ದೇವರಿಗೆ ಶರಣಾಗುವಂತೆ ಜೀವನಕ್ಕೂ ಸರೆಂಡರ್ ಆಗಿಬಿಡಬೇಕು

Untitled design (1)
Published on

ನನ್ನದು ಸಕ್ಸಸ್ ಸ್ಟೋರಿ ಎಂದು ಹೇಳುವುದಿಲ್ಲ, ಬದಲಾಗಿ ಕರಿಯರ್ ಸ್ಟೋರಿ ಅಂತ ಹೇಳಲು ಇಚ್ಛಿಸುತ್ತೇನೆ. ಮುಂದಿನ ದಿನಗಳಲ್ಲಿ ಸಕ್ಸಸ್ ಸ್ಟೋರಿ ಆಗುತ್ತೆ ಎಂಬ ಭರವಸೆ ಇದೆ. ಇದುವರೆಗೆ 60 ಚಿತ್ರಗಳಲ್ಲಿ ನಟಿಸಿದ್ದೇನೆ. ಎಲ್ಲ ಸಿನಿಮಾಗಳಲ್ಲೂ ಒಳ್ಳೆಯವನೆಂಬ ಇಮೇಜ್ ಇದೆ. 2010ರಿಂದ 2020ರವರೆಗೂ ನನ್ನ ಸಿನಿಮಾಗಳು ಜನರಿಗೆ ರೀಚ್ ಆಗದೇ ಒಂದು ಗ್ಯಾಪ್ ಸೃಷ್ಟಿಯಾಗಿತ್ತು. ಸೋಲಬೇಕು ಅಂತ ಯಾರೂ ಸಿನಿಮಾ ಮಾಡುವುದಿಲ್ಲ. ಆದರೂ ನಾನು ನಟಿಸಿರುವ ಶೇ. 60ರಷ್ಟು ಸಿನಿಮಾಗಳು ಸೋತವು. ನಾವು ಕೇಳಿದ ಕಥೆ ಕೆಲವೊಮ್ಮೆ ಅದೇ ರೀತಿ ತೆರೆಯ ಮೇಲೆ ಬರುವುದಿಲ್ಲ. ಅದಕ್ಕೆ ಬಜೆಟ್, ಪ್ರಚಾರದ ಕೊರತೆ ಮುಂತಾದ ಕಾರಣಗಳಿರುತ್ತವೆ. ಕೆಲವೊಮ್ಮೆ ಚೆನ್ನಾಗಿ ಪ್ರಚಾರ ಮಾಡಿದ್ದರೂ ರಿಲೀಸ್​ನಲ್ಲಿ ಹೆಚ್ಚೂಕಮ್ಮಿ ಆಗಿರುತ್ತದೆ. ಅಂದುಕೊಂಡ ಸಮಯಕ್ಕೆ ಸರಿಯಾಗಿ ಶೂಟಿಂಗ್ ಆಗುವುದಿಲ್ಲ. ಚಿತ್ರೀಕರಣ ಮುಗಿದರೂ ರಿಲೀಸ್ ತಡವಾಗುತ್ತದೆ. ನಾನೇನೋ ಒಂದರ ಬಳಿಕ ಮತ್ತೊಂದು ಸಿನಿಮಾ ಮಾಡುತ್ತೇನೆ. ಆದರೆ, ಕೆಲ ಚಿತ್ರಗಳ ಬಿಡುಗಡೆ ತಡವಾಗಿ, ಒಂದೇ ವರ್ಷ ನಾಲ್ಕೈದು ಚಿತ್ರಗಳು ತೆರೆಕಾಣಲು ರೆಡಿಯಾಗಿಬಿಟ್ಟಿರುತ್ತವೆ. ಹಾಗಾಗಿ ಯಶಸ್ಸನ್ನು ನನ್ನದು ಅಂತ ಒಪ್ಪಿಕೊಳ್ಳುವಂತೆ, ಸೋಲನ್ನೂ ನನ್ನದು ಅಂತ ಒಪ್ಪಿಕೊಳ್ಳಬೇಕು. ಜನರು ಒಮ್ಮೆ ನನ್ನಿಂದ ಮುಖ ತಿರುಗಿಸಿಕೊಂಡುಬಿಟ್ಟರೆ, ತಿಪ್ಪರಲಾಗ ಹಾಕಿದರೂ ನನಗೆ ಅವಕಾಶಗಳು ಸಿಗುವುದಿಲ್ಲ. ಅವರ ಮನಸ್ಸಿನಲ್ಲಿ ನನಗೆ ಸ್ವಲ್ಪ ಜಾಗವಿದೆ. ‘ವಿಜಯ್ಗೆ ತುಂಬ ಪ್ರತಿಭೆ ಇದೆ, ಒಳ್ಳೆಯ ಪಾತ್ರ ಬರಬೇಕು’ ಅಂತಾರೆ. ಅದರಿಂದಲೇ ಅವಕಾಶಗಳು ಸಿಗುತ್ತಿವೆ. ‘ಸೀತಾರಾಮ್ ಬಿನೋಯ್’, ‘ಮಾಲ್ಗುಡಿ ಡೇಸ್’, ‘ರಾಘು’, ‘ಮರೀಚಿ’, ‘ಕದ್ದ ಚಿತ್ರ’, ‘ಕೇಸ್ ಆಫ್ ಕೊಂಡಾಣ’, ಇದೀಗ ರಿಲೀಸ್​ಗೆ ರೆಡಿಯಾಗಿರುವ ‘ರಿಪ್ಪನ್ ಸ್ವಾಮಿ’ ಚಿತ್ರಗಳಲ್ಲಿ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದೇನೆ.

ಒಳ್ಳೆಯ ತಂಡ ಜತೆಗಿರಬೇಕು: ಎಲ್ಲರಿಗೂ ನೂರಾರು ಆಸೆಗಳಿರುತ್ತವೆ. ಕೆಲವೊಮ್ಮೆ ಅನಿವಾರ್ಯತೆಯೂ ಇರುತ್ತದೆ. ‘ಕಿಸ್ಮತ್’ ಆಗಿದ್ದೂ ಹಾಗೇ. ಒಂದು ಸಿನಿಮಾ ನಿರ್ದೇಶಿಸಬೇಕು ಅಂತ ಹೋಗಿ, ನಿರ್ವಣವನ್ನೂ ಮಾಡಿ, ನಟಿಸಿದೆ. ಆದರೆ, ಶೂಟಿಂಗ್ ಬಳಿಕ ಒಂದು ತಾಂತ್ರಿಕ ತಂಡ ಇರಬೇಕು. ಅದಿಲ್ಲದೆ ನನ್ನೊಬ್ಬನ ಕೈಯಲ್ಲಿ ಏನೂ ಆಗುವುದಿಲ್ಲ. ಮತ್ತೆ ನಿರ್ದೇಶನ ಮಾಡಬೇಕೆಂಬ ಆಸೆ ಇದೆಯಾದರೂ ಅಂತಹ ಒಂದು ಗಟ್ಟಿಯಾದ ತಾಂತ್ರಿಕ ತಂಡ ಕಟ್ಟಿಕೊಂಡು ನಂತರ ನಿರ್ದೇಶನದ ಬಗ್ಗೆ ಯೋಚಿಸುತ್ತೇನೆ. ಅಲ್ಲಿಯವರೆಗೂ ನಟನೆಯನ್ನೇ ಮುಂದುವರಿಸಿಕೊಂಡು ಹೋಗಲು ನಿರ್ಧರಿಸಿದ್ದೇನೆ.

