ಕೆಜಿಗೆ ರೂ. 60ಕ್ಕೆ ಇಳಿದ ಈರುಳ್ಳಿ: 30 ಸಾವಿರ ಚೀಲ ಉಳ್ಳಾಗಡ್ಡಿ ಆವಕ, ಹೊಸ ವರ್ಷಕ್ಕೆ ಗ್ರಾಹಕರು ನಿರಾಳ

ONION
Published on

ಬೆಂಗಳೂರು: ಯಶವಂತಪುರ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಮಂಗಳವಾರ ಈರುಳ್ಳಿ ಧಾರಣೆಯಲ್ಲಿ ಇಳಿಕೆ ಕಂಡುಬಂದಿದೆ. ಕಳೆದ ವಾರ ಕೆ.ಜಿಗೆ 100-120 ರೂ. ತಲುಪಿದ್ದ ಉತ್ತಮ ಗುಣಮಟ್ಟದ ಈರುಳ್ಳಿ ದರ ಕೆ.ಜಿ ಗೆ 60 ರಿಂದ 65 ರೂ.ಗೆ ಇಳಿಕೆಯಾಗಿದೆ. ಒಂದೇ ದಿನ ಮಾರುಕಟ್ಟೆಗೆ 30 ಸಾವಿರಕ್ಕೂ ಹೆಚ್ಚು ಚೀಲ ಈರುಳ್ಳಿ ಆವಕವಾಗಿರುವುದು ಇದಕ್ಕೆ ಕಾರಣ ಎನ್ನಲಾಗಿದೆ.

ಇದಲ್ಲದೆ, ಜನವರಿಯಲ್ಲಿ ಮಹಾರಾಷ್ಟ್ರದಿಂದ ಹೊಸ ಬೆಳೆ ಅಧಿಕ ಪ್ರಮಾಣದಲ್ಲಿ ಆವಕವಾಗುವ ಸಾಧ್ಯತೆ ಇದೆ. ಈ ಎಲ್ಲ ಕಾರಣಗಳು ಈರುಳ್ಳಿ ಬೆಲೆ ಇಳಿಯುವಂತೆ ಮಾಡಿರುವುದಾಗಿ ಹೇಳಲಾಗುತ್ತಿದೆ.

ಯಶವಂತಪುರ ಮಾರುಕಟ್ಟೆ ಹೊರತುಪಡಿಸಿ ಚಿಲ್ಲರೆ ವ್ಯಾಪಾರಸ್ಥರು ಸಾಧಾರಣ ಗುಣಮಟ್ಟದ ಈರುಳ್ಳಿಗೆ ಕೆ.ಜಿ ಗೆ -ಠಿ;80 ರಿಂದ 90ರವರೆಗೆ ಮಾರಾಟ ಮಾಡುತ್ತಿದ್ದಾರೆ. ಹಾಪ್​ಕಾಮ್ಸ್​ನಲ್ಲಿ ಉತ್ತಮ ಗುಣಮಟ್ಟದ ದಪ್ಪ ಈರುಳ್ಳಿ ಕೆ.ಜಿ.ಗೆ 119 ರೂ.ಇದೆ. ಸಾಧಾರಣ 110 ರೂ.ಗೆ ಮಾರಾಟವಾಗುತ್ತಿದೆ. ಚಿಲ್ಲರೆ ವ್ಯಾಪಾರಸ್ಥರಿಗೆ ಕಳಪೆ ಗುಣಮಟ್ಟದ (ಗೊಲ್ಟಾ ಗೋಲ್ಟಿ )ಈರುಳ್ಳಿಯನ್ನು ಕೆ.ಜಿ.ಗೆ -ಠಿ;20ರಿಂದ 45ರವರೆಗೆ ಮಾರಲಾಗುತ್ತಿದೆ.

ಹೊರದೇಶದ ಈರುಳ್ಳಿಗೂ ಬೇಡಿಕೆಯಿಲ್ಲ: ಎಪಿಎಂಸಿ ಮಾರುಕಟ್ಟೆಯಲ್ಲಿ ಟರ್ಕಿ ಈರುಳ್ಳಿ (ಹಳದಿ) ಕೆ.ಜಿ ಗೆ 20ರಿಂದ 40 ರೂ. ಇದ್ದರೆ, ಈಜಿಪ್ಟ್ ಈರುಳ್ಳಿ (ಕೆಂಪು) ಕೆ.ಜಿ ಗೆ 40 ರಿಂದ 45 ರೂ. ಮಾರಾಟ ಮಾಡಲಾಗುತ್ತಿದೆ. ಹೊರ ದೇಶದಿಂದ ಮಾರುಕಟ್ಟೆಗೆ 15 ಲಾರಿ ಲೋಡ್ ಈರುಳ್ಳಿ ಆವಕವಾಗಿದೆ. ಆದರೆ ಇದಕ್ಕೆ ಬೇಡಿಕೆಯಿಲ್ಲ ಎಂದು ಯಶವಂತಪುರ ಎಪಿಎಂಸಿ ಮಾರುಕಟ್ಟೆ ವರ್ತಕರು ತಿಳಿಸಿದ್ದಾರೆ.

ಕೃಷಿ ಉತ್ಪನ್ನ ಮಾರುಕಟ್ಟೆಗೆ ಈಜಿಪ್ಟ್, ಟರ್ಕಿ, ಮಹಾರಾಷ್ಟ್ರ ಮತ್ತು ರಾಜ್ಯದ ವಿವಿಧ ಭಾಗಗಳಿಂದ ಮಂಗಳವಾರ 150 ಲಾರಿಗೂ ಹೆಚ್ಚು (ಅಂದಾಜು 30 ಸಾವಿರ ಚೀಲ) ಈರುಳ್ಳಿ ಆವಕವಾಗಿದೆ. ಜನವರಿ ಮೊದಲ ವಾರದಲ್ಲಿ ಮಹಾರಾಷ್ಟ್ರದಿಂದ ಹೊಸ ಬೆಳೆ ಬರಲಿದೆ. ಹೀಗಾಗಿ ಈರುಳ್ಳಿ ದರ ಇಳಿಕೆಯಾಗಿದೆ. | ರವಿಶಂಕರ್ ಯಶವಂತಪುರ ಎಪಿಎಂಸಿಯ ಆಲೂಗಡ್ಡೆ-ಈರುಳ್ಳಿ ವರ್ತಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net