ದೆಹಲಿಯಲ್ಲಿ ಕಾಂಗ್ರೆಸ್ ಹೀನಾಯ ಸೋಲು; ಮೃತ ನಾಯಕಿ ಶೀಲಾ ದೀಕ್ಷಿತ್​ರನ್ನು ನೇರ ಹೊಣೆ ಮಾಡಿ ರಾಜೀನಾಮೆ ಸಲ್ಲಿಸಿದ ಪಕ್ಷದ ಉಸ್ತುವಾರಿ...

Pc Chako 12 Feb 20
Published on

ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಒಂದೂ ಸ್ಥಾನವನ್ನು ಗೆಲ್ಲಲಾಗದ ಕಾಂಗ್ರೆಸ್​ನಲ್ಲಿ ಸೋಲಿನ ಪರಾಮರ್ಶೆ ಶುರುವಾಗಿದೆ.

ಕಾಂಗ್ರೆಸ್​ನ ದೆಹಲಿ ಮುಖ್ಯಸ್ಥ ಸುಭಾಷ್​ ಚೋಪ್ರಾ ಈಗಾಗಲೇ ರಾಜೀನಾಮೆ ನೀಡಿದ್ದಾಗಿದೆ. ಇದೀಗ ದೆಹಲಿ ಕಾಂಗ್ರೆಸ್ ಉಸ್ತುವಾರಿಯಾಗಿರುವ ಪಿಸಿ ಚಾಕೋ ಕೂಡ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಶೀಲಾ ದೀಕ್ಷಿತ್​ ನಂತರ ದೆಹಲಿಯಲ್ಲಿ ಕಾಂಗ್ರೆಸ್ ಕಳೆಗುಂದುತ್ತಿದೆ ಎಂದು ಒಂದು ಕಡೆ ಚರ್ಚೆಯಾಗುತ್ತಿದ್ದರೆ, ಇಂದು ರಾಜೀನಾಮೆ ಸಲ್ಲಿಸಿದ ಪಿ.ಸಿ.ಚಾಕೋ ಅವರು ಕಾಂಗ್ರೆಸ್​ ಸೋಲಿಗೆ ಶೀಲಾ ದೀಕ್ಷಿತ್​ ಅವರನ್ನೇ ನೇರ ಹೊಣೆ ಮಾಡಿದ್ದಾರೆ.

ಕಳೆದ ವರ್ಷ ಜುಲೈನಲ್ಲಿ ಮೃತಪಟ್ಟ ಶೀಲಾ ದೀಕ್ಷಿತ್​ ಅವರು ಮೂರು ಅವಧಿಗೆ ದೆಹಲಿ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ್ದವರು. ಎಲ್ಲ ಪಕ್ಷಗಳ ಹಿರಿಯ ನಾಯಕರಿಂದ ಗೌರವಕ್ಕೆ ಪಾತ್ರರಾದವರು.

ಈಗ ದೆಹಲಿಯಲ್ಲಿ ಕಳೆದ ಎರಡು ಅವಧಿಯ ವಿಧಾನಸಭೆ ಚುನಾವಣೆ ಸೋಲಲು ಶೀಲಾ ದೀಕ್ಷಿತ್ ಕಾರಣ ಎಂದು ಚಾಕೋ ಅವರು ಹೇಳುತ್ತಿದ್ದಾರೆ.

ಕಾಂಗ್ರೆಸ್​ ಅವನತಿ ಶುರುವಾಗಿದ್ದು 2013ರಲ್ಲಿ. ಆಗ ಶೀಲಾ ದೀಕ್ಷಿತ್​ ಅವರೇ ದೆಹಲಿ ಮುಖ್ಯಮಂತ್ರಿಯಾಗಿದ್ದರು. 2012ರಲ್ಲಿ ಆಮ್​ ಆದ್ಮಿ ಪಕ್ಷ ಹುಟ್ಟುಕೊಂಡಿತು. ಅದು ಕಾಂಗ್ರೆಸ್​ಗೆ ಮುಳುವಾಯಿತು. ಹೊಸದಾಗಿ ಹೊರಹೊಮ್ಮಿದ ಆಪ್ ಪಕ್ಷ ಕಾಂಗ್ರೆಸ್​ನ ವೋಟ್​ ಬ್ಯಾಂಕ್​ನ್ನು ಸೆಳೆಯಿತು. ಅಂದಿನಿಂದಲೂ ಕಾಂಗ್ರೆಸ್​ಗೆ ಏಳಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.

ಆದರೆ ಕಾಂಗ್ರೆಸ್ ಸೋತಿದ್ದಕ್ಕೆ ಮೃತ ಶೀಲಾ ದೀಕ್ಷಿತ್​ ಹೆಸರನ್ನು ಹೇಳಿದ್ದೇಕೆ ಎಂಬ ಪ್ರಶ್ನೆ ಕಾಂಗ್ರೆಸ್ ವಲಯದಲ್ಲಿಯೇ ಹುಟ್ಟಿಕೊಂಡಿದೆ. ಮಹಾರಾಷ್ಟ್ರ ಕಾಂಗ್ರೆಸ್ ನಾಯಕ ಮಿಲಿಂದ್ ದಿಯೋರಾ ಟ್ವೀಟ್ ಮೂಲಕ ಪಿ.ಸಿ.ಚಾಕೋ ಅವರ ಮಾತನ್ನು ಅಲ್ಲಗಳೆದಿದ್ದಾರೆ.

ಶೀಲಾ ದೀಕ್ಷಿತ್​ ಅವರು ಮುತ್ಸದ್ದ ರಾಜಕಾರಣಿ. ಅವರ ಆಡಳಿತವನ್ನು ಪ್ರಶ್ನಿಸುವಂತಿಲ್ಲ. ಶೀಲಾ ಜಿ ಮುಖ್ಯಮಂತ್ರಿಯಾಗಿದ್ದಾಗ ದೆಹಲಿಯಲ್ಲಿ ಕಾಂಗ್ರೆಸ್ ಬಲಿಷ್ಠವಾಗಿತ್ತು. ಅವರಿಲ್ಲವೆಂದ ಮಾತ್ರಕ್ಕೆ ಈ ಸೋಲಿಗೆ ಅವರ ಹೆಸರು ಹೇಳುವುದು ಸರಿಯಲ್ಲ. ಅವರು ತಮ್ಮಿಡೀ ಜೀವನವನ್ನು ಕಾಂಗ್ರೆಸ್ ಮತ್ತು ದೆಹಲಿಯ ಜನರಿಗಾಗಿ ಮುಡಿಪಾಗಿಟ್ಟಿದ್ದರು ಎಂದು ಹೇಳಿದ್ದಾರೆ.

ಚಾಕೋ ಅವರ ಮಾತನ್ನು ಅಭಿಷೇಕ್​ ಮನುಸಿಂಘ್ವಿ ಕೂಡ ವಿರೋಧಿಸಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net