16 ವರ್ಷಗಳ ಸಂಗಾತಿ: ಸ್ಪಂದನಾ... 16 ವರ್ಷ ನನ್ನೊಂದಿಗಿದ್ದ ಜೀವನ ಸಂಗಾತಿ. ಜತೆಯಲ್ಲಿದ್ದಾಗ ಹೀಗಾಗುತ್ತೆ ಎಂಬ ಕಲ್ಪನೆಯೇ ಇರಲಿಲ್ಲ. ಈಗ ಮಾತನಾಡಿಕೊಳ್ಳುವಂತೆ ಆಗಿಹೋಯಿತಲ್ಲಾ ಅಂತ ಅಂದುಕೊಳ್ಳಲು ಸಹ ನನಗೆ ಇಷ್ಟವಿಲ್ಲ. ಸ್ಪಂದನಾ ನಮ್ಮ ಮನೆಯ ಬಗ್ಗೆ ಮಾತ್ರ ಯೋಚನೆ ಮಾಡುತ್ತಿರಲಿಲ್ಲ. ನನ್ನ ತಂದೆ-ತಾಯಿ, ಆಕೆಯ ತಂದೆ-ತಾಯಿ, ಸಂಬಂಧಿಕರು, ಆಪ್ತರು ಎಲ್ಲರ ಬಗ್ಗೆ ಯೋಚಿಸುತ್ತಿದ್ದಳು. ಹಲವು ಪ್ಲಾ್ಯನ್​ಗಳನ್ನು ಮಾಡಿಕೊಂಡಿದ್ದಳು. ‘ಕದ್ದ ಚಿತ್ರ’ ಸಿನಿಮಾದ ಮೇಲೆ ಆಕೆಗೆ ತುಂಬ ನಂಬಿಕೆ ಇತ್ತು. ‘ರಾಘು’ ಮಾಡುವಾಗ ತುಂಬ ಖುಷಿಪಟ್ಟಿದ್ದಳು. ‘ರಿಪ್ಪನ್​ಸ್ವಾಮಿ’ ನೋಡಿದ್ದರೆ ಇನ್ನೂ ಹೆಚ್ಚು ಖುಷಿಪಡುತ್ತಿದ್ದಳು. 3 ವರ್ಷಗಳ ಹಿಂದೆ ಪ್ರತಿದಿನ ಕೊರಗಜ್ಜನ ಬಗ್ಗೆ ಪೋಸ್ಟ್ ಹಾಕುತ್ತಿದ್ದಳು. ದಸರಾದಲ್ಲಿ 9 ದಿನ 9 ಬಣ್ಣಗಳ ಸೀರೆಯುಟ್ಟು, ಗೆಳತಿಯ ಜತೆ ಪ್ರತಿದಿನ ದೇವಸ್ಥಾನಕ್ಕೆ ಹೋಗುತ್ತಿದ್ದಳು. ಅವಳು ದೂರ ಆಗಿದ್ದಾಳೆ ಅಂತ ಅನ್ನಿಸುತ್ತಿಲ್ಲ. ಹೀಗಾಗಿ ಈಗಲೂ ಜಾಲತಾಣದಲ್ಲಿ ನಾನು ಏನೇ ಪೋಸ್ಟ್ ಮಾಡಿದರೂ ಸ್ಪಂದನಾಗೆ ಟ್ಯಾಗ್ ಮಾಡುತ್ತೇನೆ.

