ಕೈಗಾರಿಕಾ ಪ್ರದೇಶಗಳಲ್ಲಿ ಒಂದು ಬಾರಿ ಮೂಲಭೂತ ಸೌಕರ್ಯ ಅಭಿವೃದ್ಧಿ: ಪಾಟೀಲ್

mb patil
Published on

ಬೆಂಗಳೂರು: ರಾಜ್ಯದ ಎಲ್ಲ ಹಳೇ ಕೈಗಾರಿಕಾ ಪ್ರದೇಶಗಳಲ್ಲಿ ಒಂದು ಬಾರಿ ಪೂರ್ಣ ಪ್ರಮಾಣದಲ್ಲಿ ಮೂಲಭೂತ ಸೌಕರ್ಯಗಳನ್ನು ಅಭಿವೃದ್ದಿಪಡಿಸಿದ ಬಳಿಕ ಆಯಾ ಕೈಗಾರಿಕಾ ಸಂಘಗಳ ಸುಪರ್ದಿಗೆ ಅವುಗಳ ನಿರ್ವಹಣೆ ಒಪ್ಪಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗುತ್ತಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಹಾಗೂ ಮೂಲಭೂತ ಸೌಕರ್ಯ ಅಭಿವೃದ್ದಿ ಸಚಿವ ಎಂ.ಬಿ ಪಾಟೀಲ ಭರವಸೆ ನೀಡಿದರು.

ಉದ್ಯೋಗ ಮಿತ್ರ ಸಭಾಂಗಣದಲ್ಲಿ ರಾಯಚೂರು ಜಿಲ್ಲೆಯ ಕೈಗಾರಿಕಾ ಕ್ಷೇತ್ರದ ಅಭಿವೃದ್ದಿಗೆ ಸಂಬಂಧಿಸಿಂತೆ ಆಯೋಜಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೈಗಾರಿಕಾ ಪ್ರದೇಶದಿಂದ ಸಂಗ್ರಹವಾಗುವ ಕರದಲ್ಲಿ ಶೇ.70ರಷ್ಟು ಕೈಗಾರಿಕಾ ಸಂಘಕ್ಕೆ ಮತ್ತು ಶೇ. 30 ರಷ್ಟು ಆಯಾ ನಗರಸಭೆಗಳಿಗೆ ನೀಡಲಾಗುವುದು. ಇದರಿಂದ ಬಹಳಷ್ಟು ಸಮಸ್ಯೆಗಳು ನಿವಾರಣೆಯಾಗಲಿವೆ ಎಂದು ಹೇಳಿದರು.

ರೈಸ್ ಮಿಲ್‌ಗಳಿಗೆ ನೀರಿನ ಪೈಪ್‌ಲೈನ್

ರಾಯಚೂರು ನಗರದಲ್ಲಿ 90 ಕ್ಕೂ ಹೆಚ್ಚು ರೈಸ್‌ಮಿಲ್ ಗಳಿವೆ. ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ರೈಸ್ ಮಿಲ್‌ಗಳನ್ನು ಸ್ಥಾಪಿಸಲು ನೀರಿನ ಅಗತ್ಯತೆ ಹೆಚ್ಚಾಗಿದೆ. ಈ ಸಮಸ್ಯೆಗೆ ಪರಿಹಾರ ಕಂಡು ಹಿಡಿಯುವ ನಿಟ್ಟಿನಲ್ಲಿ ರೈಸ್ ಮಿಲ್ ಗಳಿಗೆ ಮೀಸಲಾದ ಪೈಪ್ ಲೈನ್ ನಿರ್ಮಾಣದ ವರದಿಯನ್ನು ಸಲ್ಲಿಸುವಂತೆ ಕೆಐಡಿಬಿ ಅಧಿಕಾರಿಗಳಿಗೆ ಸೂಚಿಸಿದರು.

