಕ್ರಿಯವಾಗಿದ್ದು, ಪ್ರತಿನಿತ್ಯ ನೂರಾರು ಕೋಟಿ ರೂ. ವಹಿವಾಟು ನಡೆಯುತ್ತಿದೆ.

ಕರ್ನಾಟಕದಲ್ಲಿ ಅ.5ರಂದೇ ಆನ್​ಲೈನ್ ಜೂಜು ನಿಷೇಧಿಸಿ ಕಾಯ್ದೆ ಜಾರಿಯಾಗಿದೆ. ಗೇಮ್್ಸ 24/7, ಮೊಬೈಲ್ ಪ್ರೀಮಿಯರ್ ಲೀಗ್, ಡ್ರೀಮ್ 11 ಮತ್ತು ನಜಾರಾ ಸೇರಿದಂತೆ ಕೆಲವೊಂದು ಗೇಮಿಂಗ್ ಹಾಗೂ ಬೆಟ್ಟಿಂಗ್ ಆಪ್ ಬ್ಯಾನ್ ಮಾಡಲಾಗಿದೆ. ಆದರೆ, ಕೆಲ ವಿದೇಶಿ ಆಪ್​ಗಳು ಈಗಲೂ ಸಕ್ರಿಯವಾಗಿದ್ದು, ಬೆಟ್ಟಿಂಗ್ ವಹಿವಾಟು ಮುಂದುವರಿದಿದೆ.

ಅಡ್ಡದಾರೀಲಿ ಸಕ್ರಿಯ: ರಾಜ್ಯದಲ್ಲಿ ಸಕ್ರಿಯವಾಗಿರುವ ಬಹುತೇಕ ಬೆಟ್ಟಿಂಗ್ ಆಪ್​ಗಳನ್ನು ವಿದೇಶಿ ಕಂಪನಿಗಳು ಅಭಿವೃದ್ಧಿಪಡಿಸಿವೆ. ಹಲವು ಆಪ್​ಗಳು ಕ್ಯಾಸಿನೋ ಗೇಮ್ಳಲ್ಲಿ ಹಣ ಕಟ್ಟಿ ಆಟವಾಡಲು ಅವಕಾಶ ಕಲ್ಪಿಸಿವೆ. ಈ ಆಪ್​ಗಳಾವುವೂ ಗೂಗಲ್ ಪ್ಲೇ ಸ್ಟೋರ್​ನಲ್ಲಿ ಸಿಗುವುದಿಲ್ಲ. ವೆಬ್​ಸೈಟ್ ಮೂಲಕ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಲಿಂಕ್ ಶೇರ್ ಮಾಡುವ ಮೂಲಕ ಬಳಕೆದಾರರಿಗೆ ಸಿಗುತ್ತಿವೆ. ಈ ಎಲ್ಲ ಆಪ್​ಗಳಲ್ಲಿ ನಿಗದಿಪಡಿಸಿರುವಂತಹ ಪ್ರವೇಶ ಶುಲ್ಕ ಪಾವತಿಸಿ, ಆಪ್​ಗೆ ಲಾಗಿನ್ ಆಗಲು ಅವಕಾಶ ಕಲ್ಪಿಸಲಾಗಿದೆ.

280 ಕೋಟಿ ರೂ. ವ್ಯವಹಾರ: ಅಂದಾಜಿನ ಪ್ರಕಾರ ಆನ್​ಲೈನ್ ಬೆಟ್ಟಿಂಗ್ ಮೂಲಕ ರಾಜ್ಯದಲ್ಲಿ ವಾರ್ಷಿಕ ಅಂದಾಜು 280 ಕೋಟಿ ರೂ.ಗೂ ಅಧಿಕ ವಹಿವಾಟು ನಡೆಯುತ್ತದೆ. ಭಾರತದಲ್ಲಿ 2020ರಲ್ಲಿ ಶೇ.18 ಆನ್​ಲೈನ್ ಗೇಮಿಂಗ್ ಕ್ಷೇತ್ರ ಅಭಿವೃದ್ಧಿ ಹೊಂದಿದ್ದು, ವಾರ್ಷಿಕ 7700 ಕೋಟಿ ರೂ.ವರೆಗೆ ವಹಿವಾಟು ತಲುಪಿರುವ ಮಾಹಿತಿ ಇದೆ. ಫ್ಯಾಂಟಸಿ ಕ್ರೀಡೆ, ರಮ್ಮಿ ಮತ್ತು ಪೋಕರ್​ಗಳ ಆಧಾರದಿಂದ ಗೇಮಿಂಗ್ ಕ್ಷೇತ್ರ ಶೇ.21 ಬೆಳೆದಿದೆ ಎಂದು ಅಂದಾಜಿಸಲಾಗಿದೆ.