ನನ್ನ ಪಾಲಿನ ಅತಿದೊಡ್ಡ ಶಕ್ತಿ: 2023ರ ಆಗಸ್ಟ್​ನಲ್ಲಿ ಸ್ಪಂದನಾ ವಿಧಿವಶರಾದರು. ಅದೇ ಅಕ್ಟೋಬರ್​ನಲ್ಲಿ ‘ರಿಪ್ಪನ್ ಸ್ವಾಮಿ’ ಚಿತ್ರೀಕರಣ ಪ್ರಾರಂಭವಾಯಿತು. ಆಗ ನನ್ನ ಭಾವನೆಗಳನ್ನು ಹಿಡಿದಿಟ್ಟುಕೊಳ್ಳಲು ಕಷ್ಟವಾಗುತ್ತಿತ್ತು. ಕೆಲವೊಮ್ಮೆ ಆಕ್ರಮಣಕಾರಿ ಆಗಿಬಿಡುತ್ತಿದ್ದೆ. ನೋವು, ಭಾವನೆಗಳನ್ನು ಬ್ಯಾಲೆನ್ಸ್ ಮಾಡಲು ಕಷ್ಟವಾಗುತ್ತಿತ್ತು. ಅದನ್ನೆಲ್ಲ ಕೆಲಸದ ಕಡೆ ಡೈವರ್ಟ್ ಮಾಡಿದೆ. ಕ್ರಮೇಣ ಬ್ಯಾಲೆನ್ಸ್ ಸಾಧ್ಯವಾಯಿತು. ಸ್ಪಂದನಾ ಯಾವಾಗಲೂ ‘ಕಥೆಗಾರರು, ತಂತ್ರಜ್ಞರ ಒಂದು ತಂಡ ಮಾಡಿಕೊಳ್ಳಿ. ಅಧ್ಯಾತ್ಮ, ಆಕ್ಷನ್, ಸೂಪರ್ ನ್ಯಾಚುರಲ್ ಅಂತೆಲ್ಲ ಹಲವು ವಿಷಯಗಳ ಬಗ್ಗೆ ಮಾತಾಡ್ತೀರಿ. ನಿಮಗೆ ಇಷ್ಟವಾಗುವ ಕಥೆಯನ್ನು ತಂಡದ ಜತೆ ಕುಳಿತು ನೀವೇ ಮಾಡಿ’ ಎನ್ನುತ್ತಿದ್ದಳು. ಆಕೆ ನನ್ನ ಸಿನಿಮಾಗಳ ಮುಹೂರ್ತಕ್ಕೂ ಹೆಚ್ಚು ಬರುತ್ತಿರಲಿಲ್ಲ. ನಾನು ಒತ್ತಾಯಿಸಿದಾಗ ಮಾತ್ರ ಬರುತ್ತಿದ್ದಳು. ಸಿನಿಮಾ ಗೆದ್ದಾಗ ಸುಮ್ಮನಿರುತ್ತಿದ್ದಳು. ಸೋತಾಗ ಧೈರ್ಯ ಹೇಳುವುದನ್ನು ಮರೆಯುತ್ತಿರಲಿಲ್ಲ. ನನಗೆ ಆನ್​ಲೈನ್ ಶಾಪಿಂಗ್ ಕ್ರೇಜ್. ಹೆಚ್ಚು ಶಾಪಿಂಗ್ ಮಾಡಿದರೆ ಬೈಯುತ್ತಿದ್ದಳು. ನನ್ನ ಪಾಲಿನ ಅತಿದೊಡ್ಡ ಶಕ್ತಿಯಾಗಿದ್ದಳು.

