

ಬೆಂಗಳೂರು: ಆನ್‍ಲೈನ್ ಶಿಕ್ಷಣ ನಿರ್ವಹಣೆಗೆ ಸಂಬಂಧಿಸಿದಂತೆ ಪೋಷಕರ ಮತ್ತು ಸಾರ್ವಜನಿಕರ ಯಾವುದೇ ದೂರುಗಳಿದ್ದರೂ ಶಿಕ್ಷಣ ಇಲಾಖೆಯ ಶಿಕ್ಷಣವಾಣಿ-ಸಾರ್ವಜನಿಕ ಸಹಾಯವಾಣಿಗೆ ಕರೆ ಮಾಡಬಹುದು ಎಂದು ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.
ಶಿಕ್ಷಣವಾಣಿ-ಸಹಾಯವಾಣಿಗೆ (18004257302) ಇಲ್ಲವೇ ಸಹಾಯವಾಣಿ ವಾಟ್ಸ್ಆ್ಯಪ್ ನಂಬರ್ 9483045130 ಗೆ ಪೋಷಕರು ಕರೆ ಮಾಡಿ ಆನ್‍ಲೈನ್ ಶಿಕ್ಷಣ ನಿರ್ವಹಣೆ ಕುರಿತ ದೂರುಗಳನ್ನು ತಿಳಿಸಬಹುದು. ಇಂತಹ ದೂರುಗಳನ್ನು ನಿರ್ವಹಿಸಲು ಕೂಡಲೇ ಆಯುಕ್ತರ ಕಚೇರಿ ಮತ್ತು ಜಿಲ್ಲಾ ಮಟ್ಟದಲ್ಲಿ ಉಪನಿರ್ದೇಶಕರ ಹಂತದಲ್ಲಿ ಒಬ್ಬೊಬ್ಬ ನೋಡಲ್ ಅಧಿಕಾರಿಯನ್ನು ನೇಮಿಸಬೇಕು. ಬೆಂಗಳೂರು, ಕಲಬುರಗಿ, ಬೆಳಗಾವಿ, ಮಂಗಳೂರು, ಹುಬ್ಬಳ್ಳಿ-ಧಾರವಾಡ ಸೇರಿದಂತೆ ಹಲವು ನಗರ ಕೇಂದ್ರಿತ ಪ್ರದೇಶಗಳಲ್ಲಿ ಇಂತಹ ದೂರು ಹೆಚ್ಚಾಗಿರುವುದರಿಂದ ಅಧಿಕಾರಿಗಳು ಆನ್‍ಲೈನ್ ಶಿಕ್ಷಣದಲ್ಲಿನ ಸಮಸ್ಯೆ ಮತ್ತು ದೂರುಗಳನ್ನು ಪರಿಶೀಲಿಸಿ ಸಾರ್ವಜನಿಕರಿಗೆ ಪರಿಹಾರ ಸೂಚಿಸಬೇಕು ಎಂದು ಇಲಾಖೆ ಆಯುಕ್ತರಿಗೆ ಸಚಿವರು ಸಲಹೆ ನೀಡಿದರು.
ತಜ್ಞರ ಸಮಿತಿ ನಿಗದಿಪಡಿಸಿರುವ ಸಮಯದಷ್ಟೇ ಆನ್‍ಲೈನ್ ತರಗತಿ ನಿರ್ವಹಿಸಬೇಕು. ಇದು ಎಲ್ಲ ಶಾಲೆಗಳಿಗೂ ಅನ್ವಯ. ಬಿಇಒಗಳು ಆನ್‍ಲೈನ್ ತರಗತಿಗಳ ಬಗ್ಗೆ ಪರಾಮರ್ಶೆ ಮಾಡಬೇಕು. ಆನ್‍ಲೈನ್ ತರಗತಿಯಿಂದ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಯುಕ್ತರಿಗೆ ಸುರೇಶ್ ಕುಮಾರ್ ಸೂಚಿಸಿದರು.
ಕೇಂದ್ರದ ನೂತನ ಶಿಕ್ಷಣ ನೀತಿಯನ್ನು ಅನುಷ್ಠಾನಗೊಳಿಸುವಲ್ಲಿ ಕರ್ನಾಟಕ ಇಡೀ ರಾಷ್ಟ್ರದಲ್ಲಿ ಮೊದಲ ರಾಜ್ಯವಾಗಲಿದೆ. ರಾಜ್ಯದಲ್ಲಿ ನೂತನ ಶಿಕ್ಷಣ ನೀತಿ ಅಳವಡಿಕೆಗೆ ಸಂಬಂಧಿಸಿದಂತೆ ನೇಮಿಸಲಾದ ತಜ್ಞರ ಸಮಿತಿ ನ.7ರಂದು ಸರ್ಕಾರಕ್ಕೆ ವರದಿ ಸಲ್ಲಿಸಲಿದೆ ಎಂದು ಸುರೇಶ್ ಕುಮಾರ್ ತಿಳಿಸಿದರು.