ಸಿಕ್ಕಿಬಿದ್ದರೆ ಗ್ರಾಹಕರೇ ಹೊಣೆ?: ದೇಶದ ಕೆಲವು ರಾಜ್ಯಗಳಲ್ಲಿ ಇನ್ನೂ ಆನ್​ಲೈನ್ ಬೆಟ್ಟಿಂಗ್ ನಡೆಸಲು ಅನುಮತಿ ಇದೆ. ಹೀಗಾಗಿ ರಾಜ್ಯದಲ್ಲಿ ಆನ್​ಲೈನ್ ಜೂಜಾಟದಲ್ಲಿ ಗ್ರಾಹಕರು ಪೊಲೀಸರಿಗೆ ಸಿಕ್ಕಿಬಿದ್ದರೆ ಆಯಾ ಆಪ್ ಸಂಸ್ಥೆಗಳು ಬಳಕೆದಾರರನ್ನೇ ಹೊಣೆ ಮಾಡುತ್ತದೆ. ಜೀತ್​ವಿನ್ ಸೇರಿ ಇತರ ಗ್ಯಾಂಬ್ಲಿಂಗ್ ಆಪ್​ಗಳು ಕಾನೂನು ನಿಯಮಗಳನ್ನು ಆಪ್​ಗಳಲ್ಲಿ ಸಣ್ಣ ಅಕ್ಷರಗಳಲ್ಲಿ ಉಲ್ಲೇಖಿಸುತ್ತದೆ. ತಮ್ಮ ಸೇವೆಯ ಮೇಲೆ ಬಾಜಿ ಕಟ್ಟುವುದು ಕಾನೂನುಬದ್ಧವಾಗಿರುವ ದೇಶದಲ್ಲಿ ಮಾತ್ರ ಬಳಕೆದಾರರು ಈ ಸೈಟ್​ಅನ್ನು ಪರೀಕ್ಷಿಸಿ. ಪ್ರವೇಶಿಸುವ ಜವಾಬ್ದಾರಿ ಬಳಕೆದಾರರದ್ದಾಗಿರುತ್ತದೆ. ಈ ಸೇವೆಯ ಬಳಕೆ ಕಾನೂನುಬದ್ಧ ಎಂಬ ಖಾತ್ರಿ ಮಾಡಿಕೊಳ್ಳುವುದು ನಿಮ್ಮ ಜವಾಬ್ದಾರಿಯಾಗಿರುತ್ತದೆ ಎಂದು ಆಪ್​ಗಳಲ್ಲಿ ಬರೆದಿರುತ್ತದೆ.

ಆನ್​ಲೈನ್ ಬೆಟ್ಟಿಂಗ್ ನಿಷೇಧಿಸಿದ್ದೇಕೆ?

  • ಬಡ ಕುಟುಂಬಗಳು ಮತ್ತು ಯುವಜನರು ಜೂಜಾಟಕ್ಕೆ ಬಲಿಯಾಗುವುದು
  • ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಬೆಟ್ಟಿಂಗ್​ನಲ್ಲಿ ಕಳೆದುಕೊಳ್ಳುವುದು
  • 10 ರೂ.ನಿಂದ 50 ರೂ. ಬಂಡವಾಳ ಹೂಡಿ ಕೋಟಿ ಗೆಲ್ಲಬಹುದೆಂಬ ಆಮಿಷ
  • ಕೊರೊನಾ ಅವಧಿಯಲ್ಲಿ ಆನ್​ಲೈನ್ ಬೆಟ್ಟಿಂಗ್ ಬಳಕೆದಾರರ ಸಂಖ್ಯೆ ಹೆಚ್ಚಳ
  • ಜೂಜಾಟದಲ್ಲಿ ಹಣ ಕಳೆದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ ಏರಿಕೆ

