

ಮುಂಬೈ: ಒಂದೇ ಒಂದು ವೈರಲ್ ವಿಡಿಯೋ ಎಷ್ಟೋ ಜನರ ಪಾಲಿಗೆ ವರದಾನವಾಗಿರುವ ಉದಾಹರಣೆಗಳು ನಮ್ಮ ಮುಂದೆ ಸಾಕಷ್ಟಿವೆ.
ಅಂಥದ್ದೇ ಒಂದು ವೈರಲ್ ವಿಡಿಯೋ 75-80 ವರ್ಷದ ಅಜ್ಜಿಯನ್ನು ಇಡೀ ದೇಶ ಗುರುತಿಸುವಂತೆ ಮಾಡಿದೆ. ಮಾತ್ರವಲ್ಲದೇ ನೆರವಿನ ಮಹಾಪೂರವೇ ಹರಿದುಬಂದಿದೆ.
ಅಷ್ಟಕ್ಕೂ ಈ ಅಜ್ಜಿಯೇನು ಸಾಮಾನ್ಯದವರಲ್ಲ. ಈ ಇಳಿವಯಸ್ಸಿನಲ್ಲಿಯೂ ಬತ್ತದ ಉತ್ಸಾಹದಿಂದ, ಲಾಠಿ ತಿರುಗಿಸುತ್ತಾ ನೋಡುಗರನ್ನು ಮಂತ್ರಮುಗ್ಧರನ್ನಾಗಿರುವ ಚಾಕಚಕ್ಯತೆಯುಳ್ಳವರು. ಭಿಕ್ಷೆ ಬೇಡುತ್ತಾ ಜೀವನದ ಸವೆಸುತ್ತಿರುವ ಈ ಅಜ್ಜಿ, ಲಾಠಿಯನ್ನು ಪ್ರಯೋಗಿಸುತ್ತಾ, ಜನರಿಂದ ಭಿಕ್ಷೆ ಬೇಡುತ್ತಿದ್ದಾಳೆ.
ಕೆಲ ದಿನಗಳ ಹಿಂದೆ ಈಕೆಯ ವಿಡಿಯೋ ಮಾಡಿದ್ದ ಸ್ಥಳೀಯರೊಬ್ಬರು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದು. ಅಲ್ಲಿಂದ ಈ ಅಜ್ಜಿಯ ದಿಕ್ಕೇ ಬದಲಾಗಿದೆ.
ನಿನ್ನೆಯಷ್ಟೇ ಚಿತ್ರನಟ ಸೋನು ಸೂದ್, ಈ ಅಜ್ಜಿಯ ನೆರವಿಗೆ ಧಾವಿಸಿ ಈಕೆಯ ವಿಳಾಸವನ್ನು ಕೊಡಿ ಎಂದಿದ್ದರು. ಅಷ್ಟೇ ಅಲ್ಲದೇ ಅನೇಕ ಮಂದಿ ಕೂಡ ನೆರವಿಗೆ ಧಾವಿಸಿದ್ದಾರೆ.
ಇದೀಗ ಖುದ್ದು ಮಹಾರಾಷ್ಟ್ರದ ಗೃಹಸಚಿವ ಅನಿಲ್ ದೇಶ್‌ಮುಖ್ ಅಜ್ಜಿಯ ಶಕ್ತಿಗೆ ಮನಸೋತಿದ್ದಾರೆ. ತಮ್ಮ ಪಕ್ಷದ ವತಿಯಿಂದ ಒಂದು ಲಕ್ಷ ರೂಪಾಯಿ ನೀಡಿರುವ ಅವರು, ಮಹಾರಾಷ್ಟ್ರ ಸ್ಟೈಲ್ ಸೀರೆಯೊಂದನ್ನೂ ಉಡುಗೊರೆಯಾಗಿ ನೀಡಿದ್ದಾರೆ. ಈ ಇಳಿವಯಸ್ಸಿನಲ್ಲಿ ಇಷ್ಟೊಂದು ಉತ್ಸಾಹ, ಚೈತನ್ಯ ಕಂಡು ನಾನು ಮತ್ತಷ್ಟು ಪ್ರೇರೇಪಿತನಾಗಿದ್ದೇನೆ ಎಂದು ಅವರು ಟ್ವೀಟ್ ಮಾಡಿದ್ದಾರೆ.