ಒಳಮೀಸಲು ಗೊಂದಲಗಳ ಪರಿಹಾರವೇ ಸವಾಲು

VV Analysis
Published on

ರುದ್ರಣ್ಣ ಹರ್ತಿಕೋಟೆ ಬೆಂಗಳೂರು

ಪರಿಶಿಷ್ಟರ ಒಳಮೀಸಲಾತಿ ಜಾರಿ ವಿಚಾರದಲ್ಲಿ ಸರ್ಕಾರ ನಿವೃತ್ತ ನ್ಯಾಯಾಧೀಶರ ಏಕ ಸದಸ್ಯ ಆಯೋಗ ರಚನೆ ಮಾಡಲು ನಿರ್ಧರಿಸಿದ್ದರೂ, ಈ ವಿಚಾರದಲ್ಲಿ ಇರುವ ಗೊಂದಲಗಳ ನಿವಾರಣೆ ದೊಡ್ಡ ಸವಾಲಾಗಿದೆ.

ಸಚಿವ ಸಂಪುಟ ಸಭೆಯಲ್ಲಿ ಒಳಮೀಸಲು ನೀಡುವ ನಿರ್ಧಾರ ಮಾಡಿದೆ; ಆಯೋಗಕ್ಕೆ ಮೂರು ತಿಂಗಳು ಗಡುವು ನೀಡುವ ತೀರ್ವನವಾಗಿದೆ. ಆದರೆ ಮೂರು ತಿಂಗಳ ಅವಧಿಯಲ್ಲಿ ಗೊಂದಲಗಳನ್ನು ಬಗೆಹರಿಸಿಕೊಂಡು ಮೀಸಲಾತಿ ಜಾರಿ ಮಾಡುವುದು ಹೇಗೆ ಎಂಬ ಯಕ್ಷಪ್ರಶ್ನೆಯೂ ಇದೆ.

ನ್ಯಾ. ಸದಾಶಿವ ಆಯೋಗ, ನ್ಯಾ. ನಾಗಮೋಹನ ದಾಸ್ ಸಮಿತಿ, ಹಿಂದುಳಿದ ವರ್ಗ ಆಯೋಗದ ಕಾಂತರಾಜ್ ವರದಿ, ಹಿಂದಿನ ಸರ್ಕಾರದ ಅವಧಿಯಲ್ಲಿ ಕಾನೂನು ಸಚಿವರ ಅಧ್ಯಕ್ಷತೆಯ ಸಂಪುಟ ಉಪ ಸಮಿತಿ ನೀಡಿರುವ ವರದಿಗಳಿವೆ. 2011ರ ಜನಗಣತಿಯ ಪ್ರಕಾರ ಜನಸಂಖ್ಯೆಯ ಅಂಕಿಅಂಶ ಸಿಕ್ಕರೂ ಪರಿಶಿಷ್ಟರಲ್ಲಿ ಶಿಕ್ಷಣ ಪಡೆದವರು, ಸರ್ಕಾರಿ ಉದ್ಯೋಗಕ್ಕೆ ಸೇರಿದವರ ನಿಖರ ಮಾಹಿತಿ ಲಭ್ಯವಿಲ್ಲ.

ನ್ಯಾ. ಸದಾಶಿವ ಆಯೋಗ ಹಾಗೂ ಕಾಂತರಾಜ್ ವರದಿಯಲ್ಲಿ ಅಂಕಿಅಂಶಗಳು ಸಿಗುತ್ತವೆ. ಸರ್ಕಾರ ಕಾಂತರಾಜ್ ವರದಿಯನ್ನು ಇನ್ನೂ ಅಂಗೀಕರಿಸಿಲ್ಲ. ಸದಾಶಿವ ಆಯೋಗದ ವರದಿಯನ್ನು ಹಿಂದಿನ ಸರ್ಕಾರ ತಿರಸ್ಕರಿಸಿದೆ. ಸದಾಶಿವ ಆಯೋಗದ ವರದಿಯನ್ನು ಅಂಗೀಕರಿಸಬೇಕು. ಕಾಂತರಾಜ್ ವರದಿಯನ್ನು ಒಪ್ಪಿ ಸರ್ಕಾರ ಜಾರಿಗೆ ನೀಡಿದಾಗ ಮಾತ್ರ ಅದರಲ್ಲಿರುವ ಅಂಕಿಅಂಶಗಳನ್ನು ಬಳಸಿಕೊಳ್ಳಲು ಸಾಧ್ಯವಾಗುತ್ತದೆ ಎಂಬ ಅಭಿಪ್ರಾಯವನ್ನು ತಜ್ಞರು ವ್ಯಕ್ತಪಡಿಸುತ್ತಾರೆ.

ಹೊಸದಾಗಿ ರಚನೆಯಾಗುವ ಆಯೋಗ ಯಾವ ರೀತಿಯ ನಿರ್ಧಾರ ಮಾಡಲಿದೆ ಎಂಬುದು ಕಾದು ನೋಡಬೇಕಾಗಿದೆ.

