ಕೇವಲ ಒಂದು ದೂರವಾಣಿ ಕರೆಯಲ್ಲಿ 1.2 ಕೋಟಿ ರೂ. ಲಪಟಾಯಿಸಿದ ವಂಚಕರು! ವೃದ್ಧೆ ಕಣ್ಣೀರು

ವಿಜಯವಾಣಿ - 2024-07-22T184703.863
Published on

ಬೆಂಗಳೂರು: ದಿನದಿಂದ ದಿನಕ್ಕೆ ಇಂತಹ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಜನಸಾಮಾನ್ಯರು ಕಳ್ಳರ ಮೋಸದ ಜಾಲಕ್ಕೆ ಸಿಲುಕಿ, ಕೋಟ್ಯಾಂತರ ರೂಪಾಯಿಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಇದೀಗ ಇದೇ ರೀತಿಯ ಪ್ರಕರಣವೊಂದು ತಡವಾಗಿ ಬೆಳಕಿಗೆ ಬಂದಿದ್ದು, ಸೈಬರ್ ವಂಚನೆಗೆ 77 ವರ್ಷದ ವೃದ್ಧೆಯೊಬ್ಬರು ತುತ್ತಾಗಿರುವ ಘಟನೆ ಬೆಂಗಳೂರಿನಲ್ಲಿ ವರದಿಯಾಗಿದೆ.

ಜೂನ್ 26ರಂದು ಬೆಂಗಳೂರಿನ ನಿವಾಸಿಯಾದ ಲಕ್ಷ್ಮೀ ಶಿವಕುಮಾರ್​​ಅವರಿಗೆ ದೂರಸಂಪರ್ಕ ಇಲಾಖೆಯ ಪ್ರತಿನಿಧಿಯೆಂದು ಅಪರಿಚಿತ ವ್ಯಕ್ತಿಯೊಬ್ಬ ದೂರವಾಣಿ ಕರೆ ಮಾಡಿದ್ದಾನೆ. ಆ ವ್ಯಕ್ತಿಯು ವೃದ್ಧೆಯ ಹೆಸರಿನಲ್ಲಿ ಸಿಮ್ ಕಾರ್ಡ್​ ಖರೀದಿಸಿ ಹಲವಾರು ದಿನಗಳಿಂದ ಅಕ್ರಮ ಕೆಲಸಕ್ಕಾಗಿ ಬಳಸಿಕೊಳ್ಳುತ್ತಿದ್ದ. ಕರೆ ಮಾಡಿದ ಕಿರಾತಕ, ನೀವು 60 ಕೋಟಿ ರೂಪಾಯಿ ಅಕ್ರಮ ಹಣವನ್ನು ಹೊಂದಿರುವುದರಿಂದ ನಿಮ್ಮ ಮೇಲೆ ಪ್ರಕರಣ ದಾಖಲಾಗಿದೆ. ಹೆಚ್ಚಿನ ತನಿಖೆಗಾಗಿ ಈ ಕೇಸ್​ ಅನ್ನು ದೂರಸಂಪರ್ಕ ಇಲಾಖೆಯು ಮುಂಬೈ ಕ್ರೈಂ ಬ್ರಾಂಚ್​ಗೆ ಹಸ್ತಾಂತರಿಸಿದೆ ಎಂದು ಬೆದರಿಕೆ ಹಾಕುತ್ತಾನೆ.

ಈ ಕರೆ ಬಂದ 5 ಗಂಟೆಗಳ ಬಳಿಕ ಮತ್ತೊಂದು ಅಪರಿಚಿತ ವ್ಯಕ್ತಿಯಿಂದ ದೂರವಾಣಿ ಕರೆ ಬಂದಿದ್ದು, ನಾವು ಮುಂಬೈ ಕ್ರೈಂ ಬ್ರಾಂಚ್​ನ ಅಧಿಕಾರಿಗಳಾದ ಸಂದೀಪ್ ರಾವ್ ಮತ್ತು ಆಕಾಶ್ ಕುಲ್ಹರಿ ಎಂದು ಪರಿಚಯಿಸಿಕೊಳ್ಳುತ್ತಾರೆ. ನಿಮ್ಮ ಮೇಲೆ ಕೇಸ್ ದಾಖಲಾಗಿದೆ ಎಂದು ಸುಳ್ಳು ಪುರಾವೆ ಮತ್ತು ಎಫ್ಐಆರ್ ದಾಖಲೆಗಳನ್ನು ತೋರಿಸಿ, ವೃದ್ಧೆಯಲ್ಲಿ ಆತಂಕ ಮೂಡಿಸಿದ್ದಾರೆ. ಇದನ್ನು ನಂಬಿದ ಸಂತ್ರಸ್ತೆ ತಕ್ಷಣವೇ ಕಿಡಿಗೇಡಿಗಳು ಕೇಳಿದ ಎಲ್ಲಾ ಬ್ಯಾಂಕ್ ದಾಖಲೆಗಳನ್ನು ಕೊಟ್ಟಿದ್ದಾರೆ.

ನಂತರ ಕೆಲವೇ ನಿಮಿಷಗಳಲ್ಲಿ ವೃದ್ಧೆಯ ಬ್ಯಾಂಕ್ ಖಾತೆಯಲ್ಲಿದ್ದ 1,28,70,000 ರೂ. ಹಣವನ್ನು ವಂಚನೆಕೋರರು ಬೇರೊಂದು ಖಾತೆಗೆ ವರ್ಗಾಯಿಸಿದ್ದಾರೆ. ಈ ಹಣ ತನಿಖೆ ಮುಗಿದ ಬಳಿಕ ನಿಮಗೆ ಹಿಂತಿರುಗಿಸುತ್ತೇವೆ ಎಂದು ಹೇಳಿ ಕಾಲ್ ಕಟ್ಟ ಮಾಡಿದ್ದಾರೆ. ಈ ಘಟನೆ ನಡೆದು ಕೆಲವು ಗಂಟೆಗಳು ಕಳೆದರೂ ಸಹ ಅಪರಿಚಿತರಿಂದ ಯಾವುದೇ ಕರೆ ಬರದೆ ಇದ್ದಾಗ ವೃದ್ಧೆ ತಾನು ವಂಚನೆಗೆ ಬಲಿಯಾಗಿದ್ದೇನೆ ಎಂಬುದನ್ನು ಅರಿತುಕೊಂಡಿದ್ದಾರೆ. ತಕ್ಷಣವೇ ತನ್ನ ಕುಟುಂಬಸ್ಥರಿಗೆ ಮಾಹಿತಿ ನೀಡಿದ ಅವರು, ಸ್ಥಳೀಯ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net