

One Nation One Time: ಪ್ರತಿಯೊಬ್ಬರ ಕೈಗಡಿಯಾರ, ಮೊಬೈಲ್ ಮತ್ತು ಕಂಪ್ಯೂಟರ್ಗಳಲ್ಲಿ ಗಂಟೆ ಎಷ್ಟಾಯಿತು ಎಂದು ಸಮಯ ನೋಡಬಹುದು. ಶರವೇಗದಲ್ಲಿ ಸಾಗುತ್ತಿರುವ ಡಿಜಿಟಲ್ ಯುಗದಲ್ಲಿ ಪ್ರಸ್ತುತ ಎಷ್ಟು ಗಂಟೆ, ನಿಮಿಷ, ಸೆಕೆಂಡ್ ಹಾಗೂ ಮಿಲಿ ಸೆಕೆಂಡ್ಗಳನ್ನು ತಿಳಿದುಕೊಳ್ಳಬಹುದಾಗಿದೆ. ಈಗ ಗಂಟೆ ಎಷ್ಟಾಗಿದೆ? ಎಂದು ನಾವು ಇವುಗಳ ಸಹಾಯದಿಂದ ಅರಿಬಹುದಾಗಿದ್ದೇ ಆದರೂ ನಿಖರ ಸಮಯವನ್ನು ತಿಳಿಯುವುದು ಕಷ್ಟಸಾಧ್ಯ. ಭಾರತೀಯ ಕಾಲಾಮಾನದ ಪ್ರಕಾರ, ವೇಳೆಯನ್ನು ನೋಡುವ ನಾವು ಜಿಪಿಎಸ್ ಉಪಗ್ರಹಗಳು ಮತ್ತು ಸಂಯೋಜಿತ ಸಾರ್ವತ್ರಿಕ ಸಮಯದ (UTC) ಆಧಾರದಿಂದ ಇಂದಿಗೂ ಟೈಮ್ ನೋಡುತ್ತಿದ್ದೇವೆ.
ಭಾರತೀಯ ಕಾಲಾಮಾನದ ಪ್ರಕಾರ, ಉತ್ತರ ಭಾರತದಲ್ಲಿ ಈಗ ಸಮಯ 9 ಗಂಟೆಯಾದರೆ. ದಕ್ಷಿಣ ಭಾರತದಲ್ಲಿ 9 ಗಂಟೆಗೆ 2 ನಿಮಿಷ ಎನ್ನುವಂತೆ ತೋರಿಸುತ್ತದೆ. ಅಲ್ಲಲ್ಲಿ ನಿಮಿಷ ಮತ್ತು ಸೆಕೆಂಡ್ಗಳಲ್ಲಿ ವ್ಯತ್ಯಾಸವಿರುತ್ತದೆ. ಕೋಲ್ಕತದಲ್ಲಿ ಒಂದು ಸಮಯವಿದ್ದರೆ, ಕರ್ನಾಟದಲ್ಲಿ ಮತ್ತೊಂದು ಸಮಯವಿರುತ್ತದೆ. ಇದರಲ್ಲಿ ಸೆಕೆಂಡ್ ಅಥವಾ ಮಿಲಿ ಸೆಕೆಂಡ್ಗಳ ವ್ಯತ್ಯಾಸವೂ ಇರಬಹುದು. ಆದರೆ, ಈ ಬಗ್ಗೆ ನಮಗೆ ಸ್ಪಷ್ಟ ಮಾಹಿತಿ ಇರಲಿಲ್ಲ. ಆದ್ರೆ, ಇನ್ಮುಂದೆ ಒಂದು ದೇಶ ಒಂದು ಸಮಯದ ಅಡಿ ಭಾರತೀಯರು ನೋಡುವ ಸಮಯ ಸದಾ ಒಂದೇ ಆಗಿರಲಿದೆ ಎಂಬುದು ಗಮನಾರ್ಹ ಸಂಗತಿ.
ಇನ್ನೂ ಕೆಲವೇ ತಿಂಗಳುಗಳಲ್ಲಿ ಇದು ಬದಲಾಗಲಿದೆ. ನಾವಿಕ್ (NavIC) ರಾಷ್ಟ್ರೀಯ ಭೌತಿಕ ಪ್ರಯೋಗಾಲಯದ ಜತೆಗೆ ಉಲ್ಲೇಖ ಸಮಯವನ್ನು ಒದಗಿಸಲು ಲಿಂಕ್ ಆಗಲಿದೆ. ಫರಿದಾಬಾದ್‌ನಲ್ಲಿರುವ ಒಂದು ಪ್ರಯೋಗಾಲಯವು ಈ ನಾವಿಕ್ನಿಂದ ಸಮಯವನ್ನು ರಿಸೀವ್ ಮಾಡಿಕೊಳ್ಳಲಿದೆ. ಇದನ್ನು ಆಪ್ಟಿಕ್ ಫೈಬರ್ ಲಿಂಕ್ ಮುಖಾಂತರ ನಾಲ್ಕು ಇತರ ಕೇಂದ್ರಗಳಾದ ಅಹಮದಾಬಾದ್, ಬೆಂಗಳೂರು, ಭುವನೇಶ್ವರ ಮತ್ತು ಗುವಾಹಟಿಯೊಂದಿಗೆ ಹಂಚಿಕೊಳ್ಳಲಾಗುತ್ತದೆ. ಪ್ರತಿಯೊಂದಕ್ಕೂ ಒಂದು ಪರಮಾಣು ಗಡಿಯಾರ ಇರಲಿದೆ.