ಹೊಗಳಿಕೆ ಬಗ್ಗೆ ಭಯ: ನನ್ನನ್ನು ಯಾರಾದರೂ ತುಂಬ ಹೊಗಳಿಬಿಟ್ಟರೆ ನನಗೆ ಭಯವಾಗುತ್ತಿತ್ತು. ‘ವಂಶೋದ್ಧಾರಕ’ ಚಿತ್ರ ನೋಡಿದ ಒಬ್ಬರು ತುಂಬ ಹೊಗಳಿದರು. ನಾನು ಹೆದರಿ ಸ್ಪಂದನಾಗೆ ಕಾಲ್ ಮಾಡಿ, ‘ಅಳು ಬರುತ್ತಿದೆ’ ಅಂದೆ. ಆಗ ಅವಳು ‘ನೀವೇನ್ರೀ ಸಿನಿಮಾ ಸೋತರೂ ಅಳುತ್ತೀರಾ, ಗೆದ್ದರೂ ಅಳುತ್ತೀರಾ? ಸುಮ್ಮನೆ ಕಾರ್ಯಕ್ರಮ ಮುಗಿಸಿಕೊಂಡು ಮನೆಗೆ ಬನ್ನಿ’ ಅಂತ ಗದರಿಸಿದ್ದಳು. ಆಕೆ ನನ್ನ ಅದ್ಭುತ ವಿಮರ್ಶಕಿಯಾಗಿದ್ದಳು. ಹೂಡಿಕೆ ಮಾಡಬೇಕು, ಹಣ ಕೂಡಿಡಬೇಕು ಅಂತೆಲ್ಲ ಅಂದುಕೊಳ್ಳುತ್ತಿದ್ದಳು. ಜಕ್ಕೂರಿನಲ್ಲಿ ನಾವಿದ್ದ ಮನೆಯ ಪಕ್ಕದ ಮತ್ತೊಂದು ಮನೆ ಖರೀದಿಸಿ, 3 ಬೆಡ್​ರೂಮ್ ಮನೆಯನ್ನು 5 ಬೆಡ್​ರೂಮ್ ಮನೆ ಮಾಡಲು ಪ್ಲಾ್ಯನ್ ಮಾಡಿದ್ದೆವು. ಬ್ಯಾಂಕಾಕ್​ನಿಂದ ಬಂದ ಬಳಿಕ ಲೋನ್ ಓಕೆ ಆಗುತ್ತಿದ್ದಂತೆಯೇ ಕೆಲಸ ಪ್ರಾರಂಭಿಸಬೇಕಿತ್ತು. ಅದು ಸ್ಪಂದನಾಳ ದೊಡ್ಡ ಕನಸಾಗಿತ್ತು. ಆದರೆ, ಸಾಕಾರವಾಗಲಿಲ್ಲ. ಬಳಿಕ ನಾನು ಆ ಮನೆಯನ್ನು ಮಾರಿಬಿಟ್ಟೆ.

ನೋವನ್ನು ಮರೆಯಲು ಇಷ್ಟವಿಲ್ಲ: ಅವಳ ಭಯದಿಂದಲೇ ಈಗ ಮತ್ತೆ ವರ್ಕೌಟ್ ಪ್ರಾರಂಭಿಸಿದ್ದೇನೆ. ‘ಶೂಟಿಂಗ್ ಲೇಟಾಯಿತು, ಸುಸ್ತಾಗಿದೆ, ಇವತ್ತು ವರ್ಕೌಟ್​ಗೆ ಹೋಗುವುದಿಲ್ಲ’ ಎಂದರೆ, ‘ನೀವೇನು ಇಟ್ಟಿಗೆ-ಕಲ್ಲು ಹೊತ್ತು ಬಂದಿಲ್ಲ, ಶೂಟಿಂಗ್​ಗೆ ತಾನೆ ಹೋಗಿದ್ದು? ಎದ್ದು ವರ್ಕೌಟ್ ಮಾಡಿ ಹೋಗಿ’ ಅಂತ ಗದರಿಸಿ ಕಳುಹಿಸುತ್ತಿದ್ದಳು. ನಾನು ಯಾವತ್ತೂ ಆ ದುಃಖ, ನೋವನ್ನು ಮರೆಯುವ ಕೆಲಸ ಮಾಡಿಲ್ಲ. ಆ ಭಾವನೆಗಳನ್ನೂ ಆಲಂಗಿಸಿ, ಅನುಭವಿಸಿ ಸಂಪೂರ್ಣವಾಗಿ ಅದರಲ್ಲಿರಬೇಕು ಎಂದುಕೊಳ್ಳುತ್ತೇನೆ.