ಗೊಂದಲವೇನು: ಆದಿ ಕರ್ನಾಟಕ ಮತ್ತು ಆದಿ ದ್ರಾವಿಡ ಎಂಬ ವಿಚಾರದಲ್ಲಿ ಕೆಲವೊಂದು ಗೊಂದಲಗಳಿವೆ. ಹೊಲೆಯರು ರಾಜ್ಯದ ಕೆಲವೆಡೆ ಆದಿ ದ್ರಾವಿಡವೆಂದು ಮತ್ತೆ ಕೆಲವೆಡೆ ಆದಿ ಕರ್ನಾಟಕವೆಂದು ನಮೂದಿಸಿದ್ದಾರೆ. ಅದೇ ರೀತಿಯಲ್ಲಿ ಮಾದಿಗ ಸಮುದಾಯ ಸಹ ಮಾಡಿದೆ. ಈ ಗೊಂದಲಕ್ಕೆ ಪರಿಹಾರ ಕಂಡುಕೊಳ್ಳಬೇಕಾಗಿದೆ.

reservation

ಯಾವ ಸಮುದಾಯದ ಜಾತಿ ಎಷ್ಟು? ಜನಸಂಖ್ಯೆ ಎಷ್ಟು?

ಪರಿಶಿಷ್ಟ ಜಾತಿಯಲ್ಲಿ ಒಟ್ಟಾರೆ 101 ಜಾತಿಗಳಿವೆ. ಅವುಗಳನ್ನು ನಾಲ್ಕು ಭಾಗಗಳಾಗಿ ಗುರುತಿಸಲಾಗಿದೆ. ಒಟ್ಟಾರೆ 1.05 ಕೋಟಿ ಜನಸಂಖ್ಯೆ ಇರುವ ಮಾಹಿತಿ 2011ರ ಜನಗಣತಿಯಲ್ಲಿ ಲಭ್ಯವಾಗಿದೆ. ಅದರಲ್ಲಿ ಗ್ರಾಮೀಣ ಭಾಗದಲ್ಲಿ 77.5 ಲಕ್ಷ ಹಾಗೂ ನಗರ ಪ್ರದೇಶದಲ್ಲಿ 30 ಲಕ್ಷ ಜನರಿದ್ದಾರೆ. ರಾಜ್ಯದ ಒಟ್ಟು ಜನಸಂಖ್ಯೆಯ ಶೇ.17.15 ರಷ್ಟು ಇದೆ. ಅದರ ಪ್ರಕಾರ ಪರಿಶಿಷ್ಟ ಜಾತಿಗೆ ಶೇ.17 ಹಾಗೂ ಪರಿಶಿಷ್ಟ ಪಂಗಡಕ್ಕೆ ಶೇ.7 ರಷ್ಟು ಮೀಸಲಾತಿ ನೀಡಲಾಗುತ್ತದೆ.

  • ಮಾದಿಗ, ಆದಿ ದ್ರಾವಿಡ, ಭಂಬಿ, ಸಮಗಾರ ಸೇರಿ 4 ಜಾತಿಗಳು ಗುಂಪು 1 ರಲ್ಲಿದ್ದು ಅವುಗಳ ಜನಸಂಖ್ಯೆ 32.60 ಲಕ್ಷ.
  • ಛಲವಾದಿ, ಚನ್ನದಾಸರ, ಹೊಲೆಯ, ಮಹರ್ ಸೇರಿ 5 ಜಾತಿಗಳು ಗುಂಪು 2 ರಲ್ಲಿವೆ. ಅವುಗಳ ಜನಸಂಖ್ಯೆ 32.58 ಲಕ್ಷ.
  • ಬಂಜಾರ, ಭೋವಿ, ಕೊರಚ, ಕೊರಮ 4 ಜಾತಿಗಳು ಗುಂಪು 3 ರಲ್ಲಿವೆ. ಅವುಗಳ ಜನಸಂಖ್ಯೆ 28.51 ಲಕ್ಷ.
  • ಹಿಂದೆ ಒಳಮೀಸಲಾತಿ ಪಡೆದಿದ್ದು, ಈಗ ಕಡಿಮೆಯಾಗಿರುವ ಜಾತಿಗಳ ಸಂಖ್ಯೆ 88 ಇದ್ದರೆ, ಜನಸಂಖ್ಯೆ 5.87 ಲಕ್ಷ ಇದೆ.

ಯಾವ ರಾಜ್ಯದಲ್ಲಿ ಏನಾಗಿದೆ?

