Online Betting: ಚಟಕ್ಕೆ ಬಿದ್ದು ಲಕ್ಷಾಂತರ ರೂ ಸಾಲಗಾರನಾದ ಪುತ್ರನ ಜತೆ ಅಪ್ಪ, ಅಮ್ಮನೂ ಆತ್ಮಹತ್ಯೆ!

Online Betting
Published on

ನಿಜಾಮಾಬಾದ್: ಇತ್ತೀಚೆಗೆ ಆನ್‌ಲೈನ್ ಬೆಟ್ಟಿಂಗ್(Online Betting) ಚಟ ಹೆಚ್ಚುತ್ತಿದ್ದು, ಯುವಕರು ಲಕ್ಷಾಂತರ ರೂ.ಕಳೆದುಕೊಳ್ಳುತ್ತಿದ್ದಾರೆ. ಅವರ ಕುಟುಂಬಗಳನ್ನೂ ದುಃಖದ ಮಡುವಿಗೆ ದೂಡುತ್ತಿದ್ದಾರೆ. ಇತ್ತೀಚೆಗಷ್ಟೇ ತೆಲಂಗಾಣದ ನಿಜಾಮಾಬಾದ್ ಜಿಲ್ಲೆಯಲ್ಲಿ ಇಂತಹದೊಂದು ದುರ್ಘಟನೆ ನಡೆದಿದೆ. ಇಡೀ ಕುಟುಂಬ ನಾಶವಾಗಿ ಹೋಗಿದೆ. ಮಗನ ಆನ್​ಲೈನ್​ ಚಟಕ್ಕೆ ಸರ್ವಸ್ವವನ್ನೂ ಕಳೆದುಕೊಂಡ ತಂದೆ ತಾಯಿ ಕಡೆಗೆ ಆತನೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಎಡಪಲ್ಲಿ ಮಂಡಲದ ವಡ್ಡೆಪಲ್ಲಿಯ ಕೃಷಿಕ ಸುರೇಶ್, ಆತನ ಪತ್ನಿ ಹೇಮಲತಾ ಪುತ್ರ ಹರೀಶ್ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಗಳು.

ಹರೀಶ್ ಓದಿಗಾಗಿ ಸುರೇಶ್​ ಮತ್ತು ಆತನ ಪತ್ನಿ ಸಾಕಷ್ಟು ಹಣ ಖರ್ಚು ಮಾಡಿದ್ದರು. ಆದರೆ ಸದಾ ಫೋನ್‌ನಲ್ಲಿ ಮುಳುಗಿರುತ್ತಿದ್ದ ಹರೀಶ್​, ಸುಲಭವಾಗಿ ಹಣ ಸಂಪಾದಿಸುವುದಾಗಿ ಆನ್‌ಲೈನ್ ಬೆಟ್ಟಿಂಗ್ ಗೆ ಆಕರ್ಷಿತನಾಗಿದ್ದ. ಬರಬರುತ್ತ ಆನ್​ಲೈನ್​ ಬೆಟ್ಟಿಂಗ್​ ಗೆ ವ್ಯಸನಿಯಾದ. ಅವನಿಗೆ ಅದನ್ನು ಆಡುವುದನ್ನು ನಿಲ್ಲಿಸಲಾಗಲಿಲ್ಲ. ಹೀಗಾಗಿ ನೂರಾರು, ಸಾವಿರ, ಲಕ್ಷ ಬಂಡವಾಳ ಹಾಕಿ ಸಾಲ ಮಾಡಿಕೊಂಡಿದ್ದಾನೆ. ವಿಷಯ ತಿಳಿದ ಪೋಷಕರು ಮಗ ಹರೀಶ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆದರೆ ಹರೀಶ್​ ಆ ವೇಳೆಗಾಗಲೇ 30 ಲಕ್ಷ ರೂ.ಸಾಲ ಮಾಡಿಕೊಂಡಿದ್ದ. ಇದು ತಿಳಿದು ಸಾಲ ತೀರಿಸಲು ತನ್ನ ಜಮೀನಿನಲ್ಲಿ ಒಂದಿಷ್ಟು ಮಾರಾಟ ಮಾಡಿದ. ಆದರೆ ಸಾಲ ತೀರಲಿಲ್ಲ. ಮತ್ತೊಂದೆಡೆ ಸಾಲ ನೀಡಿದವರಿಂದ ಕಿರುಕುಳ ಹೆಚ್ಚಿದೆ. ಮಾಡಲು ಏನೂ ತೋಚದೆ ಎಲ್ಲರೂ ಸೇರಿ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ.

ಅದರಂತೆ ಹರೀಶ್​ ಮತ್ತು ಆತನ ತಂದೆ, ತಾಯಿ ಮನೆಯಲ್ಲಿ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾರೆ. ಇದರಿಂದ ಗ್ರಾಮದಲ್ಲಿ ತೀವ್ರ ದುಃಖ ಮಡುಗಟ್ಟಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆನ್ ಲೈನ್ ಬೆಟ್ಟಿಂಗ್ ಗೆ ಯಾರೂ ಮುಂದಾಗಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net