

ಬೆಂಗಳೂರು: ದೇಶಾದ್ಯಂತ ಟೊಮ್ಯಾಟೊ ಬೆಲೆ ಗಗನಮುಖಿಯಾಗಿದೆ. ಕೆಲವು ಪ್ರದೇಶಗಳಲ್ಲಿ ಟೊಮ್ಯಾಟೊ ಬೆಲೆ ಕೆಜಿಗೆ 120 ರೂ. ಇತರೆಡೆ 200ರೂ.ಗಿಂತ ಹೆಚ್ಚು. ಹವಾಮಾನವು ಅನುಕೂಲಕರವಾಗಿರುವ ಪ್ರದೇಶಗಳಲ್ಲಿ ದರ ಸ್ವಲ್ಪ ಕಡಿಮೆಯಿದೆ. ಇದೀಗ ಭಾರತದಲ್ಲಿ ಈರುಳ್ಳಿ ಬೆಲೆ ಹೆಚ್ಚಾಗುವ ನಿರೀಕ್ಷೆ ಇದೆ. ಪ್ರಸ್ತುತ ದೇಶದ ವಿವಿಧ ಭಾಗಗಳಲ್ಲಿ ಒಂದು ಕೆಜಿ ಈರುಳ್ಳಿ ಬೆಲೆ ರೂ. 25 ರಿಂದ ರೂ. 32 ರವರೆಗೆ ಇದೆ. ಆದರೆ ಈ ದರ ದ್ವಿಗುಣಗೊಳ್ಳುವ ಲಕ್ಷಣಗಳಿವೆ.
ಈರುಳ್ಳಿ ದರ ಏರಿಕೆ ಏಕೆ?
Crisil ನಡೆಸಿದ ಸಂಶೋಧನೆ ಈರುಳ್ಳಿ ಬೆಲೆ ಹೆಚ್ಚಾಗುವುದು ನಿಜ ಎನ್ನುತ್ತದೆ. 'ಕ್ರಿಸಿಲ್ ಮಾರ್ಕೆಟ್ ಇಂಟೆಲಿಜೆನ್ಸ್ ಮತ್ತು ಅನಾಲಿಟಿಕ್ಸ್' ವರದಿಯ ಪ್ರಕಾರ, ಈ ತಿಂಗಳ ಅಂತ್ಯದ ವೇಳೆಗೆ ಚಿಲ್ಲರೆ ಮಾರುಕಟ್ಟೆಯಲ್ಲಿ ಈರುಳ್ಳಿ ದರ ಕ್ರಮೇಣ ಹೆಚ್ಚಾಗುವ ಸಾಧ್ಯತೆಯಿದೆ. ಮುಂದಿನ ತಿಂಗಳು (ಸೆಪ್ಟೆಂಬರ್) ಈರುಳ್ಳಿ ಬೆಲೆ ಹೆಚ್ಚಾಗಬಹುದು. ಈರುಳ್ಳಿ ಪೂರೈಕೆ ಕೊರತೆಯೇ ಇದಕ್ಕೆ ಕಾರಣ. ಇದರಿಂದಾಗಿ ಮುಂದಿನ ತಿಂಗಳು ಈರುಳ್ಳಿ ಬೆಲೆ ಕೆಜಿಗೆ 60 ರಿಂದ 70 ರೂ.ಗೆ ಏರಿಕೆಯಾಗುವ ಸಾಧ್ಯತೆ ಇದೆ.
ಸಣ್ಣ ರಿಲೀಫ್
ಈರುಳ್ಳಿ ದರ ಹೆಚ್ಚಾಗಲಿದೆ ಎಂದು ಶಾಕ್ ನೀಡಿದ ಕ್ರಿಸಿಲ್ ಕೂಡ ಸಣ್ಣ ರಿಲೀಫ್ ನೀಡಿದೆ. ಈ ಬಾರಿ ಈರುಳ್ಳಿ ದರ 200 ರೂ. ಮಟ್ಟಕ್ಕೆ ಹೋಗುವುದಿಲ್ಲ ಎಂಬುದು ಸ್ಪಷ್ಟವಾಗಿದೆ.
