

ವಾಷಿಂಗ್ಟನ್: ಈಗೆಲ್ಲ ಆನ್ಲೈನ್ ಕಾಲ. ಏನು ಬೇಕಿದ್ದರೂ ಆನ್ಲೈನ್ನಲ್ಲಿ ಆರ್ಡರ್ ಮಾಡಿದರೆ ಮುಗಿದುಹೋಯಿತು. ಇದೇ ಯೋಚನೆಯಲ್ಲಿ ನೀವೂ ಇದ್ದರೆ ಒಮ್ಮೆ ಈ ಸ್ಟೋರಿ ಓದಿ. ನೀವು ಯಾವ ರೀತಿಯಲ್ಲಿ ಮೋಸ ಹೋಗುತ್ತೀರಿ ಎನ್ನುವುದಕ್ಕೆ ಇಲ್ಲಿದೆ ನೈಜ ಉದಾಹರಣೆ.
ಅಮೆರಿಕದ ಪ್ರಜೆ ಆಬ್ರೆ ಅವರಿಗೆ ಇನ್ನು ಕೆಲ ದಿನಗಳಲ್ಲಿ ಮದುವೆ ನಿಶ್ಚಯವಾಗಿದೆ. ಮದುವೆಗೆಂದು ಆಕೆ ಆನ್ಲೈನ್ನಲ್ಲಿ ವೆಡ್ಡಿಂಗ್ ಡ್ರೆಸ್ ಆರ್ಡರ್ ಮಾಡಿದ್ದರು. ನಿಗದಿತ ದಿನಾಂಕಕ್ಕೆ ಸರಿಯಾಗಿ ವೆಡ್ಡಿಂಗ್ ಡ್ರೆಸ್ ಮನೆಗೆ ಬಂದಿದೆ. ಆದರೆ ಅದನ್ನು ನೋಡಿದ ಆಬ್ರೆ ಗಾಬರಿಯಾಗಿದ್ದಾರೆ. ತಾನು ಆರ್ಡರ್ ಮಾಡಿದ ಡ್ರೆಸ್ಗೂ, ಮನೆಗೆ ಬಂದ ಡ್ರೆಸ್ಗೂ ಯಾವುದೇ ಸಂಬಂಧವೇ ಇಲ್ಲವೆನ್ನುವುದು ಅವರಿಗೆ ತಿಳಿದುಬಂದಿದೆ.
ಇದರಿಂದಾಗಿ ಸಿಟ್ಟಿಗೆದ್ದ ಆಬ್ರೆ, ತಾನು ಬಟ್ಟೆ ಆರ್ಡರ್ ಮಾಡಿದ್ದ ಸಂಸ್ಥೆಗೆ ಸಿಟ್ಟಿನಿಂದ ಮೇಲ್ ಮಾಡಿದ್ದಾರೆ. ನೀವು ಇದೇನಾ ಕೆಲಸ ಮಾಡುವುದು ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಆದರೆ ಈ ಮೇಲ್ಗೆ ಬಂದ ಪ್ರತಿಕ್ರಿಯೆ ಮಾತ್ರ ಆಬ್ರೆಯನ್ನು ನಗೆಪಾಟಲಿಗೆ ಸಿಲುಕುವಂತೆ ಮಾಡಿದೆ.
ವೆಡ್ಡಿಂಗ್ ಡ್ರೆಸ್ ಆಬ್ರೆ ಮನೆಗೆ ಡೆಲಿವರಿಯಾದಾಗ ಅದು ಮಗಚಿತ್ತಂತೆ. ಅದನ್ನು ಗಮನಿಸದ ಆಬ್ರೆ ಹಾಗೇ ತೊಟ್ಟು, ಡ್ರೆಸ್ ಸರಿಯಿಲ್ಲವೆಂದು ದೂರು ನೀಡಿದ್ದಾರೆ. ಅದನ್ನು ಕಂಡ ಸಂಸ್ಥೆ ನೀವು ಡ್ರೆಸ್ ಅನ್ನು ಸರಿಯಾಗಿ ಹಾಕಿಕೊಳ್ಳಿ ಎಂದು ಪ್ರತಿಕ್ರಿಯಿಸಿದೆ. ಡ್ರೆಸ್ ಅನ್ನು ಮಗಚಿ ಹಾಕಿಕೊಂಡಾಗ ಅದು ಅವರಿಗೆ ಅತ್ಯುತ್ತಮವಾಗಿ ಕಾಣಿಸಿದೆಯಂತೆ. ಈ ವಿಚಾರವನ್ನು ಸ್ವತಃ ಆಬ್ರೆ ಅವರೇ ಫೇಸ್ಬುಕ್ನಲ್ಲಿ ಹಾಕಿಕೊಂಡಿದ್ದಾರೆ. ನನಗೆ 33 ವರ್ಷವಾದರೂ ಕೆಲವೊಮ್ಮೆ ಈ ರೀತಿ ಕಾಮನ್ಸೆನ್ಸ್ ಕೈ ಕೊಡುತ್ತದೆ ಎಂದು ತಮ್ಮ ಕಾಲನ್ನು ತಾವೇ ಎಳೆದುಕೊಂಡಿದ್ದಾರೆ. (ಏಜೆನ್ಸೀಸ್)