

ಬೆಂಗಳೂರು: ಡಿ.ಕೆ.ಸಹೋದರರ ಬಗ್ಗೆ ನೆನಪು ಮಾಡಿಕೊಳ್ಳದೆ ಇದ್ದರೇ ರಾಜ್ಯದ ಒಂದಷ್ಟು ನಾಯಕರಿಗೆ ಒಂದು, ಎರಡು ಸೇರಿ ಏನೂ ಆಗುವುದಿಲ್ಲ. ಮೂರನೆಯದು ಇಲ್ಲ ಅದಕ್ಕೆ ಅವರಿಗೆ ಅದು ಆಗುವುದಿಲ್ಲ. ಅದು ಏನೆಂದು ಮಾಧ್ಯಮದವರು ಕಂಡುಹಿಡಿಯಲಿ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ಹೇಳಿದರು.
ನಾಗಮಂಗಲ ವಿಚಾರ ಮರೆಸಲು ಮುನಿರತ್ನ ಆಡಿಯೋ ಹೊರಗೆ ಬಂದಿದೆ ಎಂಬ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅವರು ಅಲ್ಲಿ ಗಣಪತಿ ಗಲಾಟೆ. ಇಲ್ಲಿ ಜಾತಿ ನಿಂದನೆ, ಪ್ರಾಣ ಬೆದರಿಕೆ. ನಾಗಮಂಗಲಕ್ಕೂ, ಆರ್‌ಆರ್ ನಗರಕ್ಕೂ ಏನು ಸಂಬಂಧ ಎಂದು ಪ್ರಶ್ನಿಸಿದರು.
ನಾಗಮಂಗಲ ಗಲಾಟೆ ಕಾಂಗ್ರೆಸ್ ಚಿತಾವಣೆ ಎನ್ನುವ ಕುಮಾರಸ್ವಾಮಿ ಆರೋಪಕ್ಕೆ ಪ್ರತಿಕ್ರಿಯೆ ನೀಡಿ, ಕುಮಾರಸ್ವಾಮಿ ವಾರಕ್ಕೊಮ್ಮೆ ಬಂದು ಏನೇನೋ ಮಾತನಾಡುವ ಅವರು ಈ ಘಟನೆಗೆ ಕಾರಣ ಇರಬಹುದು ಎಂದು ನಾನೂ ಹೇಳಬಹುದು ಅಲ್ಲವೇ? ಅವರು ಏನು ಆರೋಪ ಮಾಡುತ್ತಾರೋ ಆದೇ ರೀತಿ ನಾನೂ ಆರೋಪ ಮಾಡುತ್ತೇನೆ ಎಂದರು.
ನಾವು ಸರ್ವಜನಾಂಗ ಶಾಂತಿಯ ತೋಟ ಎಂದು ಕುವೆಂಪು ಅವರ ಮಾತಿನ ಮೇಲೆ ನಂಬಿಕೆಯಿಟ್ಟು ನಡೆಯುತ್ತಾ ಇದ್ದೀವೆ. ಯಾರ ತುಷ್ಟಿಕರಣವನ್ನು ನಮ್ಮ ಸರ್ಕಾರ ಮಾಡುವುದಿಲ್ಲ. ಬಾಬಾ ಸಾಹೇಬ್ ಅಂಬೇಡ್ಕರ್, ಗಾಂಧೀಜಿ, ಬಸವಣ್ಣ ಅವರ ತತ್ವದಲ್ಲಿ ನಾವು ನಡೆಯುತ್ತಾ ಇದ್ದೇವೆ ಎಂದು ಹೇಳಿದರು.
ಇನ್ನು ಡಿಸಿಎಂ ಅವರ ಅಮೇರಿಕಾ ಪ್ರವಾಸದ ಬಗ್ಗೆ ಪತ್ರಕರ್ತರು ಪ್ರಶ್ನಿಸಿದಾಗ, ಕುಟುಂಬದ ಜತೆ ಪ್ರವಾಸ ತೆರಳಿ ಐದಾರು ವರ್ಷಗಳೇ ಕಳೆದಿದ್ದವು. ಅನೇಕ ಬಾರಿ ಕೋರ್ಟ್‌ನಿಂದ ಅನುಮತಿ ಪಡೆಯಲು ಆಗಿರಲಿಲ್ಲ. ಅಮೇರಿಕಾ ಭೇಟಿ ಬಗ್ಗೆ ಮಾಧ್ಯಮಗಳು ಉಹಾಪೋಹದ ಸುದ್ದಿಗಳನ್ನು ಮಾಡುತ್ತಿವೆ. ರಾಹುಲ್ ಗಾಂಧೀ ಅವರ ಭೇಟಿ ಕಾಕತಾಳೀಯ. ಯಾವುದೇ ರಾಜಕೀಯ ಚರ್ಚೆ ನಡೆಸಬೇಕು ಎಂದರೆ ದೆಹಲಿಗೆ ಹೋಗಬಹುದಲ್ಲವೇ? ಎಂದು ತಿಳಿಸಿದರು.