VIDEO: 2 ವರ್ಷ ಹಿಂದೆಯೇ ಚೀನಾ ಉಲ್ಲೇಖಿಸಿ ವೈರಸ್​ ಸೋಂಕಿನ ಭವಿಷ್ಯ ನುಡಿದಿದ್ದ ಭಾರತೀಯ ಮೂಲದ ಪ್ರಾಧ್ಯಾಪಕಿ

Devi Sridhar
Published on

ನವದೆಹಲಿ: ಯುನೈಟೆಡ್​ ಕಿಂಗ್​ಡಮ್​ನ ಪ್ರಖ್ಯಾತ ಪ್ಯಾಧ್ಯಾಪಕಿ ಹಾಗೂ ಭಾರತೀಯ ಮೂಲದ ದೇವಿ ಶ್ರೀಧರ್​(35) ಅವರು ಎರಡು ವರ್ಷದ ಹಿಂದೆಯೇ ಕರೊನಾ ವೈರಸ್​ ರೀತಿಯ ಸೋಂಕು ಹರಡುತ್ತದೆ ಎಂದು ಭವಿಷ್ಯ ನುಡಿದಿದ್ದರು ಎಂದು ವರದಿಯಾಗಿದೆ.

ಎಡಿನ್​ಬರ್ಗ್​ ವಿಶ್ವವಿದ್ಯಾಲಯದಲ್ಲಿ ಜಾಗತಿಕ ಸಾರ್ವಜನಿಕ ಆರೊಗ್ಯ ವಿಭಾಗದ ಪ್ರಾಧ್ಯಾಪಕಿಯಾಗಿರುವ ದೇವಿ ಶ್ರೀಧರ್​, 2018ರಲ್ಲಿ ವೇಲ್ಸ್​​ನ ಹೇ ಆನ್​ ವೈ ಪಟ್ಟಣದಲ್ಲಿ ನಡೆದ ಹೇ ಫೆಸ್ಟಿವಲ್​ನಲ್ಲಿ ಕರೊನಾ ವೈರಸ್​ ಬಗ್ಗೆ ಭವಿಷ್ಯ ನುಡಿದಿದ್ದ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ವಿಡಿಯೋದಲ್ಲಿ ಏನಿದೆ?: ಚೀನಾದ ರೈತರು ಪ್ರಾಣಿಗಳಿಂದ ವೈರಸ್​ ಸೋಂಕಿಗೆ ಒಳಗಾಗಬಹುದು. ಬಳಿಕ ಸೋಂಕು ಯುನೈಟೆಡ್​ ಕಿಂಗ್​ಡಮ್​ಗೆ ದಾಳಿ ಮಾಡುವ ಮುನ್ನವೇ ಸ್ಥಳೀಯ ಸಮುದಾಯಕ್ಕೂ ಹರಡಬಹುದು ಎಂದು ಹೇಳಿದ್ದರು. ಗಂಭೀರ ಆರೋಗ್ಯ ಸಮಸ್ಯೆಗಳ ಬಗೆಗಿನ ಸರ್ಕಾರದ ತಯಾರಿ ಕುರಿತು ನಡೆದ ಚರ್ಚೆಯಲ್ಲಿ ಸೋಂಕಿನ ಬಗ್ಗೆ ದೇವಿ ಶ್ರೀಧರ್​ ಅವರು ಉಲ್ಲೇಖಿಸಿದ್ದರು. ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಸರ್ಕಾರಗಳು ಪ್ರಾಮುಖ್ಯತೆ ನೀಡಬೇಕೆಂದಿದ್ದರು. ಅತಿ ದೊಡ್ಡ ಜನಸಂಖ್ಯೆ ಹೊಂದಿರುವ ರಾಷ್ಟ್ರಗಳಲ್ಲಿ ಸಾಂಕ್ರಾಮಿಕ ರೋಗ ಒಂದು ಪಿಡುಗು ಎಂದು ಎಚ್ಚರಿಸಿದ್ದರು.

ಇದೀಗ ಅವರ ವಿಡಿಯೋ ಎಲ್ಲೆಡೆ ಹರಿದಾಡುತ್ತಿದ್ದು, ದೇವಿ ಶ್ರೀಧರ್​ ಅವರು ದೂರದೃಷ್ಟಿಯ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದೀಗ ವಿಡಿಯೋ ಬಗ್ಗೆ ಸ್ವತಃ ಟ್ವಿಟ್​ ಮಾಡಿರುವ ದೇವಿ, ನಾನೇ ಇದನ್ನು ಮರೆತುಬಿಟ್ಟಿದೆ. ನಾನು ಇದನ್ನು 2018ರಲ್ಲಿ ಉದಾಹರಣೆಯಾಗಿ ಹೇಳಿದ್ದೆ. ಆರೋಗ್ಯ ಸಮಸ್ಯೆ ಯಾಕೆ ಒಂದಕ್ಕೊಂದು ಸಂಪರ್ಕಕೊಂಡಿಯಾಗಿವೆ ಎಂಬುದನ್ನು ವಿವರಿಸಲು ಇದನ್ನು ಉದಾಹರಣೆಯಾಗಿ ವಿವರಿಸಿದ್ದೆ ಎಂದು ಬರೆದುಕೊಂಡಿದ್ದಾರೆ.

ಕರೊನಾ ವೈರಸ್​ ಇದೀಗ ಎಲ್ಲೆಡೆ ಮೃತ್ಯುಕೂಪವನ್ನು ನಿರ್ಮಿಸಿದ್ದು, ಸರಿಯಾದ ಕ್ರಮಗಳನ್ನು ತೆಗೆದುಕೊಳ್ಳದ ಯುಕೆ ಸರ್ಕಾರವನ್ನು ದೇವಿ ಶ್ರೀಧರ್​ ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೆ, ಸಾಂಕ್ರಾಮಿಕ ವನ್ನು ತಡೆಗಟ್ಟುವ ಅನೇಕ ಅವಕಾಶಗಳಿಂದ ಸರ್ಕಾರ ತಪ್ಪಿಸಿಕೊಂಡಿದೆ ಎಂದು ಟೀಕಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net