

ನವದೆಹಲಿ: ತಾವು ಬಹುಪಕ್ಷೀಯ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದೇವೆಯೇ ಹೊರತು ಭಾರತ-ಪಾಕ್(India - Pak) ಸಂಬಂಧದ ಬಗ್ಗೆ ಮಾತನಾಡುವುದಿಲ್ಲ ಎಂದು ವಿದೇಶಾಂಗ ಸಚಿವ ಜೈಶಂಕರ್ ಹೇಳಿದ್ದಾರೆ.
ಶಾಂಘೈ ಸಹಕಾರ ಸಂಘಟನೆ (ಎಸ್ಸಿಒ) ಸಭೆಗಾಗಿ ಇದೇ ತಿಂಗಳ 15 ಮತ್ತು 16 ರಂದು ಪಾಕಿಸ್ತಾನಕ್ಕೆ ತೆರಳಲಿರುವ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಎಸ್ಸಿಒ ಸದಸ್ಯನಾಗಿ ಅಲ್ಲಿಗೆ ಹೋಗುತ್ತಿದ್ದೇನೆ. ಸಭ್ಯ ನಾಗರಿಕನಾಗಿದ್ದು, ಅದರಂತೆ ನಡೆದುಕೊಳ್ಳುತ್ತೇನೆ ಎಂದು ಹೇಳಿದರು
ಸಾರ್ಕ್ ಕಾರ್ಯಕ್ರಮಗಳು ಮುಂದುವರಿಯುತ್ತಿಲ್ಲ ಮತ್ತು ಸಾರ್ಕ್ನ ಒಂದು ಸದಸ್ಯ ರಾಷ್ಟ್ರವು ಆ ಗುಂಪಿಗೆ ಸೇರಿದ ಮತ್ತೊಂದು ದೇಶದ ವಿರುದ್ಧ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸುತ್ತಿದೆ. ಆ ಕಾರಣದಿಂದಲೇ ಇತ್ತೀಚಿನ ದಿನಗಳಲ್ಲಿ ಸಾರ್ಕ್ ಸಭೆಗಳು ನಡೆಯುತ್ತಿಲ್ಲ ಎಂದು ಪಾಕ್ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
ಹೀಗಿದ್ದರೂ ಪ್ರಾದೇಶಿಕ ಚಟುವಟಿಕೆಗಳು ಸಂಪೂರ್ಣವಾಗಿ ನಿಂತಿಲ್ಲ. ಭಾರತೀಯ ಉಪಖಂಡದಲ್ಲಿ ಕಳೆದ ಐದು ವರ್ಷಗಳಲ್ಲಿ ಪ್ರಾದೇಶಿಕ ಏಕೀಕರಣ ಹೆಚ್ಚಾಗಿದೆ. ಆದರೆ, ಕಳೆದ ಒಂಬತ್ತು ವರ್ಷಗಳಲ್ಲಿ ಭಾರತದ ವಿದೇಶಾಂಗ ಸಚಿವರು ಪಾಕಿಸ್ತಾನಕ್ಕೆ ಹೋಗುತ್ತಿರುವುದು ಇದೇ ಮೊದಲು. ಪಾಕಿಸ್ತಾನವು ಈ ಬಾರಿ ಎಸ್ಸಿಒ ಕೌನ್ಸಿಲ್ ಆಫ್ ಹೆಡ್ಸ್ ಆಫ್ ಗವರ್ನಮೆಂಟ್ (ಸಿಎಚ್ಜಿ) ಸಭೆ ಆಯೋಜಿಸುತ್ತಿದೆ.