ಆನ್​ಲೈನ್​ ರಮ್ಮಿ ಆಟಕ್ಕೆ ಬ್ರೇಕ್​! ಇನ್ನು ಮುಂದೆ ಈ ರಾಜ್ಯದಲ್ಲಿ ಆನ್​ಲೈನ್​ ಜೂಜಾಡುವಂತಿಲ್ಲ

rummy
Published on

ತಿರುವನಂತಪುರಂ: ಆನ್​ಲೈನ್​ ರಮ್ಮಿ ಆಟಗಳನ್ನು ನಿಷೇಧಿಸಬೇಕು ಎನ್ನುವ ಕೂಗಿಗೆ ಕೇರಳ ಸರ್ಕಾರ ಕೊನೆಗೂ ಕಿವಿ ಕೊಟ್ಟಿದೆ. ರಾಜ್ಯದಲ್ಲಿ ಆನ್​ಲೈನ್​ ರಮ್ಮಿ ಆಟವನ್ನು ನಿಷೇಧಿಸಿ ಪಿಣರಾಯಿ ವಿಜಯನ್​ ಅವರ ಸರ್ಕಾರ ಆದೇಶ ಹೊರಿಡಿಸಿದೆ.

ಈ ಹಿಂದೆ ಕೇರಳ ಹೈ ಕೋರ್ಟ್​ ಆನ್​ಲೈನ್​ ರಮ್ಮಿಯನ್ನು ಕೇರಳ ಗೇಮಿಂಗ್​ ಆ್ಯಕ್ಟ್​ 1960 ಒಳಗೆ ತರಲು ಸಾಧ್ಯವೇ ಎಂದು ಪರಿಶೀಲಿಸಲು ರಾಜ್ಯ ಸರ್ಕಾರಕ್ಕೆ ಆದೇಶ ನೀಡಿತ್ತು. ಅದರಂತೆ ಸರ್ಕಾರವು ಅದನ್ನು ಗಂಭೀರವಾಗಿ ಪರಿಗಣಿಸಿದ್ದು, ಇದೀಗ ಆನ್​ಲೈನ್​ ರಮ್ಮಿ ಆಟಗಳನ್ನು ಕೇರಳ ಗೇಮಿಂಗ್​ ಆ್ಯಕ್ಟ್​ 1960 ಒಳಗೆ ತಂದಿದೆ. ಇನ್ನೆರೆಡು ವಾರದಲ್ಲಿ ರಾಜ್ಯದಲ್ಲಿ ಆನ್​ಲೈನ್​ ರಮ್ಮಿ ಆಟಗಳು ಸಂಪೂರ್ಣವಾಗಿ ಬ್ಯಾನ್​ ಆಗಲಿದೆ ಎಂದು ತಿಳಿಸಲಾಗಿದೆ.

ಆನ್‌ಲೈನ್ ಜೂಜಾಟ ಮತ್ತು ಬೆಟ್ಟಿಂಗ್ ಅನ್ನು ಕಾಯಿದೆಯಲ್ಲಿ ತರಬೇಕೆಂದು ರಾಜ್ಯ ಪೊಲೀಸ್ ಮುಖ್ಯಸ್ಥ ಲೋಕನಾಥ್ ಬೆಹೆರಾ ಅವರು ಪ್ರಸ್ತಾವನೆ ಸಲ್ಲಿಸಿದ್ದಾರೆ ಎಂದು ನ್ಯಾಯಮೂರ್ತಿ ಶಾಜಿ ಪಿ ಚಾಲಿ ಮತ್ತು ನ್ಯಾಯಮೂರ್ತಿ ಎಸ್.ಮಣಿಕುಮಾರ್ ಅವರನ್ನೊಳಗೊಂಡ ನ್ಯಾಯಪೀಠಕ್ಕೆ ಸರ್ಕಾರ ತಿಳಿಸಿದೆ.

ಕೇರಳ ಮಾತ್ರವಲ್ಲದೆ ಅನೇಕ ರಾಜ್ಯಗಳಲ್ಲಿ ಈ ಆನ್​ಲೈನ್​ ಜೂಜಾಟವನ್ನು ನಿಷೇಧಿಸಬೇಕೆಂಬ ಕೂಗು ಕೇಳಿಬಂದಿದೆ. ಕರ್ನಾಟಕದಲ್ಲೂ ಅನೇಕರು ಈ ಕುರಿತಾಗಿ ದನಿ ಎತ್ತಿದ್ದಾರೆ. (ಏಜೆನ್ಸೀಸ್​)

ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net