  • ಪರಿಶಿಷ್ಟ ಜಾತಿಯ ಒಳಮೀಸಲಾತಿಗೆ ಸಂಬಂಧಿಸಿದಂತೆ ಮೂರು ರಾಜ್ಯಗಳಲ್ಲಿ ನಿರ್ಧಾರಗಳಾಗಿವೆ ಎಂಬ ಮಾಹಿತಿ ಇದೆ.
  • ತೆಲಂಗಾಣದಲ್ಲಿ 2024ರ ಸೆಪ್ಟಂಬರ್ 12 ರಂದು ಸಚಿವ ಸಂಪುಟ ಉಪ ಸಮಿತಿ ರಚನೆ ಮಾಡಲಾಗಿತ್ತು. ಇದೀಗ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಆಯೋಗ ರಚನೆ ಮಾಡಲಾಗಿದೆ.
  • ತಮಿಳುನಾಡಿನಲ್ಲಿ ಆರುಂಧತಿ ಯರು ಎಂಬ ಸಮುದಾಯಕ್ಕೆ ಶೇ.3 ಒಳಮೀಸಲಾತಿ ನೀಡಲಾಗಿದೆ.
  • ಹರಿಯಾಣದಲ್ಲಿ ಒಳಮೀಸಲಾತಿಗೆ ಸಂಬಂಧಿಸಿದಂತೆ ನಿರ್ಧಾರವಾಗಿದೆ ಎಂಬ ಮಾಹಿತಿ ರಾಜ್ಯ ಸರ್ಕಾರಕ್ಕೆ ಲಭ್ಯವಾಗಿದೆ. ಆದರೆ ಆದೇಶವಾಗಿರುವ ಬಗ್ಗೆ ದಾಖಲೆ ಲಭ್ಯವಾಗಿಲ್ಲ.

ಉಪಜಾತಿ ನಮೂದಿಸದಿರುವ ಸಮಸ್ಯೆ: 2011ರಲ್ಲಿ ನಡೆದ ಜನಗಣತಿಯ ಸಂದರ್ಭದಲ್ಲಿ ಅನೇಕರು ತಮ್ಮ ಉಪಜಾತಿಯನ್ನು ನಮೂದಿಸದಿರುವುದು ಸಹ ಈಗಿನ ಸಮಸ್ಯೆಯಲ್ಲಿ ಒಂದಾಗಿದೆ. ಆಗ 7.29 ಲಕ್ಷ ಜನ ತಮ್ಮ ಉಪಜಾತಿ ನಮೂದಿಸಿಲ್ಲ ಎಂಬ ಮಾಹಿತಿ ಇದೆ. ಸರ್ಕಾರದ ಸೌಲಭ್ಯಗಳನ್ನು ನೀಡಬೇಕಾದರೆ ಕಡ್ಡಾಯವಾಗಿ ಉಪಜಾತಿಯನ್ನು ನಮೂದಿಸಬೇಕಾಗುತ್ತದೆ.

ಸುಪ್ರೀಂಕೋರ್ಟ್ ತೀರ್ಪಿನ ಪ್ರಕಾರ ಒಳಮೀಸಲಾತಿ ಜಾರಿ ಮಾಡಬೇಕು. ಸುಪ್ರೀಂಕೋರ್ಟ್ ರಾಜ್ಯಗಳಿಗೆ ಅಧಿಕಾರವಿದೆ ಎಂದಿದೆ. ಇವತ್ತಿನ ಮಾಹಿತಿ ಸೇರಿಸಿಕೊಂಡು ಜನಗಣತಿಯ ಅಂಕಿಅಂಶಗಳನ್ನು ಸೇರಿಸಿ ಮಾಡಬೇಕಾಗುತ್ತದೆ.

| ಪಿ.ಎಂ. ನರೇಂದ್ರಸ್ವಾಮಿ ಶಾಸಕ

ದೊಡ್ಡ ಗೊಂದಲ ಗಳೇನೂ ಇಲ್ಲ. ಯಾವುದೇ ಸಮಸ್ಯೆಗೆ ಸಚಿವ ಸಂಪುಟದಲ್ಲಿಟ್ಟು ನಿರ್ಧಾರ ಮಾಡಬಹುದು. ಸರ್ಕಾರದಲ್ಲಿ ಇರುವ ವಿವಿಧ ವರದಿಯಲ್ಲಿನ ಅಂಕಿಅಂಶಗಳನ್ನು ಬಳಸಿಕೊಳ್ಳ ಬಹುದು. ಹೊಸದಾಗಿ ರಚನೆಯಾಗುವ ಆಯೋಗ ಇಲಾಖೆಗಳಿಗೆ ಪತ್ರ ಬರೆದು ಮಾಹಿತಿ ಪಡೆಯಬಹುದು. ಒಟ್ಟಾರೆ ಮೂರು ತಿಂಗಳಲ್ಲಿ ವರದಿ ನೀಡಿ, ಒಳಮೀಸಲು ಜಾರಿಗೆ ಬರಬೇಕು ಅಷ್ಟೇ.

| ಡಾ. ಎಲ್. ಹನುಮಂತಯ್ಯ, ಮಾಜಿ ರಾಜ್ಯಸಭಾ ಮಾಜಿ ಸದಸ್ಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net