ಜೀವನಕ್ಕೆ ಸರೆಂಡರ್ ಆಗಬೇಕು: ನಾವು ಜೀವನಕ್ಕೆ ಸರೆಂಡರ್ ಆಗಬೇಕು. ಹಾಗಾದರೆ ಮಾತ್ರ ಜೀವನ ತನ್ನಿಂತಾನೇ ನಮಗೆ ಏನು ಕೊಡಬೇಕೋ ಅದನ್ನು ಕೊಡುತ್ತದೆ. ನನಗೆ ಮೊದಲಿನಿಂದಲೂ ಅಧ್ಯಾತ್ಮದ ಬಗ್ಗೆ ಹೆಚ್ಚು ಆಸಕ್ತಿ. ಧ್ಯಾನ, ಶಕ್ತಿ, ವೈಬ್ರೇಷನ್ ನಂಬುತ್ತೇನೆ. ಹಾಗಂತ, ಆದ ನಷ್ಟದಿಂದ ಹೊರಬರಲು ನನಗೆ ಇಷ್ಟವಿಲ್ಲ. ಅದು ನನ್ನ ಜೀವನದ ಸತ್ಯ. ಅದರಿಂದ ಹೊರಬರಲು ಆಗುವುದಿಲ್ಲ. ಅದರಲ್ಲಿದ್ದೇ ಬದುಕಬೇಕು. ಒಮ್ಮೊಮ್ಮೆ ಇದ್ದಕ್ಕಿದ್ದಂತೆಯೇ ಅಳು ಬಂದುಬಿಡುತ್ತದೆ. ಎಷ್ಟೋ ಸಲ ಅಕ್ಕಪಕ್ಕ ಯಾರಿದ್ದಾರೆ ಅಂತಲೂ ನೋಡದೇ ಅತ್ತುಬಿಟ್ಟಿದ್ದೇನೆ. ಅದೇ ಜೀವನ. ನಾವು ಅದನ್ನು ಪ್ರಶ್ನೆ ಮಾಡಬಾರದು. ‘ನಮಗೇ ಯಾಕೆ ಹೀಗೆ’ ಅಂತ ಕೇಳುವ ಅಧಿಕಾರ ಇಲ್ಲ. ಆ ಪ್ರಶ್ನೆಗೆ ಸಿಗುವ ಉತ್ತರವನ್ನು ಸ್ವೀಕರಿಸಲು ನಮ್ಮಿಂದ ಸಾಧ್ಯವಾಗುವುದಿಲ್ಲ. ಹೀಗಾಗಿ, ದೇವರಿಗೆ ಸರೆಂಡರ್ ಆಗುವಂತೆ, ಜೀವನಕ್ಕೆ ಅಥವಾ ನಮ್ಮ ಸುತ್ತಲಿನ ಶಕ್ತಿಗಳಿಗೆ ಸರೆಂಡರ್ ಆಗಿಬಿಡಬೇಕು.

ಮದುವೆ ಆಲೋಚನೆ ಇಲ್ಲ: ನನ್ನ ಜೀವನದಲ್ಲಿ ಹೀಗಾಗುತ್ತೆ ಅಂತ ನಾನೆಂದೂ ಅಂದುಕೊಂಡಿರಲಿಲ್ಲ. ಮುಂದೆ ಏನಾಗುತ್ತೆ ಅಂತನೂ ಗೊತ್ತಿಲ್ಲ. ಈಗಿನ ಪರಿಸ್ಥಿತಿಯಲ್ಲಿ ಮತ್ತೊಂದು ಮದುವೆಯ ಯೋಚನೆಯೂ ಇಲ್ಲ. ಆಗಬೇಕು ಅಂತ ಅನಿಸಿಲ್ಲ. ನನ್ನ ಗಮನ ಈಗ ನಾನು, ನನ್ನ ಮಗ ಮತ್ತು ಕೆಲಸ ಅಷ್ಟೇ. ‘ಶೌರ್ಯನಿಗಾಗಿ ಯೋಚನೆ ಮಾಡಬೇಕಲ್ಲವೇ?’ ಅಂತ ಕೆಲವು ಗೆಳೆಯರು ಕೇಳಿದ್ದಿದೆ. ನನಗೆ ಒಬ್ಬನೇ ಇರುವುದು ರೂಢಿ. ಆದರೆ, ಯಾರೂ ನನ್ನನ್ನು ಒಬ್ಬನೇ ಇರಲು ಬಿಟ್ಟಿಲ್ಲ. ಅಕ್ಕ, ಅತ್ತೆ, ಅಕ್ಕನ ಮಕ್ಕಳು, ಸ್ನೇಹಿತರು ಎಲ್ಲರೂ ಬಂದು ಹೋಗುತ್ತಿರುತ್ತಾರೆ. ಈತ ಇನ್ಮುಂದೆ ಹೇಗೆ ಮ್ಯಾನೇಜ್ ಮಾಡ್ತಾನೆ ಅಂತ ಅಂದುಕೊಂಡಿರುತ್ತಾರೆ. ಅವರ ಪ್ರಾರ್ಥನೆಗಳಲ್ಲಿ ನಾನಿದ್ದೇನೆ, ಅಷ್ಟು ಸಾಕು.