ಆನ್​ಲೈನ್ ಬೆಟ್ಟಿಂಗ್ ದಂಧೆ ರಾಜ್ಯದಲ್ಲಿ ನಿಷೇಧಿಸಲಾಗಿದ್ದು, ಹೈಕೋರ್ಟ್​ನಲ್ಲಿ ಕೆಲವು ಅರ್ಜಿಗಳ ವಿಚಾರಣೆ ನಡೆಯುತ್ತಿದೆ. ಹೀಗಾಗಿ ಈ ಕೇಸ್​ನಲ್ಲಿ ಕಠಿಣ ಕ್ರಮ ಕೈಗೊಳ್ಳದಿದ್ದರೂ, ಕಾನೂನಿನ ಅಡಿ ಕೈಗೊಳ್ಳಬಹುದಾದ ಕ್ರಮಗಳನ್ನು ಕೈಗೊಳ್ಳಲಾಗುವುದು. | ಹರೀಶ್ ಪಾಂಡೆ ಡಿಸಿಪಿ, ದಕ್ಷಿಣ ವಿಭಾಗ ಬೆಂಗಳೂರು ನಿರ್ಬಂಧವಿಲ್ಲದ ದೇಶದಲ್ಲಿ ನೋಂದಣಿ: ಬೆಟ್ಟಿಂಗ್ ಆಪ್ ಅಭಿವೃದ್ಧಿಪಡಿಸಿರುವ ಕಂಪನಿಗಳು ಯಾವ ದೇಶದಲ್ಲಿ ಬೆಟ್ಟಿಂಗ್​ಗೆ ಅವಕಾಶವಿದೆಯೋ ಅಲ್ಲಿ ಕಾನೂನುಬದ್ಧವಾಗಿ ನೋಂದಣಿ ಮಾಡಿಕೊಳ್ಳುತ್ತವೆ. ನಂತರ ನಿಷೇಧಿತ ದೇಶ ಹಾಗೂ ರಾಜ್ಯಗಳಲ್ಲಿ ಅಡ್ಡದಾರಿಯಲ್ಲಿ ವಹಿವಾಟು ನಡೆಸುತ್ತವೆ. ಜೀತ್​ವಿನ್, ರಾಜಾಬೆಟ್, ಡಫಾಬೆಟ್ ಆಪ್​ಗಳು ಖುರಾಕಾವೋ ಐಲೆಂಡ್ ದೇಶದಲ್ಲಿ ನೋಂದಣಿಯಾಗಿವೆ. ಭಾರತದಲ್ಲಿ ನಂಬರ್ ಒನ್ ಕ್ಯಾಸಿನೊ ಪ್ಲಾ್ಯಟ್​ಫಾರಂ ಆಗಿರುವ ಜೀತ್​ವಿನ್ ಗ್ಯಾಂಬ್ಲಿಂಗ್​ಗೆ ಭಾರತ ಮತ್ತು ದಕ್ಷಿಣ ಏಷ್ಯಾದಲ್ಲಿ ಈಗಲೂ ಅತೀ ಹೆಚ್ಚಿನ ಗ್ರಾಹಕರಿದ್ದಾರೆ.

ಹೇಗೆ ಬೆಟ್ಟಿಂಗ್?

  • ಇಸ್ಪೀಟ್​ನ ಆಟವಾದರೆ ಆಪ್ ಡೌನ್​ಲೋಡ್ ಮಾಡಿಕೊಂಡ ಬಳಿಕ ನೋಂದಣಿಯಾಗಬೇಕು
  • ಆನ್​ಲೈನ್ ಬ್ಯಾಂಕಿಂಗ್ ಲಿಂಕ್ ಕೇಳುತ್ತದೆ. ಫೋನ್ ಪೇ, ಗೂಗಲ್ ಪೇ, ಪೇಟಿಎಂಗೂ ಅವಕಾಶ
  • 50 ರೂ.ನಿಂದ 1 ಸಾವಿರ ರೂ.ವರೆಗೆ ಹಣ ಪಾವತಿಸಿಕೊಂಡು ಪಾಯಿಂಟ್ಸ್ ನೀಡಲಾಗುತ್ತದೆ
  • ಒಂದು ವೇಳೆ ಆಟದಲ್ಲಿ ಗ್ರಾಹಕ ಗೆದ್ದರೆ ಅದಕ್ಕೆ ತಕ್ಕುದಾದ ಪಾಯಿಂಟ್ಸ್ ಕೊಡಲಾಗುತ್ತದೆ
  • ಗೆದ್ದ ಹಣವನ್ನು ಗ್ರಾಹಕನ ಖಾತೆಗೆ ಹಾಕುವಾಗ ಶೇ.5ರಂತೆ ಕಮಿಷನ್ ಕಡಿತಗೊಳ್ಳುತ್ತದೆ
  • ಕ್ರಿಕೆಟ್ ಪಂದ್ಯಕ್ಕೆ 15, 29, 45 ರೂ. ಪಾವತಿಸಿಕೊಳ್ಳಲಾಗುತ್ತದೆ. ಲಕ್ಷ ಬಹುಮಾನದ ಆಸೆ

ರಾಜ್ಯದಲ್ಲಿ ಏನು ಶಿಕ್ಷೆ?

