ಜೈಲಿಂದ ಬಿಡುಗಡೆಯಾದ 15 ದಿನಕ್ಕೆ ಮತ್ತದೇ ಚಾಳಿ, ಕೊನೆಗೂ ಸಿಕ್ಕಿಬಿದ್ದ ಖತರ್ನಾಕ್ ಕಳ್ಳ

pic theft
Published on

ಬೆಂಗಳೂರು: ಹಗಲು ವೇಳೆ ಬೀಗ ಹಾಕಿದ್ದ ಮನೆಗಳನ್ನ ಗುರುತಿಸಿ, ರಾತ್ರಿ ವೇಳೆ ಕನ್ನ ಹಾಕುತ್ತಿದ್ದ ಖತರ್ನಾಕ್ ಕಳ್ಳನನ್ನು ಸುಬ್ರಮಣ್ಯಪುರ ಪೊಲೀಸರು ಬಂಧಿಸಿದ್ದಾರೆ. 

ಬಂಧಿತನಿಂದ ಲಕ್ಷಾಂತರ ರೂ. ಬೆಲೆಬಾಳುವ 318 ಗ್ರಾಂ ಚಿನ್ನಾಭರಣ ಹಾಗೂ ಒಂದು ಕಬ್ಬಿಣದ ರಾಡ್​​ಅನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯು ಈ ಹಿಂದೆ ಕಳ್ಳತನ ಮಾಡಿ ಜೈಲುವಾಸ ಅನುಭವಿಸಿದ್ದನು. ಕಳ್ಳತನವನ್ನೇ ಚಾಳಿ ಮಾಡಿಕೊಂಡಿದ್ದ ಈತನ ಮೇಲೆ, ಬ್ಯಾಟರಾಯನಪುರ, ಹನುಮಂತನಗರ, ಮಾಗಡಿ ರೋಡ್, ಕಲಾಸಿಪಾಳ್ಯ, ರಾಜಗೋಪಾಲನಗರ, ಉಪ್ಪಾರಪೇಟೆ, ಗಂಗಮ್ಮನಗುಡಿ, ವಿಜಯನಗರ ಸೇರಿದಂತೆ 15 ಠಾಣೆಗಳಲ್ಲಿ ದೂರು ದಾಖಲಾಗಿದೆ.

ಕಳ್ಳತನ ಪ್ರಕರಣದಲ್ಲಿ ಜೈಲು ಸೇರಿ ಇತ್ತೀಚೆಗಷ್ಟೆ ಬಿಡುಗಡೆಯಾಗಿದ್ದ. ಜೈಲಿನಿಂದ ಹೊರಬಂದ 15 ದಿನಕ್ಕೆ ತನ್ನ ಹಳೆ ಚಾಳಿ ಮುಂದುವರಿಸಿದ್ದ ಖದೀಮ, ರಾಜಾಜಿನಗರ 1ನೇ ಹಂತದಲ್ಲಿ ಮನೆಗಳ್ಳತನ ಮಾಡಿದ್ದಾನೆ. ಈ ಸಂಬಂಧ ಸುಬ್ರಮಣ್ಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸದ್ಯ ಆರೋಪಿಯನ್ನ ಬಂಧಿಸಿರುವ ಪೊಲೀಸರು ಈತನ ಮತ್ತಷ್ಟು ಪ್ರಕರಣಗಳನ್ನು ಬಯಲಿಗೆಳೆಯಲು ತನಿಖೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net