ಸ್ಪಂದನಾ ಜತೆ ಈಗಲೂ ಮಾತಾಡ್ತೀನಿ: ಐ ಫೀಲ್ ಹರ್ ಪ್ರೆಸೆನ್ಸ್. ಒಬ್ಬನೇ ಕುಳಿತಿರುವಾಗ, ತುಂಬ ಖುಷಿಯಾದಾಗ, ಬೇಸರವಾದಾಗ ಆಕೆಯ ಜತೆ ಒಂದು ಸಣ್ಣ ಸಂಭಾಷಣೆ ಇರುತ್ತದೆ. ಹಿಂದೆ, ಯಾರಾದರೂ ನೆಗೆಟಿವ್ ಕಮೆಂಟ್ ಮಾಡಿದ್ದನ್ನು ನಾನು ನೋಡಿದರೆ, ‘ಯಾಕೆ ನೋಡುತ್ತೀರಾ? ನೋಡಬೇಡಿ’ ಎನ್ನುತ್ತಿದ್ದಳು. ಈಗಲೂ ಅಂತಹ ಕಮೆಂಟ್ ಬಂದರೆ, ಆಕೆ ಇದ್ದಿದ್ದರೆ ಏನು ಹೇಳುತ್ತಿದ್ದಳು ಅಂತ ನೆನಪಿಸಿಕೊಳ್ಳುತ್ತೇನೆ, ಹಾಗೇ ಮಾಡುತ್ತೇನೆ. ಕೆಟ್ಟ ಕಮೆಂಟ್ ಬಗ್ಗೆ ನಾನು ಪ್ರತಿಕ್ರಿಯೆ ಕೊಟ್ಟರೆ ಮತ್ತೆ ಕಿಡಿ ಹಚ್ಚಿದಂತಾಗುತ್ತದೆ. ನನ್ನ ಪರ ಇರುವ ಸಾಕಷ್ಟು ಜನರನ್ನು ದೇವರು ಕೊಟ್ಟಿದ್ದಾನೆ. ಅದನ್ನು ಉಳಿಸಿಕೊಂಡು ಹೋಗಬೇಕಷ್ಟೆ. ಮದುವೆ ವಿಚಾರದಲ್ಲಿ ತುಂಬ ಕಮೆಂಟ್ಸ್ ಬರುತ್ತಿದ್ದವು. ಮೊದಲು ಕೋಪ ಬರುತ್ತಿತ್ತು. ಆದರೆ ಸಂಯಮ ಕಲಿತಿದ್ದೇನೆ. ಪ್ರತಿಕ್ರಿಯೆ ನೀಡುವುದಿಲ್ಲ. ನಾನು, ಶೌರ್ಯ ಸೇರಿ ನಗುತ್ತೇವೆ.

