

ದೀಪಾವಳಿ ಹಬ್ಬದ ಮುಂಚೆಯಷ್ಟೇ ಪಾತಾಳಕ್ಕೆ ಕುಸಿದು ರೈತರಲ್ಲಿ ಕಣ್ಣೀರು ತರಿಸಿದ್ದ ಈರುಳ್ಳಿ ಬೆಲೆ, ಹಬ್ಬ ಮುಗಿಯುತ್ತಿದ್ದಂತೆ ದಿಢೀರ್ ಜಿಗಿದಿದೆ. ಕ್ವಿಂಟಾಲ್ಗೆ ಗರಿಷ್ಠ 5 ಸಾವಿರ ರೂ. ವರೆಗೂ ಬೆಲೆ ಸಿಕ್ಕಿದ್ದು ರೈತರ ಕಣ್ಣೀರು ಒರೆಸುವಂತಾಗಿದೆ. ಬಾಗಲಕೋಟೆ ಮಾರುಕಟ್ಟೆ ಸೇರಿ ರಾಜ್ಯ ರಾಜಧಾನಿಯಲ್ಲೂ ಒಳ್ಳೆಯ ಬೆಲೆ ಸಿಕ್ಕಿದೆೆ. ಬಾಗಲಕೋಟೆಯಲ್ಲಿ ಗರಿಷ್ಠ 5000 ರೂ. ಬೆಲೆ ಸಿಕ್ಕಿದ್ದರೆ ಬೆಂಗಳೂರಲ್ಲಿ 5200 ರೂ.ವರೆಗೂ ಮಾರಾಟವಾಗಿದೆ. ಕಳೆದ ತಿಂಗಳು ಭಾರಿ ಮಳೆಯಿಂದ ಜಿಲ್ಲೆಯಲ್ಲಿಯೇ 31 ಸಾವಿರ ಹೆಕ್ಟೇರ್ ಪೈಕಿ 10 ಸಾವಿರ ಹೆಕ್ಟೇರ್ ಬೆಳೆ ನಾಶವಾಗಿತ್ತು. ಜತೆಗೆ ಹಬ್ಬದ ವೇಳೆ ಖರೀದಿದಾರರು ಹಾಗೂ ಟ್ರಾನ್ಸ್ಪೋರ್ಟ್ ಸಮಸ್ಯೆಯೂ ಆಗಿತ್ತು. ಹಬ್ಬದ ಅಂಗವಾಗಿ ಬಾಗಲಕೋಟೆ ಎಪಿಎಂಸಿಯಲ್ಲಿ ಒಂದು ವಾರ ಈರುಳ್ಳಿ ಸವಾಲ್ ಬಂದ್ ಆಗಿತ್ತು. ಅಕ್ಟೋಬರ್ 31 ರಂದು ಬೆಂಗಳೂರಲ್ಲಿ ಕನಿಷ್ಠ 100 ರೂ.ಗಳಿಂದ ಗರಿಷ್ಠ 2000 ರೂ. ಮಾತ್ರ ಬೆಲೆ ಸಿಕ್ಕಿತ್ತು. ಅದರಲ್ಲೂ 3, 4ನೇ ದರ್ಜೆಯ ಈರುಳ್ಳಿ ಖರೀದಿ ಮಾಡುವವರು ಇಲ್ಲದೆ ರೈತರು ರಸ್ತೆಗೆ ಚೆಲ್ಲಿ ಬಂದಿದ್ದರು.
ಹಬ್ಬ ಮುಗಿದ ನಂತರ ಕಿತ್ತು ರಾಶಿ ಮಾಡಿದ್ದ ಈರುಳ್ಳಿಯನ್ನು ಒಣಗಿಸಿ ಮಾರುಕಟ್ಟೆಗೆ ತೆಗೆದುಕೊಂಡು ಹೋಗಿದ್ದರಿಂದ ಗುಣಮಟ್ಟವೂ ಉತ್ತಮವಾಗಿ, ಗರಿಷ್ಠ ಬೆಲೆ ಸಿಕ್ಕಿದೆ. ಬಾಗಲಕೋಟೆ ಮಾರುಕಟ್ಟೆಗೆ ಮಂಗಳವಾರ 10 ಸಾವಿರ ಪಾಕೆಟ್ ಆವಕ ಆಗಿದ್ದರೆ, ಬೆಂಗಳೂರು ಮಾರುಕಟ್ಟೆಯಲ್ಲಿ 60 ರಿಂದ 65 ಸಾವಿರ ಪಾಕೆಟ್ ಮಾತ್ರ ಆವಕ ಆಗಿತ್ತು. ಆವಕ ಇದೇ ರೀತಿ ಇದ್ದರೆ ಒಳ್ಳೆಯ ಬೆಲೆ ಸಿಗುತ್ತದೆ ಎಂದು ದಲಾಲರು ಹಾಗೂ ಖರೀದಿದಾರರು ಹೇಳುತ್ತಾರೆ. ಬೆಂಗಳೂರು ಮಾರುಕಟ್ಟೆಗೆ ಮೊದಲೆಲ್ಲ ಸವಾಲ್ ಗೆ ಪ್ರತಿ ದಿನ 1 ರಿಂದ 1.20 ಲಕ್ಷ ಪಾಕೆಟ್ ವರೆಗೂ ಆವಕ ಆಗುತ್ತಿತ್ತು.
ಬಾಗಲಕೋಟೆ ಮಾರುಕಟ್ಟೆಗೆ ಮಂಗಳವಾರ ಅಂದಾಜು 10 ಸಾವಿರ ಪಾಕೆಟ್ ಆವಕ ಆಗಿತ್ತು. ಗುಣಮಟ್ಟದ ಈರುಳ್ಳಿಯೂ ಬಂದಿತ್ತು. ಇದರಿಂದ ಕನಿಷ್ಠ 800 ರೂ. ಗಳಿಂದ ಗರಿಷ್ಠ 5 ಸಾವಿರ ರೂ.ವರೆಗೂ ಮಾರಾಟ ಆಗಿದೆ. 3500 ರಿಂದ 4500 ರೂ. ವರೆಗೂ ಹೆಚ್ಚಿನ ಈರುಳ್ಳಿ ಖರೀದಿ ಆಗಿದೆ. | ವಿ.ಡಿ. ಪಾಟೀಲ, ಕಾರ್ಯದರ್ಶಿ, ಬಾಗಲಕೋಟೆ ಎಪಿಎಂಸಿ ಮಾರುಕಟ್ಟೆ ಬೆಂಗಳೂರು ಮಾರುಕಟ್ಟೆಗೆ ಅ.31 ರಂದು 126 ಪಾಕೆಟ್ ತೆಗೆದುಕೊಂಡು ಹೋಗಿದ್ದಾಗ 75 ಸಾವಿರ ರೂ. ಸಿಕ್ಕಿತ್ತು. ಇದರಿಂದ ಲಾಸ್ ಆಗಿದ್ದೆ. ಮಂಗಳವಾರ 243 ಪಾಕೆಟ್ ತೆಗೆದುಕೊಂಡು ಹೋಗಿದ್ದೆ. 5 ಲಕ್ಷ ರೂ.ಗೂ ಅಧಿಕ ಹಣ ಸಿಕ್ಕಿದೆ. | ರಾಘವೇಂದ್ರ ಯಡಹಳ್ಳಿ. ಈರುಳ್ಳಿ ಬೆಳೆಗಾರ, ಬೆನಕಟ್ಟಿ ಗ್ರಾಮ https://www.vijayavani.net/2-astronauts-ready-to-vote-from-space