ಒಂದು ದೇಶ ಒಂದು ಎಲೆಕ್ಷನ್; ರಾಜ್ಯಸಭೆಯಲ್ಲಿ ಬೇಡಿಕೆ, ಸಂಪನ್ಮೂಲ ಪೋಲು ತಡೆಗೆ ಆಗ್ರಹ

fgjh
Published on

ನವದೆಹಲಿ: ಲೋಕಸಭೆ ಮತ್ತು ವಿಧಾನಸಭೆಗಳ ಚುನಾವಣೆಯನ್ನು ದೇಶಾದ್ಯಂತ ಏಕಕಾಲದಲ್ಲಿ ನಡೆಸಬೇಕು ಎಂಬ ಬೇಡಿಕೆ ಗುರುವಾರ ಸಂಸತ್ತಿನಲ್ಲಿ ವ್ಯಕ್ತವಾಗಿದೆ. ಇದರೊಂದಿಗೆ ಏಕಕಾಲದಲ್ಲಿ ಚುನಾವಣೆ ನಡೆಸುವ ವಿಚಾರ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ.

ಲೋಕಸಭೆ ಮತ್ತು ವಿಧಾನಸಭೆ, ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಏಕಕಾಲದಲ್ಲಿ ನಡೆಸಬೇಕು. ಮಾನವ ಸಂಪನ್ಮೂಲ ಮತ್ತು ಹಣಕಾಸು ಸೇರಿ ರಾಷ್ಟ್ರೀಯ ಸಂಪನ್ಮೂಲ ಪೋಲಾಗುವುದನ್ನು ತಡೆಯಲು ಈ ನಿಟ್ಟಿನಲ್ಲಿ ಗಮನಹರಿಸಬೇಕು. ಇದಲ್ಲದೇ ಹೋದರೆ ದೇಶದ ಒಂದಿಲ್ಲೊಂದು ಭಾಗದಲ್ಲಿ ಯಾವಾಗಲೂ ಚುನಾವಣಾ ಮೂಡ್ ಇದ್ದೇ ಇರುತ್ತದೆ ಎಂದು ರಾಜ್ಯಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿ ಸದಸ್ಯ ಡಿ.ಪಿ.ವಾಟ್ಸ್ ಆಗ್ರಹಿಸಿದರು. ಏಕಕಾಲದಲ್ಲಿ ಚುನಾವಣೆ ನಡೆಸುವ ವಿಚಾರವನ್ನು ಈ ಹಿಂದೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಪ್ರಸ್ತಾಪಿಸಿದ್ದರು. ಇದಕ್ಕೆ ಪೂರಕವೆಂಬಂತೆ ನೀತಿ ಆಯೋಗವು ಈ ನಿಟ್ಟಿನಲ್ಲಿ ಅಧ್ಯಯನ ನಡೆಸಿ ಕಾಲಕಾಲಕ್ಕೆ ಆಗಬೇಕಾದ ಬದಲಾವಣೆಗಳ ಕುರಿತು ಚರ್ಚಾ ಪತ್ರ, ವರದಿ, ಶಿಫಾರಸುಗಳನ್ನು ಕೇಂದ್ರ ಸರ್ಕಾರಕ್ಕೆ ನೀಡುತ್ತಿದೆ. ಅಂತೆಯೇ ಏಕಕಾಲದಲ್ಲಿ ಚುನಾವಣೆ ನಡೆಸುವ ಕುರಿತು ಅದು 2016ರಲ್ಲಿ ‘ಅನಾಲಿಸಿಸ್ ಆಫ್ ಸೈಮಲ್ಟೇನಿಯಸ್ ಇಲೆಕ್ಷನ್ಸ್: ದ ವಾಟ್, ವೈ ಆಂಡ್ ಹೌ’ ಎಂಬ 36 ಪುಟಗಳ ಚರ್ಚಾ ಪತ್ರವನ್ನು ಪ್ರಕಟಿಸಿತ್ತು.