ಜನ ಗಮನಿಸುತ್ತಿರುತ್ತಾರೆ: ಹೊಸಬರು ನಮ್ರತೆಯಿಂದ ಇರಬೇಕು. ಜನ ಹತ್ತಿರದಿಂದ ನಮ್ಮನ್ನು ನೋಡುತ್ತಿರುತ್ತಾರೆ. ನಮ್ಮ ಪ್ರತಿಯೊಂದು ಚಲನವಲನವೂ ಅವರಿಗೆ ಗೊತ್ತು. ಕ್ಯಾಮರಾ ಮುಂದೆ ಹೇಗಿರ್ತೀವಿ, ಕ್ಯಾಮರಾ ಹಿಂದೆ ಹೇಗಿರ್ತೀವಿ ಎಲ್ಲವನ್ನೂ ಗಮನಿಸುತ್ತಾರೆ. ಈಗಿನ ಹುಡುಗರು ಚಿತ್ರರಂಗಕ್ಕೆ ಬಂದ ತಕ್ಷಣ ಯಶ್ ಆಗಬೇಕು, ದರ್ಶನ್, ಉಪೇಂದ್ರ, ಅಪು್ಪ ಆಗಬೇಕು ಅಂದುಕೊಳ್ಳುತ್ತಾರೆ. ಆದರೆ, ಅವರೆಲ್ಲ ನಡೆದು ಬಂದ ಕಷ್ಟದ ಹಾದಿ ಇವರಿಗೆ ಗೊತ್ತಾ? ಇಲ್ಲ. ಅದನ್ನು ಮೊದಲು ತಿಳಿದುಕೊಳ್ಳಬೇಕು. ಯಶ್ ಸುಮ್ಮನೇ ಯಶ್ ಆಗಲಿಲ್ಲ. ನಮ್ಮ ಜತೆ ‘ಗೋಕುಲ’ ಮಾಡುವಾಗ ಹೇಗಿದ್ದರು ಎಂಬುದನ್ನು ತುಂಬ ಹತ್ತಿರದಿಂದ ನೋಡಿದ್ದೇನೆ. ಸಿನಿಮಾ ಬಗೆಗಿನ ಅವರ ಪ್ರೀತಿ, ವಿನಮ್ರತೆ ಮರೆಯಲು ಆಗುವುದಿಲ್ಲ. ಎಲ್ಲರೂ ಕಷ್ಟಪಡಲೇಬೇಕು. ಯಾವ ಕ್ಷೇತ್ರದಲ್ಲೂ ಶಾರ್ಟ್​ಕಟ್ ಇರುವುದಿಲ್ಲ. ಶಾರ್ಟ್​ಕಟ್ ಹಿಡಿದರೆ ಸಕ್ಸಸ್ ಕೂಡ ಶಾರ್ಟ್ ಆಗಿರುತ್ತದೆ.

ಜೀವನ ಎಂದರೆ...: ಜೀವನ ಕ್ಷಮಾಶೀಲವೂ ಹೌದು, ನಿರ್ದಯಿಯೂ ಹೌದು. ಜೀವನ ಯಾರನ್ನೂ ಅವಲಂಬಿಸಿರುವುದಿಲ್ಲ. ನಾವು ಅದನ್ನು ಅವಲಂಬಿಸಿರುತ್ತೇವೆ. ಸಣ್ಣ ಖುಷಿಗಳಿಗೂ ಧನ್ಯವಾದ ಹೇಳುತ್ತಾ, ಅಗಾಧ ನಂಬಿಕೆ ಇಟ್ಟುಕೊಂಡು ನಮ್ಮ ಕೆಲಸವನ್ನು ನಾವು ಮಾಡುತ್ತಾ ಸಾಗಬೇಕು. ನಿಮ್ಮನ್ನು ನೀವು ಹೇಗೆ ನಡೆಸಿಕೊಳ್ಳುತ್ತೀರೋ, ಎದುರಿಗಿರುವ ವ್ಯಕ್ತಿಯನ್ನೂ ಅಷ್ಟೇ ಗೌರವದಿಂದ ನಡೆಸಿಕೊಳ್ಳಬೇಕು. ಜಾಗೃತರಾಗಿರಬೇಕು, ಕೃತಜ್ಞರಾಗಿರಬೇಕು, ಸಂವೇದನಾಶೀಲರಾಗಿರಬೇಕು, ದಯಾಳುವಾಗಿರಬೇಕು...

ನಿರೂಪಣೆ: ಹರ್ಷವರ್ಧನ್ ಬ್ಯಾಡನೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net