ಮತ್ತೆ ಇಳಿಯಲಿದೆ ಈರುಳ್ಳಿ ಬೆಲೆ
ಈ ವರ್ಷ ಜನವರಿಯಿಂದ ಮೇವರೆಗೆ ಬೇಳೆಕಾಳುಗಳು, ಧಾನ್ಯಗಳು ಮತ್ತು ಇತರ ತರಕಾರಿಗಳ ದರಗಳು ಹೆಚ್ಚಾಗಿತ್ತು. ಈ ವೇಳೆ ಈರುಳ್ಳಿ ಬೆಲೆಯಲ್ಲಿ ಇಳಿಕೆಯಾಗಿತ್ತು. ಸಾಮಾನ್ಯವಾಗಿ ಜನವರಿಯಿಂದ ಮೇ ತಿಂಗಳವರೆಗೆ ಈರುಳ್ಳಿ ಸಾಮಾನ್ಯ ಜನರಿಗೆ ಲಭ್ಯವಿರಲಿದೆ. ದರದ ಕೊರತೆಯಿಂದ ಖಾರಿಫ್ ಹಂಗಾಮಿನಲ್ಲಿ ಕಡಿಮೆ ಪ್ರಮಾಣದಲ್ಲಿ ಈರುಳ್ಳಿ ಬೆಳೆಯಲಾಗುತ್ತದೆ. ಇದರಿಂದ ಸಾಗುವಳಿ ಪ್ರದೇಶ ಶೇ.8ರಷ್ಟು ಕುಸಿಯಲಿದ್ದು, ಖಾರಿಫ್ ಈರುಳ್ಳಿ ಇಳುವರಿ ಶೇ.5ರಷ್ಟು ಕಡಿಮೆಯಾಗುವ ನಿರೀಕ್ಷೆ ಇದೆ. ಈ ವರ್ಷ ಒಟ್ಟು ಉತ್ಪಾದನೆಯು 29 ಮಿಲಿಯನ್ ಟನ್ (MMT) ತಲುಪುತ್ತದೆ ಎಂದು ಅಂದಾಜಿಸಲಾಗಿದೆ. ಇದು ಐದು ವರ್ಷಗಳ ಸರಾಸರಿಗಿಂತ 7% ಹೆಚ್ಚಾಗಿದೆ.
ಅಕ್ಟೋಬರ್‌ನಿಂದ ಖಾರಿಫ್ ಬೆಳೆ ಮುಕ್ತ ಮಾರುಕಟ್ಟೆಗೆ ಬರುತ್ತದೆ. ಆಗ ಈರುಳ್ಳಿ ಬೆಲೆ ಮತ್ತೆ ಇಳಿಯಲು ಆರಂಭಿಸುತ್ತದೆ ಎಂದು ‘ಕ್ರಿಸಿಲ್ ಮಾರ್ಕೆಟ್ ಇಂಟೆಲಿಜೆನ್ಸ್ ಆ್ಯಂಡ್ ಅನಾಲಿಟಿಕ್ಸ್’ ವರದಿ ಹೇಳಿದೆ. ಹಬ್ಬದ ಋತುವಿನಲ್ಲಿ (ಅಕ್ಟೋಬರ್-ಡಿಸೆಂಬರ್) ಬೆಲೆ ಏರಿಳಿತಗಳು ಸ್ಥಿರವಾಗಿರುತ್ತವೆ ಎಂದು ವರದಿ ಬಹಿರಂಗಪಡಿಸಿದೆ. ಖಾರಿಫ್ ಮತ್ತು ರಬಿ ಎರಡೂ ಹಂಗಾಮಿನಲ್ಲಿ ಈರುಳ್ಳಿ ಇಳುವರಿ ಕಡಿಮೆಯಾದರೂ ಈ ವರ್ಷ ಈರುಳ್ಳಿ ಪೂರೈಕೆ ಹೆಚ್ಚು ಬಿಗಿಯಾಗಿಲ್ಲ ಎಂದು ಕ್ರಿಸಿಲ್ ಅಂದಾಜಿಸಿದೆ. ಕ್ರಿಸಿಲ್ ತನ್ನ ವರದಿಯಲ್ಲಿ ಈರುಳ್ಳಿ ಇಳುವರಿ ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ ಬೀಳುವ ಮಳೆಯ ಮೇಲೆ ಅವಲಂಬಿತವಾಗಿದೆ ಎಂದು ಬರೆದಿದೆ.