ಇಂಧನ ಬೆಲೆ ಏರಿಕೆಗೆ ಸಮರ್ಥನೆ: ದೇಶಾದ್ಯಂತ ಇಂಧನ ಬೆಲೆ ಏರಿಕೆ ಆಗುತ್ತಿರುವುದನ್ನು ಪೆಟ್ರೋಲಿಯಂ ಸಚಿವ ಹರ್​ದೀಪ್ ಸಿಂಗ್ ಪುರಿ ಗುರುವಾರ ಸಮರ್ಥಿಸಿಕೊಂಡಿದ್ದಾರೆ. ಅಂತಾರಾಷ್ಟ್ರೀಯ ಮಾರುಕಟ್ಟೆಯ ದರಗಳ ಏರಿಳಿತಕ್ಕೆ ತಕ್ಕಂತೆ ಇದು ನಡೆಯುತ್ತಿದೆ. ಆದಾಗ್ಯೂ, ಜನರಿಗೆ ಕೈಗೆಟಕುವ ದರದಲ್ಲಿ ಇಂಧನ ಲಭ್ಯವಾಗುವಂತೆ ಮಾಡಲು ಸರ್ಕಾರ ಪ್ರಯತ್ನ ನಡೆಸಿದೆ ಎಂದು ಸಚಿವ ಪುರಿ ಲೋಕಸಭೆಗೆ ತಿಳಿಸಿದರು.

ರೈತರ ಆದಾಯ ಕುಸಿತಕ್ಕೆ ಕಳವಳ: ಕೆಲವು ರಾಜ್ಯಗಳಲ್ಲಿ 2015-16 ಮತ್ತು 2018-19ರ ನಡುವೆ ಕೃಷಿಕರ ಆದಾಯದಲ್ಲಿ ಕುಸಿತ ಕಂಡಿದೆ. ಜಾರ್ಖಂಡ್​ನಲ್ಲಿ 7,068 ರೂಪಾಯಿ ಇದ್ದದ್ದು, 4,895 ರೂ., ಮಧ್ಯ ಪ್ರದೇಶದಲ್ಲಿ 9,740 ರೂಪಾಯಿ ಇದ್ದದ್ದು 8,339 ರೂಪಾಯಿ, ನಾಗಾಲ್ಯಾಂಡ್​ನಲ್ಲಿ 11,428 ರೂ. ಇದ್ದದ್ದು 9,877 ರೂಪಾಯಿ, ಒಡಿಶಾದಲ್ಲಿ 5,274 ರೂ. ಇದ್ದದ್ದು 5, 112 ರೂಪಾಯಿ ಆಗಿದೆ. ರಾಷ್ಟ್ರೀಯ ಸರಾಸರಿ 8,059 ರೂಪಾಯಿಯಿಂದ 10,218 ರೂಪಾಯಿಗೆ ಏರಿದೆ ಎಂದು ಕೃಷಿ ಸಂಬಂಧಿತ ಸಂಸದೀಯ ಸ್ಥಾಯಿ ಸಮಿತಿ ವರದಿ ಕಳವಳ ವ್ಯಕ್ತಪಡಿಸಿದೆ.

ವಂಚನೆ ತನಿಖೆಗೆ ಹಿನ್ನಡೆ: ಬಿಜೆಪಿಯೇತರ ಆಳ್ವಿಕೆಯ ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಛತ್ತೀಸ್​ಗಢ, ಪಂಜಾಬ್, ರಾಜಸ್ಥಾನ ಸೇರಿ ಐದು ರಾಜ್ಯಗಳಲ್ಲಿ ಬ್ಯಾಂಕುಗಳಿಗೆ 21,000 ಕೋಟಿ ರೂಪಾಯಿ ವಂಚಿಸಿರುವ ಪ್ರಕರಣದ ಸಿಬಿಐ ತನಿಖೆಗೆ ಹಿನ್ನಡೆ ಆಗಿದೆ. ಸಿಬಿಐ ತನಿಖೆಗೆ ಈ ರಾಜ್ಯಗಳು ಅನುಮತಿ ನೀಡದೇ ಇರುವುದೇ ಇದಕ್ಕೆ ಕಾರಣ ಎಂದು ರಾಜ್ಯಸಭೆಗೆ ಕೇಂದ್ರ ಸರ್ಕಾರ ತಿಳಿಸಿದೆ.