  • ಕಾಯ್ದೆಯಲ್ಲಿ ಜೂಜಾಟದಲ್ಲಿ ತೊಡಗಿದ ಆರೋಪ ಸಾಬೀತಾ ದವರಿಗೆ 3 ವರ್ಷ ಜೈಲು ಶಿಕ್ಷೆ
  • ಕನಿಷ್ಠ 25 ಸಾವಿರ ರೂ.ನಿಂದ ಗರಿಷ್ಠ ರೂ.1 ಲಕ್ಷ ರೂ. ವರೆಗೆ ದಂಡ ವಿಧಿಸುವ ಅವಕಾಶ
  • ಆನ್​ಲೈನ್ ಜೂಜಾಟಕ್ಕೆ ನೆರವು ಕೊಟ್ಟರೆ 6 ತಿಂಗಳ ಜೈಲು ಶಿಕ್ಷೆ ಮತ್ತು 10 ಸಾವಿರ ರೂ.ದಂಡ

ಬ್ಲಾಕ್​ ಆದ ಆ್ಯಪ್​ಗಳಾವುವು?: ಗೇಮ್ಸ್ 247, ಮೊಬೈಲ್ ಪ್ರೀಮಿಯರ್ ಲೀಗ್, ನಜಾರಾ ಸೇರಿ ಇನ್ನಿತರ ಹಲವು ಬೆಟ್ಟಿಂಗ್ ಹಾಗೂ ಸ್ಕಿಲ್​ಗೇಮ್ ಆಪ್​ಗಳನ್ನು ಬ್ಲಾಕ್ ಮಾಡಲಾಗಿದೆ. ಹಣ ಪಾವತಿ ಮಾಡಿ ಆಡುವ ಪೇ ಟು ಪ್ಲೇ ಸ್ಕಿಲ್ ಗೇಮ್ಳನ್ನೂ ಕೂಡ ಬ್ಯಾನ್ ಮಾಡಲಾಗಿದೆ. ಈ ಕಂಪನಿಗಳ ಇ-ಸ್ಪೋರ್ಟ್ಸ್, ಫ್ಯಾಂಟಸಿ ಸ್ಪೋರ್ಟ್ಸ್, ಚೆಸ್, ಕೇರಂ ಸೇರಿ ಇನ್ನಿತರ ಯಾವುದೇ ಆನ್​ಲೈನ್ ಗೇಮ್ಳನ್ನು ಕರ್ನಾಟಕದಲ್ಲಿ ವಾಸ ಮಾಡುತ್ತಿರುವವರ ಬಳಕೆದಾರರಿಗೆ ನಿಷೇಧಿಸಲಾಗಿದೆ.

ಸಕ್ರಿಯವಾಗಿರುವ ಆ್ಯಪ್​ಗಳಾವುವು?: ಬೆಟ್ 365, ಡಫಾಬೆಟ್, ಬೆಟ್​ವೇ, ರಾಜಾಬೆಟ್ಸ್, ಜೀತ್​ವಿನ್, ಕಮಾನ್ ಸೇರಿ ಇನ್ನಿತರ ಬೆಟ್ಟಿಂಗ್ ಆಪ್​ಗಳು ವಿಶ್ವದಾದ್ಯಂತ ಸಕ್ರಿಯವಾಗಿವೆ. ಕರ್ನಾಟಕದಲ್ಲಿ ನಿಷೇಧವಿದ್ದರೂ ಬಳಕೆದಾರರಿಗೆ ಸಿಗುತ್ತಿವೆ. ಕಾರ್ಡ್ ಗೇಮ್ಳಾದ ತೀನ್​ಪತ್ತಿ, ರೌಲೆಟ್, ಬ್ಲಾ್ಯಕ್ ಜಾಕ್, ಸ್ಲಾಟ್ ಮೆಷಿನ್​ಗಳು, ಜಾಕ್​ಪಾಟ್ ಇನ್ನಿತರ ಬೆಟ್ಟಿಂಗ್ ಆಟಗಳಿಗೆ ಅವಕಾಶ ಕಲ್ಪಿಸಿವೆ. ಅಲ್ಲದೇ ಫುಟ್​ಬಾಲ್, ಕ್ರಿಕೆಟ್, ಕೇರಂ, ಚೆಸ್ ಸೇರಿದಂತೆ ಇನ್ನಿತರ ಆಟಗಳ ಮೇಲೂ ಬಾಜಿ ಕಟ್ಟಿಸಿಕೊಂಡು ವಹಿವಾಟು ನಡೆಸುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net