ಔಷಧ ಕಂಪನಿಗಳ ತ್ಯಾಜ್ಯ ವಿಲೇವಾರಿ

ರಾಯಚೂರು ಕೈಗಾರಿಕಾ ಪ್ರದೇಶದಲ್ಲಿ ಕೂಡಲೇ ತ್ಯಾಜ್ಯ ವಿಲೇವಾರಿ ಕೇಂದ್ರವನ್ನು ನಿರ್ಮಿಸಬೇಕು. ಇದಕ್ಕೆ ಈಗಾಗಲೇ ಅನುಮತಿ ನೀಡಿರುವ ಮದರ್ ಅರ್ಥ್ ಕಂಪನಿಯ ಜತೆಯಲ್ಲಿ ಚರ್ಚಿಸಿ ಕೈಗಾರಿಕೋದ್ಯಮಿಗಳೀಗೆ ಅನುಕೂಲ ಮಾಡಿಕೊಡಬೇಕು ಎಂದು ಸೂಚಿಸಿದರು.

ಟೆಕ್ಸ್‌ಟೈಲ್ ಪಾರ್ಕ್ ಕೇಂದ್ರಕ್ಕೆ ಪ್ರಸ್ತಾಪ

ರಾಯಚೂರಿನಲ್ಲೂ ಇನ್ನೊಂದು ಟೆಕ್ಸ್‌ಟೈಲ್ ಪಾರ್ಕ್ ನಿರ್ಮಾಣಕ್ಕೆ ಅನುಮತಿ ನೀಡುವಂತೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಈ ನಿಟ್ಟಿನಲ್ಲಿ ಅಗತ್ಯ ಮಾಹಿತಿಯನ್ನು ಸಂಗ್ರಹಿಸಿ ವರದಿ ತಯಾರಿಸುವಂತೆ ಕೈಗಾರಿಕಾ ಆಯುಕ್ತರಿಗೆ ತಿಳಿಸಿದರು.

ವಂದೇ ಭಾರತ್ ರೈಲು ನಿಲುಗಡೆ

ಬೆಂಗಳೂರು- ಹೈದರಾಬಾದ್ ನಡುವೆ ಸಂಚರಿಸಲಿರುವ ವಂದೇ ಭಾರತ್ ರೈಲು ರಾಯಚೂರು ಮೂಲಕ ಸಂಚರಿಸುವ ಹಾಗೆ ಮಾಡಲು ಕೇಂದ್ರ ಸರಕಾರಕ್ಕೆ ಪತ್ರ ಬರೆಯುವ ಭರವಸೆ ನೀಡಿದರು.

ಸಭೆಯಲ್ಲಿ ಸಚಿವ ಎನ್.ಎಸ್.ಬೋಸರಾಜು, ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಶರಣ ಪ್ರಕಾಶ್ ಪಾಟೀಲ್ ಸೇರಿದಂತೆ ಜಿಲ್ಲೆಯ ಶಾಸಕರು, ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ಸೆಲ್ವಕುಮಾರ್, ಕೈಗಾರಿಕಾ ಅಭಿವೃದ್ದಿ ಆಯುಕ್ತರಾದ ಗುಂಜನ್ ಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.

ಕೋಟ್:

ರಾಯಚೂರು ಜಿಲ್ಲೆಯ ಸಮಗ್ರ ಅಭಿವೃದ್ದಿಗೆ ಹಲವಾರು ಅವಕಾಶಗಳಿವೆ. ಹಿಂದುಳಿದ ಪ್ರದೇಶವಾಗಿರುವ ಕಲ್ಯಾಣ ಕರ್ನಾಟಕದ ಪ್ರಮುಖ ವಾಣಿಜ್ಯ ಕೇಂದ್ರವಾಗಿ ರಾಯಚೂರು ಹೊರಹೊಮ್ಮುತ್ತಿದೆ. ಕೈಗಾರಿಕೆಗಳ ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿತರಾಗುವಂತೆ ಮಾಡುವ ನಿಟ್ಟಿನಲ್ಲಿ ನಾವುಗಳು ಅಗತ್ಯ ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸಬೇಕು.

-ಎನ್.ಎಸ್.ಬೋಸರಾಜು, ಸಣ್ಣ ನೀರಾವರಿ ಸಚಿವ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net