ಚೀನಾ ಸರ್ಕಾರದ ಮಾಹಿತಿಯಲ್ಲಿದೆ ಕರೊನಾ ಸೋಂಕು ಕುರಿತಾದ ಬೆಚ್ಚಿಬೀಳಿಸೋ ಅಂಶ: ಎಚ್ಚರ ತಪ್ಪಿದರೆ ಅನಾಹುತ ಖಂಡಿತ

Corona
Published on

ಬೀಜಿಂಗ್​: ರೋಗದ ಲಕ್ಷಣಗಳು ಕಂಡುಬರದಿದ್ದರೂ ಸಹ ಮೂರನೇ ಒಂದು ಭಾಗದಷ್ಟು ಜನರಲ್ಲಿ ಕರೊನಾ ವೈರಸ್​ ಸೋಂಕು ಕಂಡುಬಂದಿರುವುದಾಗಿ ಚೀನಾ ಸರ್ಕಾರದ ದಾಖಲೆಗಳು ಹೇಳಿದ್ದು, ಸಾರ್ವಜನಿಕ ವಲಯವನ್ನು ಮತ್ತಷ್ಟು ಚಿಂತೆಗೀಡುಮಾಡಿದೆ.

ಚೀನಾ ಸರ್ಕಾರದ ವರ್ಗೀಕೃತ ಡಾಟಾವನ್ನು ಸೌಥ್​ ಚೀನಾ ಮಾರ್ನಿಂಗ್​ ಪೋಸ್ಟ್​ ಪತ್ರಿಕೆ ಪ್ರಕಟಿಸಿದ್ದು, ಅದರನ್ವಯ ಸದ್ದಿಲ್ಲದೆ ಸೋಂಕು ಕೊಂಡೊಯ್ಯುವ ಜನರ ಸಂಖ್ಯೆ ಹೆಚ್ಚಾಗಬಹುದೆಂದು ಎಚ್ಚರಿಸಿದೆ.

ಫೆಬ್ರವರಿ ಅಂತ್ಯದಲ್ಲಿ 43,000ಕ್ಕೂ ಹೆಚ್ಚು ಮಂದಿಗೆ ಯಾವುದೇ ರೋಗ ಲಕ್ಷಣಗಳಿಲ್ಲದಿದ್ದರೂ ಕರೊನಾ ವೈರಸ್​ ಪಾಸಿಟಿವ್​ ವರದಿ ಬಂದಿತ್ತು. ಅವರನ್ನೂ ಸಹ ಬಂಧನದಲ್ಲಿ ಇಡಲಾಗಿತ್ತು. ಆದರೆ ಅಧಿಕೃತ ಅಂಕಿ-ಅಂಶಗಳನ್ನು ಇನ್ನೂ ಎಣಿಸಲಾಗಿಲ್ಲ. ಅದೇ ಸಮಯದಲ್ಲಿ ಚೀನಾದಲ್ಲಿ 80 ಸಾವಿರ ಮಂದಿಗೆ ಸೋಂಕು ಏರಿಕೆಯಾಗಿತ್ತು ಎಂದು ಹೇಳಲಾಗಿದೆ.

ಆದರೆ ಇದನ್ನು ಒಪ್ಪದ ವಿಜ್ಞಾನಿಗಳು ರೋಗದ ಲಕ್ಷಣಗಳೇ ಇರದವರು ಸಮುದಾಯ ಹರಡುವಿಕೆಯಲ್ಲಿ ಪಾತ್ರ ನಿರ್ವಹಿಸಲು ಸಾಧ್ಯವೇ? ಲಕ್ಷಣಗಳೇ ಇರದೆ ಸೋಂಕಿತರು ಹೇಗೆ? ಎಂದು ಪ್ರಶ್ನಿಸಿ, ಇದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ. ಅಲ್ಲದೆ, ರೋಗ ಲಕ್ಷಣವಿಲ್ಲದ ಹರಡುವಿಕೆ "ಅತ್ಯಂತ ಅಪರೂಪ" ಎಂಬ ವಿಶ್ವ ಆರೋಗ್ಯ ಸಂಸ್ಥೆಯ ಈ ಮುಂಚಿನ ಹೇಳಿಕೆಯನ್ನು ಅನೇಕ ವಿಜ್ಞಾನಿಗಳು ಪ್ರಶ್ನಿಸಿದ್ದಾರೆ.

ಇದಕ್ಕೂ ಮುನ್ನ ವರದಿ ನೀಡಿದ್ದ ಡಬ್ಲ್ಯುಎಚ್​ಒ ಅಂತಾರಾಷ್ಟ್ರೀಯ ಆಯೋಗ ಮೂರರಲ್ಲಿ ಒಂದು ಲಕ್ಷಣರಹಿತ ಸೋಂಕು ಪ್ರಕರಣವನ್ನು ಅಂದಾಜಿಸಿತ್ತು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net