

ಬೆಂಗಳೂರು: ರಾಜ್ಯದಲ್ಲೂ ಆನ್‌ಲೈನ್ ಗೇಮ್‌ಗೆ ನಿಷೇಧ ನಿಶ್ಚಿತ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವರು, ಆನ್‌ಲೈನ್ ಗೇಮ್ ಸಹವಾಸದಿಂದ ಯುವಕರು ಮನೆ, ಆಸ್ತಿ-ಪಾಸ್ತಿ ಕಳೆದುಕೊಂಡು ಬೀದಿಗೆ ಬಂದಿದ್ದಾರೆ. ಕೆಲ ಪೋಷಕರು ಹಾಗೂ ಸಾರ್ವಜನಿಕರು ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಲಿಖಿತ ದೂರು ನೀಡಿದ್ದಾರೆ. ಆನ್‌ಲೈನ್ ಗೇಮ್ಗಳಿಂದಾಗಿ ಯುವಕರು ಕಾನೂನು ಬಾಹಿರ ಚಟುವಟಿಕೆಯಲ್ಲೂ ತೊಡಗಿದ್ದಾರೆ. ಇದಕ್ಕೆ ಕಡಿವಾಣ ಹಾಕದಿದ್ದರೆ ಯುವಜನತೆಯನ್ನು ಕಳೆದುಕೊಳ್ಳಬೇಕಾಗುತ್ತೆ. ಹಾಗಾಗಿ ಆನ್‌ಲೈನ್ ಗೇಮ್ ನಿಷೇಧಿಸಲು ಮುಂದಾಗಿದ್ದೇವೆ. ಈ ಸಂಬಂಧ ಶೀಘ್ರವೇ ಹೊಸ ಕಾನೂನು ಜಾರಿಗೆ ಬರಲಿದೆ ಎಂದು ತಿಳಿಸಿದರು.
ಡ್ರಗ್ ಪ್ರಕರಣದ ತನಿಖೆ ಮುಂದುವರಿದಿದೆ. ಪೊಲೀಸರು ನಿಷ್ಪಕ್ಷಪಾತ ಹಾಗೂ ನಿರ್ಭೀತಿಯಿಂದ ತನಿಖೆ ನಡೆಸುತ್ತಿದ್ದಾರೆ. ಹಿಂದಿನ ಯಾವುದೇ ಸರ್ಕಾರಗಳು ತೆಗೆದುಕೊಳ್ಳದಿರುವ ದಿಟ್ಟ ಕ್ರಮಗಳನ್ನು ನಮ್ಮ ಸರ್ಕಾರ ತೆಗೆದುಕೊಂಡಿದೆ. ಈ ಪ್ರಕರಣದಲ್ಲಿ ಯಾರೇ ಭಾಗಿಯಾಗಿದ್ದರೂ ಅವರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ. ನಿಷ್ಪಕ್ಷಪಾತ ತನಿಖೆಯಿಂದಾಗಿ ಘಟಾನುಘಟಿಗಳು ಜೈಲು ಪಾಲಾಗಿದ್ದಾರೆ ಎಂದು ಪುನರುಚ್ಛರಿಸಿದರು.
ಪ್ರತಿದಿನ ಒಂದಿಲ್ಲೊಂದು ಹೊಸ ಹೊಸ ಎಫ್ಐಆರ್ ದಾಖಲಾಗುತ್ತಲೇ ಇವೆ. ಇದು ನಿರಂತರ ಪ್ರಕ್ರಿಯೆಯಾಗಿದ್ದು, ತಾರ್ಕಿಕ ಅಂತ್ಯ ಕಾಣುವವರೆಗೂ ತನಿಖೆಯನ್ನು ನಿಲ್ಲಿಸುವುದಿಲ್ಲ. ಪೊಲೀಸರಿಗೆ ಮುಕ್ತ ಸ್ವಾತಂತ್ರ್ಯ ನೀಡಲಾಗಿದೆ. ಇದರಿಂದಾಗಿಯೇ ಅನೇಕರು ಜೈಲು ಕಂಬಿ ಎಣಿಸುತ್ತಿದ್ದಾರೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.