ನೌಕರಿಗೆ ಆನ್​ಲೈನ್ ಟೆಸ್ಟ್: ಸರ್ಕಾರಿ ಉದ್ಯೋಗಗಳಿಗೆ ಆನ್​ಲೈನ್ ಟೆಸ್ಟ್ ನಡೆಸಲು ಸರ್ಕಾರ ತೀರ್ವನಿಸಿದೆ. ಇದಕ್ಕೆ ಪರಿಣತ ಸಲಹಾ ಸಮಿತಿಯನ್ನು ನ್ಯಾಷನಲ್ ರಿಕ್ರೂಟ್​ವೆುಂಟ್ ಏಜೆನ್ಸಿ (ಎನ್​ಆರ್​ಎ) ರಚಿಸಿದ್ದು, ಕಾಮನ್ ಎಲಿಜಿಬಿಲಿಟಿ ಟೆಸ್ಟ್ (ಸಿಇಟಿ)ಗೆ ಸಾಮಾನ್ಯ ಪಠ್ಯಕ್ರಮ, ಯೋಜನೆಗಳನ್ನು ಸಿದ್ಧಪಡಿಸಿ ಶಿಫಾರಸು ಮಾಡಲು ಸಲಹಾ ಸಮಿತಿಗೆ ಸೂಚಿಸಲಾಗಿದೆ.

ಸಂಸತ್​ನಲ್ಲಿ ಕೇಳಿದ್ದು

  •  ಮಾಧ್ಯಮಗಳ ಮೇಲೆ ನಿಗಾ ಇರಿಸುವುದಕ್ಕೆ ಮಾಧ್ಯಮ ಆಯೋಗ ರಚಿಸುವ ವಿಚಾರವನ್ನು ಇನ್ನೂ ಪರಿಗಣಿಸಲಾಗಿಲ್ಲ ಎಂದ ಸರ್ಕಾರ
  •  ಅದಾನಿ , ಎಲ್​ಆಂಡ್​ಟಿ ಕಂಪನಿಗಳು ಉಪಗ್ರಹ ನಿರ್ವಣ, ಉಡಾವಣೆಗೆ ಆಸಕ್ತಿ ತೋರಿಸಿವೆ ಎಂದು ಸರ್ಕಾರ ತಿಳಿಸಿದೆ.
  •  ಇತ್ತೀಚೆಗೆ ನಡೆದ ಪಂಚರಾಜ್ಯ ಚುನಾವಣೆಯಲ್ಲಿ 760 ಮಹಿಳೆಯರು ಸ್ಪರ್ಧಿಸಿದ್ದು, 76 ಮಹಿಳೆಯರು ಗೆಲುವು ಕಂಡಿದ್ದಾರೆ.
  •  ಕ್ರಿಪ್ಟೋಕರೆನ್ಸಿಯನ್ನು ತೆರಿಗೆ ವ್ಯಾಪ್ತಿಗೆ ತರುವುದಕ್ಕಾಗಿ ನಿಯಮ ಬಿಗಿಗೊಳಿಸುವ ಪ್ರಸ್ತಾವನೆಯೊಂದಿಗೆ ಹಣಕಾಸು ಮಸೂದೆ 2022 ಅನ್ನು ಸರ್ಕಾರ ಇಂದು ಲೋಕಸಭೆಯಲ್ಲಿ ಮಂಡಿಸಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net