ಈ ಪರಮಾಣು ಗಡಿಯಾರಗಳ ನಿಯೋಜನೆಯು ಡಿಜಿಟಲ್ ವಾಚ್, ಸ್ಮಾರ್ಟ್‌ಫೋನ್ ಮತ್ತು ಲ್ಯಾಪ್‌ಟಾಪ್‌ಗಳಲ್ಲಿ ತೋರಿಸಲಾದ ಸಮಯವನ್ನು ಇನ್ಮುಂದೆ ನಿಖರವಾಗಿ ತೋರಿಸಲಿದೆ. ಅಂದರೆ, ದೇಶದ ಯಾವುದೇ ಮೂಲೆಯಲ್ಲಿದ್ದರೂ ಮಿಲಿ ಸೆಕೆಂಡ್ನಲ್ಲಿಯೂ ಸಹ ಕಿಂಚಿತ್ತು ವ್ಯತ್ಯಾಸ ಕಂಡುಬರಲ್ಲ. ನಿಖರವಾಗಿ ಸಮಯವನ್ನು ಪ್ರದರ್ಶಿಸುತ್ತದೆ ಜತೆಗೆ ಅದೇ ಸಮಯ ಎಲ್ಲರಿಗೂ ಕಾಣಿಸುತ್ತದೆ. ಈ ಹಿಂದೆ ಜಿಪಿಎಸ್ಗೆ ಲಿಂಕ್ ಮಾಡಲಾದ ಬಹು ಮೂಲಗಳ ಡೇಟಾದಿಂದ ಸಮಯ ಆಧರಿಸಲಾಗುತ್ತಿತ್ತು. ಆದ್ರೆ, ಇನ್ಮುಂದೆ ಇದರ ಬದಲಿಗೆ ಪರಮಾಣು ಗಡಿಯಾರಗಳನ್ನು ಆಧರಿಸಿ, ನಿಖರ ಸಮಯ ನೋಡುವ ಭಾಗ್ಯ ಭಾರತೀಯರಿಗೆ ಸಿಗಲಿದೆ. ಶೀಘ್ರದಲ್ಲೇ, ಪ್ರಾದೇಶಿಕ ಕೇಂದ್ರಗಳು ಎಲ್ಲಾ ಅಂತಿಮ ಬಳಕೆದಾರರಿಗೆ ಸಮಯವನ್ನು ಪ್ರಸಾರ ಮಾಡಲು ನಿರ್ಧರಿಸಿದೆ. ಅದು 'ಒಂದು ರಾಷ್ಟ್ರ, ಒಂದು ಸಮಯ'ದ ಅಡಿ ಎಂಬುದು ವಿಶೇಷ.
"ಭಾರತದ ಸ್ವಂತ ನಿಖರ ಮತ್ತು ವಿಶ್ವಾಸಾರ್ಹ ಸಮಯ ವಿತರಣಾ ಜಾಲವನ್ನು ಸ್ಥಾಪಿಸುವುದು, ವಿದೇಶಿ ವ್ಯವಸ್ಥೆಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವುದು ಮತ್ತು ರಾಷ್ಟ್ರೀಯ ಭದ್ರತೆಯನ್ನು ಹೆಚ್ಚಿಸುವುದು ಇದರ ಉದ್ದೇಶ" ಎಂದು ಗ್ರಾಹಕ ವ್ಯವಹಾರಗಳ ಮಾಜಿ ಕಾರ್ಯದರ್ಶಿ ರೋಹಿತ್ ಕುಮಾರ್ ಸಿಂಗ್ ತಿಳಿಸಿದ್ದಾರೆ."ಇದು ಸಿಂಕ್ರೊನೈಸ್ಡ್ ಕಾರ್ಯಾಚರಣೆಗಳು, ದಕ್ಷತೆ ಮತ್ತು ಸೈಬರ್ ಬೆದರಿಕೆಗಳ ವಿರುದ್ಧ ಸ್ಥಿತಿಸ್ಥಾಪಕತ್ವವನ್ನು ಖಚಿತಪಡಿಸಿಕೊಳ್ಳುವ ಮೂಲಕ ವಿದ್ಯುತ್ ಗ್ರಿಡ್‌ಗಳು, ದೂರಸಂಪರ್ಕ, ಬ್ಯಾಂಕಿಂಗ್, ರಕ್ಷಣೆ ಮತ್ತು ಸಾರಿಗೆಯಂತಹ ನಿರ್ಣಾಯಕ ಕ್ಷೇತ್ರಗಳಿಗೆ ಹಲವು ಪ್ರಯೋಜನವನ್ನು ಒದಗಿಸುತ್ತದೆ" ಎಂದು ಹೇಳಿದರು,(ಏಜೆನ್ಸೀಸ್).